ಭಾನುವಾರ, ಸೆಪ್ಟೆಂಬರ್ 15, 2019
27 °C

ಆರೋಗ್ಯ ವೆಚ್ಚ ನಿಯಂತ್ರಿಸಲು ಇರುವ ಆರು ಮಾರ್ಗಗಳು

Published:
Updated:

ಆರೋಗ್ಯ ವೆಚ್ಚಗಳು ಸತತವಾಗಿ ಏರಿಕೆಯಾಗುತ್ತಿರುವುದು ಜಗತ್ತಿನಾದ್ಯಂತ ಜನರ ಚಿಂತೆಗೆ ದೊಡ್ಡ ಕಾರಣವಾಗಿದೆ. ವಯಸ್ಸಾದವರಿಗಂತೂ ಇದು ಇನ್ನಷ್ಟು ಚಿಂತೆಗೆ ಈಡುಮಾಡುವ ವಿಚಾರ. ವಯಸ್ಸಾದಂತೆ ಜನರಲ್ಲಿ ಸಹಜವಾಗಿ ಕೆಲವು ಸಮಸ್ಯೆಗಳು ಕಾಣಿಸುತ್ತವೆ. ಇಂಥ ಸಂದರ್ಭದಲ್ಲಿ ಉತ್ತಮವಾದ ಆರೋಗ್ಯ ವಿಮೆಯು ನೆರವಿಗೆ ಬರುತ್ತದೆ. ಆರೋಗ್ಯ ರಕ್ಷಣೆಗೆ ಬರುವ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಿರುವ ಮಾರ್ಗೋಪಾಯಗಳ ವಿವರ ಇಲ್ಲಿದೆ.

1. ವಾಸ್ತವಿಕ ಯೋಜನೆ ರೂಪಿಸುವುದು: ನಿವೃತ್ತಿಯ ನಂತರದ ಜೀವನದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಈ ವಯಸ್ಸಿನಲ್ಲಿ ಖರ್ಚು ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬೇಕಾದರೆ, ಅಡಮಾನದಿಂದ ಆರೋಗ್ಯ ರಕ್ಷಣೆಯವರೆಗೆ ಪ್ರತಿಯೊಂದನ್ನೂ ಯೋಜನಾಬದ್ಧವಾಗಿ ಮಾಡುವುದು ಅಗತ್ಯ. ಹಾಗೆ ಮಾಡಬೇಕಾದರೆ ಒಂದಿಷ್ಟು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

ಅ) ಹೆಚ್ಚಿನ ಹಣದುಬ್ಬರ: ಭವಿಷ್ಯದ ಆರ್ಥಿಕ ಯೋಜನೆಗಳನ್ನು ರೂಪಿಸುವಾಗ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಡಬೇಕು.

ಬ) ಏನೂ ಸಂಭವಿಸಬಹುದು: ಭವಿಷ್ಯದಲ್ಲಿ ನಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಬೇರೆಬೇರೆ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವುದು ಅಗತ್ಯ.

ಕ) ಆರೋಗ್ಯ ಅಗತ್ಯಗಳ ಬಗ್ಗೆ ಚಿಂತನೆ: ಆರೋಗ್ಯ ರಕ್ಷಣೆಗೆ ಬೇರೆಬೇರೆ ಮಾರ್ಗಗಳಿವೆ. ನಿಮಗೆ ಯಾವ ಮಟ್ಟದ ಚಿಕಿತ್ಸೆ ಬೇಕಾಗುತ್ತದೆ ಎಂಬುದರ ಮೇಲೆ ವೆಚ್ಚಗಳು ಅವಲಂಬಿಸಿರುತ್ತವೆ.

2) ಸರಿಯಾದ ಯೋಜನೆಯಲ್ಲಿ ಹೂಡಿಕೆ: ಆರೋಗ್ಯ ವೆಚ್ಚವನ್ನು ನಿಭಾಯಿಸುವ ಪರಿಣಾಮಕಾರಿ ಅಸ್ತ್ರವೆಂದರೆ ಸರಿಯಾದ ಆರೋಗ್ಯ ವಿಮೆಯ ಆಯ್ಕೆ. ಯಾವ ವಿಮೆಗೆ ಎಷ್ಟು ಕಂತು ಕಟ್ಟಬೇಕಾಗುತ್ತದೆ ಎಂಬುದನ್ನು ತಿಳಿಯಲು ಈಗ ಆನ್‌ಲೈನ್‌ ವಿಮೆ ಕ್ಯಾಲ್ಕುಲೇಟರ್‌ ಲಭ್ಯವಿದೆ.

3) ಎಷ್ಟು ಮೊತ್ತದ ವಿಮೆ ಬೇಕು ಎಂಬುದನ್ನು ನಿರ್ಧರಿಸಿ: ಗಂಭೀರ ಕಾಯಿಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಂದರೆ ಚಿಕಿತ್ಸೆಗಾಗಿ ಎಷ್ಟು ವೆಚ್ಚ ಬರಬಹುದು ಎಂಬುದನ್ನು ಊಹಿಸುವುದು ಸುಲಭವಲ್ಲ. ಈ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರುವುದಕ್ಕೂ ಮುನ್ನ ಕೆಲವು ಅಂಶಗಳತ್ತ ಗಮನಹರಿಸಬೇಕು. ನಿಮ್ಮ ಮನೆಯ ಸುತ್ತಮುತ್ತಲಿನ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಅರಿಯಬೇಕು. ನಿಮ್ಮ ಕುಟುಂಬದಲ್ಲಿ ಯಾವುದಾದರೂ ಕಾಯಿಲೆಯು ವಂಶಪಾರಂಪರ್ಯವಾಗಿ  ಬಂದಿರುವ ಉದಾಹರಣೆ ಇದ್ದರೆ, ಅಂಥ ಕಾಯಿಲೆಯ ಚಿಕಿತ್ಸೆಗೆ ಬರಬಹುದಾದ ವೆಚ್ಚವನ್ನು ತಿಳಿಯಬೇಕು. ಕನಿಷ್ಠವೆಂದರೂ ₹ 5 ಲಕ್ಷದ ವಿಮೆ ಮಾಡಿಸುವುದು ಇಂದಿನ ಅಗತ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಶೇ 15ರಷ್ಟು ಹಣದುಬ್ಬರವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು.

4) ದೀರ್ಘಾವಧಿಯ ಚಿಕಿತ್ಸೆಯ ಯೋಜನೆ ಇರಲಿ: 60 ವರ್ಷ ವಯಸ್ಸಿನ ನಂತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಆದ್ದರಿಂದ ದೀರ್ಘಕಾಲದವರೆಗೆ ಚಿಕಿತ್ಸೆಯ ಅಗತ್ಯ ಬೀಳಬಹುದು. ಆಸ್ಪತ್ರೆಯಲ್ಲಿ ಉಳಿಯಬೇಕಾಗುವುದು ಮಾತ್ರವಲ್ಲ, ಆಸ್ಪತ್ರೆಯಿಂದ ಬಂದ ನಂತರವೂ ದೀರ್ಘಕಾಲದವರೆಗೆ ಚಿಕಿತ್ಸೆಯ ಅಗತ್ಯ ಬೀಳಬಹುದು. ಇಂಥ ಸಂದರ್ಭದಲ್ಲಿ ಗಂಭೀರ ಕಾಯಿಲೆಯ ವಿಮೆಯು ನೆರವಿಗೆ ಬರಬಹುದು.

5) ಆರೋಗ್ಯ ವಿಮೆಯನ್ನು ಪ್ರತಿವರ್ಷವೂ ಪರಿಶೀಲಿಸಿ: ಆರೋಗ್ಯ ವೆಚ್ಚಗಳು ಮತ್ತು ವಿಮೆಯ ನೀತಿ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ಪ್ರತಿ ವರ್ಷವೂ ನಿಮ್ಮ ಆರೋಗ್ಯ ವಿಮೆಯ ಪರಿಶೀಲನೆ ನಡೆಸಿ, ನೀವು ಅತ್ಯುತ್ತಮವಾದುದನ್ನೇ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಬದಲಾಗುತ್ತಿರುವ ನಿಮ್ಮ ಅಗತ್ಯಗಳಿಗೆ ಅನುಗುಣವಾದ ಪಾಲಿಸಿಯನ್ನೇ ಖರೀದಿಸಿ. ಹಾಗೆ ಮಾಡುವುದರಿಂದ ನಿಮ್ಮ ಹಣವು ವ್ಯರ್ಥವಾಗುವುದನ್ನು ತಪ್ಪಿಸಬಹುದು.

6) ಆರೋಗ್ಯದಿಂದಿರಿ: ಆರೋಗ್ಯ ವೆಚ್ಚವನ್ನು ನಿಯಂತ್ರಣದಲ್ಲಿಡುವ ಅತ್ಯಂತ ಪರಿಣಾಮಕಾರಿ ಉಪಾಯವಿದು. ನೀವು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇದ್ದರೆ ವಯಸ್ಸಾದಂತೆ ನೀವು ಹೆಚ್ಚು ಹೆಚ್ಚು ಆರೋಗ್ಯ ವಿಮೆಗಳನ್ನು ಹೊಂದುವ ಅಗತ್ಯ ಇರುವುದಿಲ್ಲ. ಒಳ್ಳೆಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿ, ದಿನನಿತ್ಯ ವ್ಯಾಯಾಮ ಮಾಡಿ. ಸರಿಯಾದ ಆರ್ಥಿಕ ಯೋಜನೆಯ ಮೂಲಕ ನಿಮ್ಮ ಆರೋಗ್ಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ.

(ಲೇಖಕ; ಕೋಟಕ್‌ ಜನರಲ್‌ ಇನ್ಶುರೆನ್ಸ್‌ನ ಸಿಒಒ)

Post Comments (+)