ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ₹16 ಸಾವಿರ ತಲುಪಿದ ಕೊಬ್ಬರಿ ಧಾರಣೆ

Last Updated 10 ಮಾರ್ಚ್ 2021, 20:19 IST
ಅಕ್ಷರ ಗಾತ್ರ

ತುಮಕೂರು: ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆಯು ಕಳೆದ ಮೂರ‍್ನಾಲ್ಕು ತಿಂಗಳಿಂದ ಏರುಮುಖ ಚಲನೆ ಕಂಡಿದೆ. ವಾರದಿಂದ ವಾರಕ್ಕೆ ಧಾರಣೆ ಹೆಚ್ಚಾಗುತ್ತಲೇ ಸಾಗಿದ್ದು, ಈಗ ಒಂದು ಕ್ವಿಂಟಲ್‌ಗೆ ₹ 16 ಸಾವಿರ ತಲುಪಿದೆ.

2020ರ ನವೆಂಬರ್‌ನಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ ₹ 10 ಸಾವಿರಕ್ಕೆ ಕುಸಿದಿತ್ತು. ಬೆಂಬಲ ಬೆಲೆ ನೀಡಿ ಖರೀದಿಸುವಂತೆ ರೈತರಿಂದ ಒತ್ತಡ ಹೆಚ್ಚಾದ ನಂತರ ಖರೀದಿ ಕೇಂದ್ರ ತೆರೆಯಲಾಯಿತು. ನಂತರ, ಧಾರಣೆ ನಿಧಾನವಾಗಿ ಏರಿಕೆ ಆಯಿತು. ಹೊಸ ವರ್ಷದ ಆರಂಭದಲ್ಲಿ ಒಂದು ಕ್ವಿಂಟಲ್ ₹ 14 ಸಾವಿರಕ್ಕೆ ಹೆಚ್ಚಳ ಕಂಡಿತು. ದಿನಗಳು ಕಳೆದಂತೆ ಬೆಲೆ ಹೆಚ್ಚಳವಾಗುತ್ತಲೇ ಸಾಗಿದೆ.

ಬೆಲೆ ಏರಿಕೆಗೆ ಕಾರಣ: ಲಾಕ್‌ಡೌನ್‌ ವೇಳೆ ಶುಭ ಸಮಾರಂಭಗಳು ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ, ಇತರ ಚಟುವಟಿಕೆಗಳೂ ಮಂಕಾಗಿದ್ದವು. ಆಗ ಕೊಬ್ಬರಿ ಕೇಳುವವರೇ ಇರಲಿಲ್ಲ. ಲಾಕ್‌ಡೌನ್‌ ನಿಯಮಗಳು ಸಡಿಲವಾದ ನಂತರ ಬಹುತೇಕ ಚಟುವಟಿಕೆಗಳು ಆರಂಭವಾದವು, ಬೇಡಿಕೆ ಹೆಚ್ಚಳ ಆಯಿತು. ಜಿಲ್ಲೆಯ ಕೊಬ್ಬರಿಗೆ ಪ್ರಮುಖ ಮಾರುಕಟ್ಟೆಯಾದ ದೆಹಲಿ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಬಂದಿದೆ. ಜತೆಗೆ ‘ಕೊಕೊನಟ್ ಪೌಡರ್’ ತಯಾರಿಕೆಗೂ ರವಾನೆಯಾಗುತ್ತಿದೆ.

ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆಯಾಗಿದ್ದು, ಅಡುಗೆ ಎಣ್ಣೆ ಬೆಲೆ ದುಬಾರಿಯಾಗಿದೆ. ಅಡುಗೆಗೆ ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ಇತರೆ ಖಾದ್ಯ ತೈಲಗಳನ್ನು ಬಳಸುತ್ತಿದ್ದವರು ಈಗ ಕೊಬ್ಬರಿ ಎಣ್ಣೆ ಬಳಕೆಗೆ ಮುಂದಾಗಿದ್ದಾರೆ.

ಕುಸಿದ ಆವಕ: ಮಾರುಕಟ್ಟೆಯಲ್ಲಿ ಆವಕ ಸಹ ಕಡಿಮೆಯಾಗಿದ್ದು, ಜನವರಿಯಿಂದ ಏಪ್ರಿಲ್ ತಿಂಗಳವರೆಗೂ ಇದೇ ಸ್ಥಿತಿ ಇರುತ್ತದೆ. ರೈತರ ಬಳಿಯೂ ಕೊಬ್ಬರಿ ಇರುವುದಿಲ್ಲ. ಏಪ್ರಿಲ್ ನಂತರ ಹಂಗಾಮು ಆರಂಭವಾಗುತ್ತದೆ. ಈ ಸಮಯದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೊಬ್ಬರಿ ಬರುತ್ತದೆ. ದಾಸ್ತಾನು ಮಾಡಿಟ್ಟುಕೊಂಡಿರುವ ವರ್ತಕರು ಬೇಡಿಕೆ ಸೃಷ್ಟಿಯಾದಾಗ ಮಾರಾಟ ಮಾಡಿ ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆ. ಈಗ ಬೆಲೆ ಏರಿಕೆಯಾದರೂ ರೈತರಿಗೆ ಹೆಚ್ಚಿನ ಲಾಭ ಆಗುವುದಿಲ್ಲ.

‘ಈಗ ರೈತರ ಬಳಿ ಕೊಬ್ಬರಿ ಇಲ್ಲ. ಬೆಲೆ ಏರಿಕೆಯಾದರೂ ಅನುಕೂಲ ಆಗುವುದಿಲ್ಲ. ದಾಸ್ತಾನು ಮಾಡಿಟ್ಟುಕೊಂಡಿರುವ ವರ್ತಕರಿಗಷ್ಟೇ ಲಾಭ’ ಎಂದು ತಿಪಟೂರು ಮಾರುಕಟ್ಟೆಗೆ ಕೊಬ್ಬರಿ ತಂದಿದ್ದ, ತಾಲ್ಲೂಕಿನ ದಸರೀಘಟ್ಟ ಗ್ರಾಮದ ನಂಜೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT