ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಸಂಬಳದ 95 ಲಕ್ಷ ಉದ್ಯೋಗ ಮಾಯ!

ಲಾಕ್‌ಡೌನ್‌ ನಂತರದ ಉದ್ಯೋಗ ಚಿತ್ರಣ ಕುರಿತು ಸಿಎಂಐಇ ವರದಿ
Last Updated 7 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಮೊದಲ ಲಾಕ್‌ಡೌನ್‌ ನಂತರದಲ್ಲಿ ತಿಂಗಳ ಸಂಬಳದ ಉದ್ಯೋಗಗಳ ಸಂಖ್ಯೆಯು ದೇಶದಲ್ಲಿ 95 ಲಕ್ಷದಷ್ಟು ಕಡಿಮೆ ಆಗಿದೆ. ಆದರೆ, ಇದೇ ಅವಧಿಯಲ್ಲಿ ದಿನಗೂಲಿ ಆಧಾರಿತ ಉದ್ಯೋಗಗಳಲ್ಲಿ ಹಾಗೂ ಕೃಷಿ ಕೆಲಸಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ.

ದೇಶದಲ್ಲಿ ಮೊದಲ ಲಾಕ್‌ಡೌನ್‌ ಪೂರ್ಣಗೊಂಡು ಒಂದೂವರೆ ವರ್ಷಗಳು ಕಳೆದಿದ್ದರೂ, ಎಲ್ಲ ಬಗೆಯ ಉದ್ಯೋಗಗಳ ಸಂಖ್ಯೆಯು ಕೋವಿಡ್‌ ಪೂರ್ವದ ಸ್ಥಿತಿಯನ್ನು ತಲುಪಿಲ್ಲ. 2019–20ರಲ್ಲಿ ದೇಶದಲ್ಲಿ ಒಟ್ಟು 40.89 ಕೋಟಿ ಉದ್ಯೋಗಗಳು ಇದ್ದವು. 2021ರ ಡಿಸೆಂಬರ್‌ ವೇಳೆಗೆ ಉದ್ಯೋಗಗಳ ಸಂಖ್ಯೆಯು 40.60 ಕೋಟಿಯಷ್ಟಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆ ಸಿದ್ಧಪಡಿಸಿರುವ ವರದಿ ಹೇಳಿದೆ.

ಅಂದರೆ, ಒಟ್ಟು ಉದ್ಯೋಗಗಳ ಸಂಖ್ಯೆಯಲ್ಲಿ 29 ಲಕ್ಷದಷ್ಟು ಕಡಿಮೆ ಆಗಿದೆ.ತಿಂಗಳ ಸಂಬಳದ ಉದ್ಯೋಗಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕಡಿಮೆ ಆಗಿದ್ದರೂ, ದಿನಗೂಲಿ ಹಾಗೂ ಕೃಷಿ ಉದ್ಯೋಗಗಳ ಸಂಖ್ಯೆಯಲ್ಲಿ ಒಂದಿಷ್ಟು ಏರಿಕೆ ಕಂಡುಬಂದ ಪರಿಣಾಮ ಒಟ್ಟು ಉದ್ಯೋಗ ನಷ್ಟವು 29 ಲಕ್ಷಕ್ಕೆ ಸೀಮಿತವಾಗಿದೆ.

2019–20ರಲ್ಲಿ ದೇಶದ ಒಟ್ಟು ಉದ್ಯೋಗಗಳ ಸಂಖ್ಯೆಯಲ್ಲಿ ತಿಂಗಳ ವೇತನದ ಉದ್ಯೋಗಗಳ ಪ್ರಮಾಣವು ಶೇಕಡ 21.2ರಷ್ಟು ಇತ್ತು. 2021ರ ಡಿಸೆಂಬರ್‌ ವೇಳೆಗೆ ಇದು ಶೇ 19ಕ್ಕೆ ಇಳಿಕೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕಟ್ಟಡ ನಿರ್ಮಾಣ ಮತ್ತು ಕೃಷಿ ವಲಯದ ಉದ್ಯೋಗಗಳ ಗುಣಮಟ್ಟಕ್ಕೆ ಹೋಲಿಸಿದರೆ, ತಯಾರಿಕಾ ವಲಯದಲ್ಲಿನ ಉದ್ಯೋಗಗಳ ಗುಣಮಟ್ಟ ಚೆನ್ನಾಗಿರುತ್ತದೆ’ ಎಂದು ವರದಿಯು ಉಲ್ಲೇಖಿಸಿದೆ. ಆದರೆ, ಸಿಎಂಐಇ ವರದಿ ಪ್ರಕಾರ, ಮೊದಲ ಲಾಕ್‌ಡೌನ್‌ ನಂತರದಲ್ಲಿ ತಯಾರಿಕಾ ವಲಯದಲ್ಲಿಯೇ ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಕಂಡುಬಂದಿದೆ.

2021ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದೇಶದಲ್ಲಿ ತಿಂಗಳ ವೇತನ ಸಿಗುವ ಉದ್ಯೋಗಗಳ ಸಂಖ್ಯೆಯು 8.4 ಕೋಟಿಗೆ ಹೆಚ್ಚಳ ಆಗಿತ್ತು. ಆದರೆ, ನವೆಂಬರ್‌ ಮತ್ತು ಡಿಸೆಂಬರ್‌ ವೇಳೆಗೆ ಇಂತಹ ಉದ್ಯೋಗಗಳ ಸಂಖ್ಯೆಯು 7.7 ಕೋಟಿಗೆ ಇಳಿಕೆ ಆಗಿದೆ. ಡಿಸೆಂಬರ್‌ನಲ್ಲಿ ದೇಶದಲ್ಲಿ ಹೊಸದಾಗಿ 39 ಲಕ್ಷ ಉದ್ಯೋಗ ಸೃಷ್ಟಿ ಆಯಿತಾದರೂ, ಸಂಸ್ಥೆಯು ಸಿದ್ಧಪಡಿಸಿರುವ ವರದಿ ಪ್ರಕಾರ, ತಿಂಗಳ ವೇತನದ ಉದ್ಯೋಗಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿಲ್ಲ.

‘ನಾವು ಈಗ ಆರ್ಥಿಕ ಪುನಶ್ಚೇತನದ ಹಂತದಲ್ಲಿ ಇದ್ದೇವೆ. ಕೆಲವು ವಲಯಗಳಲ್ಲಿ ಒಂದಿಷ್ಟು ಉದ್ಯೋಗ ಸೃಷ್ಟಿ ಆಗುತ್ತಿದ್ದವು. ಈಗ ಇನ್ನೊಂದು ಸುತ್ತಿನ ಲಾಕ್‌ಡೌನ್‌ ಏನಾದರೂ ಜಾರಿ ಆದಲ್ಲಿ, ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಉದ್ಯೋಗ ನಷ್ಟದ ಸಾಧ್ಯತೆ ಇನ್ನಷ್ಟು ಹೆಚ್ಚಲಿದೆ’ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್) ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಕೃಷ್ಣ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಮತ್ತು ನಿರ್ಬಂಧಗಳಿಂದಾಗಿ ಸಂಘಟಿತ ಹಾಗೂ ಅಸಂಘಟಿತ ಆರ್ಥಿಕ ವಲಯಗಳ ಮೇಲೆ ಆಗಿರುವ ಪರಿಣಾಮಗಳ ಅಧ್ಯಯನದ ವಿಚಾರವಾಗಿ ಸರ್ಕಾರ ಗಂಭೀರವಾಗಿಲ್ಲ. ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿದರೆ ಜನರ ಜೀವನೋಪಾಯಕ್ಕೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳು ತಲೆದೋರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT