ಗುರುವಾರ , ನವೆಂಬರ್ 14, 2019
19 °C

ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಏನು ಬೇಕು?

Published:
Updated:

ಬೆಂಗಳೂರು: ಪ್ರತಿ ಬಜೆಟ್‌ ಸಂದರ್ಭದಲ್ಲಿಯೂ ನಿರೀಕ್ಷೆಗಳ ಮಹಾಪೂರ ಬೆಳೆಯುತ್ತದೆ. ವಿವಿಧ ಕ್ಷೇತ್ರಗಳಲ್ಲಿನ ಜನರು ಅವರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಕೆಲವು ಬದಲಾವಣೆಗಳನ್ನು ಎದುರು ನೋಡುತ್ತಿರುತ್ತಾರೆ. ರಿಯಲ್ ಎಸ್ಟೇಟ್ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ.  

ದೇಶದಲ್ಲಿ ಗೃಹ ನಿರ್ಮಾಣ ಕ್ಷೇತವು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಹಲವರಿಗೆ ಉದ್ಯೋಗವನ್ನು ನೀಡುತ್ತಿದ್ದರೂ ಕೂಡ ಅದಕ್ಕೆ ಸೂಕ್ತ ಪ್ರಾಮುಖ್ಯ ದೊರೆತಿಲ್ಲ. ಬಜೆಟ್‌ನಲ್ಲಿ ತಮ್ಮ ಕ್ಷೇತ್ರಕ್ಕೂ ಆದ್ಯತೆ ದೊರೆಯಬಹುದೇ ಎಂಬ ಕಾತರದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆದಾರರಿದ್ದಾರೆ. 

ಭಾರ­ತದ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟವೂ (ಕ್ರೆಡಾಯ್‌) ಕ್ಷೇತ್ರಕ್ಕೆ ಅಗತ್ಯವಿರುವ ಕೆಲವು ಬೇಡಿಕೆಗಳನ್ನು ವಿವರಿಸಿದೆ. 

‘ದೇಶದಲ್ಲಿ ಗೃಹ ನಿರ್ಮಾಣ ಕ್ಷೇತವು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಹಲವರಿಗೆ ಉದ್ಯೋಗವನ್ನು ನೀಡುತ್ತಿದ್ದರೂ ಕೂಡ ಅದಕ್ಕೆ ಸೂಕ್ತ ಪ್ರಾಮುಖ್ಯ ದೊರೆತಿಲ್ಲ. ಮೌಲ್ಯ ವರ್ಧಿತ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ... ಹೀಗೆ ಸಾಕಷ್ಟು ತೆರಿಗೆಗಳನ್ನು ಕಟ್ಟಬೇಕಿದೆ. ಇದು  ಮನೆ ಕೊಳ್ಳುವವರು ಮತ್ತು ನಿರ್ಮಾಣಗಾರರ ಮೇಲೆ ಪರಿಣಾಮ ಬೀರುತ್ತಿದೆ. ಇದೆಲ್ಲವನ್ನೂ ತೆಗೆದು ಏಕರೂಪ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಅದರಿಂದ ಮನೆ ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ’ ಎಂದು ಕ್ರೆಡಾಯ್‌ ಬೆಂಗಳೂರು ಉಪಾಧ್ಯಕ್ಷ ಸುರೇಶ್‌ ಹರಿ ತಿಳಿಸಿದರು. 

ಬಜೆಟ್ ನಿರೀಕ್ಷೆಗಳ ಬಗ್ಗೆ ಅವರು ಹೇಳಿದ್ದಿಷ್ಟು...


ಸುರೇಶ್‌ ಹರಿ

‘ನಿರ್ಮಾಣ ವೆಚ್ಚ ಹಾಗೂ ಭೂಮಿಯ ಬೆಲೆ ಹೆಚ್ಚಾಗಿದ್ದು, ಇದು ಡೆವಲಪರ್‌ಗಳ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಖರೀದಿದಾರರಿಗೆ ತಮ್ಮ ಕನಸಿನ ಮನೆಯನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಸ್ಟೇಟ್ ನಿಯಂತ್ರಣ ಮಂಡಳಿ, ಸಿಮೆಂಟ್ ಮತ್ತು ಕಬ್ಬಿಣದ ಮೇಲೆ ಕಡಿಮೆ ತೆರಿಗೆ ಜೊತೆಗೆ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತ ಮುಂತಾದವುಗಳು ಈಗ ಅಗತ್ಯವಾಗಿ ಆಗಬೇಕಾಗಿದೆ. ರಿಯಾಲ್‌ ಎಸ್ಟೇಟ್‌ ಅನ್ನು ಆದ್ಯತೆಯ ಕ್ಷೇತ್ರ ಎಂದು ಪರಿಗಣಿಸಿ, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಉತ್ಪನ್ನಗಳ ಮೇಲೆ ಕಡಿಮೆ ಶ್ರೇಣಿಯ ಜಿಎಸ್‌ಟಿ ವಿಧಿಸಿದರೆ ಅನುಕೂಲವಾಗುತ್ತದೆ.

‘ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಸುಲಭದಲ್ಲಿ ಸಾಲಸೌಲಭ್ಯ ದೊರೆವಂತಾಗಬೇಕು. ಯಾವುದೇ ಬ್ಯಾಂಕ್‌ಗಳು ಈ ಕ್ಷೇತ್ರಕ್ಕೆ ಹಣಕಾಸಿನ ನೆರವು ನೀಡುವುದಿಲ್ಲ. ಉದ್ದಿಮೆದಾರರಿಗಾಗಿಯೇ ನಿರ್ಮಾಣ ಸಾಲ ದೊರೆತರೆ ಅನೇಕರಿಗೆ ಅನುಕೂಲವಾಗುತ್ತದೆ.

‘ಆರ್ಥಿಕ ಪ್ರಗತಿಗೆ ಅನುಕೂಲವಾದ ಭೂಮಿಯನ್ನು ಪಡೆಯುವಲ್ಲಿ ದೀರ್ಫಕಾಲೀನ ಸುಸ್ಥಿರ ಹಾಗೂ ಪಾರದರ್ಶಕವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೈಗೆಟುಕುವ ದರದಲ್ಲಿ ಮನೆ ಲಭ್ಯವಾಗಬೇಕು ಎನ್ನುವುದು ಈಗಿನ ಅಗತ್ಯವಾಗಿದೆ. ಭೂದಾಲೆಯೂ ರಾಷ್ಟ್ರೀಕೃತ ನೋಂದಣಿ ಆಗಬೇಕು. ಉಪಗ್ರಹಗಳ ಮೂಲಕ ಭೂಮಿ ಮ್ಯಾಪಿಂಗ್‌ ಸಾಧ್ಯವಾದರೆ, ಸಾಕಷ್ಟು ಭೂ ವ್ಯಾಜ್ಯಗಳು ಇತ್ಯರ್ಥವಾಗುತ್ತವೆ. ಜೊತೆಗೆ ನಿರ್ಮಾಣಗಾರರ ಕಂಪನಿಯ ಹೆಸರಿನ ಮೇಲೆ ವಿಮೆ ಸೌಲಭ್ಯ ದೊರೆತರೆ ಹೆಚ್ಚು ಅನುಕೂಲವಾಗುತ್ತದೆ.

ತೆರಿಗೆ ವಿನಾಯ್ತಿ: ಕಂಪ್ಲಿಶನ್‌ ಸರ್ಟಿಫಿಕೇಟ್‌ ದೊರೆತ ವರ್ಷದ ಅಂತ್ಯದಿಂದ ಎರಡು ವರ್ಷಗಳವರೆಗೆ ಮಾರಾಟವಾಗದ ಕಟ್ಟಡದ ಮೇಲೆ ತೆರಿಗೆ ವಿನಾಯ್ತಿ ನೀಡುವ ಬಗ್ಗೆ 2019ರ ಮಧ್ಯಂತರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ಈ ಬಾರಿಯಿಂದ ಜಾರಿಗೆ ತಂದು ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸಬೇಕಿದೆ ಎನ್ನುತ್ತಾರೆ ಅವರು.

ಕಾರ್ಮಿಕರಿಗೆ ಅನುಕೂಲವಾಗಲಿ: ‘ಸುಮಾರು 22 ಕಾರ್ಮಿಕ ಕಾಯ್ದೆಗಳಿವೆ. ಅವೆಲ್ಲವನ್ನೂ ನಾವು ಪಾಲಿಸಬೇಕಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ–1996ರ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ ಹಣಕಾಸು ನೆರವು ನೀಡುವುದಕ್ಕಾಗಿ ಒಟ್ಟಾರೆ ನಿರ್ಮಾಣ ವೆಚ್ಚದ ಶೇ 1ರಷ್ಟನ್ನು ಸೆಸ್‌ ಆಗಿ ಸಂಗ್ರಹಿಸಲು ಅವಕಾಶ ಇದೆ. ಹೀಗೆ ನಾವು ಕಟ್ಟುತ್ತಿರುವ ಸೆಸ್‌ ಕಾರ್ಮಿಕರಿಗೆ ಸರಿಯಾಗಿ ದೊರೆಯುತ್ತಿಲ್ಲ. 2017ರಲ್ಲಿ ಸಂಸದೀಯ ಸಮಿತಿಯೊಂದು ನೀಡಿದ ವರದಿ ಪ್ರಕಾರ ಅದರ ಹಿಂದಿನ 20 ವರ್ಷಗಳಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯಗಳು ₹32,632.96 ಕೋಟಿ ಸೆಸ್‌ ಸಂಗ್ರಹಿಸಿವೆ. ಕಾರ್ಮಿಕರ ವಲಸೆ ಹೆಚ್ಚಾಗಿರುವುದರಿಂದ ಈ ಮೊತ್ತ ಕಾರ್ಮಿಕರಿಗೆ ಉಪಯೋಗವಾಗುತ್ತಿಲ್ಲ. ಸಂಗ್ರಹವಾಗಿರುವ ಮೊತ್ತ ಖಜಾನೆಯಲ್ಲಿಯೇ ಕೊಳೆಯುತ್ತಿದೆ. ರಾಷ್ಟ್ರೀಕೃತ ನೋಂದಣಿ ಸಾಧ್ಯವಾದರೆ ಕಾರ್ಮಿಕರು ಎಲ್ಲೇ ಹೋದರು ಹಣವನ್ನು ಬಳಸಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)