ಬುಧವಾರ, ನವೆಂಬರ್ 25, 2020
18 °C

ಸ್ಮಾರ್ಟ್‌ಫೋನ್‌ ಮಾರುಕಟ್ಟೆ: ಮುಂದುವರಿದ ಚೀನಾ ಕಂಪನಿಗಳ ಪ್ರಾಬಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ ಸಡಿಲವಾದ ನಂತರದ ಅವಧಿಯಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಹೆಚ್ಚಳ ಆಗಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಐದು ಕೋಟಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಆಗಿದೆ. ಇದರಲ್ಲಿ ಚೀನಾ ದೇಶದ ಕಂಪನಿಗಳ ಪಾಲು ಶೇಕಡ 76ರಷ್ಟು ಇದೆ.

ಶಿವೋಮಿ, ಸ್ಯಾಮ್‌ಸಂಗ್‌, ವಿವೊ, ರಿಯಲ್‌ಮಿ, ಒಪ್ಪೊ ಕಂಪನಿಗಳ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇಕಡ 8ರಷ್ಟು ಏರಿಕೆ ಕಂಡುಬಂದಿದೆ. ಒಂದೇ ತ್ರೈಮಾಸಿಕದಲ್ಲಿ ಐದು ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟ ಆಗಿರುವುದು ಭಾರತದ ಮಟ್ಟಿಗೆ ಒಂದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣಾ ಕಂಪನಿ ‘ಕ್ಯಾನಲಿಸ್‌’ ಹೇಳಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪಾಲು ಶೇಕಡ 74ರಷ್ಟು ಇತ್ತು. ಈಗ ಅದು ಶೇಕಡ 2ರಷ್ಟು ಹೆಚ್ಚಳ ಆದಂತಾಗಿದೆ. ಆದರೆ, ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೀನಾ ಕಂಪನಿಗಳ ಪಾಲು ಶೇಕಡ 80ರಷ್ಟು ಇತ್ತು. ಆಗಿನ ಮಾರುಕಟ್ಟೆ ಪಾಲಿಗೆ ಹೋಲಿಸಿದರೆ, ಶೇಕಡ 4ರಷ್ಟು ಕುಸಿತ ಕಂಡುಬಂದಿದೆ.

‘ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಕಳೆದ ಕೆಲವು ತಿಂಗಳುಗಳಿಂದ ತೀವ್ರವಾಗಿ ಚರ್ಚೆಯಾಗುತ್ತಿದೆ. ಆದರೆ, ಅದರ ಪರಿಣಾಮವು ಗ್ರಾಹಕರ ಖರೀದಿ ಪ್ರವೃತ್ತಿಯಲ್ಲಿ ಗಮನಾರ್ಹವಾಗಿ ಇನ್ನೂ ಕಂಡುಬಂದಿಲ್ಲ’ ಎಂದು ಕ್ಯಾನಲಿಸ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ವರುಣ್ ಕಣ್ಣನ್ ಹೇಳಿದ್ದಾರೆ.

ಬಿಕ್ಕಟ್ಟಿನ ಕಾರಣದಿಂದಾಗಿ ಚೀನಾದ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತದಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿವೆ. ಮಾರುಕಟ್ಟೆ ವೆಚ್ಚವನ್ನು ತಗ್ಗಿಸಿವೆ. ಭಾರತದ ಆರ್ಥಿಕ ಭವಿಷ್ಯಕ್ಕೆ ತಮ್ಮ ಪಾಲು ಕೂಡ ಇರುತ್ತದೆ ಎಂಬ ಚಿತ್ರಣವನ್ನು ಈ ಕಂಪನಿಗಳು ಬಹಳ ಜಾಗರೂಕತೆಯಿಂದ ಕಟ್ಟಿಕೊಡುತ್ತಿವೆ ಎಂದು ಕಣ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಲಾಕ್‌ಡೌನ್‌ ನಿಯಮಗಳನ್ನು ಸರ್ಕಾರಗಳು ನಿಧಾವಾಗಿ ಸಡಿಲಗೊಳಿಸುತ್ತಿದೆ. ಇದು ಸುಸ್ಥಿರ ಬೆಳವಣಿಗೆಗೆ ಸೂಕ್ತವಾದ ವಾತಾವರಣ ಸೃಷ್ಟಿಸಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ನಡೆದಿರುವ ಮಾರಾಟ ಮೇಳಗಳನ್ನು ಗಮನಿಸಿದರೆ, ಒಳ್ಳೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಇದ್ದೇ ಇದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಕ್ಯಾನಲಿಸ್‌ನ ವಿಶ್ಲೇಷಕರ ಅದ್ವೈತ್ ಮರ್ಡಿಕರ್ ಹೇಳಿದ್ದಾರೆ.

ಮಾರುಕಟ್ಟೆ ಪಾಲು

ಶಿವೋಮಿ; 26.1%
ಸ್ಯಾಮ್‌ಸಂಗ್‌; 20.4%
ವಿವೊ; 17.6%
ರಿಯಲ್‌ಮಿ; 17.4%
ಒಪ್ಪೊ; 12.1%
ಇತರರು; 6.4%

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು