ಶನಿವಾರ, ಮಾರ್ಚ್ 25, 2023
26 °C

ಮುರಿದುಬಿದ್ದ ಮಾತುಕತೆ, ಕಚ್ಚಾತೈಲ ಬೆಲೆ ಹೆಚ್ಚಳ

ರಾಯಿಟರ್ಸ್/ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್: ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವ ವಿಚಾರವಾಗಿ ಒಮ್ಮತಕ್ಕೆ ಬರುವಲ್ಲಿ ‘ಒಪೆಕ್+’ (ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ರಾಷ್ಟ್ರಗಳ ಒಕ್ಕೂಟ ಹಾಗೂ ಆ ಒಕ್ಕೂಟದ ಮಿತ್ರದೇಶಗಳು) ಸಂಘಟನೆಯು ವಿಫಲವಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ತೀವ್ರ ಹೆಚ್ಚಳ ಆಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು 2018ರ ಅಕ್ಟೋಬರ್‌ನಲ್ಲಿ ಇದ್ದ ಮಟ್ಟಕ್ಕೆ ತಲುಪಿ (ಪ್ರತಿ ಬ್ಯಾರೆಲ್‌ಗೆ 77.84 ಡಾಲರ್), ದಿನದ ಕೊನೆಯಲ್ಲಿ 76.91 ಡಾಲರ್‌ಗೆ ಇಳಿದಿದೆ. ಆಗಸ್ಟ್‌ನಲ್ಲಿ ಪೂರೈಕೆ ಆಗಬೇಕಿರುವ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆಯು 2014ರ ನವೆಂಬರ್‌ ಮಟ್ಟಕ್ಕೆ (ಬ್ಯಾರೆಲ್‌ಗೆ 76.98 ಡಾಲರ್) ಏರಿಕೆ ಕಂಡಿತ್ತು.

ತೈಲ ಉತ್ಪಾದನೆ ಹೆಚ್ಚಿಸುವ ವಿಚಾರವಾಗಿ ಮುಂದಿನ ಮಾತುಕತೆ ಯಾವಾಗ ನಡೆಯಲಿದೆ ಎಂಬುದನ್ನು ಒಪೆಕ್‌+ ದೇಶಗಳು ಪ್ರಕಟಿಸಿಲ್ಲ. ತಾನು ಕಚ್ಚಾ ತೈಲ ಉತ್ಪಾದನೆಯನ್ನು ಜಾಸ್ತಿ ಮಾಡುವುದಾಗಿ ಯುಎಇ (ಸಂಯುಕ್ತ ಅರಬ್ ಸಂಸ್ಥಾನ) ಹೇಳಿದೆ. ‘ಉತ್ಪಾದನೆ ಹೆಚ್ಚಿಸುವ ವಿಚಾರದಲ್ಲಿ ಮಾತುಕತೆ ಮುರಿದುಬಿದ್ದಿರುವುದು ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 80 ಡಾಲರ್‌ಗೆ ತಲುಪಬಹುದು’ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ಸಂಸ್ಥೆ ಅಂದಾಜಿಸಿದೆ.

‘ಜಗತ್ತಿನ ಹಲವೆಡೆ ಕಂಡುಬರುತ್ತಿರುವ ಸ್ಥಿರವಾದ ಆರ್ಥಿಕ ಚೇತರಿಕೆ ಗಮನಿಸಿದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿಯನ್ನು ದಾಟಿದರೂ ಆಶ್ಚರ್ಯವಿಲ್ಲ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ‍ಪರಿಣಾಮ ಬೀರುತ್ತದೆ.

‘ತೈಲ ಬೆಲೆಯು ಈಗಿನ ಮಟ್ಟಕ್ಕಿಂತ ಹೆಚ್ಚಾಗುವುದನ್ನು ನಾವು ಬಯಸುವುದಿಲ್ಲ. ಒಪೆಕ್+ ಒಕ್ಕೂಟದ ಮತ್ತೊಂದು ಸಭೆ ಯಾವಾಗ ಎಂಬುದು ಇನ್ನು ಹತ್ತು ದಿನಗಳಲ್ಲಿ ತೀರ್ಮಾನ ಆಗಬಹುದು’ ಎಂದು ಇರಾಕ್‌ನ ಇಂಧನ ಸಚಿವ ಇಹ್ಸಾನ್ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು