ಶನಿವಾರ, ಜೂನ್ 25, 2022
24 °C
ಹೆಚ್ಚಿದ ಪರೋಕ್ಷ ತೆರಿಗೆ ಪ್ರಮಾಣ: ಇಂಡಿಯಾ ರೇಟಿಂಗ್ಸ್‌

ತೆರಿಗೆ ಹೊರೆ: ತಗ್ಗಿದ ಖರೀದಿ ಸಾಮರ್ಥ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕುಟುಂಬಗಳ ಮೇಲೆ ಪರೋಕ್ಷ ತೆರಿಗೆ ಹೊರೆಯು ಹೆಚ್ಚುತ್ತಿರುವುದರಿಂದ, ಕುಟುಂಬಗಳು ಖರೀದಿಗಾಗಿ ಹೆಚ್ಚು ವೆಚ್ಚ ಮಾಡುವುದಕ್ಕೆ ಅಡ್ಡಿಯಾಗಿದೆ ಎಂದು ದೇಶಿ ರೇಟಿಂಗ್ಸ್ ಸಂಸ್ಥೆ ‘ಇಂಡಿಯಾ ರೇಟಿಂಗ್ಸ್‌’ ಹೇಳಿದೆ.

2009-10ನೇ ಹಣಕಾಸು ವರ್ಷದಲ್ಲಿ ಕುಟುಂಬವೊಂದರ ಮೇಲಿನ ಒಟ್ಟಾರೆ ತೆರಿಗೆ ಹೊರೆಯು ಶೇಕಡ 60ರಷ್ಟು ಇತ್ತು. ಇದು ಸದ್ಯ ಶೇ 75ಕ್ಕೆ ಏರಿಕೆ ಆಗಿದೆ. ಇಂಧನದ ಮೇಲೆ ಗರಿಷ್ಠ ಪ್ರಮಾಣದಲ್ಲಿ ಎಕ್ಸೈಸ್‌ ಸುಂಕ ವಿಧಿಸುತ್ತಿರುವುದು ಮತ್ತು ಕಾರ್ಪೊರೇಟ್‌ ತೆರಿಗೆ ದರ ಕಡಿತ ಮಾಡಿರುವುದರಿಂದಾಗಿ ಕುಟುಂಬಗಳ ಮೇಲಿನ ತೆರಿಗೆ ಹೊರೆಯಲ್ಲಿ ಈ ಪ್ರಮಾಣದ ಏರಿಕೆ ಆಗಿದೆ ಎಂದು ಸಂಸ್ಥೆಯು ಹೇಳಿದೆ.

ಉದ್ಯೋಗ ಸೃಷ್ಟಿ ಮತ್ತು ವಿದೇಶಿ ನೇರ ಬಂಡವಾಳ ಆಕರ್ಷಣೆಯ ಉದ್ದೇಶದಿಂದ ಕಾರ್ಪೊರೇಟ್ ತೆರಿಗೆ ದರ ಕಡಿತ ಮಾಡಲಾಗಿದೆ. ಆದರೆ, ಕಾರ್ಪೊರೇಟ್‌ ವಲಯಕ್ಕೆ ಸಿಗುತ್ತಿರುವ ಇಂತಹ ಯಾವುದೇ ಪ್ರಯೋಜನವು ಗ್ರಾಹಕರಿಗೆ ಸಿಗುತ್ತಿಲ್ಲ ಎಂದು ಅದು ಹೇಳಿದೆ.

ಕುಟುಂಬಗಳ ಮೇಲೆ ಬೀಳುತ್ತಿರುವ ತೆರಿಗೆ ಹೊರೆಯಿಂದಾಗಿ ಖರೀದಿ ಸಾಮರ್ಥ್ಯದಲ್ಲಿನ ಚೇತರಿಕೆಯು ತಡವಾಗಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಏರಿಕೆಯ ಮೂಲಕ ಪರೋಕ್ಷ ತೆರಿಗೆ ಹೆಚ್ಚಿಸಿದ ಪರಿಣಾಮವಾಗಿ, ಪೆಟ್ರೋಲ್‌, ಡೀಸೆಲ್‌ ದರಗಳು ದಾಖಲೆಯ ಮಟ್ಟವನ್ನು ತಲುಪಿವೆ. ಇದರಿಂದಾಗಿ ಕುಟುಂಬವೊಂದರ ಉಳಿತಾಯ–ಖರ್ಚಿನ ಲೆಕ್ಕಾಚಾರದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮ ಬೀರಿದೆ.

ಕೋವಿಡ್‌ ಸಾಂಕ್ರಾಮಿಕವು ಬರುವುದಕ್ಕೂ ಮೊದಲೇ ಜನರ ಖರೀದಿ ಸಾಮರ್ಥ್ಯ ಕಡಿಮೆ ಆಗಿತ್ತು. ಕೋವಿಡ್‌ನಿಂದಾಗಿ ಉದ್ಯೋಗ ನಷ್ಟ, ವೇತನ ಕಡಿತ, ಆರೋಗ್ಯದ ಮೇಲಿನ ವೆಚ್ಚವು ಕುಟುಂಬಗಳಿಗೆ ಪೆಟ್ಟಿನ ಮೇಲೆ ಪೆಟ್ಟು ಕೊಟ್ಟಂತಾಗಿದೆ ಎಂದು ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು