ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ v/s ಗಂಭೀರ ಕಾಯಿಲೆ ವಿಮೆ

istockphoto-800551788-2048x2048.jpg
Last Updated 20 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಪುಣೆಯ ಐಟಿ ಉದ್ಯೋಗಿಗಳಾಗಿರುವ ಕುನಾಲ್‌ – ಶಿಬಿಲಾ (ಹೆಸರು ಬದಲಿಸಲಾಗಿದೆ) ದಂಪತಿಯು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಹೀಗಿರುವಾಗ ಒಂದು ದಿನ, ಕುನಾಲ್‌ ದಿಢೀರನೆ ಅಸ್ವಸ್ಥರಾದರು. ಕೆಮ್ಮುವಾಗ ಕಫದಲ್ಲಿ ರಕ್ತ ಕಾಣಿಸಿದ್ದರಿಂದ ಆತಂಕಕ್ಕೊಳಗಾದ ದಂಪತಿ, ಆಸ್ಪತ್ರೆಗೆ ಧಾವಿಸಿದರು. ತಪಾಸಣೆಯ ಬಳಿಕ ಕುನಾಲ್‌ ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅದೂ ಎರಡನೇ ಹಂತದಲ್ಲಿದೆ ಎಂಬುದು ತಿಳಿಯಿತು. ಕ್ಯಾನ್ಸರ್‌ ಚಿಕಿತ್ಸೆಗೆ ಅತ್ಯಾಧುನಿಕ ವಿಧಾನಗಳು ಇರುವುದರಿಂದ, ಅದರ ಪ್ರಯೋಜನ ಪಡೆದುಕೊಂಡ ಕುನಾಲ್‌ ಅವರು ಈಗ ಕ್ಯಾನ್ಸರ್‌ ಮುಕ್ತರಾಗಿದ್ದಾರೆ. ಈ ಚಿಕಿತ್ಸೆಗೆ ಅವರು ದೊಡ್ಡ ಮೊತ್ತವನ್ನು ವೆಚ್ಚ ಮಾಡಬೇಕಾಯಿತು. ದೀರ್ಘ ಕಾಲದ ಚಿಕಿತ್ಸೆಯ ಕಾರಣಕ್ಕೆ ಅವರ ಕುಟುಂಬವು ಹಲವು ವರ್ಷಗಳಿಂದ ಮಾಡಿದ್ದ ಉಳಿತಾಯ ಬರಿದಾಯಿತು.

ಗಂಭೀರ ಕಾಯಿಲೆಗಳನ್ನೂ ಒಳಗೊಳ್ಳುವಂತಹ ವಿಮೆ ಯಾಕೆ ಮಾಡಿಸಬೇಕು ಎಂಬುದಕ್ಕೆ ಈ ಕುಟುಂಬದ ಸ್ಥಿತಿಯು ಒಂದು ಉದಾಹರಣೆಯಾಗಬಲ್ಲದು. ಇಂತಹ ವಿಮೆ ಮಾಡಿಸುವುದಕ್ಕೂ ಮುನ್ನ ಸಾಮಾನ್ಯ ಆರೋಗ್ಯ ವಿಮೆಗೂ ಗಂಭೀರ ಕಾಯಿಲೆಯ ವಿಮೆಗೂ ಇರುವ ವ್ಯತ್ಯಾಸವೇನು ಎಂದು ತಿಳಿಯುವುದು ಮುಖ್ಯವಾಗುತ್ತದೆ.

ವಿಮೆ ಪಾಲಿಸಿದಾರರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಮಾನ್ಯ ಆರೋಗ್ಯ ವಿಮೆಯು ನೆರವಾಗುತ್ತದೆ. ಕೆಲವು ವಿಮೆಗಳು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುಂಚಿನಿಂದ ಆರಂಭಿಸಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರದ ಕೆಲವು ದಿನಗಳ ವೆಚ್ಚವನ್ನೂ ಭರಿಸುತ್ತವೆ. ಆದರೆ ಅದಕ್ಕೆ ಗರಿಷ್ಠ ಮಿತಿ ಇರುತ್ತದೆ.

ಗಂಭೀರ ಕಾಯಿಲೆಗಳ ವಿಮೆಯು ಸ್ವಲ್ಪ ಭಿನ್ನ ಮತ್ತು ಹೆಚ್ಚು ಜನಪ್ರಿಯವಾದುದು. ಇದು ವಿಮೆ ಪಾಲಿಸಿದಾರರ ಚಿಕಿತ್ಸೆಯ ಪೂರ್ತಿ ವೆಚ್ಚವನ್ನು ಭರಿಸುತ್ತದೆ. ಅಂಗ ಕಸಿ, ಕ್ಯಾನ್ಸರ್‌, ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮುಂತಾಗಿ ರೋಗ ಯಾವುದೇ ಇದ್ದರೂ ಚಿಕಿತ್ಸೆಯ ಪೂರ್ತಿ ವೆಚ್ಚವನ್ನು ಭರಿಸುತ್ತದೆ. ಮೊತ್ತಕ್ಕೆ ಗರಿಷ್ಠ ಮಿತಿ ಇರುವುದಿಲ್ಲ.

ಗಂಭೀರ ರೋಗಕ್ಕೆ ತುತ್ತಾಗಿ ಭಾರಿ ಆರ್ಥಿಕ ಸಂಕಟಕ್ಕೆ ಒಳಗಾದ ಲಕ್ಷಾಂತರ ಮಂದಿ ಭಾರತದಲ್ಲಿದ್ದಾರೆ. ಇಂತಹ ರೋಗಗಳು ಭಾರತದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಒಂದು ಅಂದಾಜಿನ ಪ್ರಕಾರ, 30ರಿಂದ 70 ವರ್ಷದೊಳಗಿನ ಭಾರತೀಯರಲ್ಲಿ ಶೇ 20ರಷ್ಟು ಮಹಿಳೆಯರು ಮತ್ತು ಶೇ 27ರಷ್ಟು ಪುರುಷರು ಇಂಥ ರೋಗಗಳಿಗೆ ತುತ್ತಾಗುವ ಅಪಾಯ ಇರುತ್ತದೆ. ಕ್ಯಾನ್ಸರ್‌, ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳಿಗೆ ಭಾರತವು ರಾಜಧಾನಿಯಾಗುತ್ತಿದೆ. ‘2020ರ ವೇಳೆಗೆ ಇಂತಹ ರೋಗಗಳು ಭಾರತೀಯರನ್ನು ಭಾರಿ ಪ್ರಮಾಣದಲ್ಲಿ ಕಾಡಲಿವೆ’ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ಹೇಳಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಸಂಸ್ಥೆಯೊಂದರ ಇತ್ತೀಚಿನ ವರದಿಯ ಪ್ರಕಾರ, 30 ವರ್ಷ ವಯಸ್ಸು ಮೀರಿದ ಮೂವರು ಭಾರತೀಯರಲ್ಲಿ ಒಬ್ಬರು ಜೀವನಶೈಲಿ ಸಂಬಂಧಿ ರೋಗಕ್ಕೆ ಒಳಗಾಗಿ, ಮುಂದೆ ಗಂಭೀರ ಸಮಸ್ಯೆ ಎದುರಿಸುವಂತಾಗುತ್ತದೆ. ‘ಭಾರತದಲ್ಲಿ ಪ್ರತಿ ವರ್ಷವೂ ಸುಮಾರು 1.5 ಕೋಟಿ ಜನರು ಇಂಥ ರೋಗದಿಂದಾಗಿ ತಮ್ಮ ಜೀವನದ ಉತ್ತುಂಗದಲ್ಲಿರುವಾಗ ಮೃತಪಡುತ್ತಾರೆ’ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ಹೇಳುತ್ತದೆ. 2016ರಲ್ಲಿ ಜಗತ್ತಿನಲ್ಲಿ ಮೃತಪಟ್ಟಿರುವ 5.7 ಕೋಟಿ ಜನರಲ್ಲಿ, 4.1 ಕೋಟಿ ಜನರು (ಸುಮಾರು ಶೇ 71) ಇಂಥ ಗಂಭೀರ ಕಾಯಿಲೆಗಳಿಂದಾಗಿ 30 ರಿಂದ 70 ವರ್ಷದೊಳಗಿನ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ವರದಿ ಹೇಳುತ್ತದೆ.

ಗಂಭೀರ ಕಾಯಿಲೆಯ ವಿಮೆಗಳು ಅನೇಕ ಇವೆ. ಸೂಕ್ತವಾದುದನ್ನು ಆಯ್ಕೆ ಮಾಡುವುದು ಹೇಗೆ ಎಂಬ ಸಮಸ್ಯೆ ಎದುರಾಗುವುದು ಸಹಜ. ಇಂಥ ಸಂದರ್ಭದಲ್ಲಿ ಗಮನದಲ್ಲಿ ಇಡಬೇಕಾದ ಸಂಗತಿ ಏನೆಂದರೆ, ‘ಸಮಗ್ರವಾದ ವಿಮೆಯನ್ನು ನೀಡುತ್ತದೆಯೇ’ ಎಂಬುದು. ಮೊದಲೇ ಇರುವ ಕಾಯಿಲೆಗಳಿಗೂ ವಿಮೆ ನೀಡುವ, ಅಪಘಾತ ವಿಮೆಯ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಆಸ್ಪತ್ರೆಗೆ ದಾಖಲಾಗಿ ಪಡೆಯುವ ಸಾಮಾನ್ಯ ಚಿಕಿತ್ಸೆಗಳಿಗೂ ವಿಮೆ ನೀಡುವಂಥ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಬೇಕು.

ಸಣ್ಣ ವಯಸ್ಸಿಲ್ಲಿಯೇ ಗರಿಷ್ಠ 70ವರ್ಷ ವಯಸ್ಸಿನವರೆಗೆ ಸೌಲಭ್ಯವನ್ನು ವಿಸ್ತರಿಸುವಂಥ ವಿಮೆ ಮಾಡಿಸುವುದರಿಂದ ಅನುಕೂಲಗಳು ಹೆಚ್ಚು. ಈ ವಯೋಮಾನದಲ್ಲಿಯೇ ನಮ್ಮ ಮೇಲೆ ಆರ್ಥಿಕವಾಗಿ ಹೆಚ್ಚಿನ ಒತ್ತಡಗಳೂ ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ.

‘ಸಮಗ್ರ ವಿಮೆ’ ಎಂದರೆ ಅದರಲ್ಲಿ ಎಲ್ಲಾ ಚಿಕಿತ್ಸಾ ವಿಧಾನಗಳೂ ಒಳಗೊಂಡಿರಬೇಕು. ವಿಮೆ ಪಾಲಿಸಿದಾರರು ಅಲೋಪಥಿಯ ಬದಲು ಆಯುರ್ವೇದ ಅಥವಾ ಯುನಾನಿ ಪದ್ಧತಿಯ ಚಿಕಿತ್ಸೆ ಪಡೆಯಲು ಬಯಸಿದರೆ ಆ ವೆಚ್ಚವನ್ನೂ ಭರಿಸುವಂತಿರಬೇಕು.

ಇದು ವಿಮೆಯ ವಿಚಾರವಾಯಿತು. ವಿಮೆಯು ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ ಎಂಬುದು ನಿಜ. ಆದರೆ ಆರೋಗ್ಯಕರ ಜೀವನ ಶೈಲಿಯು ಉತ್ಸಾಹದ ಮತ್ತು ಚೈತನ್ಯ ತುಂಬಿದ ಜೀವನಕ್ಕೆ ಸಹಾಯಮಾಡುತ್ತದೆ ಎಂಬುದನ್ನು ಮನಗಾಣಬೇಕು.

(ಲೇಖಕ: ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶುರೆನ್ಸ್‌ನ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT