ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ವಲಯಕ್ಕೆ ಮತ್ತೆ ಕೋವಿಡ್ ಸವಾಲು

Last Updated 28 ಮಾರ್ಚ್ 2021, 18:06 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಪ್ರಕರಣಗಳ ಸಂಖ್ಯೆಯು ಮತ್ತೆ ಹೆಚ್ಚಳವಾಗುತ್ತಿರುವುದು ಆರ್ಥಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಗ್ರಾಹಕರು ಮಾರುಕಟ್ಟೆಗೆ ಬಂದು ವಸ್ತುಗಳ ಖರೀದಿಯಲ್ಲಿ ತೊಡಗುವ ಪ್ರಮಾಣ ತುಸು ತಗ್ಗಿದೆ. ಕೋವಿಡ್ ಎರಡನೆಯ ಅಲೆಯು ಆರ್ಥಿಕ ಬೆಳವಣಿಗೆಯನ್ನು ಕನಿಷ್ಠ ಎರಡು ತಿಂಗಳ ಅವಧಿಗೆ ಸ್ಥಗಿತದ ಸ್ಥಿತಿಗೆ ಒಯ್ಯಬಹುದು ಎಂಬ ಆತಂಕವನ್ನು ಉದ್ಯಮ ವಲಯ ವ್ಯಕ್ತಪಡಿಸಿದೆ.

ಕೋವಿಡ್ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದಾಗ ಚೇತರಿಕೆಯ ಕಡೆ ಮುಖ ಮಾಡಿದ್ದ ಪ್ರವಾಸೋದ್ಯಮದ ಮೇಲೆ ಈಗಿನ ಸಂದರ್ಭವು ಕೆಟ್ಟ ಪರಿಣಾಮ ಉಂಟು ಮಾಡಲಿದೆ ಎಂದು ಉದ್ಯಮಿಗಳು ಹೇಳಿದ್ದಾರೆ.

‘ಮತ್ತೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ತಯಾರಿಕಾ ವಲಯದ ಮೇಲೆ ಹೆಚ್ಚಿನ ಪರಿಣಾಮವನ್ನು ಇದುವರೆಗೆ ಬೀರಿಲ್ಲ. ಆದರೆ, ಜವಳಿ ಹಾಗೂ ಗಾರ್ಮೆಂಟ್ಸ್‌ ಉದ್ಯಮಗಳ ಮೇಲೆ ತುಸು ದುಷ್ಪರಿಣಾಮ ಉಂಟಾಗಿದೆ. ಎರಡನೆಯ ಅಲೆಯು ಪ್ರವಾಸೋದ್ಯಮಕ್ಕೆ ಹೆಚ್ಚಿನ ಅಪಾಯ ತಂದೊಡ್ಡುವ ಭೀತಿ ಇದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ನ ಎರಡನೆಯ ಅಲೆಯು ಪ್ರವಾಸ, ಆತಿಥ್ಯ, ಮನರಂಜನೆ ಉದ್ದಿಮೆಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದು ಖಂಡಿತ’ ಎಂದು ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ, ಉದ್ಯಮಿ ಡಿ. ಮುರಳೀಧರ ಹೇಳಿದರು. ‘ಈ ವಲಯದ ಉದ್ದಿಮೆಗಳು ಈಗಾಗಲೇ ನಷ್ಟ ಅನುಭವಿಸಿವೆ. ಮುಂದೆ ಎದುರಾಗಬಹುದಾದ ನಷ್ಟವು ಭಾರಿ ಪ್ರಮಾಣದಲ್ಲಿ ಇರಲಿದೆ’ ಎಂಬ ಅಭಿಪ್ರಾಯ ಅವರದು.

ಆತಿಥ್ಯ ಉದ್ಯಮದ ಸೇವೆಗಳನ್ನು ಪಡೆಯಲು ಬರುವ ಗ್ರಾಹಕರ ಸಂಖ್ಯೆ ಒಂದು ವಾರದಿಂದ ಕಡಿಮೆ ಆಗುತ್ತಿರುವುದನ್ನು ತಾವು ಖುದ್ದಾಗಿ ಗಮನಿಸಿರುವುದಾಗಿ ಮುರಳೀಧರ ತಿಳಿಸಿದರು. ‘ಜನ ಮಾರುಕಟ್ಟೆಗೆ ಬರುವುದು ಕಡಿಮೆ ಆಗಿದೆ’ ಎಂದು ಉದ್ಯಮಿ ‍‍‍ಪಿ.ಎಚ್. ರಾಜಪುರೋಹಿತ್ ಹೇಳಿದರು.

ಸೆಪ್ಟೆಂಬರ್–ಅಕ್ಟೋಬರ್‌ ನಂತರ ಆರ್ಥಿಕ ಚಟುವಟಿಕೆಗಳು ಸುಧಾರಣೆಯ ಹಾದಿಯಲ್ಲಿವೆ. ಈಗ ಹೆಚ್ಚುತ್ತಿರುವ ಪ್ರಕರಣಗಳ ಪರಿಣಾಮವು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಖರೀದಿದಾರರ ವರ್ತನೆಯಲ್ಲಿ ಬದಲಾವಣೆ ತಂದಿಲ್ಲ. ಬೆಂಗಳೂರಿಗೆ ತಾಗಿಕೊಂಡು ಇರುವ ಜಿಲ್ಲೆಗಳಲ್ಲಿ ಕೋವಿಡ್–19 ಪ್ರಕರಣಗಳು ತೀವ್ರವಾಗಿ ಹೆಚ್ಚಳ ಆದರೆ, ಬೆಂಗಳೂರಿನಲ್ಲಿ ಬೇಡಿಕೆ ತಗ್ಗುತ್ತದೆ. ಅದು ಸಣ್ಣ ಕೈಗಾರಿಕೆಗಳ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಎಫ್‌ಕೆಸಿಸಿಐ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ವಿವರಿಸಿದರು.

‘ಪೆಟ್ರೋಲ್, ಡೀಸೆಲ್ ಮಾರಾಟದಿಂದ ಬರುವ ತೆರಿಗೆ ಕಡಿಮೆ ಆಗಿಲ್ಲ. ಅಂದರೆ ಜನರ ಸಂಚಾರ ಕಡಿಮೆಯಾಗಿಲ್ಲ. ಎಫ್‌ಎಂಸಿಜಿ ಬಳಕೆ ಕಡಿಮೆ ಆಗಿಲ್ಲ. ನೌಕರ ವರ್ಗಕ್ಕೆ ಸಂಬಳ ಕಾಲಕಾಲಕ್ಕೆ ಪಾವತಿ ಆಗುತ್ತಿದೆ. ಹೀಗಾಗಿ, ತಕ್ಷಣಕ್ಕೆ ಸಮಸ್ಯೆ ಇಲ್ಲ. ಆದರೆ, ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕಂಡರೆ ತೊಂದರೆ ಎದುರಾಗುವ ಸಾಧ್ಯತೆ ಇರುವುದು ಖಂಡಿತ ಅನಿಸುತ್ತದೆ’ ಎಂದು ಮನೋಹರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT