ಮಂಗಳವಾರ, ಸೆಪ್ಟೆಂಬರ್ 28, 2021
23 °C

ವಿಐಎಲ್: ಸಾಲವನ್ನು ಷೇರುಗಳಾಗಿ ಪರಿವರ್ತಿಸಲು ಬ್ಯಾಂಕ್‌ಗಳ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಯ ಸಾಲದ ಮೊತ್ತವನ್ನು ಷೇರುಗಳಾಗಿ ಪರಿವರ್ತಿಸುವುದು ಆ ಕಂಪನಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಇರುವ ಒಂದು ಮಾರ್ಗ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಕೇಂದ್ರ ದೂರಸಂಪರ್ಕ ಇಲಾಖೆಗೆ ಸಲಹೆ ನೀಡಿದೆ.

ಹೊಂದಾಣಿಕೆ ಮಾಡಿದ ಒಟ್ಟು ಆದಾಯದ (ಎಜಿಆರ್‌) ವಿಚಾರವಾಗಿ ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪಿನ ನಂತರ ದೂರಸಂಪರ್ಕ ವಲಯದಲ್ಲಿ ಉಂಟಾಗಿರುವ ಹಣಕಾಸಿನ ಸಂಕಷ್ಟದ ಬಗ್ಗೆ ಚರ್ಚಿಸಲು ಇಲಾಖೆಯು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ಕರೆದಿತ್ತು. ಎಜಿಆರ್‌ಗೆ ಸಂಬಂಧಿಸಿದ ಒಟ್ಟು ₹ 92,520 ಕೋಟಿಯನ್ನು ಸರ್ಕಾರಕ್ಕೆ ಪಾವತಿಸಲು ಸುಪ್ರೀಂ ಕೋರ್ಟ್‌, ದೂರಸಂಪರ್ಕ ಸೇವಾ ಕಂಪನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿದೆ.

ವಿಐಎಲ್‌ನ ಸಾಲವನ್ನು ಷೇರುಗಳಾಗಿ ಪರಿವರ್ತಿಸುವುದು ಒಂದು ಮಾರ್ಗವಾದರೂ ಅದು ಸುಸ್ಥಿರ ಅಲ್ಲ ಎಂಬ ಸಂಗತಿಯನ್ನು ಬ್ಯಾಂಕ್‌ ಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ವಿಐಎಲ್ ಕಂಪನಿಯು ಇದುವರೆಗೆ ಸಾಲ ಮರುಪಾವತಿಯನ್ನು ತಪ್ಪಿಸಿಲ್ಲ. ಹಾಗಾಗಿ, ಈಗಲೇ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದೂ ಬ್ಯಾಂಕ್ ಪ್ರತಿನಿಧಿಗಳು ಹೇಳಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಕಂಪನಿಯ ಪ್ರವರ್ತಕರು ಹೆಚ್ಚಿನ ಬಂಡವಾಳವನ್ನು ಕಂಪನಿಯಲ್ಲಿ ಹೂಡಿಕೆ ಮಾಡುವುದೇ ಒಳ್ಳೆಯ ಆಯ್ಕೆ ಎಂದು ಕೂಡ ಬ್ಯಾಂಕ್ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಐಎಲ್ ಕಂಪನಿಯಲ್ಲಿ ವೊಡಾಫೋನ್ ಶೇಕಡ 45ರಷ್ಟು, ಆದಿತ್ಯ ಬಿರ್ಲಾ ಸಮೂಹ ಶೇ 27ರಷ್ಟು ಷೇರುಗಳನ್ನು ಹೊಂದಿದೆ.

ಒಂದು ವೇಳೆ ಈ ಕಂಪನಿ ತಾನು ಮಾಡಿರುವ ಸಾಲಗಳನ್ನು ಮರುಪಾವತಿಸದೆ ಇದ್ದರೆ ಬ್ಯಾಂಕ್‌ಗಳಿಗೆ ಒಟ್ಟು ₹ 1.8 ಲಕ್ಷ ಕೋಟಿ ನಷ್ಟ ಉಂಟಾಗುತ್ತದೆ. ಖಾಸಗಿ ವಲಯದ ಬ್ಯಾಂಕ್‌ಗಳ ಪೈಕಿ ಯೆಸ್ ಬ್ಯಾಂಕ್ ಹಾಗೂ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಹೆಚ್ಚಿನ ನಷ್ಟ ಅನುಭವಿಸಬೇಕಾಗಬಹುದು. ಖಾಸಗಿ ವಲಯದ ಕೆಲವು ಬ್ಯಾಂಕ್‌ಗಳು ಎದುರಾಗಬಹುದಾದ ನಷ್ಟವನ್ನು ನಿಭಾಯಿಸಲು ಈಗಾಗಲೇ ಹಣ ತೆಗೆದಿರಿಸಲು ಆರಂಭಿಸಿವೆ.

ಅಧಿಕೃತ ಅಂಕಿ–ಅಂಶಗಳ ಪ್ರಕಾರ ವಿಐಎಲ್‌ ಕಂಪನಿಯು ಎಜಿಆರ್ ಬಾಕಿ ರೂಪದಲ್ಲಿ ನೀಡಬೇಕಿರುವ ಮೊತ್ತ ₹ 58,254 ಕೋಟಿ. ಈ ಮೊತ್ತದಲ್ಲಿ ಕಂಪನಿಯು ₹ 7,854 ಕೋಟಿಯನ್ನು ಈಗಾಗಲೇ ಪಾವತಿಸಿದೆ. ಇನ್ನು ಬಾಕಿ ಇರುವ ಮೊತ್ತ ₹ 50,399 ಕೋಟಿ.

ತಾವು ಪಾವತಿ ಮಾಡಬೇಕಿರುವ ಮೊತ್ತವು ಬೃಹತ್ ಆಗಿರುವ ಕಾರಣ, ಕಂಪನಿಗೆ ಇನ್ನೂ ಹೆಚ್ಚಿನ ಬಂಡವಾಳ ತರಲು ಸಾಧ್ಯವಿಲ್ಲ ಎಂದು ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಸಮೂಹ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.