ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಮುಖ್ಯಸ್ಥರ ನೆರವಿಗೆ ಬಂದ ಕೇಂದ್ರ

ವಿವೇಕಯುತ ಸಾಲ ಮಂಜೂರು ನಿರ್ಧಾರಕ್ಕೆ ರಕ್ಷಣೆ
Last Updated 28 ಜನವರಿ 2020, 17:57 IST
ಅಕ್ಷರ ಗಾತ್ರ

ನವದೆಹಲಿ: ವಿವೇಚನೆಯಿಂದ ಸಾಲ ಮಂಜೂರು ಮಾಡುವ ಬ್ಯಾಂಕ್‌ ಮುಖ್ಯಸ್ಥರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

ವಂಚನೆ ಪ್ರಕರಣಗಳಲ್ಲಿ ವಿಚಾರಣೆಗೆ ಗುರಿಯಾಗಬೇಕಾದ ಕಾರಣಕ್ಕೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ದೊಡ್ಡ ಮೊತ್ತದ ಸಾಲ ಮಂಜೂರಾತಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಉದ್ದಿಮೆ ಮತ್ತು ಕೈಗಾರಿಕಾ ವಲಯಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಕಡಿಮೆಯಾಗಿ, ಆರ್ಥಿಕತೆಯಲ್ಲಿ ಮಂದಗತಿಯ ಪ್ರಗತಿ ಕಂಡು ಬರುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಸರಣಿಯೋಪಾದಿಯಲ್ಲಿ ರೆಪೊ ದರ ಕಡಿತ ಮಾಡಿದ್ದರೂ ಬ್ಯಾಂಕ್‌ಗಳ ಸಾಲ ವಿತರಣೆ ಹೆಚ್ಚಳಗೊಂಡಿಲ್ಲ. ಈ ಪರಿಸ್ಥಿತಿ ಬದಲಾಯಿಸಿ ಬ್ಯಾಂಕ್‌ ಮುಖ್ಯಸ್ಥರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಮುಂದಾಗಿದೆ.

ಕೆಳ ಹಂತದ ಬ್ಯಾಂಕ್ ಅಧಿಕಾರಿಗಳು ದೊಡ್ಡ ಮೊತ್ತದ ಸಾಲ ಮಂಜೂರಾತಿಯಲ್ಲಿ ವಂಚನೆ ಎಸಗಿದ ಪ್ರಕರಣಗಳಲ್ಲಿ ಇನ್ನು ಮುಂದೆ ವ್ಯವಸ್ಥಾಪಕ ನಿರ್ದೇಶಕರು ಅಥವಾ ಸಿಇಒ ಅವರನ್ನು ವೈಯಕ್ತಿಕ ಹೊಣೆಗಾರರನ್ನಾಗಿ ಮಾಡುವುದಿಲ್ಲ. ಸರ್ಕಾರ ಕೈಗೊಂಡಿರುವ ಈ ಕ್ರಮಗಳು ಬ್ಯಾಂಕ್‌ ಮುಖ್ಯಸ್ಥರಲ್ಲಿ ವಿಶ್ವಾಸ ಮೂಡಿಸಲಿವೆ. ಹಿಂಜರಿಕೆ ಇಲ್ಲದೆ ಸಾಲ ಮಂಜೂರು ಮಾಡಲು ಮತ್ತು ತ್ವರಿತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಮಾಣಿಕತೆಯಿಂದ ಕೂಡಿದ ನಿರ್ಧಾರ ಕೈಗೊಳ್ಳುವ ಬ್ಯಾಂಕ್‌ ಮುಖ್ಯಸ್ಥರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು. ನೈಜ ಸ್ವರೂಪದ ವಾಣಿಜ್ಯ ವೈಫಲ್ಯ ಮತ್ತು ವಂಚನೆ ಪ್ರಕರಣಗಳನ್ನು ಪ್ರತ್ಯೇಕಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಲವಾರು ಬಾರಿ ಭರವಸೆ ನೀಡಿದ್ದರು. ಡಿಸೆಂಬರ್‌ನಲ್ಲಿ ನಡೆದಿದ್ದ ಬ್ಯಾಂಕ್‌ ಮುಖ್ಯಸ್ಥರ ಸಭೆಯಲ್ಲಿ ಈ ವಾಗ್ದಾನ ನೀಡಲಾಗಿತ್ತು. ಸಭೆಯಲ್ಲಿ ಸಿಬಿಐ ನಿರ್ದೇಶಕರೂ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT