ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ: ₹1 ಲಕ್ಷ ಕೋಟಿ ಬಿಡುಗಡೆ

Last Updated 20 ಫೆಬ್ರುವರಿ 2021, 10:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು 2020ರ ಅಕ್ಟೋಬರ್‌ 23ರಿಂದ ಇಲ್ಲಿಯವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ₹ 1 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

23 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 17ನೇ ವಾರದ ಕಂತಿನ ಭಾಗವಾಗಿ ₹ 5ಸಾವಿರ ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ಮೊತ್ತವು ₹ 1 ಲಕ್ಷ ಕೋಟಿಗಳಿಗೆ ತಲುಪಿದೆ.

ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಜಿಎಸ್‌ಟಿ ಜಾರಿಯಿಂದ ವರಮಾನದಲ್ಲಿ ಕೊರತೆ ಎದುರಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿ ಜಾರಿಗೊಳಿಸುವುದರಿಂದ ರಾಜ್ಯಗಳಿಗೆ ಆಗುವ ವರಮಾನ ಕೊರತೆ ತುಂಬಿಕೊಡಲು ಕೇಂದ್ರ ಸರ್ಕಾರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಯೋಜನೆಯನ್ನು ರೂಪಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾಗಿ ಕೇಂದ್ರ ಸರ್ಕಾರವು ಈ ಯೋಜನೆಯಡಿ ಸಾಲ ಸಂಗ್ರಹಿಸುತ್ತಿದೆ. ಶೇ 4.83ರ ಸರಾಸರಿ ಬಡ್ಡಿದರದಲ್ಲಿ ಸರ್ಕಾರವು ₹ 1 ಲಕ್ಷ ಕೋಟಿ ಸಾಲ ಪಡೆದಿದ್ದು ಅದರಲ್ಲಿ ₹ 91,460.34 ಕೋಟಿಯನ್ನು ರಾಜ್ಯಗಳಿಗೆ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ₹ 8,539.66 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕಕ್ಕೆ ₹ 11,072 ಕೋಟಿ

‘ರಾಜ್ಯ ಸರ್ಕಾರಕ್ಕೆ ₹ 12,470 ಕೋಟಿ ಪರಿಹಾರ ಮೊತ್ತ ಬರಬೇಕಿದ್ದು ಅದರಲ್ಲಿ ಇಲ್ಲಿಯವರೆಗೆ ₹ 11,072 ಕೋಟಿ ಬಂದಿದೆ’ ಎಂದು ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್‌ ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.

‘ಪ್ರತಿ ವಾರವೂ ₹ 6000 ಕೋಟಿಗಳಷ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಿಂದ ರಾಜ್ಯಕ್ಕೆ ಪರಿಹಾರ ಮೊತ್ತವು ವ್ಯತ್ಯಾಸ ಆಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT