ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಭಾರತದ ಮೇಲೆ ಪ್ರಗತಿಯ ಒತ್ತಡ

ಸರ್ಕಾರದ ಪುನಶ್ಚೇತನ ಕ್ರಮಗಳನ್ನು ಹಿಂದಕ್ಕೆ ಪಡೆದರೆ ಹೊಸ ಸವಾಲು
Last Updated 27 ಜುಲೈ 2020, 21:20 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು:ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿದ್ದ ಸರಕುಗಳ ಬೇಡಿಕೆಯು ಭಾರತದ ಪ್ರಗತಿಗೆ ಒತ್ತಾಸೆಯಾಗಿತ್ತು. ಆದರೆ, ಒಳನಾಡುಗಳಲ್ಲಿ ಕೂಡ ಕೋವಿಡ್‌–19 ಹೆಚ್ಚುತ್ತಿರುವುದರಿಂದ ಮತ್ತು ಸರ್ಕಾರ ಮಾಡುತ್ತಿರುವ ವೆಚ್ಚದ ಕುಸಿತದಿಂದ ಪುನಶ್ಚೇತನಕ್ಕೆ ಹೊಸ ಸವಾಲುಗಳು ಎದುರಾಗಲಿವೆ ಎಂದುಕ್ರೆಡಿಟ್ ಸ್ಯೂಸ್‌ ವಿಶ್ಲೇಷಣೆ ಅಭಿಪ್ರಾಯಪಟ್ಟಿದೆ. ಗ್ರಾಮೀಣ ಆರ್ಥಿಕತೆಯ ಉತ್ತೇಜನಕ್ಕೆ ಸರ್ಕಾರ ಮಾಡಿದ ವೆಚ್ಚವು ಸುಮಾರು ₹35 ಸಾವಿರ ಕೋಟಿಯಷ್ಟಿದೆ.

ನರೇಗಾ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್, ನೇರ ನಗದು ವರ್ಗಾವಣೆ, ಜನಧನ್‌ ಮೊದಲಾದ ಸರ್ಕಾರದ ಯೋಜನೆಗಳಿಂದಾಗಿ ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳು ಉತ್ತಮ ಮಟ್ಟದಲ್ಲಿವೆ. ಈ ಯೋಜನೆಗಳಿಗೆ ಮಾಡುತ್ತಿರುವ ಖರ್ಚು ಸರ್ಕಾರಕ್ಕೆ ಹೊರೆಯಾಗುತ್ತಿದೆ. ಒಮ್ಮೆ ಈ ವೆಚ್ಚಗಳನ್ನು ಸ್ಥಗಿತಗೊಳಿಸಿದರೆ ಪೂರೈಕೆ ವ್ಯವಸ್ಥೆಯು ಸೊರಗಿ, ಗ್ರಾಮೀಣ ಭಾಗದ ಕೃಷಿ ಆರ್ಥಿಕತೆ ತನ್ನ ನಿಜ ಸ್ವರೂಪ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಕೃಷಿಯ ಪಾಲು ಶೇ 29ರಷ್ಟು ಮಾತ್ರ.

ಹಣಕಾಸು, ಸಂವಹನ ಸೇವೆ, ನಿರ್ಮಾಣ, ತಯಾರಿಕೆ ಮುಂತಾಗ ಕೃಷಿಯೇತರ ಗ್ರಾಮೀಣ ಆರ್ಥಿಕತೆಯ ಶೇ 71ರಷ್ಟು ಭಾಗವು ಇನ್ನೂ ಸಂಕಷ್ಟದಿಂದ ಹೊರಬಂದಿಲ್ಲ. ಸೋಂಕು ತೀವ್ರಗೊಂಡರೆ ಇನ್ನಷ್ಟು ದಿನ ಈ ಕ್ಷೇತ್ರಗಳು ಹಿಂಜರಿಕೆ ಅನುಭವಿಸಬೇಕಾಗಬಹುದು.

ತಯಾರಿಕೆ ಹಾಗೂ ಸಂವಹನ ಸೇವಾ ಕ್ಷೇತ್ರಗಳು ಗ್ರಾಮೀಣ ಜಿಡಿಪಿಗೆ ತಲಾ ಶೇ 19ರಷ್ಟು ಪಾಲು ನೀಡುತ್ತವೆ. ನಿರ್ಮಾಣ ಕ್ಷೇತ್ರವು ಶೇ 8 ಹಾಗೂ ಸಾರ್ವಜನಿಕ ಆಡಳಿತವು ಶೇ 9ರಷ್ಟು ಪಾಲು ನೀಡುತ್ತವೆ.

ದೇಶದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ನೋಂದಾಯಿತ 6.33 ಕೋಟಿ ಉದ್ದಿಮೆಗಳಲ್ಲಿ ಹೆಚ್ಚಿನವು ತಯಾರಿಕಾ ಕ್ಷೇತ್ರದವು. ಅವುಗಳಲ್ಲಿ ಅರ್ಧದಷ್ಟು ಉದ್ದಿಮೆಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಕೊರೊನಾದಿಂದಾಗಿ ಈಗ ಅಸ್ತಿತ್ವ ಉಳಿಸಲು ಹರಸಾಹಸಪಡುತ್ತಿವೆ.

ಸಿಮೆಂಟ್‌ನ ಬೇಡಿಕೆಯಲ್ಲಿ ಜೂನ್‌, ಜುಲೈ ತಿಂಗಳಲ್ಲಿ ಸ್ವಲ್ಪ ಏರಿಕೆಯಾಗಿರುವುದು ಕಂಡುಬಂದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ನಿರ್ಮಾಣ ಕಾಮಗಾರಿಯ ಸಲಕರಣೆಗಳ ಮಾರಾಟ ಪ್ರಮಾಣವು ಶೇ 70ರಷ್ಟು ಕುಸಿದಿರುವುದು
ಕಂಡುಬಂದಿದೆ.

ನಿರ್ಮಾಣ ಸಲಕರಣೆಗಳ ಬೇಡಿಕೆಯಲ್ಲಿ ಆಗಿರುವ ಕುಸಿತವು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರೈಲು, ರಸ್ತೆ ಹಾಗೂ ಇತರ ಮೂಲಸೌಲಭ್ಯ ನಿರ್ಮಾಣ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಜೂನ್‌ ತಿಂಗಳಲ್ಲಿ ಮೋಟರ್‌ಸೈಕಲ್‌ಗಳ ಮಾರಾಟದಲ್ಲಿ ಶೇ 35ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಮೋಟರ್ ‌ಸೈಕಲ್‌ಗಳಿಗೆ ಹೆಚ್ಚಿನ ಬೇಡಿಕೆ ಬರುವುದು ಗ್ರಾಮೀಣ ಭಾಗದಿಂದಲೇ.

ಗ್ರಾಮೀಣ ಪ್ರದೇಶದಲ್ಲಿ ಇರುವ ಸುಮಾರು ಮೂರು ಕೋಟಿ ಕುಟುಂಬಗಳು ನರೇಗಾ ಅಡಿಯಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದವು. ಆದರೆ, ಎರಡು ಕೋಟಿ ಕುಟುಂಬಗಳಿಗೆ ಮಾತ್ರ ಕೆಲಸ ಸಿಕ್ಕಿದೆ.

ಹಾಲು, ಮಾಂಸ, ಕೋಳಿ ಮತ್ತು ಮೊಟ್ಟೆ, ತರಕಾರಿ ಮತ್ತು ಹಣ್ಣು ಸೇರಿ ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಪ್ರದೇಶದ ಜನರು ಪಡೆದುಕೊಂಡ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ.

‘ಗ್ರಾಮೀಣ ಪ್ರದೇಶದ ಬೇಡಿಕೆಯು ಗರಿಷ್ಠ ಮಟ್ಟದಲ್ಲಿ ಇಲ್ಲ. ಆದರೆ, ಕಳೆದ ಒಂದೆರಡು ವರ್ಷಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಅರ್ಥ ವ್ಯವಸ್ಥೆಯ ಚೇತರಿಕೆಯು ಕೃಷಿ ಚಟುವಟಿಕೆ
ಗಳಿಗೆ ಸೀಮಿತವಾಗಿದೆ’ ಎಂದು ಇಂದ್ರಾ ಸಂಸ್ಥೆಯಲ್ಲಿ ಪ್ರಧಾನ ಅರ್ಥಶಾಸ್ತ್ರಜ್ಞರಾಗಿರುವ ಕುಮಾರ್‌ ಸಿನ್ಹಾ ಹೇಳಿದ್ದಾರೆ.

ಈ ಸಾರಿ ಮುಂಗಾರು ಮಳೆ ಸಹಜವಾಗಿದೆ. ಹಾಗಾಗಿ, ಉತ್ತಮ ಬೆಳೆಯ ನಿರೀಕ್ಷೆಯೂ ಇದೆ. ಆದರೆ, ಬೇರೆ ಕ್ಷೇತ್ರಗಳಲ್ಲಿ ಬೇಡಿಕೆ ಕುಸಿತವಾದರೆ, ಒಳ್ಳೆಯ ಫಸಲು ಬಂದರೂ ರೈತರಿಗೆ ನಷ್ಟವೇ ಆಗಬಹುದು.

ಹಾಗಾಗಿಯೇ, ಬೇಸಾಯದ ಆದಾಯವನ್ನು ಸುಸ್ಥಿರಗೊಳಿಸಲು ಸರ್ಕಾರವು ನೀತಿ ರೂಪಿಸಬೇಕು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಸೋಮವಾರ ಹೇಳಿದ್ದಾರೆ.

ಇನ್ನೂ ಇದೆ ಸವಾಲು

ನರೇಗಾ ಮೂಲಕ ಸರ್ಕಾರದ ಬೆಂಬಲದಿಂದಾಗಿ ಈವರೆಗೆ ಕೃಷಿ ಚಟುವಟಿಕೆಗಳು ನಡೆದಿವೆ. ಆದರೆ, ಈ ಬೆಂಬಲವನ್ನು ಹಿಂದಕ್ಕೆ ಪಡೆದರೆ ಮತ್ತು ಪೂರೈಕೆ ಸರಪಣಿ ಉತ್ತಮಗೊಳ್ಳದಿದ್ದರೆ ಗ್ರಾಮೀಣ ಆರ್ಥಿಕತೆಯ ಮೇಲಿನ ಒತ್ತಡ ಹೆಚ್ಚಲಿದೆ.

ಹಣಕಾಸು, ಸಂವಹನ ಸೇವೆಗಳು, ನಿರ್ಮಾಣ, ತಯಾರಿಕೆಯಂತಹ ಕೃಷಿಯೇತರ ಚಟುವಟಿಕೆಗಳು ಇನ್ನೂ ಸಂಕಷ್ಟದಲ್ಲಿಯೇ ಇವೆ. ನಿರ್ಮಾಣ ಉಪಕರಣಗಳ ಮಾರಾಟವು ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇ 70ರಷ್ಟು ಕುಸಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT