ಭಾನುವಾರ, ಸೆಪ್ಟೆಂಬರ್ 26, 2021
27 °C

ವಾಣಿಜ್ಯ ಬೆಳೆಗೆ ಪ್ಯಾಕೇಜ್: ಕೇಂದ್ರಕ್ಕೆ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ, ನೆರೆಯಿಂದ ಹಾನಿಗೆ ತುತ್ತಾಗಿದ್ದು, ವಿಮೆ ವ್ಯಾಪ್ತಿಗೆ ಬಾರದ ಕಬ್ಬು, ಕಾಫಿ, ಸಂಬಾರ, ತೋಟ
ಗಾರಿಕೆ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಲು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಮುಂದಿನ ದಿನಗಳಲ್ಲಿ ಈ ಬೆಳೆಗಳನ್ನೂ ವಿಮೆ ವ್ಯಾಪ್ತಿಗೆ ತರುವಂತೆ ಆಗ್ರಹಿಸಲಾಗುವುದು’ ಎಂದು ತಿಳಿಸಿದರು.

‘ಭೂಮಿ, ಗುಡ್ಡ ಕುಸಿತದಿಂದ ಕೆಲವೆಡೆ ಇಡೀ ಕಾಫಿ ತೋಟಗಳೇ ನಾಶವಾಗಿದ್ದು, ಸಂಬಾರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಈಗಿರುವ ಬೆಳೆ ವಿಮೆ ಯೋಜನೆಯಲ್ಲಿ ಪರಿಹಾರ ಸಿಗುವುದಿಲ್ಲ. ಹಾಗಾಗಿ ರಾಜ್ಯದ ಸಂಸದರ ನೇತೃತ್ವದಲ್ಲಿ ನಿಯೋಗ ಕರೆದೊಯ್ದು ಪ್ರಧಾನಿಯನ್ನು ಭೇಟಿ ಮಾಡಿ ಬಳೆ ನಷ್ಟವಾಗಿರುವ ಬಗ್ಗೆ ಮನದಟ್ಟು ಮಾಡಿಕೊಟ್ಟು, ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

‘ನೆರೆ, ಮಳೆಯಿಂದ ಸುಮಾರು 42 ಲಕ್ಷ ಕುಟುಂಬಗಳು ಸಂತ್ರಸ್ತರಾಗಿದ್ದು, ಈವರೆಗೆ 1.37 ಲಕ್ಷ ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗಿದೆ.

‘ಸಂತ್ರಸ್ತ ಕೇಂದ್ರಗಳಲ್ಲಿ ಹೆಸರು ನೋಂದಾಯಿಸದೆ, ಇತರೆಡೆ ನೆಲೆ ಕಂಡುಕೊಂಡಿದ್ದ ಸಂತ್ರಸ್ತರಿಗೂ ನೆರವು ನೀಡಲು ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ ₹5 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ’ ಎಂದು ಅವರು ಮಾಹಿತಿ ನೀಡಿದರು.

ನದಿಗಾಗಿ ಉಪಸಮಿತಿ
ಕಾವೇರಿ, ಕೃಷ್ಣ, ಮಹದಾಯಿ ನದಿ ವಿವಾದ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ವರು ಸಚಿವರನ್ನು ಒಳಗೊಂಡ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಂತರರಾಜ್ಯ ವಿವಾದ ಪರಿಹರಿಸುವುದು ಹಾಗೂ ಕೇಂದ್ರದಿಂದ ಅಗತ್ಯ ನೆರವು ಪಡೆದುಕೊಳ್ಳಲು ಪ್ರಯತ್ನಿಸಲಿದೆ. ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್.ಅಶೋಕ ಸಮಿತಿ ಸದಸ್ಯರು.

ಬರ ಪ್ರದೇಶಗಳಿಗೂ ನೆರವು
ಬರಪೀಡಿತ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಇದ್ದ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಶಾಸಕರ ನೇತೃತ್ವದ ಕಾರ್ಯಪಡೆಯಿಂದ ಅನುಮತಿ ಪಡೆದು ₹5 ಲಕ್ಷದವರೆಗಿನ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೊತ್ತಕ್ಕೆ ವಿಧಿಸುತ್ತಿದ್ದ ಜಿಎಸ್‌ಟಿಯಿಂದ ಮುಂದಿನ ಮಾರ್ಚ್ ವರೆಗೂ ವಿನಾಯಿತಿ ನೀಡುವುದು, ಕೊರತೆ ಇರುವೆಡೆ ತಾತ್ಕಾಲಿಕವಾಗಿ ನಿವೃತ್ತ ಭೂವಿಜ್ಞಾನಿಗಳನ್ನು ಕೆಲಸದಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು