ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಪಿಂಚಣಿ ಹೆಚ್ಚಳ: ಸಿಗದ ಸ್ಪಷ್ಟತೆ

ಇದುವರೆಗೂ ಭವಿಷ್ಯ ನಿಧಿ ಅಧಿಕಾರಿಗಳ ಕೈಸೇರದ ‘ಇಪಿಎಫ್‌ಒ’ದ ಸುತ್ತೋಲೆ
Last Updated 9 ಏಪ್ರಿಲ್ 2019, 16:51 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು (ಎಸ್‌ಎಲ್‌ಪಿ) ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದರಿಂದ ಖಾಸಗಿ ವಲಯದಲ್ಲಿ ದುಡಿಯುವ ಉದ್ಯೋಗಿಗಳ ಪಿಂಚಣಿ ಮೊತ್ತವು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದ್ದರೂ, ಅದರ ಪ್ರಯೋಜನ ಪಡೆಯುವ ಬಗ್ಗೆ ನೌಕರರು ಮತ್ತು ನಿವೃತ್ತರಲ್ಲಿ ಹಲವು ಅನುಮಾನಗಳು ಮನೆ ಮಾಡಿವೆ.

ಇನ್ನು ಮುಂದೆ ನೌಕರನ ಸೇವಾ ಅವಧಿಯ ಕೊನೆಯ ವರ್ಷದಲ್ಲಿನ 12 ತಿಂಗಳ ವೇತನದ ಸರಾಸರಿ ಆಧರಿಸಿ ಪಿಂಚಣಿ ಲೆಕ್ಕಹಾಕಬೇಕು ಎನ್ನುವುದು ಈಗ ಸ್ಪಷ್ಟವಾಗಿದೆ. ಉದ್ಯೋಗಿಗಳ ಪಿಂಚಣಿ ಯೋಜನೆಯಡಿ (ಇಪಿಎಸ್‌) ದೊಡ್ಡ ಮೊತ್ತದ ಪಿಂಚಣಿ ಪಡೆಯಲು ನೌಕರರು ‘ಇಪಿಎಫ್‌ಒ’ಗೆ ಬಾಕಿ ಹಣವನ್ನು ಬಡ್ಡಿ ಸಹಿತ ಪಾವತಿಸಬೇಕಾಗುತ್ತದೆ.

ನೌಕರರ ಸೇವಾ ಅವಧಿ, ವೇತನ ಆಧರಿಸಿ ಹಲವು ಲಕ್ಷ ರೂಪಾಯಿಗಳಲ್ಲಿ ಇರಲಿರುವ ಈ ಬಾಕಿ ಮೊತ್ತವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿಯಿಂದ (ಇಪಿಎಫ್‌), ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್‌) ಸೇರ್ಪಡೆಯಾಗುತ್ತಿದ್ದ ಶೇ 8.33ರ ಇಡೀ ಮೊತ್ತವನ್ನು ‘ಇಪಿಎಸ್‌’ಗೆ ವರ್ಗಾಯಿಸಬೇಕಾಗುತ್ತದೆ. ಆಗ ‘ಇಪಿಎಫ್‌’ಗೆ ಜಮೆಯಾಗುವ ಮೊತ್ತ ಕಡಿಮೆಯಾಗಲಿದೆ. ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಲಾಭವಾಗಲಿದೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

ಖಾಸಗಿ ಟ್ರಸ್ಟ್‌:‘ಇ‍ಪಿಎಫ್‌ಒ’ನಿಂದ ವಿನಾಯ್ತಿ ಪಡೆದಿರುವ (exempted PF trusts) ಉದ್ಯೋಗಿಗಳ ಭವಿಷ್ಯ ನಿಧಿ ನಿರ್ವಹಿಸುವ ಖಾಸಗಿ ಸಂಸ್ಥೆಗಳ ಟ್ರಸ್ಟ್‌ ನೌಕರರೂ ಇದರ ಪ್ರಯೋಜನ ಪಡೆಯಲು ಅರ್ಹರೆ ಎನ್ನುವುದು ಸದ್ಯಕ್ಕೆ ಖಚಿತಪಟ್ಟಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಇರುವ ಪ್ರಕರಣ ಇತ್ಯರ್ಥಗೊಂಡಿರುವ ಬಗ್ಗೆ ಸ್ಪಷ್ಟತೆ ಇಲ್ಲ.

ಸುಪ್ರೀಂಕೋರ್ಟ್‌ ನಿರ್ಧಾರ ಆಧರಿಸಿ ‘ಇಪಿಎಫ್‌ಒ’ನಿಂದ ಬರಲಿರುವ ಸುತ್ತೋಲೆಯಲ್ಲಿ ಈ ಬಗ್ಗೆ ವಿವರಗಳು ಇರಬಹುದು. ಸುತ್ತೋಲೆ ನಮ್ಮ ಕೈಸೇರುವವರೆಗೆ ಈ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಭವಿಷ್ಯ ನಿಧಿ ಸಂಘಟನೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೆಸರು ಬಹಿರಂಗಪಡಿಸದ ನಿಬಂಧನೆ ಮೇರೆಗೆ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪೂರ್ಣ ವೇತನ ಆಧರಿಸಿದ ಹೆಚ್ಚಿನ ಪ್ರಮಾಣದ ಪಿಂಚಣಿಗೆ ಅರ್ಹರಾದ ನಿವೃತ್ತರು, ನಿಯಮಗಳ ಅನುಸಾರ ‘ಇಪಿಎಫ್‌ಒ’ಗೆ ಹೆಚ್ಚುವರಿ ಹಣ ಪಾವತಿಸಿದರೆ ಅವರಿಗೆ ಬರಬೇಕಾದ ಹೆಚ್ಚುವರಿ ಪಿಂಚಣಿ ನೀಡಲಾಗುತ್ತಿದೆ. ಇದು ಈಗಾಗಲೇ ಕಾರ್ಯಗತವಾಗು
ತ್ತಿದೆ. ಅವರಿಗೆ ಬರಬೇಕಾದ ಪಿಂಚಣಿಯ ಬಾಕಿ ಮೊತ್ತವನ್ನೂ ಪಾವತಿಸಲಾಗು
ವುದು’ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ಇತ್ತೀಚೆಗೆ, ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧದ ‘ಇಪಿಎಫ್‌ಒ’ದ ಮೇಲ್ಮನವಿಯನ್ನು ವಜಾ ಮಾಡಿದ್ದರಿಂದ ಯಾರಿಗೆ ಎಷ್ಟು ಪ್ರಮಾಣದ ಲಾಭ ಆಗಲಿದೆ. ಗರಿಷ್ಠ ಎಷ್ಟು ಪಿಂಚಣಿ ಪಡೆಯಬಹುದು ಎನ್ನುವುದು ನೌಕರರಿಂದ ನೌಕರರಿಗೆ ಭಿನ್ನವಾಗಿರುತ್ತದೆ.

ಪಿಂಚಣಿಗೆ ಪರಿಗಣಿಸುವ ಪೂರ್ಣ ವೇತನ ಎನ್ನುವುದು ಮೂಲ ವೇತನ ಮತ್ತು ತುಟ್ಟಿಭತ್ಯೆ ಒಳಗೊಂಡಿರುತ್ತದೆ. ಪಿಂಚಣಿ (ಇಪಿಎಸ್‌) ಹೆಚ್ಚಳಕ್ಕೆ ನೌಕರರ ತಿಂಗಳ ‘ಪಿಎಫ್‌’ನಲ್ಲಿನ ಕಡಿತದ ಪ್ರಮಾಣವೂ ಏರಿಕೆಯಾಗಲಿದೆ. ಅದರಿಂದ ಮನೆಗೆ ಕೊಂಡೊಯ್ಯುವ ವೇತನ ಕಡಿಮೆಯಾಗಲಿದೆ.

35 ವರ್ಷ ಸೇವೆ ಸಲ್ಲಿಸಿದವರು ಸದ್ಯಕ್ಕೆ ಗರಿಷ್ಠ₹ 7,500 ಪಿಂಚಣಿ ಪಡೆಯುತ್ತಿದ್ದರೆ, ಅವರು ಇನ್ನು ಮುಂದೆ ₹ 15 ಸಾವಿರ ಪಿಂಚಣಿ ಪಡೆಯಬಹುದು. ಮೂಲ ವೇತನ ಹೆಚ್ಚಿದಂತೆ ಪಿಂಚಣಿ ಮೊತ್ತವೂ ಏರಿಕೆಯಾಗಲಿದೆ. ಪೂರ್ಣ ವೇತನ ಆಧರಿಸಿ ಉದ್ಯೋಗಿಯು ಪಿಂಚಣಿ ಯೋಜನೆಗೆ ಕೊಡುಗೆ ನೀಡುತ್ತಿದ್ದರೆ ಹೆಚ್ಚಿನ ಪ್ರಮಾಣದ ಪಿಂಚಣಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಆರ್‌.ಸಿ ಗುಪ್ತಾ ಪ್ರಕರಣದಲ್ಲಿ 2017ರಲ್ಲಿ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT