ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಕ್ಷೇತ್ರ; ಹಗರಣ ಮುಕ್ತವಾಗುವುದು ಕಷ್ಟ

Last Updated 30 ಅಕ್ಟೋಬರ್ 2019, 6:32 IST
ಅಕ್ಷರ ಗಾತ್ರ

ಕೇರಳದಲ್ಲಿನ 14 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು (ಡಿಸಿಬಿ) ಕೇರಳ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿ, ‘ಕೇರಳ ಬ್ಯಾಂಕ್‌’ ಸ್ಥಾಪಿಸುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ತನ್ನ ಒಪ್ಪಿಗೆ ನೀಡಿದೆ. ಈ ಮಾದರಿಯ ಸಾಧಕ– ಬಾಧಕಗಳು, ಕರ್ನಾಟಕದಲ್ಲಿಯೂ ಇಂತಹ ಪ್ರಯೋಗ ಕೈಗೊಳ್ಳಬಹುದೇ, ಸಹಕಾರಿ ಕ್ಷೇತ್ರ ಶುದ್ಧಗೊಳಿಸಲು ಮತ್ತು ಬಲಪಡಿಸಲು ಇರುವ ಮಾರ್ಗೋಪಾಯಗಳೇನು ಮತ್ತಿತರ ಸಂಗತಿಗಳ ಬಗ್ಗೆ ಪ್ರೊ. ಎಂ. ಎಸ್‌. ಶ್ರೀರಾಮ್‌ ಅವರು ಇಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

* ಕೇರಳ ಬ್ಯಾಂಕ್‌ ಸ್ಥಾಪನೆಯ ಹಿಂದಿನ ಮೂಲ ಉದ್ದೇಶವೇನು?

ಕೇರಳರಾಜ್ಯದ14ಜಿಲ್ಲಾ ಸಹಕಾರ ಕೇಂದ್ರೀಯ ಬ್ಯಾಂಕುಗಳು ಮತ್ತು ರಾಜ್ಯ ಸಹಕಾರ ಬ್ಯಾಂಕ್‌ ಸೇರಿಸಿ ಒಂದು ಬೃಹತ್ ಸಹಕಾರಿ ಬ್ಯಾಂಕ್‌ ಸ್ಥಾಪಿಸುವುದೇ ಕೇರಳ ಬ್ಯಾಂಕಿನ ಮೂಲ ಉದ್ದೇಶ.ಒಂದು ಕಾಲಘಟ್ಟದಲ್ಲಿ ಸಹಕಾರಕ್ಕೆ ಮೂರು ಮಜಲಿನ ವ್ಯವಸ್ಥೆಯ ಅವಶ್ಯಕತೆಯಿತ್ತು.ಆದರೆ, ಈಗಿನ ದಿನದಲ್ಲಿ,ತಂತ್ರಾಂಶ ಮತ್ತು ಸಂಪರ್ಕ ಇರುವ ಕಾಲಕ್ಕೆ ಮೂರು ಮಜಲುಗಳು ಬೇಕೇ ಎನ್ನುವ ಪ್ರಶ್ನೆಯಿತ್ತು.ಜೊತೆಗೆ ಕೇರಳದಲ್ಲಿ ಸಹಕಾರಿ ವ್ಯವಸ್ಥೆ ಸ್ವಸ್ಥವಾಗಿ,ಆರೋಗ್ಯಪೂರ್ಣವಾಗಿದೆ.ಜನರ ಠೇವಣಿಗಳು ಪ್ರಾಥಮಿಕ ಪತ್ತಿನ ಸಂಘಗಳಲ್ಲಿ ಮತ್ತು ಜಿಲ್ಲಾ ಬ್ಯಾಂಕುಗಳಲ್ಲಿವೆ.ಇವುಗಳನ್ನು ಒಂದೆಡೆ ಕಲೆಹಾಕಿದರೆ ಇನ್ನಷ್ಟು ಉತ್ತಮವಾಗಿ ಸಂಪನ್ಮೂಲಗಳನ್ನು ಉಪಯೋಗಿಸಬಹುದು. ತಂತ್ರಾಂಶದ ಖರೀದಿಯಲ್ಲಿಯೂ ಉಳಿತಾಯವಾಗುವುದು ಹಾಗೂ ಪತ್ತಿನ ಸಂಘದ ಸದಸ್ಯರಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಈ ಮೂಲಕ ಒದಗಿಸಬಹುದು ಎನ್ನುವುದು ಉದ್ದೇಶವಾಗಿತ್ತು.ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ಪತ್ತಿನ ಸಂಘಗಳನ್ನು ಜನಸ್ನೇಹಿಯಾಗಿ ಉಳಿಸುತ್ತಲೇ,ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಬೃಹತ್ ಬ್ಯಾಂಕನ್ನು ಸ್ಥಾಪಿಸುವುದು ಈ ಪ್ರಯೋಗದ ಉದ್ದೇಶವಾಗಿದೆ.

* ಕೇರಳ ಬ್ಯಾಂಕ್‌ ಮಾದರಿಯು ಸಹಕಾರಿ ಕ್ಷೇತ್ರದ ಒಟ್ಟಾರೆ ಸಮಸ್ಯೆಗೆ ಪರಿಹಾರ ಒದಗಿಸುವುದೇ?

ಸಹಕಾರಿಸಂಘಗಳ ಸಮಸ್ಯೆಗೆ ಇದು ಪರಿಹಾರ ಎಂದು ಹೇಳಲು ಸಾಧ್ಯವಿಲ್ಲ.ಹಾಗೆ ನೋಡಿದರೆ ಸಹಕಾರಿ ಬ್ಯಾಂಕ್‌ ಎನ್ನುವುದರಲ್ಲಿಯೇ ಒಂದು ವಿರೋಧಾಭಾಸವಿದೆ.ಸಹಕಾರ ಎನ್ನುವುದು ಪರಸ್ಪರತೆಯ ಸೂತ್ರದ ಮೇಲೆ ನಡೆಯುವ ವ್ಯವಹಾರ.ಬ್ಯಾಂಕ್‌ ಎನ್ನುವುದು ಜನಸಾಮಾನ್ಯರ ಠೇವಣಿ ಮತ್ತು ಸಾಲದ ಮೇಲೆ ನಡೆಯುವ ಸಂಸ್ಥೆ. ಕೇರಳ ಬ್ಯಾಂಕ್‌ ರೂಪಿಸುವಾಗ ಅದರ ಮೂಲತತ್ವದಲ್ಲಿ ಸಹಕಾರಿ ಬ್ಯಾಂಕೆಂದು ನೋಡದೇ,ಸಹಕಾರ ಸಂಘಗಳ,ಸಹಕಾರ ಕ್ಷೇತ್ರಕ್ಕೆ ಸಂದ ಬ್ಯಾಂಕೆಂದು ನೋಡಿದೆವು.ಈ ಬ್ಯಾಂಕಿನ ಸಾಫಲ್ಯವಿರುವುದು ಸಶಕ್ತವಾಗಿ ಪರಸ್ಪರತೆಯ ಸೂತ್ರದ ಮೇಲೆ ನಡೆಯುವ ಸಹಕಾರಿ ಪತ್ತಿನ ಸಂಘಗಳ ಜಾಲದ ಅಡಿಪಾಯದ ಮೇಲೆ ಮಾತ್ರ.ಈ ಮೂಲಾಧಾರ ಇಲ್ಲದಿದ್ದರೇ ಈ ಮಾದರಿ ಸಶಕ್ತವಾಗಿ ಕೆಲಸ ಮಾಡುತ್ತದೆ ಎಂದು ನಂಬುವುದಕ್ಕೆ ಕಷ್ಟ.

* ಸಾಂಪ್ರದಾಯಕ 3 ಹಂತದ ವ್ಯವಸ್ಥೆಯನ್ನು 2 ಹಂತದ ವ್ಯವಸ್ಥೆಗೆ ಬದಲಾಗುವುದಕ್ಕೆ ಇದು ಹೆಚ್ಚು ಒತ್ತು ನೀಡಲಿದೆಯೇ?

ಹೌದು.ಈ ಬಗ್ಗೆ ಹಲವು ರಾಜ್ಯಗಳಲ್ಲಿ ಚರ್ಚೆಯಾಗಿದೆ. ಛತ್ತೀಸಗಡ ಮತ್ತು ಜಾರ್ಖಂಡ್‌ನಲ್ಲಿ ಇದನ್ನು ಜಾರಿ ಮಾಡಲಾಗಿದೆ.ಉತ್ತರಪೂರ್ವ ರಾಜ್ಯಗಳಲ್ಲಿ ಸಾಂಪ್ರದಾಯಿಕವಾಗಿಯೇ ಎರಡು ಮಜಲುಗಳ ವ್ಯವಸ್ಥೆಯಿತ್ತು.ಆದರೆ, ಗಾತ್ರದಲ್ಲಿ ಕೇರಳದ್ದೇ ದೊಡ್ಡ ಯತ್ನ ಎನ್ನಬಹುದು.

* ಇತರ ರಾಜ್ಯಗಳೂ ಈ ಮಾದರಿ ಅನುಸರಿಸಬಹುದೇ?

ಖಂಡಿತವಾಗಿಅನುಸರಿಸಬಹುದು.ಆದರೆ ಕೆಲವೆಡೆ ಪ್ರಾಥಮಿಕ ವ್ಯವಸಾಯ ಸಂಘಗಳನ್ನು ಜಿಲ್ಲಾ ಕೇಂದ್ರ ಬ್ಯಾಂಕುಗಳ ಏಜೆಂಟರಾಗಿ ಪರಿವರ್ತಿಸಬೇಕೆನ್ನುವ ಆಲೋಚನೆ ಇದೆ.ಬಕ್ಷಿ ಸಮಿತಿಯೂ ಈ ರೀತಿಯ ಸೂಚನೆಯನ್ನು ನೀಡಿತ್ತು.ಎರಡು ಮಜಲುಗಳ ವ್ಯವಸ್ಥೆಯಲ್ಲಿ ಗ್ರಾಮಸ್ತರದಲ್ಲಿರುವ ಪತ್ತಿನ ಸಂಘಗಳನ್ನು ಬಲಪಡಿಸುವ ರೀತಿಯಲ್ಲಿ ವ್ಯವಸ್ಥೆ ಮಾಡದಿದ್ದರೆ ನಮ್ಮ ಸಹಕಾರ ವ್ಯವಸ್ಥೆಯನ್ನು ನಾವು ಕಳೆದುಕೊಳ್ಳುತ್ತೇವೆ.ಕ್ರೋಡೀಕರಣದ ಉತ್ಸಾಹದಲ್ಲಿ ವಿಕೇಂದ್ರೀಕರಣದ ಸೂತ್ರದ ಮೇಲೆ ನಡೆಯುತ್ತಿರುವ ಗ್ರಾಮಸ್ತರದ ಸಂಸ್ಥೆಗಳು ನಾಶವಾಗದಂತೆ ಕಾಪಾಡುವ ರೀತಿಯಲ್ಲಿ ನಾವು ಇದನ್ನು ನೋಡಬೇಕಾಗಿದೆ.

* ಕರ್ನಾಟಕದಲ್ಲಿ ಇಂತಹ ಪ್ರಯೋಗ ಕೈಗೊಳ್ಳಬಹುದೇ?

ಕರ್ನಾಟಕದಪರಿಸ್ಥಿತಿಯನ್ನು ಇನ್ನೂ ಅಧ್ಯಯನ ಮಾಡಬೇಕಾಗಿದೆ.ತಾಂತ್ರಿಕವಾಗಿ ಇದು ಸಾಧ್ಯ.ಆದರೆ, ಒಟ್ಟಾರೆ ಪ್ರಾಥಮಿಕ ಸಂಘಗಳ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಪರಿಸ್ಥಿತಿಯನ್ನು ಪರಿಗಣಿಸಿ ಇದನ್ನು ಕೈಗೊಳ್ಳಬೇಕು. ಆರೋಗ್ಯಪೂರ್ಣವಾದ ಒಂದು ಬ್ಯಾಂಕು ಆಗದಿದ್ದರೆ ಈ ಕ್ರೋಡೀಕರಣದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.

* ಕೇರಳ ಬ್ಯಾಂಕ್‌ ಮಾದರಿಯಲ್ಲಿ ಹೆಚ್ಚು ಪಾರದರ್ಶಕತೆ ನಿರೀಕ್ಷಿಸಬಹುದೆ?

ಪಾರದರ್ಶಕತೆಒಂದು ಮನಃಸ್ಥಿತಿ.ಈಗಲೂ ಬೇಕಿದ್ದರೆ ವ್ಯವಸ್ಥೆ ಪಾರದರ್ಶಕವಾಗಿರಬಹುದು.ಅದಕ್ಕೆ ಕ್ರೋಡೀಕರಣದ ಅವಶ್ಯಕತೆಯಿಲ್ಲ.

* ಅವ್ಯವಹಾರಗಳು ನಡೆಯುವುದಕ್ಕೆ ಪ್ರಮುಖ ಕಾರಣಗಳೇನು?

ಸಹಕಾರಿಬ್ಯಾಂಕುಗಳ ಆಡಳಿತ ವ್ಯವಸ್ಥೆಯಲ್ಲಿ ಕೆಲವು ವಿರೋಧಾಭಾಸಗಳಿವೆ.ಬ್ಯಾಂಕಿಂಗ್ ಪದ್ಧತಿಯ ಆಡಳಿತ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ.ಹೀಗಾಗಿ ಆಡಳಿತ ಮಂಡಳಿಯಲ್ಲಿರುವ ಪ್ರತಿ ಸದಸ್ಯರೂ ಆರ್‌ಬಿಐ ಸೂಚಿಸಿರುವ ಸೂಕ್ತ ಮತ್ತು ಸಮರ್ಪಕ ಸೂತ್ರಕ್ಕೆ ಅನುಗುಣವಾಗಿದ್ದಾರೆಯೇ ಎನ್ನುವ ಪರೀಕ್ಷೆಗೆ ಒಡ್ಡಬೇಕಾಗುತ್ತದೆ.ಆದರೆ, ಪರಸ್ಪರತೆ ಮತ್ತು ಪ್ರಜಾಸ್ವಾಮ್ಯ ಸೂತ್ರದಂತೆ ನಡೆಯುವ ಸಹಕಾರ ವ್ಯವಸ್ಥೆಯಲ್ಲಿ ಇದನ್ನು ಜಾರಿಮಾಡುವುದು ಕಷ್ಟ.ಸಹಕಾರ ಸಂಘದ ಸದಸ್ಯರಿಂದ ಆಡಳಿತ ಮಂಡಳಿ ಉಂಟಾಗುತ್ತದೆ.ಸದಸ್ಯರೇ ಸಾಲಗಾರರೂ ಆಗಿರುತ್ತಾರೆ.ಅವರೇ ಠೇವಣಿದಾರರೂ ಆಗಿರುತ್ತಾರೆ.ಸಹಕಾರ ಸಂಘವು ಸಣ್ಣದಾಗಿರುವಾಗ ಈ ನಿಯಂತ್ರಣ ಸಮರ್ಪಕವಾಗಿ ನಡೆಯುತ್ತದೆ. ಗಾತ್ರ ದೊಡ್ಡದಾದಾಗ ಸದಸ್ಯರು ಸಂಘದ ಮೇಲೆ ಆಡಳಿತ ಮಂಡಳಿಯ ಮೂಲಕ ಕೈಗೊಳ್ಳಬಹುದಾದ ನಿಯಂತ್ರಣ ದುರ್ಬಲವಾಗುತ್ತದೆ.

* ಹಗರಣಗಳ ಹೊರತಾಗಿಯೂ ಜನರು ಈ ವ್ಯವಸ್ಥೆಯಲ್ಲಿ ಇಟ್ಟಿರುವ ನಂಬಿಕೆಗೆ ಕಾರಣಗಳೇನು?

ಸಹಕಾರವ್ಯವಸ್ಥೆ ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ.ಹಗರಣಗಳಾದರೂ ಅದೂ ದೂರದಲ್ಲಾಗಿದೆ ಅನ್ನಿಸುತ್ತದೆ.ಸಹಕಾರ ಪರಸ್ಪರತೆಯ ಆಧಾರದ ಮೇಲೆ ನಮ್ಮ ಅಕ್ಕಪಕ್ಕದವರಿಂದ ನಡೆಸಲ್ಪಡುವುದರಿಂದ ನಂಬಿಕೆ ಹುಟ್ಟುತ್ತದೆ.ಜೊತೆಗೆ ದೊಡ್ಡಬ್ಯಾಂಕುಗಳು ನೀಡುವ ಸೇವೆಗಳಿಗಿಂತ ಉತ್ತಮ ಮತ್ತು ವೈಯಕ್ತಿಕವಾದ ಸೇವೆಗಳನ್ನು ಸಹಕಾರ ಬ್ಯಾಂಕುಗಳು ನೀಡಬಹುದು.ಸಣ್ಣ ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳು ಇದರಲ್ಲಿಯೇ ನೆಮ್ಮದಿ ಕಾಣಬಹುದು.ಹೀಗಾಗಿ ಸಹಕಾರ ವ್ಯವಸ್ಥೆ ಒಂದು ಆತ್ಮೀಯವಾದ ವಾತಾವರಣವನ್ನು ಸೃಷ್ಟಿ ಮಾಡುವುದರಿಂದ ನಂಬಿಕೆ ಬೆಳೆಯುವುದು ಸಹಜವೇ.

* ಬಹುತೇಕ ರಾಜಕಾರಣಿಗಳು ಸಹಕಾರಿ ಚಳವಳಿಯಿಂದಲೇ ಬೆಳೆದು ಬಂದಿದ್ದರೂ ಅದನ್ನು ಬಲಪಡಿಸಲು ಹಿಂದೇಟು ಹಾಕಲು ಕಾರಣಗಳೇನು?

ಇದುಮಾತ್ರ ನನಗೆ ಅರ್ಥವಾಗಿಲ್ಲ.ಮಹಾರಾಷ್ಟ್ರದ ಸಹಕಾರಿ ಸಕ್ಕರೆ ವ್ಯವಸ್ಥೆಯನ್ನು ಅಲ್ಲಿನ ರಾಜಕಾರಣಿಗಳು ಬಲಪಡಿಸಿದ್ದಾರೆ.ಆದರೆ ಆ ಆಲೋಚನಾಕ್ರಮ ಪತ್ತಿನ ಸಂಘಗಳಿಗೆ ಹಬ್ಬಿಲ್ಲ.ತುಸುಮಟ್ಟಿಗೆ ಹೈನುಗಾರಿಕೆಯನ್ನು ರಾಜಕಾರಣಿಗಳು ವೃದ್ಧಿಪಡಿಸಿದ್ದಾರೆ.ಆದರೆ ಈ ಪ್ರಶ್ನೆಗೆ ಅಧ್ಯಯನಾತ್ಮಕವಾಗಿ ಒಂದು ಉತ್ತರವನ್ನು ನೀಡಲು ಕಷ್ಟವಾಗುತ್ತದೆ.

* ನಿಯಂತ್ರಣ ವಿಷಯದಲ್ಲಿ ಇರುವ ಅಡೆತಡೆಗಳೇನು?

ಸಹಕಾರಿ ಬ್ಯಾಂಕುಗಳ ನಿಯಂತ್ರಣ ಆರ್.ಬಿ.ಐ ಮತ್ತು ಕೇಂದ್ರ /ರಾಜ್ಯ(ಬಹುರಾಜ್ಯ ಸಹಕಾರ ಸಂಘಗಳಿಗೆ ಕೇಂದ್ರ ಮತ್ತು ಒಂದೇ ರಾಜ್ಯದಲ್ಲಿರುವ ಸಹಕಾರ ಬ್ಯಾಂಕುಗಳಿಗೆ ಆಯಾ ರಾಜ್ಯ)ಸರ್ಕಾರದ ನಿಯಂತ್ರಣವಿದೆ.ಗ್ರಾಮೀಣ ಸಹಕಾರ ವ್ಯವಸ್ಥೆಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ನಿಯಂತ್ರಣದ ಕೆಲಸ ಮಾಡುತ್ತದೆ.ಇದರಲ್ಲಿ ಒಟ್ಟಾರೆ ಯಾವುದಾದರೂ ಕ್ರಮ ಕೈಗೊಳ್ಳಬೇಕಾದರೆ ಸಮನ್ವಯತೆ ಇರಬೇಕಾಗುತ್ತದೆ.ಅದೇ ಮುಖ್ಯವಾದ ವಿಷಯ.ಆದರೆ, ಈಗ ಈ ವಿಷಯದಲ್ಲಿ ಹೆಚ್ಚಿನ ಗೊಂದಲವಿಲ್ಲ.ಆರ್‌ಬಿಐ ಪ್ರತಿ ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಇದು ಸಾಮಾನ್ಯವಾಗಿ ಸುಸೂತ್ರವಾಗಿ ನಡೆಯುತ್ತದೆ.

* ರಾಜಕೀಯ ಹಸ್ತಕ್ಷೇಪ, ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಲು ಕಾಯ್ದೆಯಲ್ಲಿ ಅವಕಾಶವೇ ಇಲ್ಲವೇ?

ಇದರಪ್ರಯತ್ನ ಹಿಂದೆಯೂ ಆಗಿದೆ.ಸಂವಿಧಾನ ತಿದ್ದುಪಡಿ ಮಾಡಿ ಸಹಕಾರ ಪದ್ಧತಿಯಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಸಂವಿಧಾನಬದ್ಧವಾಗಿ ನಮಗೆ ಕೊಡಮಾಡಿದ ಮಸೂದೆಯಲ್ಲಿ ಶಾಸಕರು ಸಂಸತ್‌ ಸದಸ್ಯರು ಸಹಕಾರ ಸಂಘಗಳಲ್ಲಿ ಪದಾಧಿಕಾರಿಗಳಾಗಿರಬಾರದು ಎಂಬ ಕಲಮಿದೆ.ಆದರೆ, ಇದಕ್ಕೆ ಸಂಬಂಧಪಟ್ಟ ಭಾಗವನ್ನು ಗುಜರಾತ್ ಹೈಕೋರ್ಟ್‌ ಬೇರೆ ಕಾರಣಗಳಿಂದ ತಡೆಹಿಡಿದಿದೆ.ಹೀಗೆ ಮಾಡಿದರೂ,ಅದರ ಪ್ರಭಾವ ಮಿತವಾಗಿರುತ್ತದೆ.ರಾಜಕೀಯ ಹಸ್ತಕ್ಷೇಪವನ್ನು ತಡೆಯುವುದು ಕಾನೂನುಬದ್ಧವಾಗಿ ಕಷ್ಟವೇ.ಆದರೆ, ಸೌಹಾರ್ದ ಕಾಯ್ದೆ ಮತ್ತು ಪ್ರೊಡ್ಯೂಸರ್ ಕಂಪನಿ ಕಾಯಿದೆಯ ಮೂಲಕ ಅದನ್ನು ತಡೆಯಲು ಪ್ರಯತ್ನ ಮಾಡಿದ್ದರೂ,ಅದರ ಪರಿಣಾಮ ಸೀಮಿತವಾಗಿರುತ್ತದೆ.

* ದೊಡ್ಡ ಶಿಕ್ಷೆಯಾಗಿರುವ ನಿದರ್ಶನಗಳು ಇವೆಯೇ?

ನನಗೆತಿಳಿದಿರುವಂತೆ ಇಲ್ಲ.ಖಂಡಿತವಾಗಿಯೂ ಒಂದಿಷ್ಟು ಶಿಕ್ಷೆ ಆಗಿರುತ್ತದೆ. ಆದರೆ ನಾವು ನಿದರ್ಶನವಾಗಿ ಕೊಡುವಂತಹ ದೊಡ್ಡ ಪ್ರಕರಣ ನನಗೆ ನೆನಪಾಗುತ್ತಿಲ್ಲ.

* ಆರ್‌ಬಿಐನ ನಿಗಾ ವ್ಯವಸ್ಥೆ ಇದ್ದರೂ ದೊಡ್ಡ ಮೊತ್ತದ ಹಗರಣಗಳು ನಡೆಯುವುದಾದರೂ ಹೇಗೆ?

ಪಟ್ಟಣಸಹಕಾರಿಬ್ಯಾಂಕುಗಳ ಸಂಖ್ಯೆ 1200ಕ್ಕಿಂತ ಹೆಚ್ಚಿವೆ.ಪ್ರತಿಯೊಂದೂ ಒಂದು ಭಿನ್ನ ಸಂಸ್ಥೆ.ಅದಕ್ಕೆ ಭಿನ್ನ ಲೆಕ್ಕಪತ್ರ ವಿಭಾಗ,ಭಿನ್ನ ಸಾಫ್ಟವೇರ್,ಭಿನ್ನ ಆಡಳಿತ ಮಂಡಳಿ,ಭಿನ್ನ ಪದ್ಧತಿಗಳಿರುತ್ತವೆ. ಇಷ್ಟು ಸಂಖ್ಯೆಯ ವಿಭಿನ್ನ ಸ್ವರೂಪದ ಸಂಸ್ಥೆಗಳ ಮೇಲೆ ನಿಗಾ ವಹಿಸುವುದು ಕಷ್ಟದ ಮಾತೇ.ಅದೇ ದೊಡ್ಡ ಬ್ಯಾಂಕು ಅನೇಕ ಶಾಖೆಗಳನ್ನು ಹೊಂದಿದ್ದರೂ ಸಾಮಾನ್ಯ ಪದ್ಧತಿಗಳಿರುವುದರಿಂದ ನಿಗಾ ವಹಿಸುವುದು ಸ್ವಲ್ಪ ಸುಲಭ.ಆದರೆ, ಅಪರಾಧ ಎಸಗುವವರ ಕ್ರಿಯಾಶೀಲತೆ ಯಾವಾಗಲೂ ನಿಯಂತ್ರಕರಿಗಿಂತ ಒಂದು ಹೆಜ್ಜೆ ಮುಂದಿರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.

* ಇದು ವ್ಯವಸ್ಥೆಯ ವೈಫಲ್ಯವೆ ಅಥವಾ ಸಹಕಾರಿಗಳ ಸ್ವಾಹಾಕಾರ ಪ್ರವೃತ್ತಿ ಮತ್ತು ಅತಿಯಾದ ರಾಜಕೀಯ ಹಸ್ತಕ್ಷೇಪ ಕಾರಣವೇ?

ಇವೆಲ್ಲವುಗಳೂ ಪ್ರಮುಖ ಕಾರಣಗಳಾಗಿವೆ.

*ಕಾಯ್ದೆಗೆ ತಿದ್ದುಪಡಿ ತಂದರೆ ಪರಿಸ್ಥಿತಿ ಸುಧಾರಣೆ ಆಗುವುದೇ?

ಯಾವಕಾಯ್ದೆಗೆ ಯಾವ ರೀತಿಯ ತಿದ್ದುಪಡಿಯನ್ನು ತರುತ್ತಾರೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ.ಕಾಯ್ದೆಯಲ್ಲಿ ಎದ್ದು ಕಾಣುವ ತೊಂದರೆಗಳೇನೂ ಇಲ್ಲ.ಆದರೆ, ಸಹಕಾರ ಬ್ಯಾಂಕುಗಳ ಆಡಳಿತ ವ್ಯವಸ್ಥೆಯ ಮೂಲಕಲ್ಪನೆಯಲ್ಲಿಯೇ ಮೂಲಭೂತ ಬದಲಾವಣೆಗಳಾಗಬೇಕು. ಹಾಗೆ ಮಾಡಿದರೆ ಅವು ‘ಸಹಕಾರ’ ಬ್ಯಾಂಕ್‌ಗಳಾಗಿ ಉಳಿಯುವುದಿಲ್ಲ.

* ವ್ಯವಸ್ಥೆ ಬಲಪಡಿಸಲುತುರ್ತಾಗಿ ಆಗಬೇಕಾಗಿರುವುದೇನು?

ಗ್ರಾಮೀಣಸಹಕಾರ ಕ್ಷೇತ್ರದ ಕಾಯಕಲ್ಪಕ್ಕೆ ವೈದ್ಯನಾಥನ್ ಸಮಿತಿಯ ವರದಿ ಜಾರಿಮಾಡಬೇಕಾಗಿತ್ತು.ಅದಾಗಲಿಲ್ಲ.ಅದೇ ಸೂತ್ರದಲ್ಲಿ ಕಾಯಕಲ್ಪ ಮಾಡಬಹುದು.ಪಟ್ಟಣ ಸಹಕಾರಿ ಬ್ಯಾಂಕುಗಳ ಮೂಲಭೂತ ಸ್ವರೂಪದ ಬಗ್ಗೆಯೇ ನಾವು ಯೋಚನೆ ಮಾಡಬೇಕು.ಇವು ಈ ರೂಪದಲ್ಲಿ ಮುಂದುವರೆಯಬೇಕೇ ಎನ್ನುವುದೇ ಪ್ರಶ್ನೆ.

* ಠೇವಣಿ ವಿಮೆಯ ಮಿತಿಯನ್ನು ಒಂದು ಲಕ್ಷ ರೂಪಾಯಿಗಳಿಂದ ಹೆಚ್ಚಿಸಲು ಇರುವ ಅಡೆತಡೆಗಳೇನು

ಈಮಿತಿಯನ್ನು ತುರ್ತಾಗಿ ಹೆಚ್ಚಿಸಬೇಕಾಗಿದೆ.ಅದರ ಮಿತಿಯನ್ನು ರೂಪಿಸಿದ್ದಕಾಲಕ್ಕೂ ಇಂದಿಗೂ ಹಣದುಬ್ಬರದಿಂದಾಗಿಯೇ ಬಹಳಷ್ಟು ಬದಲಾಗಿದೆ.ಮಿತಿ ಹೆಚ್ಚಿಸಿದರೆ ಠೇವಣಿದಾರರಿಗೆ ಇನ್ನಷ್ಟು ನೆಮ್ಮದಿ,ನಂಬಿಕೆ ಉಂಟಾಗುತ್ತದೆ.

* ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆಗೆ (ಎಫ್‌ಆರ್‌ಡಿಐ) ಮರು ಜೀವ ನೀಡುವುದರಿಂದ ಆಗುವ ಪರಿಣಾಮಗಳೇನು?

ಈಮಸೂದೆಯಲ್ಲಿ ಒಂದು ಅಪಾಯಕಾರಿ ಬೈಲ್ ಇನ್ ಕಾಯ್ದೆ ಇದೆ.ಅದರಿಂದ ಕಷ್ಟಕ್ಕೆ ಸಿಕ್ಕಿರುವ ಬ್ಯಾಂಕುಗಳಲ್ಲಿನ ಠೇವಣಿಗಳನ್ನು ಮುಟ್ಟುಗೋಲು ಹಾಕಿ,ಬ್ಯಾಂಕು ಬಿಕ್ಕಟ್ಟಿನಿಂದ ಪಾರಾಗುವವರೆಗೂ ಅದನ್ನು ಅವರಲ್ಲೇ ಇರಿಸಿಕೊಳ್ಳುವ ಮತ್ತು ಠೇವಣಿದಾರರನ್ನು ಇತರ ಸಾಲ ನೀಡಿದ ಸಂಸ್ಥೆಗಳಿಗೆ ಸಮಾನವಾಗಿ ನೋಡುವ ಕಲಮಿದೆ.ಅದು ಬಹಳ ಅಪಾಯಕಾರಿಯಾದದ್ದು.ಮುಖ್ಯವಾಗಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುತ್ತಾ ಇದನ್ನು ಮಾಡಿದರೆ ಅದು ನಮ್ಮ ಬ್ಯಾಂಕಿಂಗ್ ಪದ್ಧತಿಯ ಮೇಲಿನ ನಂಬಿಕೆಗೆ ಪೆಟ್ಟು ಕೊಟ್ಟಂತಾಗುತ್ತದೆ.ನೋಟು ರದ್ದತಿ ಸಂದರ್ಭದಲ್ಲಿ ಸರ್ಕಾರ ಏನನ್ನಾದರೂ ಮಾಡಬಹುದು ಎನ್ನುವುದು ಸಾಬೀತಾಗಿತ್ತು.ಆ ಹಿನ್ನೆಲೆಯಲ್ಲಿ ಈ ಮಸೂದೆಯ ಕೆಲವು ಕಲಮುಗಳನ್ನು ನಾವು ಆತಂಕದಿಂದ ನೋಡಬೇಕು.

* ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯಪ್ರವೃತ್ತವಾಗುವುದರಿಂದ ಮುಂಬರುವ ದಿನಗಳಲ್ಲಿ ಸಹಕಾರಿ ಬ್ಯಾಂಕ್‌ ಕ್ಷೇತ್ರವು ಹಗರಣಗಳಿಂದ ಮುಕ್ತವಾಗಬಹುದೇ?

– ಹಗರಣ ಮುಕ್ತವಾಗುವುದು ಕಷ್ಟ.ನಾನು ಮೊದಲೇ ಹೇಳಿದಂತೆ ಅಪರಾಧ ಎಸಗುವವರ ಕ್ರಿಯಾಶೀಲತೆ ಯಾವಾಗಲೂ ನಿಯಂತ್ರಕರ ಪರಿಹಾರಕ್ಕಿಂತ ಒಂದು ಹೆಜ್ಜೆ ಮುಂದಿರುತ್ತದೆ.ಆದರೆ, ಹಗರಣ ಆಗದಂತೆ ತಡೆಯುವ ಉದ್ದೇಶದಿಂದ ಅಂತರಿಕ ಮತ್ತು ನಿಯಂತ್ರಕ ಪದ್ಧತಿಗಳನ್ನು ಉತ್ತಮವಾಗಿ ರೂಪಿಸಬಹುದು.ಆಗ ಹಗರಣ ಕಷ್ಟವಾಗುತ್ತದೆ.ಪ್ರತೀ ಹಗರಣದಿಂದಲೂ ಆರ್‌ಬಿಐ ಮತ್ತು ಸರ್ಕಾರಗಳು ಪಾಠಕಲಿತು ಪರಿಸ್ಥಿತಿಯನ್ನು ಉತ್ತಮಪಡಿಸುತ್ತಲೇ ಬಂದಿವೆ ಎಂದು ನಾನು ನಂಬಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT