ಗುರುವಾರ , ಮೇ 13, 2021
19 °C

2.60 ಲಕ್ಷ ನಕಲಿ ಗೃಹ ಸಾಲ ಖಾತೆ ಸೃಷ್ಟಿ; ಡಿಎಚ್‌ಎಫ್‌ಎಲ್ ವಿರುದ್ಧ ಸಿಬಿಐ ಪ್ರಕರಣ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿರುವ ಆರೋಪದ ಮೇಲೆ ಸಿಬಿಐ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ (ಡಿಎಚ್‌ಎಫ್‌ಎಲ್‌) ವಿರುದ್ಧ ಪ್ರಕರಣ ದಾಖಲಿಸಿದೆ.

ಒಟ್ಟು ₹14,046 ಕೋಟಿ ಮೌಲ್ಯದ 2.60 ಲಕ್ಷ ನಕಲಿ ಸಾಲ ಖಾತೆಗಳನ್ನು ಸೃಷ್ಟಿಸಲಾಗಿದ್ದು, ಅದರಲ್ಲಿ ₹11,755.79 ಕೋಟಿ ಹಣವನ್ನು 'ಬಾಂದ್ರಾ ಬುಕ್‌ ಸಂಸ್ಥೆ' ಎಂಬಂತಹ ಕಾಲ್ಪನಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಪಿಎಂಎವೈ ಯೋಜನೆ ಅಡಿಯಲ್ಲಿ ವಿತರಿಸಲಾಗಿರುವ ಸಾಲಗಳಿಗೆ ಬಡ್ಡಿಯ ಸಬ್ಸಿಡಿಯಾಗಿ ಡಿಎಚ್‌ಎಫ್‌ಎಲ್‌ ₹1,887 ಕೋಟಿಗಾಗಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದೆ.

'ಗ್ರ್ಯಾಂಟ್‌ ಥಾರ್ನ್ಟಂನ್‌' ಲೆಕ್ಕ ಪರಿಶೋಧನಾ ವರದಿಯಿಂದ ಡಿಎಚ್‌ಎಫ್‌ಎಲ್‌ ಅಕ್ರಮಗಳು ಬಹಿರಂಗವಾಗಿವೆ, ಅನಂತರ ಸಿಬಿಐ ಮಾರ್ಚ್‌ 15ರಂದು ಪ್ರಕರಣ ದಾಖಲಿಸಿದೆ. ಡಿಎಚ್‌ಎಫ್‌ಎಲ್‌, ಕಂಪನಿಯ ಪ್ರೊಮೋಟರ್‌ಗಳಾದ ಕಪಿಲ್‌ ವಾಧ್ವಾನ್, ಧೀರಜ್‌ ವಾಧ್ವಾನ್‌ ಹಾಗೂ ಅನಾಮಿಕ ಸರ್ಕಾರಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿಬಿಐ ಎಫ್‌ಐಆರ್‌ ಪ್ರಕಾರ, ಡಿಎಚ್‌ಎಫ್‌ಎಲ್‌ ಪಿಎಂಎವೈ ಕಾರ್ಯಕ್ರಮದಡಿ 88,651 ಪ್ರಕರಣಗಳಿವೆ. ಆರ್ಥಿಕವಾಗಿ ಹಿಂದುಳಿದ ವರ್ಗ, ಬಡ ಮತ್ತು ಮಧ್ಯಮ ಆದಾಯದ ಜನರಿಗೆ ಭೂಮಿ ಖರೀದಿಸಲು ಮತ್ತು ಮನೆ ಕಟ್ಟಲು, ಸ್ಲಮ್‌ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ನೀಡಲಾಗುವ ಸಾಲಗಳಿಗೆ ಪಿಎಂಎವೈ ಅಡಿಯಲ್ಲಿ ಬಡ್ಡಿಯ ಮೇಲೆ ₹2,30,156ರಿಂದ ₹2,67,280ರ ವರೆಗೂ ಸಬ್ಸಿಡಿ ನೀಡಲಾಗುತ್ತದೆ.

ಯೆಸ್‌ ಬ್ಯಾಂಕ್‌ನ ಹಗರಣದಲ್ಲಿ ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ), ಡಿಎಚ್‌ಎಫ್ಎಲ್‌ ಮೇಲೆ ತನಿಖೆ ಕೈಗೊಂಡಿವೆ. ನವೆಂಬರ್‌ 2019ರಂದು ಆರ್‌ಬಿಐ, ಡಿಎಚ್‌ಎಫ್‌ಎಲ್‌ನ ನಿರ್ದೇಶಕರ ಮಂಡಳಿಯನ್ನು ವಜಾಗೊಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು