ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆನ್ಸಿ ನಿಗಾ: ಭಾರತಕ್ಕೆ ವಿನಾಯ್ತಿ

ಅಮೆರಿಕದ ಖಜಾನೆ ಇಲಾಖೆಯ ಕ್ರಮ: ಪಟ್ಟಿಯಲ್ಲಿ ಚೀನಾ, ಜಪಾನ್
Last Updated 29 ಮೇ 2019, 18:14 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕವು ತನ್ನ ಪ್ರಮುಖ ವಾಣಿಜ್ಯ ಪಾಲುದಾರ ದೇಶಗಳ ಕರೆನ್ಸಿ ನಿಗಾ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿದೆ.

ಡೊನಾಲ್ಡ್‌ ಟ್ರಂಪ್‌ ಆಡಳಿತ ವ್ಯಕ್ತಪಡಿಸಿದ್ದ ಪ್ರಮುಖ ಕಳವಳ ನಿವಾರಣೆಗೆ ಭಾರತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಅಮೆರಿಕವು 2018ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಭಾರತವನ್ನು ಕರೆನ್ಸಿ ನಿಗಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿತ್ತು. ಪ್ರಶ್ನಾರ್ಹವಾದ ವಿದೇಶಿ ವಿನಿಮಯ ನೀತಿ ಅನುಸರಿಸುವ ಕಾರಣಕ್ಕೆ ಈ ಕ್ರಮ ಕೈಗೊಂಡಿತ್ತು. ಸ್ವಿಟ್ಜರ್ಲೆಂಡ್‌ ಕೂಡ ಭಾರತದ ಜತೆ ಈ ನಿಗಾ ಪಟ್ಟಿಯಿಂದ ಹೊರ ಬಂದಿದೆ.

ಕರೆನ್ಸಿ ನಿಗಾ ಪಟ್ಟಿಯಲ್ಲಿ ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಐರ್ಲೆಂಡ್‌, ಸಿಂಗಪುರ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳಿವೆ.

ಭಾರತವು ಅಮೆರಿಕದ ಜತೆಗಿನ ವಾಣಿಜ್ಯ ವಹಿವಾಟಿನಲ್ಲಿ ಉಳಿತಾಯ ಹೊಂದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮಾನದಂಡಗಳ ಪ್ರಕಾರ, ಭಾರತವು ಗಮನಾರ್ಹ ಪ್ರಮಾಣದಲ್ಲಿ ವಿದೇಶಿ ವಿನಿಮಯ ಮೀಸಲು ಹೊಂದಿದೆ. 2018ರಲ್ಲಿ ಭಾರತ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಗಮನಾರ್ಹವಾಗಿ ತಗ್ಗಿದೆ ಎಂದು ಖಜಾನೆ ಇಲಾಖೆ ತಿಳಿಸಿದೆ.

ಯಾವುದೇ ಒಂದು ದೇಶ ಉದ್ದೇಶಪೂರ್ವಕವಾಗಿ ತನ್ನ ಕರೆನ್ಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ ಅಪಮೌಲ್ಯಗೊಳಿಸಿ ತನ್ನ ರಫ್ತು ಅಗ್ಗಗೊಳಿಸಿ ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಹವಣಿಸುತ್ತದೆ. ಇದರಿಂದ ಇತರ ದೇಶಗಳ ವ್ಯಾಪಾರ ಸಮತೋಲನ ಏರುಪೇರಾಗುತ್ತದೆ.

ಭಾರತದ ಕೇಂದ್ರೀಯ ಬ್ಯಾಂಕ್‌ ಆಗಿರುವ ಆರ್‌ಬಿಐ, 2018ರ ಮೊದಲ ಆರು ತಿಂಗಳಲ್ಲಿ ವಿದೇಶಿ ವಿನಿಮಯ ಮಾರಾಟಕ್ಕೆ ಆದ್ಯತೆ ನೀಡಿತ್ತು. ನಂತರದ ದಿನಗಳಲ್ಲಿ ವಿದೇಶಿ ವಿನಿಮಯದ ನಿವ್ವಳ ಖರೀದಿಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.2ಕ್ಕೆ ಅಥವಾ ₹ 28 ಸಾವಿರ ಕೋಟಿಗೆ ಇಳಿದಿತ್ತು ಎಂದು ಟ್ರಂಪ್‌ ಆಡಳಿತದ ಖಜಾನೆ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT