ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ, ಚಿನ್ನದ ಬೆಲೆ ಏರಿಕೆ: ಡಬ್ಲ್ಯುಜಿಸಿ

ಬೇಡಿಕೆ ಶೇ 37ರಷ್ಟು ಹೆಚ್ಚಳ
Last Updated 29 ಏಪ್ರಿಲ್ 2021, 18:14 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಚಿನ್ನದ ಬೇಡಿಕೆಯು 2020ರ ಜನವರಿ–ಮಾರ್ಚ್ ಅವಧಿಗೆ ಹೋಲಿಸಿದರೆ 2021ರ ಜನವರಿ–ಮಾರ್ಚ್‌ ಅವಧಿಯಲ್ಲಿ ಶೇಕಡ 37ರಷ್ಟು ಏರಿಕೆ ಆಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಗುರುವಾರ ತಿಳಿಸಿದೆ.

ಕೋವಿಡ್‌ ನಿಯಂತ್ರಣ ಕ್ರಮಗಳು ಮತ್ತು ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದರಿಂದ ಈ ಅವಧಿಯಲ್ಲಿ ಬೇಡಿಕೆಯು ಹೆಚ್ಚಾಯಿತು ಎಂದು ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌. ಅವರು ಗುರುವಾರ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿನ್ನದ ಬೆಲೆ ಇಳಿಕೆ, ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆ ಹಾಗೂ ಮದುವೆ ಸಮಾರಂಭಗಳು ಮತ್ತೆ ಆರಂಭವಾಗಿದ್ದರಿಂದ ಚಿನ್ನಾಭರಣಗಳ ಬೇಡಿಕೆಯು ಶೇ 39ರಷ್ಟು ಏರಿಕೆ ಆಗಿದೆ. ಚಿನ್ನದ ಮೇಲಿನ ರಿಟೇಲ್‌ ಹೂಡಿಕೆಯು (ಸಣ್ಣ ಹೂಡಿಕೆದಾರರಿಂದ ಬರುವ ಹೂಡಿಕೆ ಮೊತ್ತ) ಸತತ ಮೂರನೇ ತ್ರೈಮಾಸಿಕದಲ್ಲಿಯೂ ಏರಿಕೆ ಆಗಿದೆ. ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಬೇಡಿಕೆಯು ಶೇ 34ರಷ್ಟು ಹೆಚ್ಚಾಗಿದ್ದು 37.5 ಟನ್‌ಗಳಿಗೆ ತಲುಪಿದೆ. 2015ರ ಬಳಿಕ ತ್ರೈಮಾಸಿಕವೊಂದರಲ್ಲಿನ ಗರಿಷ್ಠ ಮಟ್ಟದ ಬೇಡಿಕೆ ಇದಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷದ ಕೋವಿಡ್‌ ಸಂದರ್ಭದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತ್ತು. ಮೊದಲ ತ್ರೈಮಾಸಿಕದಲ್ಲಿ 10 ಗ್ರಾಂಗೆ ಜಿಎಸ್‌ಟಿ ಹೊರತುಪಡಿಸಿ ₹ 41 ಸಾವಿರ ಇದ್ದಿದ್ದು ಎರಡನೇ ತ್ರೈಮಾಸಿಕದಲ್ಲಿ ₹ 46 ಸಾವಿರಕ್ಕೆ ಏರಿಕೆ ಆಯಿತು. ಬಳಿಕ ಮೂರನೇ ತ್ರೈಮಾಸಿಕದ ವೇಳೆಗೆ ₹ 51 ಸಾವಿರಕ್ಕೆ ಜಿಗಿಯಿತು. ನಾಲ್ಕನೇ ತ್ರೈಮಾಸಿಕದ ವೇಳೆಗೆ ಲಾಕ್‌ಡೌನ್‌ ನಿರ್ಬಂಧಗಳ ತೆರವಿನ ಪರಿಣಾಮ ಚಿನ್ನದ ಬೆಲೆಯು ₹ 50 ಸಾವಿರಕ್ಕೆ ಇಳಿಕೆ ಆಗಿತ್ತು.

ಕೋವಿಡ್‌ ನಿಯಂತ್ರಣ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆಯಿಂದಾಗಿ ಸದ್ಯ ಬೆಲೆಯು ₹ 46 ಸಾವಿರದ ಆಸುಪಾಸಿನಲ್ಲಿದೆ. ಆದರೆ ಕೋವಿಡ್‌ನ ಎರಡನೇ ಅಲೆಯು ತೀವ್ರವಾಗಿ ಹರಡುತ್ತಿರುವುದರಿಂದ ಬೆಲೆಯು ಕಳೆದ ವರ್ಷದ ರೀತಿಯಲ್ಲಿಯೇ ಮತ್ತೆ ಏರಿಕೆ ಆಗುವ ಸಾಧ್ಯತೆ ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಎರಡನೇ ಅಲೆಯನ್ನು ನಿಯಂತ್ರಿಸಲು ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಗ್ರಾಹಕರ ಖರೀದಿ ಮನಃಸ್ಥಿತಿಯು ಕುಗ್ಗಿದೆ. ಇದು 2021ರ ಎರಡನೇ ತ್ರೈಮಾಸಿಕದಲ್ಲಿ ಮದುವೆ ಸಮಾರಂಭಗಳಿಗೆ ಚಿನ್ನಾಭರಣ ಖರೀದಿಸುವುದರ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಜಾಗತಿಕ ಬೇಡಿಕೆ ಇಳಿಕೆ: ಚಿನ್ನದ ಬೇಡಿಕೆಯು 2020ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2021ರ ಮೊದಲ ತ್ರೈಮಾಸಿಕದಲ್ಲಿ ಶೇ 23ರಷ್ಟು ಇಳಿಕೆ ಆಗಿದ್ದು, 815.7 ಟನ್‌ಗಳಷ್ಟಾಗಿದೆ. ಚಿನ್ನಾಭರಣ ಬೇಡಿಕೆಯು ಶೇ 52ರಷ್ಟು ಹೆಚ್ಚಾಗಿದ್ದು 477.4 ಟನ್‌ಗಳಿಗೆ ತಲುಪಿದೆ. ಹೂಡಿಕೆದಾರರು ಚಿನ್ನದ ಇಟಿಎಫ್‌ಗಳನ್ನು ಮಾರಾಟ ಮಾಡಿದ್ದರಿಂದ ಚಿನ್ನದ ಬೇಡಿಕೆ ತಗ್ಗಿದೆ ಎಂದು ಡಬ್ಲ್ಯುಜಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT