ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಅವಕಾಶ ಸೃಷ್ಟಿ ಹೇಗೆ?

.
Last Updated 16 ಜೂನ್ 2020, 17:42 IST
ಅಕ್ಷರ ಗಾತ್ರ

‘ಕೋವಿಡ್‌ -19’ ಪಿಡುಗು ಪ್ರಪಂಚದಾದ್ಯಂತ ಆರ್ಥಿಕತೆಗೆ ಭಾರಿ ನಷ್ಟ ಉಂಟು ಮಾಡುತ್ತಿರುವುದರಿಂದ ನೀತಿ ನಿರೂಪಕರು ಅದರ ಆರ್ಥಿಕ ಪರಿಣಾಮಗಳನ್ನು ತಗ್ಗಿಸಲು ಪರಿಣಾಮಕಾರಿ ಮಾರ್ಗಗಳನ್ನು ತೀವ್ರವಾಗಿ ಹುಡುಕುತ್ತಿದ್ದಾರೆ. ಭಾರತ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗೆ ತಕ್ಷಣದ ಭವಿಷ್ಯವು ಭೀಕರವಾಗಿದೆ. ಕೋವಿಡ್‌-19 ಭಾರತದಲ್ಲಿ ವೇಗವಾಗಿ ಹರಡುತ್ತಿರುವುದರಿಂದ, ನೀತಿ ನಿರೂಪಕರು ವೈರಸ್ ವಿರುದ್ಧ ಹೇಗೆ ಹೋರಾಡಬೇಕು ಮತ್ತು ಆರ್ಥಿಕತೆಯ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಇದಕ್ಕೆ ಪರಿಹಾರ ಸುಲಭವಾಗಿಲ್ಲ. ಬಿಕ್ಕಟ್ಟು ಮುಗಿದ ನಂತರ ಉಂಟಾಗಬಹುದಾದ ದೀರ್ಘಕಾಲೀನ ಸವಾಲುಗಳು ಮತ್ತು ಅವಕಾಶಗಳಿಗೆ ನೀತಿ ನಿರೂಪಕರು ಈಗ ಸಿದ್ಧರಾಗಿರಬೇಕಾಗುತ್ತದೆ. ದುಡಿಯುವ ಬಂಡವಾಳ ಕಡಿಮೆ ಇರುವ, ಕಡಿಮೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮತ್ತು ಕಡಿಮೆ ಲಾಭ ಗಳಿಸುವ ಉದ್ಯಮಗಳು ಹೆಚ್ಚು ಅಪಾಯಗಳಿಗೆ ಒಳಗಾಗುತ್ತಿವೆ.

ಜಗತ್ತಿನಾದ್ಯಂತದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಸಾಂಕ್ರಾಮಿಕ ರೋಗವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಕೆಲಸದ ಸಮಯವನ್ನು ಶೇ 7ರಷ್ಟು ಕಡಿಮೆಗೊಳಿಸಬಹುದು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮುನ್ಸೂಚನೆ ನೀಡಿದೆ.

ದೇಶದಲ್ಲಿ ಉದ್ಯೋಗ ಕಳೆದುಕೊಂಡ 12 ಕೋಟಿ ಜನರಲ್ಲಿ 9.13 ಕೋಟಿ ಜನರು ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರಾಗಿದ್ದಾರೆ. ವೇತನಕ್ಕೆ ದುಡಿಯುವ ಕಾರ್ಮಿಕರು (1.78 ಕೋಟಿ ) ಮತ್ತು ಸ್ವಯಂ ಉದ್ಯೋಗಿ ಜನರು (1.82 ಕೋಟಿ ) ಸಹ ಕೆಲಸ ಕಳೆದುಕೊಂಡಿದ್ದಾರೆ. ನಿರುದ್ಯೋಗ ಬಿಕ್ಕಟ್ಟನ್ನು ನಿರ್ವಹಿಸಲು ಸರ್ಕಾರಿ, ಖಾಸಗಿ ಮತ್ತು ಸಾಮಾಜಿಕ ಕ್ಷೇತ್ರಗಳ ನಾಯಕರು ಈಗಾಗಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಹೆಚ್ಚಿನ ಗಮನ ನೀಡುವ ಮತ್ತು ಹೊಸತನದ ಅಳವಡಿಕೆಯ ಅವಶ್ಯಕತೆಯಿದೆ.

ದೇಶದ ಎಲ್ಲಾ ಮುಂಚೂಣಿ ಕ್ಷೇತ್ರಗಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಕ್ಷೇತ್ರಗಳಲ್ಲಿನ ಗಮನಾರ್ಹ ಉದ್ಯೋಗ ನಷ್ಟದಿಂದ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಕಂಡು ಬರಲಿದೆ. ಇದಲ್ಲದೆ ವಿಮಾನಯಾನ, ಪ್ರಯಾಣ, ಆತಿಥ್ಯ, ಚಿಲ್ಲರೆ ವ್ಯಾಪಾರ, ಉತ್ಪಾದನೆ ಮತ್ತು ವಾಹನ ಕ್ಷೇತ್ರಗಳ ಉದ್ಯೋಗದ ಮೇಲೆಯೂ ಹೆಚ್ಚು ಪರಿಣಾಮ ಕಂಡು ಬಂದಿದೆ. ಈ ವಲಯಗಳಲ್ಲಿ ಉದ್ಯೋಗ ಕಡಿತವು ಶೇಕಡಾ 20 ಆಗಿರಬಹುದೆಂದು ಅಂದಾಜಿಸಲಾಗಿದೆ. ಉತ್ಪಾದನೆ, ಎಂಜಿನಿಯರಿಂಗ್, ನಿರ್ಮಾಣ, ಹಾಗು ಅಸಂಘಟಿತ ಕ್ಷೇತ್ರಗಳೂ ಸೇರಿದಂತೆ ಏಪ್ರಿಲ್ -ಜೂನ್ ತನಕ ಸುಮಾರು 70,000 ಉದ್ಯೋಗಗಳು ಕಡಿಮೆಯಾಗಲಿವೆ.

ಕೈಗಾರಿಕಾ ಚಟುವಟಿಕೆಗಳನ್ನು ಪುನಃ ತೆರೆಯಲು ಸರ್ಕಾರಗಳು ಸಿದ್ಧತೆ ನಡೆಸುತ್ತಿರುವಾಗ, ಉದ್ಯೋಗ ಅವಕಾಶ ಹೆಚ್ಚಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.

ಜಾಲ ಒದಗಿಸಬೇಕಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯನ್ನು ಸುರಕ್ಷಾ ಜಾಲದ ಪ್ರಾಥಮಿಕ ಸಾಧನವಾಗಿ ಪರಿಗಣಿಸಬಹುದಾಗಿದೆ. ‘ನರೇಗಾ’ಕ್ಕೆ ಬಜೆಟ್‌ನಲ್ಲಿ ಹೆಚ್ಚು ಹಣ ಒದಗಿಸಲಾಗಿದೆ. ಇದರಿಂದ ಜನರ ಕೈಯಲ್ಲಿ ಹಣ ಹೆಚ್ಚಿಸುವುದರ ಜೊತೆಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ಆಹಾರದ ಬೇಡಿಕೆಯು ಕೃಷಿ ಉತ್ಪಾದನೆ ಉತ್ತೇಜಿಸಲಿದೆ.

ವಲಸೆ ಕಾರ್ಮಿಕರ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ ಲಭ್ಯತೆ ಹೆಚ್ಚಿಸಲಿದೆ. ಗ್ರಾಮೀಣ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇದನ್ನು ಒಂದು ಅವಕಾಶವಾಗಿ ಪರಿಗಣಿಸಬೇಕು. ‘ನರೇಗಾ’ ವಿಸ್ತರಣೆ ಮತ್ತು ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುವ ಅಗತ್ಯ ಇದೆ. ಕೃಷಿ ಮೂಲಸೌಕರ್ಯಗಳನ್ನು ನವೀಕರಿಸಬೇಕಾಗಿದೆ.

ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಜಾಗತಿಕ ಮಾನದಂಡಗಳನ್ನು ಪೂರೈಸುವಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಿದೆ.
ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 30ರಷ್ಟು ಕೊಡುಗೆ ನೀಡುವ ‘ಎಂಎಸ್ಎಂಇ’ ವಲಯವು ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ.

ಚೀನಾದಲ್ಲಿ ಸರಕುಗಳ ತಯಾರಿಕೆ ಕೇಂದ್ರೀಕರಿಸುವ ಅಪಾಯವನ್ನು ಜಗತ್ತು ಕಂಡಿದೆ. ಚೀನಾದಿಂದ ಇತರ ದೇಶಗಳಿಗೆ ಕಂಪನಿಗಳ ಸ್ಥಳಾಂತರವು ಕೈಗಾರಿಕೀಕರಣದ ಹೊಸ ಅಲೆಗೆ ಕಾರಣವಾಗಲಿದೆ. ಚೀನಾದಿಂದ ಕಾಲ್ತೆಗೆಯುವ ಕಂಪನಿಗಳು ಭಾರತದಲ್ಲಿ ನೆಲೆವೂರಲು ಮುಂದಾದರೆ ದೊಡ್ಡ ಪ್ರಮಾಣದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಂಪನಿಗಳನ್ನು ಸೆಳೆಯಲು ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಿಪುಲ ಅವಕಾಶಗಳು ಇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಾಗಿದೆ.

ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಆದ್ಯತೆ ದೊರೆಯಬೇಕಾಗಿದೆ. ದೇಶಿ ಆರ್ಥಿಕತೆ ವಿಸ್ತರಣೆಯಾಗುತ್ತಿದೆ. ಗರಿಷ್ಠ ಮಟ್ಟದಲ್ಲಿ ಇರುವ ಮಧ್ಯಮ ವರ್ಗವು ಬಲವಾದ ಮಾರುಕಟ್ಟೆ ಒದಗಿಸಲಿದೆ.

‘ಎಂಎಸ್‌ಎಂಇ’ ವಲಯವು ಆರ್ಥಿಕ ಚೇತರಿಕೆಯ ಮೂಲವಾಗಿದೆ. ಸಣ್ಣ ಕೈಗಾರಿಕಾ ಘಟಕಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಗಮನ ಹರಿಸಬೇಕು. ಸಣ್ಣ ಕೈಗಾರಿಕಾ ಘಟಕಗಳು ತಯಾರಿಕಾ ಚಟುವಟಿಕೆ ಪುನರಾರಂಭಿಸಲು ಸರ್ಕಾರ ಅವುಗಳ ಬೆಂಬಲಕ್ಕೆ ನಿಲ್ಲಬೇಕು. ಕಾರ್ಮಿಕರು, ಸ್ವಯಂ ಉದ್ಯೋಗಿಗಳು ತಯಾರಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಹ ಪೂರಕ ವಾತಾವರಣ ನಿರ್ಮಿಸಬೇಕು.

ಉದ್ಯೋಗ ಅವಕಾಶ ಸೃಷ್ಟಿಯ ಮಾರ್ಗೋಪಾಯಗಳು

lಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಜಾರಿ

lಸಣ್ಣ ಹಿಡುವಳಿದಾರರು, ಕೃಷಿ ಕಾರ್ಮಿಕರಿಗೆ ಸುರಕ್ಷತಾ ಜಾಲ ಸೃಷ್ಟಿ

lಕೃಷಿ ಮೂಲ ಸೌಕರ್ಯಗಳ ನವೀಕರಣ

lಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗೆ ವಲಸೆ ಕಾರ್ಮಿಕರ ಬಳಕೆ

lಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳ

l‘ಎಂಎಸ್‌ಎಂಇ‘ಗಳ ಪುನರಾರಂಭಕ್ಕೆ ಆದ್ಯತೆ

lಚೀನಾದಿಂದ ಸ್ಥಳಾಂತರಗೊಳ್ಳುವ ಉದ್ದಿಮೆಗಳಿಗೆ ಆಹ್ವಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT