ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಿಎಂ ಕೇರ್ಸ್‌ ನಿಧಿ'ಗೆ ದೇಣಿಗೆ 'ಸಿಎಸ್‌ಆರ್‌' ಪರಿಗಣನೆಗೆ ಕ್ರಮ

Last Updated 29 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಪಿಡುಗು ವ್ಯಾಪಕವಾಗಿ ಹರಡುತ್ತಿರುವ ತುರ್ತುಪರಿಸ್ಥಿತಿ ಎದುರಿಸಲು ಸರ್ಕಾರ ಸ್ಥಾಪಿಸಿರುವ ‘ಪ್ರಧಾನ ಮಂತ್ರಿಯ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ’ಗೆ (ಪಿಎಂ– ಕೇರ್ಸ್‌ ಫಂಡ್‌) ಕಂಪನಿಗಳು ನೀಡುವ ದೇಣಿಗೆಯನ್ನು ಅವುಗಳ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಕೊಡುಗೆ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.

ಕಂಪನಿ ಕಾಯ್ದೆ ಪ್ರಕಾರ, ಅರ್ಹ ಕಾರ್ಪೊರೇಟ್‌ ಸಂಸ್ಥೆಗಳು ಈ ನಿಧಿಗೆ ನೀಡುವ ದೇಣಿಗೆಯನ್ನು ಅವುಗಳ ‘ಸಿಎಸ್ಆರ್‌‘ ಚಟುವಟಿಕೆಯ ವೆಚ್ಚವೆಂದು ಪರಿಗಣಿಸಲಾಗುವುದು ಎಂದು ಕಂಪನಿ ವ್ಯವಹಾರ ಸಚಿವಾಲಯವು ತಿಳಿಸಿದೆ.

‘ಕಂಪನಿ ಕಾಯ್ದೆ –2013’ರ ಪ್ರಕಾರ, ಕೆಲ ಕಂಪನಿಗಳು ತಮ್ಮ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಕನಿಷ್ಠ ಶೇ 2ರಷ್ಟನ್ನು ಹಣಕಾಸು ವರ್ಷವೊಂದರಲ್ಲಿ ‘ಸಿಎಸ್‌ಆರ್‌‘ ಚಟುವಟಿಕೆಗಳಿಗೆ ವೆಚ್ಚ ಮಾಡಬೇಕಾಗುತ್ತದೆ. ಇದು 2014ರ ಏಪ್ರಿಲ್‌ನಿಂದ ಜಾರಿಗೆ ಬಂದಿದೆ. ಇದುವರೆಗೆ ಅನೇಕ ಕಂಪನಿಗಳು ‘ಸಿಎಸ್‌ಆರ್‌‘ ವೆಚ್ಚವನ್ನೇ ಮಾಡಿಲ್ಲ. ಇನ್ನು ಕೆಲವು ಕಾರ್ಪೊರೇಟ್‌ಗಳು ತಮ್ಮ ಪಾಲಿನ ಮೊತ್ತ ಮೀರಿ ಖರ್ಚು ಮಾಡಿವೆ. ಕೆಲವರು ನಿಯಮದನ್ವಯ ಕಡಿಮೆ ಮೊತ್ತ ವೆಚ್ಚ ಮಾಡಿದ್ದಾರೆ.

‘ತಮ್ಮ ಪಾಲಿನ ‘ಸಿಎಸ್‌ಆರ್‌’ ಹೊಣೆಗಾರಿಕೆಯನ್ನು ಇದುವರೆಗೂ ಸಮರ್ಪಕವಾಗಿ ನಿಭಾಯಿಸದ ಕಂಪನಿಗಳು ’ಪಿಎಂ–ಕೇರ್ಸ್‌ ಫಂಡ್‌‘ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಂಪನಿ ಕಾಯ್ದೆಗೆ ಅನುಗುಣವಾಗಿ ಯಾವುದೇ ಬಗೆಯ ದೇಣಿಗೆಯನ್ನು ‘ಸಿಎಸ್‌ಆರ್‌‘ ವೆಚ್ಚ’ವೆಂದು ಪರಿಗಣಿಸಲಾಗುವುದು’ ಎಂದು ಕಂಪನಿ ವ್ಯವಹಾರಗಳ ಕಾರ್ಯದರ್ಶಿ ಐ. ಶ್ರೀನಿವಾಸ್‌ ಹೇಳಿದ್ದಾರೆ.

’ಸದ್ಯಕ್ಕೆ ದೇಶದಲ್ಲಿ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಬಗೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇದರಿಂದ ಸಾಧ್ಯವಾಗಲಿದೆ. ಕಾರ್ಪೊರೇಟ್ ವಲಯದ ‘ಸಿಎಸ್‌ಆರ್‌‘ ವೆಚ್ಚವು ಕೊರೊನಾ ಹಾವಳಿ ಮಟ್ಟ ಹಾಕುವ ಸರ್ಕಾರದ ಪ್ರಯತ್ನಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕೊರೊನಾ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್‌, ವೈಯಕ್ತಿಕ ರಕ್ಷನಾ ಸಲಕರಣೆ, ವೆಂಟಿಲೇಟರ್ಸ್‌, ಪರೀಕ್ಷೆ ಮತ್ತಿತರ ಅಗತ್ಯ ಸಾಧನಗಳನ್ನು ಒದಗಿಸಲು ಸಾಧ್ಯವಾಗಲಿದೆ‘ ಎಂದು ಹೇಳಿದ್ದಾರೆ.

ಕನಿಷ್ಠ ₹ 500 ಕೋಟಿ ನಿವ್ವಳ ಸಂಪತ್ತು ಹೊಂದಿದ, ₹ 1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ವಹಿವಾಟು ಹೊಂದಿದ, ₹ 5 ಕೋಟಿ ನಿವ್ವಳ ಲಾಭ ಮಾಡುವ ಕಾರ್ಪೊರೇಟ್‌ಗಳು ‘ಸಿಎಸ್‌ಆರ್‌‘ ವೆಚ್ಚ ಮಾಡಬೇಕಾಗುತ್ತದೆ.

ಅಂಕಿ ಅಂಶ

* ₹ 77,000 ಕೋಟಿ: 5 ವರ್ಷಗಳಲ್ಲಿ ಕಂಪನಿಗಳು ಮಾಡಬೇಕಾಗಿದ್ದ ‘ಸಿಎಸ್‌ಆರ್‌‘ ವೆಚ್ಚ

* ₹ 52,000 ಕೋಟಿ: ಕಾರ್ಪೊರೇಟ್‌ಗಳ ‘ಸಿಎಸ್‌ಆರ್‌’ ಕೊಡುಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT