ನವದೆಹಲಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 16 ಪೈಸೆ ಏರಿಕೆಯಾಗಿದೆ. ವಹಿವಾಟಿನ ಅಂತ್ಯಕ್ಕೆ ₹83.93ಕ್ಕೆ ತಲುಪಿದೆ.
ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಪ್ರಕಟವಾಗಲಿದೆ. ಇದರಿಂದ ರೂಪಾಯಿ ಮೌಲ್ಯವು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಸೋಮವಾರದ ವಹಿವಾಟಿನಲ್ಲಿ ದೇಶದ ಷೇರು ಸೂಚ್ಯಂಕಗಳು ಕುಸಿತ ಕಂಡಿದ್ದವು. ಡಾಲರ್ ಎದುರು ರೂಪಾಯಿ ಮೌಲ್ಯ 37 ಪೈಸೆ ಕುಸಿದಿತ್ತು.
ಸರ್ಕಾರ ವಿಫಲ: ‘ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರೂಪಾಯಿ ಮೌಲ್ಯವು ಶೇ 30ರಷ್ಟು ಕುಸಿದಿದೆ. ಸೋಮವಾರದಂದು ಸಾರ್ವಕಾಲಿಕ ಕನಿಷ್ಠಕ್ಕೆ ತಲುಪಿದೆ. ಇದು ಕೇಂದ್ರ ಸರ್ಕಾರದ ಆರ್ಥಿಕ ಪ್ರಮಾದ ಮತ್ತು ನಿರ್ವಹಣೆಯಲ್ಲಿನ ವೈಫಲ್ಯವನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ ಪವನ್ ಖೇರಾ ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಒಂದೇ ದಿನ ₹10,073 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ರೂಪಾಯಿ ಮೇಲೆ ಒತ್ತಡ ಹೇರಿದೆ. ಹೂಡಿಕೆದಾರರ ವಿಶ್ವಾಸ ಗಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.