ಬಟ್ಟೆಗಳೂ ಮಾತನಾಡುತ್ತವೆ

7

ಬಟ್ಟೆಗಳೂ ಮಾತನಾಡುತ್ತವೆ

Published:
Updated:

ಬಟ್ಟೆಗಳೂ ಮಾತನಾಡಬಲ್ಲವು ಎಂದರೆ ಅಚ್ಚರಿ ಎನಿಸಬಹುದು ಅಲ್ಲವೇ? ತಂತ್ರಜ್ಞಾನದ ನೆರವಿನಿಂದ ಇದು ಸಾಧ್ಯ ಎನ್ನುತ್ತಾರೆ ಮೆಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ಸಂಶೋಧಕರು.

ಮೃದುವಾದ ಬಟ್ಟೆಗಳಲ್ಲಿ ಗರಿಷ್ಠ ವೇಗದಲ್ಲಿ ಕೆಲಸ ಮಾಡುವ ಆಪ್ಟೊ ಎಲೆಕ್ಟ್ರಾನಿಕ್‌ ಸೆಮಿಕಂಡಕ್ಟರ್‌ ಸಾಧನಗಳು, ಎಲ್‌ಇಡಿಗಳನ್ನು ಅಳವಡಿಸಲಾಗಿದೆ. ಇದರಿಂದ ಈ ಬಟ್ಟೆಗಳು ಕೆಲವು ನಿರ್ದಿಷ್ಟ ಸಾಧನಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿದೆ.

ಈ ನಿಟ್ಟಿನಲ್ಲಿ ಎಂಐಟಿ ವಿಜ್ಞಾನಿಗಳು ವಿಶೇಷ ಬಟ್ಟೆಗಳನ್ನು ಅಭಿವೃದ್ಧಿಪಡಿಸಿದ್ದು, ‘ಸ್ಮಾರ್ಟ್‌ ಫ್ಯಾಬ್ರಿಕ್‌’ ರೂಪಿಸುವ ಬಹುದಿನಗಳ ಕನಸನ್ನು ನನಸಾಗಿಸಿದ್ದಾರೆ.

ಮೊದಲೇ ಸಿದ್ಧಗೊಂಡಿರುವ ಬಟ್ಟೆಯನ್ನು ಫೈಬರ್‌ ಮಾದರಿಯಲ್ಲಿ ಬಿಸಿಯಾಗಿಸಿ, ನಂತರ ಅದನ್ನು ಆಪ್ಟಿಕಲ್‌ ಫೈಬರ್‌ ಆಗಿ ಪರಿವರ್ತಿಸಲಾಗುವುದು. ನೂಲಿನ ಮೂಲಕ ಇಂತಹ ಫೈಬರ್‌ಗಳನ್ನು ಸಂಗ್ರಹಿಸಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ. 

ಬೆಳಕನ್ನು ಹೊರಸೂಸುವ ಸೆಮಿಕಂಡಕ್ಟರ್‌ಗಳನ್ನು ಈ ಫೈಬರ್‌ಗಳಲ್ಲಿ ಅಳವಡಿಸಲಾಗುವುದಲ್ಲದೆ, ಕೂದಲೆಳೆಯಂತಿರುವ ತಾಮ್ರದ ವೈರ್‌ಗಳನ್ನೂ ಇದರಲ್ಲಿ ಸೇರಿಸಲಾಗುವುದು. ನಿರ್ದಿಷ್ಟ ಉಷ್ಣಾಂಶದಲ್ಲಿ ಇದನ್ನು ಬಿಸಿ ಮಾಡಲಾಗುವುದು. ಈ ವೇಳೆ ಫೈಬರ್‌ ದ್ರವ ರೂಪ ತಾಳಿದಾಗ ಅದನ್ನು ಉದ್ದನೇಯ ಎಳೆಯಂತೆ ಎಳೆಯಲಾಗುವುದು. ಈ ಸಂದರ್ಭದಲ್ಲಿ ತಾಮ್ರದ ವೈರ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವಂತೆ ನೋಡಿಕೊಳ್ಳಲಾಗಿರುತ್ತದೆ. ಮೈಕ್ರೊಚಿಪ್‌ ತಂತ್ರಜ್ಞಾನವನ್ನು ಬಳಸಿ, ಈ ಫೈಬರ್‌ನಲ್ಲಿನ ಘನ ವಸ್ತುಗಳನ್ನೂ ತೆಳುಗೊಳಿಸಲಾಗಿರುತ್ತದೆ. 

ಹೀಗೆ, ಎರಡು ಸಾಧನಗಳು ಮತ್ತು ವೈರ್‌ಗಳು ನಿರ್ದಿಷ್ಟ ಅಳತೆಯಲ್ಲಿ ಒಗ್ಗೂಡಿ, ಫೈಬರ್‌ಗಳು ಬಟ್ಟೆಯ ರೂಪವನ್ನು ತಾಳುತ್ತವೆ. ಈ ಸಂಶೋಧನೆಯು ಫೈಬರ್‌ಗಳ ತಯಾರಿಕೆಯಲ್ಲಿ ಹೊಸ ಒಳನೋಟ ನೀಡಿದೆ ಎಂದು ಸಂಶೋಧಕ ಮೈಕಲ್‌ ರೇನ್‌ ಹೇಳುತ್ತಾರೆ. 

‘ದ್ರವದ ರೂಪದಲ್ಲಿರುವ ಮಾದರಿಗಳನ್ನು ಒಂದಕ್ಕೊಂದು ಆಕರ್ಷಿಸುವಂತೆ ಮಾಡುವ ಬದಲು, ನಾವು ಈ ಸಾಧನಗಳನ್ನು ತೆಳುವಾದ ತಾಮ್ರದ ತಂತಿಗಳಿಂದ ಒಗ್ಗೂಡಿಸಿದ್ದೇವೆ. ಅಲ್ಲದೆ, ಇದನ್ನು ನೀರು ನಿರೋಧಕವನ್ನಾಗಿ ಮಾಡಲಾಗಿದೆ’ ಎಂದು ಅವರು ಹೇಳುತ್ತಾರೆ.

ಇದರ ಪ್ರಾತ್ಯಕ್ಷಿಕೆ ತೋರಿಸಲು, ಎಂಐಟಿ ಸಂಶೋಧಕರ ತಂಡ ಅಕ್ವೇರಿಯಂ ಮಾದರಿಯ ಸಣ್ಣ ಮೀನಿನ ಟ್ಯಾಂಕ್‌ನಲ್ಲಿ ಫೈಬರ್‌ಗಳನ್ನು ಇಟ್ಟಿತ್ತು. ಅಕ್ವೆರಿಯಂ ಹೊರಗಿನ ಲ್ಯಾಂಪ್‌ವೊಂದರಿಂದ ಟ್ಯಾಂಕ್‌ನೊಳಗಿನ ಫೈಬರ್‌ಗೆ ಸಂಗೀತ ತಲುಪುವ ವ್ಯವಸ್ಥೆ ಮಾಡಲಾಗಿತ್ತು. ರ‍್ಯಾಪಿಡ್‌ ಆಪ್ಟಿಕಲ್‌ ಸಂಜ್ಞೆಯ ಮೂಲಕ ಈ ಸಂಗೀತ ಫೈಬರ್‌ಗೆ ತಲುಪುವ ವ್ಯವಸ್ಥೆ ಮಾಡಲಾಗಿತ್ತು.  ಟ್ಯಾಂಕ್‌ನ ಹೊರಗಡೆ ಸಂಗೀತ ಕೇಳಿಬಂದರೆ, ಒಳಗಿನ ಫೈಬರ್‌ನಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿತ್ತು. ಬರಿಗಣ್ಣಿನಿಂದ ಯಾರು ಬೇಕಾದರೂ ಈ ಪ್ರಕ್ರಿಯೆ ವೀಕ್ಷಿಸಬಹುದಾಗಿತ್ತು. ಹಲವು ವಾರಗಳವರೆಗೆ ಈ ಫೈಬರ್‌ಗಳು ನೀರಿನಲ್ಲಿದ್ದರೂ ಅವುಗಳಿಗೆ ಯಾವುದೇ ಹಾನಿಯಾಗಿರಲಿಲ್ಲ.  

ಈ ತಂತ್ರಜ್ಞಾನದ ಆಧಾರದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಮೊದಲ ವಾಣಿಜ್ಯ ಉತ್ಪನ್ನ ಮುಂದಿನ ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಎಂಐಟಿ ಪ್ರೊಫೆಸರ್‌ ವೈ. ಫಿಂಕ್‌ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !