ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ ದರ 50 ಡಾಲರ್‌ನತ್ತ

ಪೂರೈಕೆಯಲ್ಲಿ ಹೆಚ್ಚಳ l ಜಿ-–20, ಒಪೆಕ್‌ ಸಭೆಯತ್ತ ಮಾರುಕಟ್ಟೆ ದೃಷ್ಟಿ
Last Updated 27 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಸಿಂಗಪುರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಮುಖ ಹಾದಿಯಲ್ಲಿದೆ. ಉತ್ಪಾದನೆ ತಗ್ಗಿಸದೇ ಇದ್ದರೆ ಒಂದು ಬ್ಯಾರೆಲ್‌ಗೆ 50 ಡಾಲರ್‌ಗಳಿಗೂ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಡಿಸೆಂಬರ್‌ನಿಂದ ದಿನಕ್ಕೆ 5 ಲಕ್ಷದಿಂದ 10ಲಕ್ಷ ಬ್ಯಾರೆಲ್‌ವರೆಗೆ ಉತ್ಪಾದನೆ ತಗ್ಗಿಸಲು ಒಪೆಕ್ ಸದಸ್ಯ ರಾಷ್ಟ್ರಗಳು ನಿರ್ಧರಿಸಿವೆ. ಆದರೆ, ತೈಲ ಪೂರೈಕೆ ಹೆಚ್ಚಾಗುತ್ತಲೇ ಇರುವುದರಿಂದ ದರದಲ್ಲಿ ಇಳಿಕೆ ಕಾಣಲಾರಂಭಿಸಿದೆ.

ಮುಂದಿನವಾರ ಆಸ್ಟ್ರೇಲಿಯಾದಲ್ಲಿ ‘ಜಿ–20’ ಶೃಂಗಸಭೆ ನಡೆಯಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಒಪೆಕ್‌ ಸಭೆ ಸಹ ನಡೆಯಲಿದ್ದು, ಇಲ್ಲಿ ಹೊರಬೀಳುವ ನಿರ್ಧಾರಗಳ ಬಗ್ಗೆ ಮಾರುಕಟ್ಟೆ ಹೆಚ್ಚಿನ ಆಸಕ್ತಿ ತಳೆದಿದೆ.

ಅತಿ ಹೆಚ್ಚು ತೈಲ ಉತ್ಪಾದನೆ ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾದ ನಂತರದ ಸ್ಥಾನದಲ್ಲಿ ರಷ್ಯಾ ಇದೆ.ರಷ್ಯಾ ರಾಷ್ಟ್ರವು ಒಪೆಕ್‌ ಸದಸ್ಯತ್ವ ಪಡೆದಿಲ್ಲ. ಆದರೆ, ಉತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಒಪೆಕ್‌ಗೆ ರಷ್ಯಾದ ಒಪ್ಪಿಗೆ ಅಗತ್ಯವೂ ಇದೆ.

ಬ್ರೆಂಟ್‌ ಕಚ್ಚಾ ತೈಲ ದರವು ಈಗ ಒಂದು ಬ್ಯಾರೆಲ್‌ಗೆ 60 ಡಾಲರ್‌ನಷ್ಟಿದ್ದು, ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಮಾಡಲಾಗುತ್ತಿದೆ. ಅಮೆರಿಕದ ವೆಸ್ಟ್‌ ಟೆಕ್ಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಐ) ಕಚ್ಚಾ ತೈಲ ಶೇ 0.9ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 51.18 ಡಾಲರ್‌ಗೆ ಇಳಿಕೆ ಕಂಡಿದೆ.

ಇಳಿಕೆಗೆ ಕಾರಣ: ಉತ್ಪಾದನೆ ತಗ್ಗಿಸಲು ದನಿ ಎತ್ತುತ್ತಿರುವ ಮೊದಲ ದೇಶವಾಗಿರುವ ಸೌದಿ ಅರೇಬಿಯಾ, ನವೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ತೈಲ ಉತ್ಪಾದನೆ ಮಾಡಿದೆ. ಮೂಲಗಳ ಪ್ರಕಾರ ದಿನಕ್ಕೆ 1.13 ಕೋಟಿ ಬ್ಯಾರೆಲ್‌ ಉತ್ಪಾದನೆ ಮಾಡಿದೆ. ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ತೈಲ ದರ ಇದೀಗ ಒಟ್ಟಾರೆ ಮೌಲ್ಯದ ಮೂರರಷ್ಟು ಇಳಿಕೆಯಾಗಿದೆ.

ತೈಲ ದರ ಇಳಿಕೆಯುಭಾರತದ ಅರ್ಥ ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಹಣದುಬ್ಬರ ಮೇಲಿನ ಒತ್ತಡ ಕಡಿಮೆಯಾಗಲಿದೆ. ವಿತ್ತೀಯ ಕೊರತೆ ಕಡಿಮೆಯಾಗಲಿದೆ.

ಪೆಟ್ರೋಲ್‌ ₹ 9.75 ಅಗ್ಗ

ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ಇಂಧನ ದರಗಳಲ್ಲಿಯೂ ಇಳಿಕೆ ಕಾಣಲಾರಂಭಿಸಿದೆ. 2018ರ ಅಕ್ಟೋಬರ್‌ 1 ರಿಂದ ನವೆಂಬರ್‌ 27ರವರೆಗಿನ ಅವಧಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 9.75 ಹಾಗೂ ಡೀಸೆಲ್‌ ದರ₹ 6.23 ಇಳಿಕೆಯಾಗಿದೆ.

ಅ. 1 ರಂದು ಒಂದು ಲೀಟರ್‌ ಪೆಟ್ರೋಲ್‌ ದರ ₹ 84.40 ಇತ್ತು. ಅದು ನ. 27ಕ್ಕೆ (ಮಂಗಳವಾರ) ₹ 74.65ಕ್ಕೆ ಇಳಿದಿದೆ. ಡೀಸೆಲ್ ದರ ₹ 75.48 ರಿಂದ ₹ 69.25ಕ್ಕೆ ಇಳಿಕೆಯಾಗಿದೆ.

ಭಾರತಕ್ಕೇನು ಲಾಭ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾದರೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನೂ ತಗ್ಗಿಸಲಿವೆ. ಹಾಗೆಂದ ಮಾತ್ರಕ್ಕೆ ಗ್ರಾಹಕರಿಗೆ ಅಗ್ಗದ ದರಕ್ಕೆ ಇಂಧನ ದೊರೆಯುವ ನಿರೀಕ್ಷೆ ಇಟ್ಟುಕೊಳ್ಳಲು ಆಗುವುದಿಲ್ಲ. ಏಕೆಂದರೆ, ಸರ್ಕಾರ ಎಕ್ಸೈಸ್‌ ಸುಂಕ ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಕೆಲ ತಿಂಗಳ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ನತ್ತ ಸಾಗುತ್ತಿದೆ.ಭಾರತದ ಅರ್ಥ ವ್ಯವಸ್ಥೆ ಮೇಲೆ ಇದರ ಸಕಾರಾತ್ಮಕ ಪರಿಣಾಮಗಳು ಕಂಡು ಬರಲಿವೆ. ಹಣದುಬ್ಬರ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆರ್‌ಬಿಐ, ಬಡ್ಡಿ ದರ ಹೆಚ್ಚಳ ನಿರ್ಧಾರ ಮುಂದೂಡಲಿದೆ. ವಿತ್ತೀಯ ಕೊರತೆ ಕಡಿಮೆಯಾಗಲಿದೆ.

**

ಉತ್ಪಾದನೆ ತಗ್ಗಿಸಲು ಒಪೆಕ್‌ ಮತ್ತು ರಷ್ಯಾ ವಿಫಲವಾದರೆ ಬ್ರೆಂಟ್ ಬ್ಯಾರೆಲ್‌ಗೆ 50 ಡಾಲರ್‌ಗೆ, ಡಬ್ಲ್ಯುಟಿಐ 40 ಬ್ಯಾರೆಲ್‌ಗೆ ಇಳಿಕೆಯಾಗಲಿದೆ.

-ಫೆರೆಡಮ್ ಫೆಷರಕಿ, ಇಂಧನ ಸಲಹಾ ಸಂಸ್ಥೆ ಎಫ್‌ಜಿಇನ ಅಧ್ಯಕ್ಷ

**

ತೈಲ ದರ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಡಿಸೆಂಬರ್‌ನಲ್ಲಿ ನಡೆಯಲಿರುವ ಜಿ-20 ಮತ್ತು ಒಪೆಕ್ ಸಭೆಗಳ ನಿರ್ಧಾರ ಬಳಿಕ ಅಂದಾಜು ಮಾಡಬಹುದು.

-ಹುಸೇನ್‌ ಸಯ್ಯದ್, ಎಫ್‌ಎಕ್ಸ್‌ಟಿಎಂನ ಮುಖ್ಯ ಮಾರುಕಟ್ಟೆ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT