ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗೆ ₹353 ಕೋಟಿ ಮರುಪಾವತಿ?

ಚಂದಾ ಕೊಚ್ಚರ್‌ ವಜಾ ಪ್ರಕರಣ l ಬೋನಸ್ ಹಾಗೂ ‘ಇಎಸ್‌ಒಪಿ’ ಮೊತ್ತ
Last Updated 31 ಜನವರಿ 2019, 20:15 IST
ಅಕ್ಷರ ಗಾತ್ರ

ಮುಂಬೈ: ಐಸಿಐಸಿಐ ಬ್ಯಾಂಕ್‌ ಸಿಇಒ ಹುದ್ದೆಯಿಂದ ವಜಾಗೊಂಡಿರುವ ಚಂದಾ ಕೊಚ್ಚರ್‌ ಅವರು, ಬೋನಸ್‌ ಮತ್ತು ಉದ್ಯೋಗಿ ಷೇರು ಮಾಲೀಕತ್ವ ಯೋಜನೆಯಡಿ (ಇಎಸ್‌ಒಪಿ) ಪಡೆದಿದ್ದ ದೊಡ್ಡ ಕೋಟ್ಯಂತರ ಮೊತ್ತವನ್ನು ಬ್ಯಾಂಕ್‌ಗೆ ಮರಳಿಸಬೇಕಾಗಿದೆ.

2009ರಿಂದ 2018ರವರೆಗಿನ ಅವಧಿಯಲ್ಲಿ ಬೋನಸ್‌ ರೂಪದಲ್ಲಿ ಪಡೆದುಕೊಂಡಿದ್ದ ₹ 10 ಕೋಟಿ ಮತ್ತು ‘ಇಎಸ್‌ಒಪಿ’ ರೂಪದಲ್ಲಿ ಪಡೆದಿದ್ದ 94 ಲಕ್ಷ ಷೇರುಗಳ ಸದ್ಯದ ಮಾರುಕಟ್ಟೆ ಮೌಲ್ಯವಾದ ₹ 343 ಕೋಟಿಗಳನ್ನು ವಾಪಸ್‌ ಮಾಡಬೇಕಾಗಿದೆ.

ಒಂದು ವೇಳೆ ಕೆಲ ಷೇರುಗಳನ್ನು ಮಾರಾಟ ಮಾಡಿದ್ದರೆ ಈ ಮೊತ್ತ ಕಡಿಮೆಯಾಗುವ ಸಾಧ್ಯತೆ ಇದೆ. ಎರಡು ವರ್ಷಗಳ ಬೋನಸ್‌ ಪಾವತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತಡೆ ನೀಡಿತ್ತು. ಇದು ಕೂಡ ಕೊಚ್ಚರ್‌ ಅವರು ಮರು ಪಾವತಿಸಬೇಕಾದ ಒಟ್ಟಾರೆ ಮೊತ್ತದಲ್ಲಿ ಪರಿಗಣನೆಗೆ ಬರಲಿದೆ.

ಆಘಾತ ನೀಡಿದ ನಿರ್ಧಾರ: ತಾವು ನೀಡಿದ್ದ ರಾಜೀನಾಮೆಯನ್ನು ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ತಮ್ಮನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದೇ ಪರಿಗಣಿಸಲು ನಿರ್ಧರಿಸಿರುವುದು ತಮಗೆ ತೀವ್ರ ಆಘಾತ ನೀಡಿದೆ ಎಂದು ಚಂದಾ ಕೊಚ್ಚರ್‌ ಪ್ರತಿಕ್ರಿಯಿಸಿದ್ದಾರೆ.

‘ಐಸಿಐಸಿಐ ಗ್ರೂಪ್‌ಗೆ 34 ವರ್ಷಗಳ ಕಾಲ ಪರಿಶ್ರಮ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿರುವೆ. ಸಾಲ ನೀಡಿಕೆಯ ನಿರ್ಧಾರಗಳು ಏಕಪಕ್ಷೀಯವಲ್ಲ. ಸಾಲ ಮಂಜೂರಾತಿಗೆ ಸಂಬಂಧಿಸಿದ ಸಮಿತಿಯು ಸರ್ವಸಮ್ಮತಿಯಿಂದ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿಕೊಂಡಿದ್ದಾರೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಎನ್‌. ಶ್ರೀಕೃಷ್ಣ ಅವರ ನೇತೃತ್ವದಲ್ಲಿನ ಸ್ವತಂತ್ರ ತನಿಖಾ ಸಮಿತಿಯು, ಚಂದಾ ಕೊಚ್ಚರ್‌ ಅವರು ಹಲವಾರು ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥೆ ಎಂದು ವರದಿ ನೀಡಿದೆ.

ದೇಶಿ ಬ್ಯಾಂಕಿಂಗ್‌ ಕ್ಷೇತ್ರದ ಮೊದಲ ಮಹಿಳಾ ಸಿಇಒ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ ಅವರು, 2018ರ ಜೂನ್‌ ತಿಂಗಳಿನಿಂದಲೇ ರಜೆಯಲ್ಲಿ ಇದ್ದರು. ಅಕ್ಟೋಬರ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ಸಿಬಿಐ ಆರೋಪ: ಚಂದಾ ಕೊಚ್ಚರ್‌, ಅವರ ಪತಿ ದೀಪಕ್‌ ಕೊಚ್ಚರ್‌, ವಿಡಿಯೊಕಾನ್‌ ಗ್ರೂಪ್‌ ಮುಖ್ಯಸ್ಥ ವಿ.ಎನ್‌. ಧೂತ್‌ ಮತ್ತು ಸಾಲ ಮಂಜೂರಾತಿ ಸಮಿತಿಯ ಎಲ್ಲ ಸದಸ್ಯರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಸಮಿತಿಯ ಸದಸ್ಯರು ಈಗ ದೊಡ್ಡ, ದೊಡ್ಡ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗೆ ಏರಿದ್ದಾರೆ.

ಅಂಕಿ–ಅಂಶ
₹ 3,250 ಕೋಟಿ: ವಿಡಿಯೊಕಾನ್‌ಗೆ 2011ರಲ್ಲಿ ಮಂಜೂರು ಮಾಡಿದ ಸಾಲದ ಮೊತ್ತ

2009 ಮೇ: ಐಸಿಐಸಿಐ ಬ್ಯಾಂಕ್‌ನ ಸಿಇಒ ಹುದ್ದೆ ಸ್ವೀಕಾರ

2018 ಅಕ್ಟೋಬರ್‌: ಹುದ್ದೆಗೆ ರಾಜೀನಾಮೆ

2019, ಜನವರಿ 30: ಹುದ್ದೆಯಿಂದ ವಜಾ

₹ 10 ಕೋಟಿ: 2009ರಿಂದ 2018ರವರೆಗೆ ಅವರಿಗೆ ಪಾವತಿಸಿದ ಬೋನಸ್‌

₹ 343 ಕೋಟಿ: ‘ಇಎಸ್‌ಒಪಿ’ ರೂಪದಲ್ಲಿ ಪಡೆದಿದ್ದ 94 ಲಕ್ಷ ಷೇರುಗಳ ಸದ್ಯದ ಮಾರುಕಟ್ಟೆ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT