ಶುಕ್ರವಾರ, ನವೆಂಬರ್ 15, 2019
22 °C

ಏಲಕ್ಕಿ ಮಾಲೆಗೆ ನೆರೆಯ ಬರೆ!

Published:
Updated:
Prajavani

ಹಾವೇರಿ: ಜಗತ್ತಿನ ಮೂಲೆ ಮೂಲೆಯಲ್ಲೂ ಪ್ರಸಿದ್ಧಿ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆಗೆ ಏಲಕ್ಕಿ ಕೊರತೆ ಉಂಟಾಗಿದ್ದು, ಮಾಲೆ ತಯಾರಕರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಕರ್ನಾಟಕದ ಮಡಿಕೇರಿ, ಉತ್ತರ ಕನ್ನಡ ಹಾಗೂ ಕೇರಳ, ತಮಿಳುನಾಡಿನಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಮಾಲೆ ತಯಾರಿಕೆಗೆ ಬೇಕಾಗುವ ಒಂದೇ ಗಾತ್ರದ ಮೊಗ್ಗು ಮಾದರಿಯ ಏಲಕ್ಕಿಯನ್ನು ಮಡಿಕೇರಿ ಹಾಗೂ ಕೇರಳದಿಂದ ತರಿಸಲಾಗುತ್ತಿತ್ತು. ಕಳೆದ ವರ್ಷ ಕೇರಳ ಹಾಗೂ ಮಡಿಕೇರಿಯಲ್ಲಿ ನೆರೆ–ಪ್ರವಾಹ ಹಾಗೂ ಬೆಳೆಯ ಇಳುವರಿ ಕಡಿಮೆಯಾದ ಪರಿಣಾಮ ಏಲಕ್ಕಿ ಬೆಲೆ ದುಬಾರಿಯಾಗಿದೆ.

‘ಇಲ್ಲಿ ಮಾಲೆ ತಯಾರಿಕೆಗೆ 30 ರಿಂದ 50 ಕೆಜಿ. ಏಲಕ್ಕಿಯನ್ನು ಖರೀದಿಸುತ್ತಿದ್ದೆವು. ಆದರೀಗ ಉತ್ತಮ ಗುಣಮಟ್ಟದ ಏಲಕ್ಕಿ ಬೇಕಾಗುವಷ್ಟು ಸಿಗುತ್ತಿಲ್ಲ. ಕೆ.ಜಿ. ಏಲಕ್ಕಿ ₹1800 ಕ್ಕೆ ಸಿಗುತ್ತಿತ್ತು. ಆದರೆ, ಈಗ ಕೆ.ಜಿ.ಗೆ ₹4 ಸಾವಿರದಿಂದ ₹5 ಸಾವಿರದವರೆಗೆ ಇದೆ’ ಎನ್ನುತ್ತಾರೆ ಮಾಲೆ ತಯಾರಕ ಹೈದರಲಿ ಪಟವೆಗಾರ.

‘ನಮ್ಮ ಕುಟುಂಬ 70 ವರ್ಷದಿಂದಲೂ ಏಲಕ್ಕಿ ಮಾಲೆಯನ್ನು ತಯಾರಿಸುತ್ತಾ ಬಂದಿದ್ದೇವೆ. ಕುಟುಂಬದವರಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಅಲ್ಲದೇ, ಅಕ್ಕಪಕ್ಕದಲ್ಲಿ ಹತ್ತು ಕುಟುಂಬದವರೂ ಏಲಕ್ಕಿ ಮಾಲೆ ತಯಾರಿಸುತ್ತಾರೆ’ ಎಂದು ಹಾಜಿ ಉಸ್ಮಾನ್‌ ಸಾಬ್‌ ಪಟವೆಗಾರ ತಿಳಿಸಿದರು

‘ಏಲಕ್ಕಿ ಕೊರತೆ ಇದ್ದರೂ ನಾವು ಮಾಲೆಯ ದರ ಹೆಚ್ಚಿಸಿಲ್ಲ. ನಮ್ಮಲ್ಲಿ ₹150 ರಿಂದ ₹10 ಸಾವಿರದವರೆಗೆ ಇದೆ. ಬೆಲೆ ಹೆಚ್ಚಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ಈ ನಡುವೆ ಕಾರ್ಯಕ್ರಮಗಳಿಗೆ ಏಲಕ್ಕಿ ಮಾಲೆಯ ಬೇಡಿಕೆ ಹೆಚ್ಚಿದೆ’ ಎಂದು ಅವರು ವಿವರಿಸಿದರು.

ಕಾರ್ಮಿಕರಿಗೆ ಕೆಲಸವಿಲ್ಲ: ಏಲಕ್ಕಿ ಕೊರತೆ, ದರ ಹೆಚ್ಚಳದಿಂದ ಏಲಕ್ಕಿ ಮಾಲೆ ತಯಾರಿಸುವ ಕಾರ್ಮಿಕರಿಗೂ ಕೈತುಂಬ ಕೆಲಸ ಇಲ್ಲದಂತಾಗಿದೆ. ಬೇರೆ ಕೆಲಸ ಅರಸಿ ಹೋಗುತ್ತಿದ್ದಾರೆ. ಕೆಲವರು ವ್ಯಾಪಾರದೊಂದಿಗೆ ಮಾಲೆಯನ್ನು ತಯಾರಿ ಮಾಡುತ್ತಿದ್ದರು. ಆದರೆ, ಕೆಲವು ಕುಟುಂಬಗಳು ಮಾಲೆ ತಯಾರಿಸುವುದನ್ನು ಕಡಿಮೆ ಮಾಡಿದ್ದಾರೆ.

ವಿದೇಶದಲ್ಲೂ ಖ್ಯಾತಿ: ವಿಶೇಷ ಅಲಂಕಾರ, ಸುವಾಸನೆಯಿಂದ ವಿದೇಶದಲ್ಲಿಯೂ ಪ್ರಸಿದ್ಧಿ ಪಡೆದಿದೆ ಏಲಕ್ಕಿ ಮಾಲೆ. ರಾಷ್ಟ್ರಪತಿಯಿಂದ ಹಿಡಿದು ಗಣ್ಯರ ಕೊರಳನ್ನು ಅಲಂಕರಿಸಿದ ಕೀರ್ತಿಯನ್ನು ಪಡೆದಿದೆ. ಅಲ್ಲದೇ, ಜಪಾನ್‌, ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ನೇಪಾಳ, ಸೌದಿ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿಯೂ ಖ್ಯಾತಿ ಹೊಂದಿದೆ.

ಪ್ರತಿಕ್ರಿಯಿಸಿ (+)