ಕ್ರೆಡಿಟ್‌ ಕಾರ್ಡ್‌ ವಹಿವಾಟಿಗೆ ಹೆಚ್ಚಿನ ಸುರಕ್ಷತೆ

7
ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದ ಆರ್‌ಬಿಐ

ಕ್ರೆಡಿಟ್‌ ಕಾರ್ಡ್‌ ವಹಿವಾಟಿಗೆ ಹೆಚ್ಚಿನ ಸುರಕ್ಷತೆ

Published:
Updated:
Prajavani

ಮುಂಬೈ: ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಸಂದರ್ಭದಲ್ಲಿ ದತ್ತಾಂಶಗಳ ಸುರಕ್ಷತೆಗೆ (tokenisation) ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಈ ‘ದತ್ತಾಂಶ ಸುರಕ್ಷತೆ’ಯು  ಹಣ ಪಾವತಿಯ ಸುರಕ್ಷತೆಗೆ ಸಂಬಂಧಿಸಿದ ಬಳಕೆದಾರರ ಆತಂಕಗಳನ್ನು ದೂರ ಮಾಡಲಿದೆ. ಕಾರ್ಡ್‌ನ ವಿವರಗಳಿಗೆ ಪರ್ಯಾಯವಾಗಿ ‘ಟೋಕನ್‌’ ಹೆಸರಿನ ವಿಶಿಷ್ಟ ಪರ್ಯಾಯ ಸಂಖ್ಯೆಯನ್ನು ಬಳಸುವ ವ್ಯವಸ್ಥೆ ಇದಾಗಿದೆ.

ಕಾರ್ಡ್ ಬಳಸಿ ಸರಕು ಮತ್ತು ಸೇವೆಗಳ ಖರೀದಿಸುವ ಸಂದರ್ಭದಲ್ಲಿ ಕಾರ್ಡ್‌ನ 16 ಅಂಕಿಗಳ ಖಾತೆ ಸಂಖ್ಯೆ, ಕಾರ್ಡ್‌ ಬಳಕೆ ಅವಧಿ ಕೊನೆಗೊಳ್ಳುವ ಸಮಯ, ಸುರಕ್ಷತಾ ರಹಸ್ಯ ಸಂಖ್ಯೆಗಳನ್ನು ಮರೆಮಾಚುವ ಹೆಚ್ಚುವರಿ ರಕ್ಷಣಾ ಸೌಲಭ್ಯವನ್ನು ಇದು ಒದಗಿಸಲಿದೆ.

ಗ್ರಾಹಕರು ಹಣಕಾಸು ಸಂಸ್ಥೆಗಳು, ವ್ಯಾಪಾರಿಗಳು, ಮೊಬೈಲ್‌ ವಾಲೆಟ್‌ಗಳ ಜತೆ ವ್ಯವಹರಿಸುವ ಸಂದರ್ಭದಲ್ಲಿ ಕಾರ್ಡ್‌ನ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿ ವಂಚನೆಗಳು ನಡೆಯದಂತೆ ಈ ಹೆಚ್ಚುವರಿ ಸುರಕ್ಷತಾ ಸೌಲಭ್ಯವು ನೆರವಾಗಲಿದೆ.

ಕಾರ್ಡ್‌ ವಿತರಿಸುವ ಪ್ರಮುಖ ಸಂಸ್ಥೆಗಳು ವಿಶ್ವದಾದ್ಯಂತ ಇಂತಹ ಸೇವೆ ಒದಗಿಸುತ್ತಿವೆ.

ಶುಲ್ಕ ಇಲ್ಲ: ಈ ಸೌಲಭ್ಯವನ್ನು ದೇಶದಲ್ಲಿಯೂ ಒದಗಿಸಲು ಆರ್‌ಬಿಐ ಈಗ ಅನುಮತಿ ನೀಡಿದೆ. ಈ ಸೌಲಭ್ಯ ಪಡೆಯಲು ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ಪಾಯಿಂಟ್‌ ಆಫ್‌ ಸೇಲ್‌ (ಪಿಎಸ್‌ಒ) ಯಂತ್ರದ ನೆರವಿನಿಂದ ಕಾರ್ಡ್‌ಗಳಿಂದ ಹಣ ಪಡೆಯುವ ವಿಧಾನಕ್ಕೆ ಪರ್ಯಾಯವಾಗಿ ಸಂಪರ್ಕರಹಿತ ಹಣ ಪಾವತಿ ಸೌಲಭ್ಯದ ಬಳಕೆ ಸಂದರ್ಭದಲ್ಲಿ ಒಂದು ಬಾರಿಗೆ ಮೊಬೈಲ್‌ಗೆ ಬರುವ ರಹಸ್ಯ ಸಂಖ್ಯೆ ನಮೂದಿಸುವ ವಿಧಾನವನ್ನು ಕೈಬಿಡಲು  ಕ್ರೆಡಿಟ್‌ ಕಾರ್ಡ್‌ ವಿತರಿಸುವ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ ಸಂಸ್ಥೆಗಳು ಮುಂದಾಗಿವೆ.

ಈ ಬಗೆಯ (ಪಿಎಸ್‌ಒ) ಹಣ ಪಾವತಿಯೂ ಸೇರಿದಂತೆ ಆ್ಯಪ್‌ ಮೂಲಕ ಮತ್ತು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸುವ ಸಂದರ್ಭದಲ್ಲಿ ಈ ದತ್ತಾಂಶ ಸುರಕ್ಷತೆ ಸೌಲಭ್ಯವನ್ನು ಕಾರ್ಡ್‌ ಬಳಕೆದಾರರು ಬಳಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !