ಭಾನುವಾರ, ಆಗಸ್ಟ್ 25, 2019
21 °C
ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಿರ್ದೇಶಕ ಮಂಡಳಿ ನಿರ್ಧಾರ

ಬ್ಲ್ಯಾಕ್‌ಸ್ಟೋನ್‌ಗೆ ಟೆಕ್‌ ಪಾರ್ಕ್‌

Published:
Updated:

ಬೆಂಗಳೂರು (ರಾಯಿಟರ್ಸ್): ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ತನ್ನ ಅಂಗಸಂಸ್ಥೆ ಟ್ಯಾಂಗ್ಲಿಂಗ್‌ ಡೆವಲಪ್‌ಮೆಂಟ್ಸ್‌ ಲಿಮಿಟೆಡ್‌ನ ಒಡೆತನದಲ್ಲಿ ಇರುವ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್‌ ಅನ್ನು ಅಮೆರಿಕದ ಬ್ಲ್ಯಾಕ್‌ಸ್ಟೋನ್‌ ಗ್ರೂಪ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ.

ಕಂಪನಿಯ ಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ಹದಿನೈದು ದಿನಗಳ ನಂತರ ‘ಸಿಡಿಇಎಲ್‌’ ಈ ನಿರ್ಧಾರ ಪ್ರಕಟಿಸಿದೆ. ಸಿದ್ಧಾರ್ಥ ಅವರು ಭಾರಿ ಪ್ರಮಾಣದ ಹಣಕಾಸು ಬಿಕ್ಕಟ್ಟಿನ ಕಾರಣಕ್ಕೆ ಸಾವಿಗೆ ಶರಣಾಗಿದ್ದರು ಎಂದು ಶಂಕಿಸಲಾಗಿದೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ 90 ಎಕರೆ ಪ್ರದೇಶದಲ್ಲಿನ ಟೆಕ್‌ ಪಾರ್ಕ್‌ ಮಾರಾಟ ಮೌಲ್ಯವು₹ 2,600 ಕೋಟಿಗಳಿಂದ ₹ 3,000 ಕೋಟಿಗೆ ಇರಲಿದೆ ಎಂದು ಕಂಪನಿಯು ಷೇರುಪೇಟೆಯ ಗಮನಕ್ಕೆ ತಂದಿದೆ. ಬ್ಲ್ಯಾಕ್‌ಸ್ಟೋನ್‌ ಗ್ರೂಪ್‌ನ ವೃತ್ತಿಪರತೆ ಮತ್ತು ಪಾರದರ್ಶಕ ಧೋರಣೆಗೆ ಮಂಡಳಿಯು ಕೃತಜ್ಞತೆ ಸಲ್ಲಿಸಿದೆ.

ಗುರುವಾರ ನಡೆದ ಕಂಪನಿಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ 30 ರಿಂದ 45 ದಿನಗಳಲ್ಲಿ ಈ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಂಪನಿ ಎದುರಿಸುತ್ತಿರುವ ಸಾಲದ ಹೊರೆ ತಗ್ಗಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ವಾರದ ಹಿಂದಷ್ಟೇ ಬ್ಲ್ಯಾಕ್‌ಸ್ಟೋನ್‌,  ಟ್ಯಾಂಗ್ಲಿಂಗ್‌ ಡೆವಲಪ್‌ಮೆಂಟ್‌ ಖರೀದಿಸಲು ಮುಂದಾಗಿತ್ತು.

ಷೇರು ವಿಕ್ರಯ: ಕಂಪನಿಯ ಇನ್ನೊಂದು ಅಂಗಸಂಸ್ಥೆಯಾಗಿರುವ ಅಲ್ಫಾಗ್ರೆಪ್‌ ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಷೇರುಗಳನ್ನು  ₹ 28 ಕೋಟಿಗೆ ಮಾರಾಟ ಮಾಡಲೂ ನಿರ್ಧರಿಸಲಾಗಿದೆ.

ಈ ಎರಡೂ ವಹಿವಾಟಿನಿಂದ ‘ಸಿಡಿಇಎಲ್‌’ನ ಸಾಲದ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ವಿವಿಧ ಅಂಗಸಂಸ್ಥೆಗಳ ಒಟ್ಟಾರೆ ಸಾಲದ ಹೊರೆಯು ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ₹ 7,653 ಕೋಟಿಗಳಷ್ಟಿತ್ತು.

Post Comments (+)