ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಸುಳ್ಳು ಸುದ್ದಿಯಿಂದಾಗಿ ಕುಕ್ಕುಟೋದ್ಯಮಕ್ಕೆ ₹ 1,750 ಕೋಟಿ ನಷ್ಟ

Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೋಳಿಗಳಿಂದ ‘ಕೋವಿಡ್‌–19’ ವೈರಸ್‌ ಹಬ್ಬುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುಳ್ಳು ಸುದ್ದಿಯ ಫಲವಾಗಿ ದೇಶಿ ಕುಕ್ಕುಟೋದ್ಯಮವು ಒಂದು ತಿಂಗಳ ಅವಧಿಯಲ್ಲಿ ₹ 1,750 ಕೋಟಿ ಮೊತ್ತದ ನಷ್ಟಕ್ಕೆ ಗುರಿಯಾಗಿದೆ.

ಈ ಭಾರಿ ಮೊತ್ತದ ನಷ್ಟದಿಂದ ಉದ್ಯಮವು ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪರಿಹಾರ ಕೊಡುಗೆ ಘೋಷಿಸಬೇಕು ಎಂದು ಅಖಿಲ ಭಾರತ ಕೋಳಿ ತಳಿ ಸಂವರ್ಧಕರ ಸಂಘವು (ಎಐಪಿಬಿಎ) ಕೇಂದ್ರ ಪಶು ಸಂಗೋಪನಾ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದೆ.

ಗಾಳಿ ಸುದ್ದಿಯ ಕಾರಣಕ್ಕೆ ಕೋಳಿಗಳಿಗೆ ಬೇಡಿಕೆ ಕುಸಿದು ಪ್ರತಿ ಕೆಜಿ ಕೋಳಿ ಬೆಲೆಯು ಫಾರ್ಮ್‌ಗೇಟ್ ಮಟ್ಟದಲ್ಲಿ ಕನಿಷ್ಠ ₹ 10 ರಿಂದ ₹ 30ಕ್ಕೆ ಕುಸಿದಿತ್ತು. ಕೋಳಿ ಉತ್ಪಾದನೆಯ ಸರಾಸರಿ ವೆಚ್ಚವು ಪ್ರತಿ ಕೆಜಿಗೆ ₹ 80ರಷ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ತಪ್ಪು ಮಾಹಿತಿಯ ಗಾಳಿ ಸುದ್ದಿಯ ಕಾರಣಕ್ಕೆ ಬಳಕೆದಾರರ ವಿಶ್ವಾಸಕ್ಕೆ ಧಕ್ಕೆಯಾಗಿ ಕೋಳಿಗಳ ಬೇಡಿಕೆ ಗಮನಾರ್ಹ ಕುಸಿತ ಕಂಡಿದೆ. ಇದರಿಂದ ರೈತರು, ತಳಿ ಸಂವರ್ಧನೆ ಕಂಪನಿಗಳು ಸೇರಿದಂತೆ ಒಟ್ಟಾರೆ ಕುಕ್ಕುಟೋದ್ಯಮದ ನಷ್ಟದ ಪ್ರಮಾಣ ₹ 1,750 ಕೋಟಿಗಳಷ್ಟಾಗಿದೆ. ಈ ತಿಂಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದರೆ ನಷ್ಟದ ಪ್ರಮಾಣ ಹೆಚ್ಚಲಿದೆ. ಇದರಿಂದ ಕುಕ್ಕುಟೋದ್ಯಮವು ದಿವಾಳಿ ಅಂಚಿಗೆ ಬಂದು ನಿಲ್ಲಲಿದೆ’ ಎಂದು ‘ಎಐಪಿಬಿಎ’ ಅಧ್ಯಕ್ಷ ಬಹದ್ದೂರ್‌ ಅಲಿ ಹೇಳಿದ್ದಾರೆ.

ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಳೆಯುವ ರೈತರ ಆದಾಯದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳದ ಬೆಲೆ ಪ್ರತಿ ಕೆಜಿಗೆ ₹ 25 ರಿಂದ ₹ 15ಕ್ಕೆ ಇಳಿದಿದೆ.

ಉದ್ದಿಮೆಗೆ ನೆರವಾಗುವ ಉದ್ದೇಶಕ್ಕೆ ಸರ್ಕಾರ ಹೆಚ್ಚುವರಿ ದುಡಿಯುವ ಬಂಡವಾಳ ಒದಗಿಸಬೇಕು, ಶೇ 5ರ ಬಡ್ಡಿ ದರದ ಸಾಲ ಸೌಲಭ್ಯ ವಿಸ್ತರಿಸಬೇಕು, ಸದ್ಯದ ಅವಧಿ ಸಾಲ ಮರುಪಾವತಿ ಅವಧಿ ವಿಸ್ತರಿಸಬೇಕು, ಗೋಧಿ ಮತ್ತು ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಜಿಡಿಪಿ ಪ್ರಗತಿಗೆ ಅಡ್ಡಿ
ಮುಂಬೈ:
‘ಕೋವಿಡ್‌–19’ ವೈರಸ್‌ ಹಾವಳಿಯು 2019–20ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ಆರ್ಥಿಕ ವೃದ್ಧಿ ದರವನ್ನು ಶೇ 0.20ರಷ್ಟು ತಗ್ಗಿಸಲಿದೆ ಎಂದು ವಿದೇಶಿ ದಲ್ಲಾಳಿ ಸಂಸ್ಥೆ ಯುಬಿಎಸ್‌ ಸೆಕ್ಯುರಿಟೀಸ್‌ ಅಂದಾಜಿಸಿದೆ.

ಆರ್ಥಿಕತೆಯ ಪರಿಣಾಮಗಳ ತೀವ್ರತೆ ಇನ್ನೂ ಅಸ್ಪಷ್ಟವಾಗಿದೆ. ಎಲೆಕ್ಟ್ರಾನಿಕ್ಸ್‌, ಔಷಧಿ ಮತ್ತು ವಾಹನ ತಯಾರಿಕಾ ವಲಯಗಳಿಗೆ ಕಚ್ಚಾ ಸರಕು ಮತ್ತು ಬಿಡಿಭಾಗಗಳ ಕೊರತೆ ಎದುರಾಗಿದೆ. ಇದರಿಂದ ಮಾರ್ಚ್‌ ತ್ರೈಮಾಸಿಕದ ಜಿಡಿಪಿ ಕಡಿಮೆಯಾಗಲಿದೆ.

ಆರ್ಥಿಕ ವೃದ್ಧಿ ದರ ಶೇ 4.9ಕ್ಕೆ ತಗ್ಗಿಸಿದ ಫಿಚ್‌
ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿರುವ 2019–20ನೇ ಹಣಕಾಸು ವರ್ಷದ ‘ಜಿಡಿಪಿ’ ದರವು ಶೇ 4.9ರಷ್ಟು ಇರಲಿದೆ ಎಂದು ಫಿಚ್‌ ಸೊಲುಷನ್ಸ್‌ ಅಂದಾಜಿಸಿದೆ.

‘ಕೋವಿಡ್‌–19’ ಹಾವಳಿಯಿಂದ ಪೂರೈಕೆ ವ್ಯತ್ಯಯ ಮತ್ತು ಬೇಡಿಕೆ ಕುಸಿತದಿಂದ ಆರ್ಥಿಕ ವೃದ್ಧಿ ದರವು ಕುಸಿತಗೊಳ್ಳಲಿದೆ. ಭಾರತದ ವೃದ್ಧಿ ದರವನ್ನು ಈ ಹಿಂದಿನ ಶೇ 5.1 ರಿಂದ ಶೇ 4.9ಕ್ಕೆ ಪರಿಷ್ಕರಿಸಲಾಗಿದೆ. ಜೂನ್‌ನಿಂದ ವೈರಸ್‌ ಭೀತಿ ದೂರವಾಗಲಿದ್ದು ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಚೇತರಿಕೆ ಕಾಣಲಿದೆ ಎಂದು ತಿಳಿಸಿದೆ.

ವಜ್ರಗಳ ರಫ್ತು ಕುಸಿತ
ವೈರಸ್‌ ಭೀತಿಯಿಂದಾಗಿ 2020–21ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶಿ ವಜ್ರಗಳ ರಫ್ತು ವಹಿವಾಟು ₹ 1.33 ಲಕ್ಷ ಕೋಟಿಗಳಷ್ಟು ಕಡಿಮೆಯಾಗಲಿದೆ.

2018–19ರಲ್ಲಿ ದೇಶಿ ವಜ್ರಗಳ ರಫ್ತು ವಹಿವಾಟು ₹ 1.68 ಲಕ್ಷ ಕೋಟಿಗಳಷ್ಟಿತ್ತು ಎಂದು ಕ್ರಿಸಿಲ್‌ ರೇಟಿಂಗ್ಸ್‌ನ ವರದಿಯಲ್ಲಿ ತಿಳಿಸಲಾಗಿದೆ.

ಕುಗ್ಗಲಿರುವ ಜಾಗತಿಕ ಆರ್ಥಿಕತೆ
ಪ್ಯಾರಿಸ್‌
: ವೈರಸ್‌ ಹಬ್ಬುತ್ತಿರುವುದರಿಂದ ಈ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕತೆಯು ಕುಗ್ಗಲಿದೆ. ದಶಕದ ಹಿಂದಿನ ಹಣಕಾಸು ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ವರದಿಯಲ್ಲಿ ತಿಳಿಸಲಾಗಿದೆ. 2020ರಲ್ಲಿ ಜಾಗತಿಕ ಆರ್ಥಿಕ ವೃದ್ಧಿ ದರವು ಶೇ 2.4ರಷ್ಟಾಗಲಿದೆ. ವೈರಸ್‌ ಹಾವಳಿ ದೀರ್ಘ ಸಮಯದವರೆಗೆ ಮುಂದುವರೆದರೆ ಜಿಡಿಪಿ ಶೇ 1.5ರಷ್ಟಕ್ಕೆ ಇಳಿಯಲಿದೆ ಎಂದು ಅಂದಾಜಿಸಿದೆ.

ಅಂಕಿ ಅಂಶ
10ಲಕ್ಷಕ್ಕೂ ಹೆಚ್ಚು ರೈತರಿಗೆ ಉದ್ಯೋಗ ಅವಕಾಶ
₹ 1.2 ಲಕ್ಷ ಕೋಟಿ: ದೇಶಿ ಜಿಡಿಪಿಗೆ ಕೊಡುಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT