ಹೂಡಿಕೆಯ ಕೆಲವು ಆಯ್ಕೆಗಳು

ರಾಷ್ಟ್ರೀಯ ಪಿಂಚಿ ಯೋಜನೆ (ಎನ್‌ಪಿಎಸ್) ಎನ್‌ಪಿಎಸ್ ಪಿಂಚಣಿ ಯೋಜನೆಯಾಗಿದ್ದು, ಇದರಲ್ಲಿ ತೊಡಗಿಸಿದ ಹಣವನ್ನು ಷೇರು, ಕಾರ್ಪೊರೇಟ್ ಬಾಂಡ್‌ಗಳು ಹಾಗೂ ಸರ್ಕಾರದ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಹೂಡಿಕೆದಾರರೇ ಯಾವುದರಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎಂದು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಆ ಹೊಣೆಯನ್ನು ಯೋಜನೆಯ ಪ್ರವರ್ತಕರಿಗೇ ಬಿಡಬಹುದು. ಹೂಡಿಕೆದಾರರು 60ನೇ ವರ್ಷಕ್ಕೆ ಕಾಲಿಟ್ಟಾಗ ಅಥವಾ ಖಾತೆ ತೆರೆದು 10ವರ್ಷ ಪೂರ್ಣಗೊಂಡಾಗ (ಯಾವುದು ಮೊದಲೋ ಅದು) ಹೂಡಿಕೆ ಪಕ್ವಗೊಳ್ಳುತ್ತದೆ. ಆಗ ಗರಿಷ್ಠ ಶೇ 60ರಷ್ಟು ಹಣವನ್ನು ಹಿಂದೆ ಪಡೆಯಬಹುದು. ಉಳಿದ ಮೊತ್ತವನ್ನು ಕಡ್ಡಾಯವಾಗಿ ವಾರ್ಷಿಕ ಪಿಂಚಣಿಗಾಗಿ ಹೂಡಿಕೆ ಮಾಡಬೇಕು. ಅದರಲ್ಲೂ ಸ್ವಲ್ಪ ಹಣವನ್ನು ಅವಧಿಗೂ ಮುನ್ನ ವಾಪಸ್ ಪಡೆಯಲು ಅವಕಾಶ ಇದ್ದರೂ ಅದಕ್ಕೆ ಹಲವಾರು ನಿಯಮಾವಳಿಗಳು ಇರುತ್ತವೆ.
ಎನ್‌ಪಿಎಸ್‌ಗೂ 80ಸಿಸಿಡಿ ಅಡಿ ಹೆಚ್ಚುವರಿಯಾಗಿ ₹ 50 ಸಾವಿರವರೆಗೆ ತೆರಿಗೆ ವಿನಾಯ್ತಿ ಲಭ್ಯವಾಗುತ್ತದೆ. ಲಾಕ್‌ಇನ್ ಅವಧಿಯು ತುಂಬ ದೀರ್ಘವಾಗಿರುವುದರಿಂದ ನಿವೃತ್ತಿ ವೇಳೆಗೆ ಒಂದಿಷ್ಟು ಹಣ ಇರುತ್ತದೆ ಎಂಬುದು ಖಚಿತವಾಗುತ್ತದೆ. ಹೂಡಿದ ಹಣವನ್ನು ಷೇರುಗಳಲ್ಲಿ ತೊಡಗಿಸುವುದರಿಂದಾಗಿ ಇದರಲ್ಲಿ ಪಿಪಿಎಫ್ ಅಥವಾ ಇಪಿಎಫ್‌ಗಿಂತ ಹೆಚ್ಚಿನ ಗಳಿಕೆ ದಾಖಲಿಸಲೂ ಅವಕಾಶ ಇರುತ್ತದೆ.
ನೀವು ಅತಿಯಾದ ನಿಯಮಾವಳಿಗಳನ್ನು ಇಷ್ಟಪಡದ, ಶಿಸ್ತುಬದ್ಧ ಹೂಡಿಕೆದಾರರಾಗಿದ್ದರೆ ಎನ್‌ಪಿಎಫ್ ಹೂಡಿಕೆ ನಿಮಗೆ ಕಿರಿಕಿರಿ ಎನಿಸಬಹುದು. ಹೂಡಿಕೆ ಪಕ್ವಗೊಂಡಾಗ ದೊಡ್ಡ ಮೊತ್ತವನ್ನು ವಾರ್ಷಿಕ ಪಿಂಚಣಿ ಯೋಜನೆಯಲ್ಲಿ ತೊಡಗಿಸುವುದರಿಂದ ನಿಮಗೆ ತೆರಿಗೆ ವಿನಾಯ್ತಿ ಲಾಭ ಲಭಿಸುವುದಿಲ್ಲ. ಗಳಿಕೆಯ ಲೆಕ್ಕದಲ್ಲೂ ದೊಡ್ಡ ಲಾಭವಾದಂತೆ ಕಾಣಿಸುವುದಿಲ್ಲ.
ಚಿನ್ನದಲ್ಲಿ ಹೂಡಿಕೆ
ಹೂಡಿಕೆಗೆ ಚಿನ್ನವು ಅತ್ಯುತ್ತಮ ವಿಧಾನ ಎಂಬುದು ಬಹುತೇಕರ ನಂಬಿಕೆಯಾಗಿದೆ. ಆದರೆ, ಈಚೆಗೆ ಚಿನ್ನದ ಶುದ್ಧತೆಯ ಸಮಸ್ಯೆ, ಅದನ್ನು ಸುರಕ್ಷಿತವಾಗಿಡಲು ಬರುವ ವೆಚ್ಚ, ವೇಸ್ಟೇಜ್, ನಗದೀಕರಿಸಲು ಬರುವ ಸಮಸ್ಯೆಗಳು ಇವೆಲ್ಲವನ್ನೂ ನೋಡಿದರೆ ಇದು ಹೂಡಿಕೆಗೆ ಅಷ್ಟೊಂದು ಸೂಕ್ತ ಎನಿಸುವುದಿಲ್ಲ. ಅದರ ಬದಲು ಭೌತಿಕವಾಗಿ ಚಿನ್ನವನ್ನು ಖರೀದಿಸದೆ, ಚಿನ್ನದ ಮ್ಯೂಚುವಲ್ ಫಂಡ್, ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚು ಲಾಭದಾಯಕ.
ಚಿನ್ನದಲ್ಲಿ ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯ ಏರಿಳಿತಕ್ಕೆ ಹೆದರಬೇಕಾಗಿಲ್ಲ. ಅದೂ ಅಲ್ಲದೆ ಹಣದುಬ್ಬರದಿಂದ ಇದು ರಕ್ಷಣೆ ನೀಡುತ್ತದೆ ಎಂಬುದು ನಿಜ. ಆದರೆ, ಜಾಗತಿಕ ಷೇರುಪೇಟೆಗೆ ಹೋಲಿಸಿದರೆ ಚಿನ್ನದ ಬೆಲೆ ಏರಿಕೆಯಾಗುವ ಗತಿಯು ಅತಿ ನಿಧಾನವಾದದ್ದು. ಅನೇಕ ಸಂದರ್ಭದಲ್ಲಿ ತುಂಬ ದೀರ್ಘ ಅವಧಿಯವರೆಗೆ ಚಿನ್ನದ ಬೆಲೆ ಸ್ಥಿರವಾಗಿ ಉಳಿಯುವುದಿದೆ.
ಷೇರುಗಳು
ಕಂಪನಿಯೊಂದರ ಷೇರುಗಳನ್ನು ನೀವು ಖರೀದಿಸಿದಿರೆಂದರೆ ನೀವು ಆ ಕಂಪನಿಯ ಷೇರುದಾರರಾಗುತ್ತೀರಿ. ಷೇರುಗಳಿಂದ ಬರಬಹುದಾದ ಗಳಿಕೆಗೆ ಮಿತಿ ಇಲ್ಲ. ಕಂಪನಿ ಉತ್ತಮ ಸಾಧನೆ ಮಾಡುತ್ತಿದ್ದರೆ ಷೇರುಗಳ ಬೆಲೆಯೂ ಏರಿಕೆಯಾಗುತ್ತ ಹೂಡಿಕೆದಾರರಿಗೆ ಹಲವು ಪಟ್ಟು ಲಾಭ ತಂದುಕೊಡಬಲ್ಲದು. ಸಣ್ಣ ಪ್ರಮಾಣದ ಹೂಡಿಕೆಯೂ ಭವಿಷ್ಯದಲ್ಲಿ ದೊಡ್ಡ ನಿಧಿಯಾಗಿ ಪರಿವರ್ತನೆಯಾಗಬಲ್ಲದು. ಷೇರುಗಳಲ್ಲಿ ಹೂಡಿಕೆ ಮಾಡಬೇಕಾದರೆ ನೀವು ಡಿಮ್ಯಾಟ್ ಖಾತೆ ತೆರೆಯುವುದು ಅಗತ್ಯ.
ಚಾರಿತ್ರಿಕವಾಗಿ ನೋಡಿದರೂ ಷೇರುಗಳಷ್ಟು ಗಳಿಕೆ ತಂದುಕೊಟ್ಟ ಇನ್ನೊಂದು ಹೂಡಿಕೆ ಉತ್ಪನ್ನ ಇಲ್ಲ. ನಿಮ್ಮ ಉಳಿತಾಯದ ಸಾಮರ್ಥ್ಯ ಕಡಿಮೆ ಇದ್ದರೂ ದೀರ್ಘಾವಧಿಯಲ್ಲಿ ಒಂದು ದೊಡ್ಡ ನಿಧಿಯನ್ನು ಗಳಿಸಲು ಈ ಹೂಡಿಕೆಯಿಂದ ಸಾಧ್ಯ.
ಆದರೆ, ಇದರಲ್ಲಿ ಅಪಾಯಗಳಿವೆ. ಷೇರುಗಳನ್ನು ಆಯ್ಕೆ ಮಾಡುವಲ್ಲಿ ಎಡವಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಷೇರು ವಹಿವಾಟು ನಡೆಸಬೇಕಾದರೆ ಒಂದಿಷ್ಟು ಅನುಭವ ಇರುವುದು ಅಗತ್ಯ. ಷೇರು ಸೂಚ್ಯಂಕದ ಏರುಪೇರಿನ ಕಾರಣಕ್ಕೆ ಆಗುವ ನಷ್ಟವನ್ನು ಭರಿಸಲು ಸಾಧ್ಯವಾಗುವುದಾದರೂ ಅದಕ್ಕೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಷೇರುಪೇಟೆಯ ಅನುಭವ ನಿಮಗೆ ಇಲ್ಲವೆಂದಾದರೆ ನೇರವಾಗಿ ಹೂಡಿಕೆ ಮಾಡುವುದು ಸೂಕ್ತವಲ್ಲ.
ಮ್ಯೂಚುವಲ್ ಫಂಡ್
ಮ್ಯೂಚುವಲ್ ಫಂಡ್ ಎಂದರೆ ಬೇರೆ ಬೇರೆ ಹೂಡಿಕೆದಾರರಿಂದ ಹಣವನ್ನು ಪಡೆದು, ಅದನ್ನು ಷೇರು, ಸಾಲಪತ್ರ, ಚಿನ್ನ ಮುಂತಾದ ಹೂಡಿಕಾ ಉತ್ಪನ್ನಗಳಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಥೆ. ಈ ಫಂಡ್‌ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಿಸುತ್ತಾರೆ.
ಇಲ್ಲಿ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾದ ಫಂಡ್ ಆಯ್ಕೆಗೆ ಹೂಡಿಕೆದಾರರಿಗೆ ಅವಕಾಶವಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೂಡಿಕೆಯ ಮರು ಹೊಂದಾಣಿಕೆಗೂ ಅವಕಾಶ ಲಭ್ಯವಾಗುತ್ತದೆ. ಆದರೆ, ಈ ಹೂಡಿಕೆಗೆ ಲಾಕ್ ಇನ್ ಅವಧಿ ಇಲ್ಲದಿರುವುದರಿಂದ ದೀರ್ಘಾವಧಿಯ ಹೂಡಿಕೆ ಮಾಡುವ ನಿಮ್ಮ ಇಚ್ಛೆ ಮುರಿದುಬೀಳುವ ಸಾಧ್ಯತೆ ಇರುತ್ತದೆ. ಇಲ್ಲಿ ಮಾಡಿರುವ ಹೂಡಿಕೆಯನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ, ಮರು ಹೊಂದಾಣಿಕೆ ಮಾಡಬೇಕಾದ ಅಗತ್ಯವೂ ಇರುತ್ತದೆ.
(ಲೇಖಕಿ: ಫಂಡ್ಸ್‌ಇಂಡಿಯಾಡಾಟ್‌ಕಾಂನ ಸಂಶೋಧನಾ ವಿಶ್ಲೇಷಕಿ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.