ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ್‌ ಆರ್ಗ್ಯಾನಿಕ್ಸ್’ ಬ್ರ್ಯಾಂಡ್ ಬಿಡುಗಡೆ; 6 ಉತ್ಪನ್ನ ಪರಿಚಯಿಸಿದ ಅಮಿತ್ ಶಾ

Published 8 ನವೆಂಬರ್ 2023, 16:15 IST
Last Updated 8 ನವೆಂಬರ್ 2023, 16:15 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ್‌ ಆರ್ಗ್ಯಾನಿಕ್ಸ್‌’ ಎನ್ನುವ ಹೊಸ ಬ್ರ್ಯಾಂಡ್‌ ಅನ್ನು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಬ್ರ್ಯಾಂಡ್‌ ಅಡಿಯಲ್ಲಿ ತೊಗರಿ, ಕಡಲೆ, ಸಕ್ಕರೆ, ಹುರುಳಿ, ಬಾಸ್ಮತಿ ಅಕ್ಕಿ ಮತ್ತು ಸೋನಾಮಸೂರಿ ಉತ್ಪನ್ನಗಳನ್ನು ಸಹ ಇದೇ ವೇಳೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಸದ್ಯ ಆರು ಉತ್ಪನ್ನಗಳನ್ನು ನೀಡಲಾಗಿದೆ. ಡಿಸೆಂಬರ್ ವೇಳೆಗೆ ಒಟ್ಟು 20 ಉತ್ಪನ್ನಗಳು ಈ ಬ್ರ್ಯಾಂಡ್‌ ಅಡಿಯಲ್ಲಿ ಲಭ್ಯವಾಗಲಿವೆ. ಮದರ್‌ ಡೇರಿಯ ಸಫಲ್‌ ಮಳಿಗೆಗಳು ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಆಗಲಿವೆ. ದೇಶದಾದ್ಯಂತ ರಿಟೇಲ್‌ ಮಳಿಗೆಗಳ ಜಾಲವನ್ನೂ ಸೃಷ್ಟಿಸಲಾಗುವುದು ಎಂದು ಶಾ ತಿಳಿಸಿದ್ದಾರೆ. 

ನ್ಯಾಷನಲ್ ಕೋ–ಆಪರೇಟಿವ್‌ ಆರ್ಗ್ಯಾನಿಕ್ಸ್‌ ಲಿಮಿಟೆಡ್‌ (ಎನ್‌ಸಿಒಎಲ್‌) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್‌ಸಿಒಎಲ್‌ ಲೋಗೊ, ವೆಬ್‌ಸೈಟ್‌ ಅನ್ನೂ ಶಾ ಬಿಡುಗಡೆ ಮಾಡಿದ್ದಾರೆ. ಮೊದಲಿಗೆ ಭಾರತದಲ್ಲಿ ಆರ್ಗ್ಯಾನಿಕ್ಸ್‌ ಉತ್ಪನ್ನಗಳನ್ನು ಎನ್‌ಸಿಒಎಲ್‌ ಮಾರಾಟ ಮಾಡಲಿದೆ. ಕ್ರಮೇಣ ಜಾಗತಿಕ ಮಾರುಕಟ್ಟೆಯನ್ನೂ ಪ್ರವೇಶಿಸಲಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿ ರೂಪಿಸಲಾಗುವುದು. 10 ವರ್ಷಗಳಲ್ಲಿ ‘ಭಾರತ್‌ ಆರ್ಗ್ಯಾನಿಕ್ಸ್‌’ ಬ್ರ್ಯಾಂಡ್‌ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಲಿಷ್ಠ ಬ್ರ್ಯಾಂಡ್‌ ಆಗಿ ರೂಪಿಸಲಾಗುವುದು. ಇದಕ್ಕಾಗಿ ದೀರ್ಘಾವಧಿಯ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬ್ರ್ಯಾಂಡ್‌ ಬಲ‍ಪಡಿಸಲು ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ಇದೆ. ಸದ್ಯ ದೇಶದಲ್ಲಿ 246 ಪ್ರಯೋಗಾಲಯಗಳಿದ್ದು, ನ್ಯಾಷನಲ್‌ ಪ್ಲಾಂಟ್‌ ಪ್ರೊಟೆಕ್ಷನ್‌ ಆರ್ಗನೈಸೇಷನ್‌ (ಎನ್‌ಪಿಪಿಒ) ಒಪ್ಪಿಗೆ ಪಡೆದಿರುವುದು 34 ಮಾತ್ರ. ಹೀಗಾಗಿ ಎನ್‌ಪಿಪಿಒ ಒಪ್ಪಿಗೆ ಪಡೆದ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದ್ದಾರೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಾಗೂ ಇತರೆ ಸಂಘಗಳ ಬೆಂಬಲದೊಂದಿಗೆ ಮುಂದಿನ ವರ್ಷಗಳಲ್ಲಿ ಸರ್ಕಾರವು ಹೆಚ್ಚುವರಿಯಾಗಿ 305 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ 100 ಮೊಬೈಲ್‌ ಪ್ರಯೋಗಾಲಯ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆರ್ಗ್ಯಾನಿಕ್‌ ಉತ್ಪನ್ನಗಳ ದರವು ಹೆಚ್ಚಿಗೆ ಇರುವುದರಿಂದ ಹಲವು ನಕಲಿ ಆರ್ಗ್ಯಾನಿಕ್ ಉತ್ಪನ್ನಗಳು ಸಹ ಮಾರುಕಟ್ಟೆಯಲ್ಲಿವೆ. ಹೀಗಾಗಿ ರೈತರು ಮತ್ತು ಖರೀದಿದಾರ, ಈ ಇಬ್ಬರ ಸಮಸ್ಯೆಗಳನ್ನೂ ಎನ್‌ಸಿಒಎಲ್‌ ಪರಿಹರಿಸಲಿದೆ ಎಂದು ಶಾ ತಿಳಿಸಿದ್ದಾರೆ.

2022 –23ರಲ್ಲಿ ಭಾರತವು 3.12 ಲಕ್ಷ ಟನ್‌ನಷ್ಟು ಆರ್ಗ್ಯಾನಿಕ್‌ ಉತ್ಪನ್ನಗಳನ್ನು ರಫ್ತು ಮಾಡಿದ್ದು ಮೌಲ್ಯದ ಲೆಕ್ಕದಲ್ಲಿ ₹5,525 ಕೋಟಿ ಆಗಿದೆ. ಅಮೆರಿಕ, ಐರೋಪ್ಯ ಒಕ್ಕೂಟ, ಕೆನರಾ ಮತ್ತು ಇತರೆ ದೇಶಗಳಿಗೆ ರಫ್ತು ಮಾಡಲಾಗಿದೆ.

ಸಹಕಾರ ಸಂಘಗಳ ಮಾಹಿತಿ

7.89 ಕೋಟಿ: ದೇಶದಲ್ಲಿರುವ ಸಹಕಾರ ಸಂಘಗಳು

29 ಕೋಟಿ: ಸಹಕಾರ ಸಂಘಗಳಲ್ಲಿನ ಒಟ್ಟು ಸದಸ್ಯರ ಸಂಖ್ಯೆ

ಆರ್ಗ್ಯಾನಿಕ್‌ ಕೃಷಿ 

27 ಲಕ್ಷ ಹೆಕ್ಟೇರ್: ಭಾರತದಲ್ಲಿ ಆರ್ಗ್ಯಾನಿಕ್‌ ಪ್ರಮಾಣಪತ್ರ ಪಡೆದಿರುವ ಭೂಮಿ

29 ಲಕ್ಷ ಟನ್‌: 2022–23ರಲ್ಲಿ ಭಾರತದಲ್ಲಿ ಉತ್ಪಾದನೆ ಆಗಿರುವ ಪ್ರಮಾಣೀಕೃತ  ಆರ್ಗ್ಯಾನಿಕ್‌ ಉತ್ಪನ್ನಗಳು

ಆರ್ಗ್ಯಾನಿಕ್‌ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇ 50ರಷ್ಟನ್ನು ಸದಸ್ಯ ರೈತರ ಖಾತೆಗೆ ಎನ್‌ಸಿಒಎಲ್‌ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಅಮಿತ್ ಶಾ, ಕೇಂದ್ರ ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT