ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೆಲೆ ಶೇ 10ರವರೆಗೆ ಏರಿಕೆ

Last Updated 9 ಜನವರಿ 2022, 12:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸ ವರ್ಷದಲ್ಲಿ ಹವಾ ನಿಯಂತ್ರಕಗಳು ಹಾಗೂ ರೆಫ್ರಿಜರೇಟರ್‌ಗಳ ಬೆಲೆ ಹೆಚ್ಚಳ ಆಗಿದೆ. ಇವುಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದು, ಸರಕು ಸಾಗಣೆ ವೆಚ್ಚ ಜಾಸ್ತಿ ಆಗಿರುವುದು ಇದಕ್ಕೆ ಕಾರಣ.

ಈ ತಿಂಗಳ ಕೊನೆಯ ವೇಳೆಗೆ ಅಥವಾ ಮಾರ್ಚ್‌ಗೆ ಮೊದಲು ವಾಷಿಂಗ್‌ ಮೆಷಿನ್‌ ಬೆಲೆಯಲ್ಲಿ ಶೇಕಡ 5ರಿಂದ ಶೇ 10ರಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಪ್ಯಾನಾಸೋನಿಕ್, ಎಲ್‌ಜಿ, ಹಾಯರ್ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಈಗಾಗಲೇ ಹೆಚ್ಚಿಸಿವೆ. ಸೋನಿ, ಹಿಟಾಚಿ, ಗೋದ್ರೆಜ್ ಅಪ್ಲಯನ್ಸಸ್‌ ಕಂಪನಿಗಳು ಪ್ರಸಕ್ತ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳದ ಕುರಿತು ತೀರ್ಮಾನ ಮಾಡಲಿವೆ.

ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಯನ್ಸಸ್‌ ತಯಾರಕರ ಸಂಘದ (ಸಿಇಎಎಂಎ) ಪ್ರಕಾರ, ಕಂಪನಿಗಳು ಜನವರಿಯಿಂದ ಮಾರ್ಚ್‌ ನಡುವಿನ ಅವಧಿಯಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಶೇಕಡ 5ರಿಂದ ಶೇ 7ರವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ‘ಕಚ್ಚಾ ವಸ್ತುಗಳ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ಹೆಚ್ಚಾಗಿದೆ. ಸಾಗಣೆ ವೆಚ್ಚವೂ ಜಾಸ್ತಿಯಾಗಿದೆ. ಹೀಗಾಗಿ ನಾವು ನಮ್ಮ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಮತ್ತು ಹವಾನಿಯಂತ್ರಕಗಳ ಬೆಲೆಯನ್ನು ಶೇ 3ರಿಂದ ಶೇ 5ರಷ್ಟು ಹೆಚ್ಚಿಸುತ್ತಿದ್ದೇವೆ’ ಎಂದು ಹಾಯರ್ ಅಪ್ಲಯನ್ಸಸ್ ಇಂಡಿಯಾ ಕಂಪನಿ ಅಧ್ಯಕ್ಷ ಎನ್.ಎಸ್. ಸತೀಶ್ ತಿಳಿಸಿದರು.

ಪ್ಯಾನಾಸೋನಿಕ್ ಕಂಪನಿಯು ಹವಾನಿಯಂತ್ರಕಗಳ ಬೆಲೆಯನ್ನು ಗರಿಷ್ಠ ಶೇ 8ರವರೆಗೆ ಈಗಾಗಲೇ ಹೆಚ್ಚಿಸಿದೆ. ಕಂಪನಿಯು ಬೆಲೆಯನ್ನು ಇನ್ನಷ್ಟು ಹೆಚ್ಚಿಸುವ ಯೋಚನೆಯಲ್ಲಿದೆ. ಗೃಹ ಬಳಕೆಯ ಇತರ ಕೆಲವು ಉತ್ಪನ್ನಗಳ ಬೆಲೆಯಲ್ಲಿಯೂ ಏರಿಕೆ ಆಗಬಹುದು ಎಂದು ಕಂಪನಿ ಹೇಳಿದೆ.

‘ಹಬ್ಬಗಳ ಸಂದರ್ಭದಲ್ಲಿ ಉದ್ಯಮ ವಲಯವು ಉತ್ಪನ್ನಗಳ ಬೆಲೆ ಏರಿಕೆಯನ್ನು ಮುಂದಕ್ಕೆ ಹಾಕಿತ್ತು. ಆದರೆ, ಈಗ ವೆಚ್ಚ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡದೆ ಅನ್ಯಮಾರ್ಗ ಇಲ್ಲ’ ಎಂದು ಸಿಇಎಎಂಎ ಅಧ್ಯಕ್ಷ ಎರಿಕ್ ಬ್ರಗಾಂಜಾ ಹೇಳಿದರು. ಕೆಲವು ಕಂಪನಿಗಳು ಈಗಾಗಲೇ ಬೆಲೆ ಏರಿಕೆ ಮಾಡಿವೆ. ಇನ್ನು ಕೆಲವು ಕಂಪನಿಗಳು ಬೆಲೆ ಹೆಚ್ಚಿಸುವ ಪ್ರಕ್ರಿಯೆ ಶುರು ಮಾಡಿವೆ ಎಂದರು.

ಬೆಲೆ ಏರಿಕೆ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಿದೆ ಎಂದು ಸೋನಿ ಮತ್ತು ಗೋದ್ರೆಜ್ ಅಪ್ಲಯನ್ಸಸ್ ಕಂಪನಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT