‘ಒಂದು ಕಾಲದಲ್ಲಿ ಮುಷ್ಟಿ ಹಿಟ್ಟಿಗಾಗಿ ಊರೂರು ಅಲೆದಿದ್ದೆ. ಕೂಲಿನಾಲಿ ಮಾಡಿದೆ, ಕುರಿ–ಮೇಕೆ ಕಾಯ್ದೆ, ಹೊಲಗಳನ್ನು ಉತ್ತಿ ಬಿತ್ತಿದೆ. ಆದರೂ ಬದುಕು ಕೈ ಹಿಡಿಯಲಿಲ್ಲ. ಈಗ ಹೊರಗೆ ಹೊಂಟರೆ ಸಾಕು, ಮೈಮೇಲೆ ಗರಿಗರಿ ಬಟ್ಟೆ. ನಾಲ್ಕೈದು ಕುಟುಂಬಕ್ಕೆ ವರ್ಷವಿಡೀ ಕೆಲಸ ಕೊಟ್ಟಿದ್ದೀನಿ…’

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿಯ ಇದ್ದಿಲು ರಂಗಣ್ಣ ಹೀಗೆ ಹೇಳುವಾಗ ಅವರ ಕಣ್ಣಲ್ಲಿ ಕಾಣಿಸಿದ್ದು ಬರೀ ಭಟ್ಟಿಯ ಬೆಂಕಿಯಲ್ಲ; ಬದುಕು ಕೊಟ್ಟ ಕಸುಬಿನ ಕೃತಜ್ಞತೆ.

ಅವರ ಮನೆಯ ಎದುರು ರಾಶಿ ಹಾಕಿದ ಇದ್ದಿಲಿನ ಚೀಲಗಳು ಕಾಣಿಸುತ್ತವೆ. ದೂರದಲ್ಲಿ ಇನ್ನೊಂದು ಭಟ್ಟಿಯಿಂದ ಹೊಗೆ ಆಕಾಶಕ್ಕೆ ಏರುತ್ತಿರುತ್ತದೆ. ಗಾಳಿಯಲ್ಲಿ ಸುಟ್ಟ ಕಟ್ಟಿಗೆಯ ವಾಸನೆ. ಮಣ್ಣಿನ ಮೇಲೆ ಕರಿಯ ದೂಳು. ಹಗಲು–ರಾತ್ರಿ ಎನ್ನದೇ ಭಟ್ಟಿಯ ಸುತ್ತ ಓಡಾಡುವ ಜನ. ಬಯಲು ಸೀಮೆಯ ಉದ್ದಗಲಕ್ಕೂ ಇಂತಹ ದೃಶ್ಯಗಳು ಈಗ ಸಾಮಾನ್ಯ.

ಒಮ್ಮೆ ಮುಳ್ಳಿನ ಗಿಡವೆಂದು ಕಡೆಗಣಿಸಿದ್ದ ಬಳ್ಳಾರಿ ಜಾಲಿಯೇ ಇಂದು ಸಾವಿರಾರು ಕುಟುಂಬಗಳ ಹೊಟ್ಟೆ ತುಂಬಿಸುವ ಕಪ್ಪು ಬಂಗಾರವಾಗಿದೆ.

ಮಣ್ಣಿನಿಂದ ಮುಚ್ಚಿದ ಗೋಪುರದಂತಿರುವ ಭಟ್ಟಿಯ ತುದಿಯಲ್ಲಿ ಬೆಂಕಿ ಹತ್ತಿದರೆ, ಅದು ಮುಂದಿನ ಹತ್ತು ದಿನ ಆ ಮನೆಯವರ ಉಸಿರಾಗಿಬಿಡುತ್ತದೆ. ಭಟ್ಟಿಯಿಂದ ನಿಧಾನವಾಗಿ ಮೇಲೇಳುವ ಹೊಗೆ, ಸುತ್ತಲಿನ ಕಪ್ಪು ಮಣ್ಣು, ಬೆಂಕಿಯ ಉರಿ, ರಾತ್ರಿ ಪಾಳಿಯಲ್ಲಿ ಭಟ್ಟಿಯ ಕಾವಲು ಕಾಯುವ ಕಸುಬುದಾರರು–ಇವೆಲ್ಲ ಸೇರಿ ಬಯಲು ಸೀಮೆಯಲ್ಲಿ ಒಂದು ವಿಭಿನ್ನ ಲೋಕವನ್ನು ಸೃಷ್ಟಿಸಿವೆ.

ಕೆಲವು ಹಳ್ಳಿಗಳಲ್ಲಿ ಸಂಜೆ ಹೊತ್ತಿಗೆ ದೂರದಿಂದ ನೋಡಿದರೆ, ಹೊಲಗಳ ಮಧ್ಯೆ ಹೊಗೆ ಏಳುವ ಆ ಭಟ್ಟಿಗಳು ಚಿಕ್ಕ ಜ್ವಾಲಾಮುಖಿಗಳಂತೆ ಕಾಣುತ್ತವೆ. ಆ ಹೊಗೆಯ ಹಿಂದೆ ನೂರಾರು ಕುಟುಂಬಗಳ ಬದುಕಿನ ಕಥೆಗಳಿವೆ.

‘ಸೀಮೆ ಜಾಲಿ’ ಎಂದು ಕರೆಯುವ ಈ ಗಿಡ ಮೊದಲು ಬೆಳೆಗೆ ಬೇಲಿ, ಉರುವಲು ಅಥವಾ ಬರಡು ಜಮೀನಿನ ಕಂಟಕ ಎನ್ನುವುದಕ್ಕೆ ಮಾತ್ರ ಸೀಮಿತವಾಗಿತ್ತು. ಹೊಲದ ಬದುವಿನಲ್ಲಿ, ಕೆರೆ ಕಟ್ಟೆಗಳಲ್ಲಿ, ಬೀಳು ಜಾಗಗಳಲ್ಲಿ ಅದು ದಟ್ಟವಾಗಿ ಬೆಳೆದರೆ ರೈತರು ತಲೆಕೆಡಿಸಿಕೊಳ್ಳುತ್ತಿದ್ದರು. ಅದನ್ನು ತೆಗೆಯಲು ಖರ್ಚು ಬೇರೆ. ಆದರೆ ಅದರ ಕಟ್ಟಿಗೆಯನ್ನು ಸುಟ್ಟು ಇದ್ದಿಲು ಮಾಡಿದರೆ ಹೆಚ್ಚು ಆದಾಯ ಸಿಗುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ, ಬಯಲು ಸೀಮೆಯ ಚಿತ್ರವೇ ಬದಲಾಗತೊಡಗಿತು.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಜಾಲಿ ಭಟ್ಟಿಗಳು ಒಂದೊಂದಾಗಿ ತಲೆ ಎತ್ತಿದವು. ಒಂದು ಕಾಲದಲ್ಲಿ ನೆರಳಿಗೂ ಉಪಯೋಗವಿಲ್ಲ ಎನ್ನುತ್ತಿದ್ದ ಜಾಲಿ ಗಿಡ, ಈಗ ಸಾವಿರಾರು ಕುಟುಂಬಗಳ ನೆರಳಾಗಿ ನಿಂತಿದೆ.

ಮೊದಮೊದಲು ಜಾಲಿ ಕಡಿದು ಸಂಗ್ರಹಿಸುವುದೇ ದೊಡ್ಡ ಸಾಹಸವಾಗಿತ್ತು. ಮುಳ್ಳು ತುಂಬಿದ ದಷ್ಟಪುಷ್ಟ ಗಿಡಗಳನ್ನು ಕಡಿಯುವುದು ಎಲ್ಲರಿಗೂ ಬರುತ್ತಿರಲಿಲ್ಲ. ಕೈಕಾಲು ತರಚಿಕೊಳ್ಳುವುದು, ಮುಳ್ಳು ಚುಚ್ಚಿಕೊಳ್ಳುವುದು ಸಾಮಾನ್ಯ. ಆದರೆ ಜೆಸಿಬಿಗಳಿಂದ ಈ ಉದ್ಯಮಕ್ಕೆ ಹೊಸ ತಿರುವು ಸಿಕ್ಕಿತು. ಪೊದೆಯಂತೆ ಬೆಳೆದ ಜಾಲಿಯನ್ನು ಬುಡ ಸಮೇತ ಕಿತ್ತು ಹಾಕುವುದು ಸುಲಭವಾಯಿತು. ಕಟ್ಟಿಗೆ ತುಂಡು ಮಾಡಿ ಭಟ್ಟಿಗೆ ಪೇರಿಸುವುದು ಸರಾಗವಾಯಿತು. ಆಗಿನಿಂದಲೇ ಇದ್ದಿಲು ಉದ್ಯಮ ವಿರಾಟ ರೂಪ ಪಡೆಯತೊಡಗಿತು.

ಒಮ್ಮೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಈ ಕಸುಬು ಈಗ ದೊಡ್ಡ ಜಾಲವಾಗಿ ವಿಸ್ತರಿಸಿದೆ. ಜಾಲಿ ಕಡಿಯುವವರು, ಜೆಸಿಬಿ ಮಾಲೀಕರು, ಕಟ್ಟಿಗೆ ಸಾಗಿಸುವವರು, ಭಟ್ಟಿ ಮಾಡುವವರು, ಇದ್ದಿಲು ಖರೀದಿಸುವ ವ್ಯಾಪಾರಿಗಳು–ಹೀಗೆ ಇದರ ಸುತ್ತ ಒಂದು ಸಂಪೂರ್ಣ ಆರ್ಥಿಕ ಸರಪಳಿಯೇ ಇದೆ. .

ಭಟ್ಟಿ ಹಾಕುವುದೇ ಒಂದು ಕಲೆ. ಮೊದಲು ಸಮತಟ್ಟಾದ ಜಾಗ ಸಿದ್ಧಪಡಿಸುತ್ತಾರೆ. ನಂತರ ಜಾಲಿ ಕಟ್ಟಿಗೆಗಳನ್ನು ಒಂದರ ಮೇಲೆ ಒಂದಾಗಿ ಗೋಪುರದಂತೆ ಜೋಡಿಸುತ್ತಾರೆ. ದೊಡ್ಡ ಕಟ್ಟಿಗೆಗಳಿಂದ ಆರಂಭಿಸಿ ನಿಧಾನವಾಗಿ ಚಿಕ್ಕ ಕಟ್ಟಿಗೆಗಳವರೆಗೆ ಅಚ್ಚುಕಟ್ಟಾಗಿ ಹೊಂದಿಸುತ್ತಾರೆ.

ಆಮೇಲೆ ಅದರ ಮೇಲೆ ಗೋಣಿಚೀಲ, ಪಾರ್ಥೇನಿಯಂ, ಅಡಿಕೆ ಸಿಪ್ಪೆ ಅಥವಾ ತೆಂಗಿನನಾರು ಇವುಗಳಲ್ಲಿ ಯಾವುದಾದರೊಂದನ್ನು ಹರಡಲಾಗುತ್ತದೆ. ಕೊನೆಗೆ ಗಾಳಿ ಒಳನುಸುಳದಂತೆ ಹಸಿ ಮಣ್ಣಿನ ಹೊದಿಕೆ. ಮೇಲೊಂದು ಸಣ್ಣ ಬಾಯಿ ಮಾತ್ರ. ಅಲ್ಲಿಂದ ಬೆಂಕಿ ಒಳಗೆ ಹೋಗುತ್ತದೆ.

ಒಮ್ಮೆ ಬೆಂಕಿ ಹತ್ತಿದರೆ ಭಟ್ಟಿ ಒಳಗೆ ನಿಧಾನವಾಗಿ ಉರಿಯುತ್ತಾ ಹೋಗುತ್ತದೆ. ಹೊರಗೆ ನೋಡಿದರೆ ಮಣ್ಣಿನ ಗುಡ್ಡದಂತೆ ಕಾಣುವ ಭಟ್ಟಿಯೊಳಗೆ ಆಗ ಕಾವೇ ಕಾವು. ಬೆಂಕಿ ಹೆಚ್ಚಾದಂತೆ ಭಟ್ಟಿ ಕುಸಿಯುತ್ತದೆ. ಎಲ್ಲಾದರೂ ಬಿರುಕು ಬಿದ್ದರೆ ಮತ್ತೆ ಕಟ್ಟಿಗೆ ತುಂಬಿ ಮುಚ್ಚಬೇಕು. ಹತ್ತು ದಿನಗಳು ಕಸುಬುದಾರರ ನಿದ್ದೆ ಭಟ್ಟಿಯ ಬಳಿಯೇ ಇರುತ್ತದೆ.

ರಾತ್ರಿ ಹೊತ್ತಿನಲ್ಲಿ ಭಟ್ಟಿಯ ಸುತ್ತ ನಿಂತರೆ ಅಲ್ಲೊಂದು ವಿಚಿತ್ರ ಅನುಭವ. ಒಳಗೆ ಉರಿಯುವ ಬೆಂಕಿಯ ಸದ್ದು. ಸಣ್ಣ ಸಣ್ಣ ಕಿಂಡಿಗಳಿಂದ ಹೊರಬರುವ ಹೊಗೆ. ಕತ್ತಲ ನಡುವೆ ಕೆಂಪಾಗಿ ಹೊಳೆಯುವ ಬೆಂಕಿಯ ಛಾಯೆ. ಭಟ್ಟಿ ಸುಡುವುದು ಇಲ್ಲಿ ಕೇವಲ ಕೆಲಸವಲ್ಲ; ಅದು ಬದುಕಿನ ಜೂಜು.

‘ಭಟ್ಟಿ ಸುಡುವ ದಿನಗಳಲ್ಲಿ ರಾತ್ರಿ ಪೂರ್ತಿ ನಿದ್ದೆ ಬರಲ್ಲ. ಒಂದು ಕಡೆ ಬಿರುಕು ಬಿದ್ದರೂ ಇಡೀ ಶ್ರಮ ಹಾಳಾಗುತ್ತದೆ’ ಎನ್ನುತ್ತಾರೆ ರಂಗಣ್ಣ.

ಕಿಂಡಿಗಳಲ್ಲಿ ಹೊಗೆ ಕಾಣಿಸದಂತೆ ಬೆಂಕಿಯ ನಾಲಿಗೆ ಚಾಚಲು ಆರಂಭಿಸಿದರೆ ಭಟ್ಟಿ ಸುಟ್ಟು ಮುಗಿದಿದೆ ಎಂದರ್ಥ. ನಂತರ ಅದನ್ನು ತಣ್ಣಗಾಗಲು ಬಿಡುತ್ತಾರೆ. ಭಟ್ಟಿ ತೆರೆದ ಕ್ಷಣ ಕಪ್ಪು ಹೊಳಪಿನ ಇದ್ದಿಲು ಹೊರಗೆ ಕಾಣಿಸಿದರೆ, ಅದೇ ಅವರ ಪಾಲಿನ ಬೆಳಕು.

ಒಂದೇ ಒಂದು ಕೆಂಡ ಉಳಿದರೂ ಇಡೀ ಗೂಡು ಬೂದಿಯಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಕೆಲವರು ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ಒಣ ಇದ್ದಿಲು ಬೇಕಾದರೆ ರಾತ್ರಿ ವೇಳೆಯಲ್ಲೇ ಭಟ್ಟಿ ಕೆದರಿ ಇದ್ದಿಲನ್ನು ತೆಳುವಾಗಿ ಹರಡಿ ಆರಿಸುತ್ತಾರೆ.

ಈಗ ಜಾಲಿ ಇದ್ದಿಲಿಗೆ ದೇಶ–ವಿದೇಶಗಳಲ್ಲಿ ಭಾರಿ ಬೇಡಿಕೆ. ಹೀಗಾಗಿ ಜಾಲಿ ಗೂಡು ಹಾಕುವವರ ನಡುವೆ ಸ್ಪರ್ಧೆಯೂ ಹೆಚ್ಚಿದೆ. ಜಮೀನಿನ ಬದುವು, ಕೆರೆ ಕಟ್ಟೆ, ಹಳ್ಳ–ಕೊಳ್ಳ, ಬೀಳು ಜಾಗ–ಎಲ್ಲೆಲ್ಲಿ ಜಾಲಿ ಬೆಳೆದಿದೆಯೋ ಅಲ್ಲಿ ಇವರ ಕಣ್ಣು.

ಬೈಕ್ ಏರಿ ನಿತ್ಯ ಹಳ್ಳಿಹಳ್ಳಿ ಸುತ್ತುವವರಿದ್ದಾರೆ. ಕೆಲವರು ದಿನಕ್ಕೆ ನೂರಾರು ಕಿಲೋಮೀಟರ್ ಸುತ್ತಿ ಜಾಲಿ ಹುಡುಕುತ್ತಾರೆ. ಜಮೀನಿನ ಮಾಲೀಕರ ಜೊತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಕೆಲವರು ಸ್ಥಳದಲ್ಲೇ ಭಟ್ಟಿ ಹಾಕುತ್ತಾರೆ.

ಕೆಲವರು ಕಟ್ಟಿಗೆ ಸಾಗಿಸಿಕೊಂಡು ಹೋಗುತ್ತಾರೆ. ಇದರಲ್ಲಿ ಎರಡೂ ಕಡೆಯವರಿಗೆ ಲಾಭ. ರೈತರಿಗೆ ಹಣ ಖರ್ಚಿಲ್ಲದೆ ಜಮೀನು ಸ್ವಚ್ಛವಾಗುತ್ತದೆ. ಇದ್ದಿಲು ಕಸುಬುದಾರರಿಗೆ ಕಚ್ಚಾ ವಸ್ತು ಸಿಗುತ್ತದೆ. ಕೆಲವೆಡೆ ಜಾಲಿ ದಟ್ಟವಾಗಿದ್ದರೆ ಮಾಲೀಕರಿಗೆ ಹಣವೂ ಕೊಡಲಾಗುತ್ತದೆ.

ಒಮ್ಮೆ ಕೃಷಿ ಬಿಟ್ಟು ಬೀಳಾಗಿದ್ದ ಜಮೀನುಗಳು ಈಗ ಮತ್ತೆ ಹಸಿರಾಗುತ್ತಿವೆ.

‘ಜಾಲಿ ಕಿತ್ತು ಹೊಲ ಕ್ಲೀನ್ ಮಾಡಿಕೊಟ್ಟರು. ಈಗ ಅದೇ ಹೊಲದಲ್ಲಿ ಅಡಿಕೆ ಫಸಲು ಬರುತ್ತಿದೆ…’ ಎಂದು ಜಗಳೂರಿನ ಬಾಳೆಕಾಯಿ ಶಿವಣ್ಣ ಸಂತೋಷದಿಂದ ಹೇಳುತ್ತಾರೆ.

ಇಂತಹ ನೂರಾರು ಎಕರೆ ಜಮೀನು ಮತ್ತೆ ಕೃಷಿಗೆ ಮರಳಿದೆ. ಕೆಲವೆಡೆ ಸಜ್ಜೆ, ಜೋಳ, ಕಡಲೆ ಮತ್ತೆ ಬೆಳೆದು ನಿಂತಿವೆ. ಮುಳ್ಳಿನ ಕಾಡಾಗಿದ್ದ ಜಾಗಗಳಲ್ಲಿ ಈಗ ಹಸಿರು ಕಾಣುತ್ತಿದೆ.

ಬಯಲು ಸೀಮೆಯಲ್ಲಿ ಮಳೆಗಾಲ ಮುಗಿದರೆ ಗುಳೆ ಹೋಗುವುದು ಸಾಮಾನ್ಯ. ಬೆಂಗಳೂರಿನಿಂದ ಕಾಫಿ ತೋಟಗಳವರೆಗೆ ಕೆಲಸಕ್ಕಾಗಿ ಜನ ಅಲೆದಾಡುತ್ತಿದ್ದರು. ಆದರೆ ಈಗ ಹಲವೆಡೆ ಇದ್ದಿಲು ಭಟ್ಟಿಗಳೇ ಅವರಿಗೆ ವರ್ಷಪೂರ್ತಿ ಕೆಲಸ ಕೊಡುತ್ತಿವೆ.

ಕಟ್ಟಿಗೆ ಹೊರುವುದು, ಭಟ್ಟಿಗೆ ಪೇರಿಸುವುದು, ಇದ್ದಿಲು ವಿಂಗಡಿಸುವುದು, ಚೀಲ ತುಂಬುವುದು–ಹೀಗೆ ಮಹಿಳೆಯರಿಗೂ ಸಾಕಷ್ಟು ಕೆಲಸ ಸಿಕ್ಕಿದೆ. ಭಟ್ಟಿಯ ಪಕ್ಕದಲ್ಲಿ ಮಕ್ಕಳ ಆಟ, ಒಲೆಯ ಮೇಲೆ ಕುದಿಯುವ ಚಹಾ, ಮತ್ತೊಂದೆಡೆ ಕಪ್ಪು ದೂಳಿನ ನಡುವೆ ದುಡಿಯುವ ಮಹಿಳೆಯರು. ಇದು ಇಲ್ಲಿನ ಹೊಸ ಜೀವನಶೈಲಿ.

ಹಲವರು ಮೊದಲು ಕೂಲಿಕಾರರಾಗಿದ್ದು, ಈಗ ಸ್ವಂತ ಭಟ್ಟಿಯ ಮಾಲೀಕರಾಗಿದ್ದಾರೆ. ಕೆಲವು ಕುಟುಂಬಗಳು ಈ ಉದ್ಯಮದಿಂದ ಮನೆ ಕಟ್ಟಿಕೊಂಡಿವೆ. ಮಕ್ಕಳನ್ನು ಕಾಲೇಜಿಗೆ ಕಳಿಸುತ್ತಿವೆ.

ಈ ಉದ್ಯಮ ಸ್ಥಳೀಯರಷ್ಟೇ ಅಲ್ಲ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದ ಕಾರ್ಮಿಕರಿಗೂ ಉದ್ಯೋಗ ಒದಗಿಸಿದೆ. ಕೆಲವರು ಕುಟುಂಬ ಸಮೇತ ತಿಂಗಳುಗಟ್ಟಲೆ ಭಟ್ಟಿ ಪಕ್ಕದಲ್ಲೇ ತಾತ್ಕಾಲಿಕ ಶಿಬಿರ ಹಾಕಿಕೊಂಡು ಬದುಕುತ್ತಾರೆ.

ಜಾಲಿ ಇದ್ದಿಲಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವಿದೆ. ಇದು ಗಟ್ಟಿಯಾಗಿರುತ್ತದೆ, ಆದರೆ ಹಗುರ. ಹೆಚ್ಚು ಹೊಗೆ ಬರುವುದಿಲ್ಲ. ಬೇಗ ಬೆಂಕಿ ಹಿಡಿಯುತ್ತದೆ. ಹೆಚ್ಚು ಹೊತ್ತು ಉರಿಯುತ್ತದೆ. ಶಾಖವೂ ಹೆಚ್ಚು. ಹೀಗಾಗಿ ಮನೆ, ಹೋಟೆಲ್, ತಂದೂರಿ ಅಡುಗೆ, ಇಸ್ತ್ರಿ, ಕೋಳಿ ಫಾರಂ, ಅರ್ಥಿಂಗ್, ಫೇಸ್ ಕ್ರೀಮ್ ತಯಾರಿ–ಹೀಗೆ ಅನೇಕ ಕಡೆ ಬಳಕೆ ಇದೆ. ಗಲ್ಫ್ ದೇಶಗಳಿಂದ ಹಿಡಿದು ಶ್ರೀಲಂಕಾ, ನೆದರ್ಲೆಂಡ್ಸ್ವರೆಗೆ ಇದರ ಬೇಡಿಕೆ ಹರಡಿದೆ.

ಒಂದು ಟನ್ ಜಾಲಿ ಕಟ್ಟಿಗೆಯಿಂದ ಸುಮಾರು 400 ಕೆ.ಜಿ. ಇದ್ದಿಲು ಸಿಗುತ್ತದೆ. ದೊಡ್ಡದು, ಮಧ್ಯಮ, ಪುಡಿ ಎಂದು ವರ್ಗೀಕರಿಸಿ ಬೇರೆ ಬೇರೆ ಬೆಲೆಗೆ ಮಾರಾಟ ಮಾಡುತ್ತಾರೆ. ಉತ್ತಮ ಗುಣಮಟ್ಟದ ಇದ್ದಿಲಿಗೆ ಹೆಚ್ಚು ಬೆಲೆ ಸಿಗುತ್ತದೆ.

ಇತ್ತೀಚಿನ ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನ ನಂತರ ಎಲ್ಪಿಜಿ ಕೊರತೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವಾರು ಹೋಟೆಲ್ಗಳು ಮತ್ತೆ ಇದ್ದಿಲಿಗೆ ಮೊರೆ ಹೋಗಿವೆ. ಇದರಿಂದ ಬೆಲೆ ಏರಿದೆ. ಈಗ ಮಧ್ಯವರ್ತಿಗಳ ಬದಲು ಗ್ರಾಹಕರು ನೇರವಾಗಿ ಉತ್ಪಾದಕರನ್ನು ಸಂಪರ್ಕಿಸುತ್ತಿದ್ದಾರೆ.

ಅಕ್ರಮಣಕಾರಿ ಸಸ್ಯವೆಂದು ಹೆಸರಾಗಿರುವ ಸೀಮೆ ಜಾಲಿ, ಕಿತ್ತರೂ ಮತ್ತೆ ಬೆಳೆಯುತ್ತದೆ. ಸಾವಿರಾರು ಟನ್ ಇದ್ದಿಲು ಉತ್ಪಾದನೆಯಾಗುತ್ತಿದ್ದರೂ ಜಾಲಿಗೆ ಕೊರತೆ ಇಲ್ಲ. ಕುರಿ–ಮೇಕೆಗಳೇ ಇದರ ಬೀಜ ಹರಡುವ ಪ್ರಮುಖ ವಾಹಕರು.

ಆದರೆ ಈ ಜಾಲಿಯ ಕಥೆ ಇಲ್ಲಿಗಷ್ಟೇ ಸೀಮಿತವಲ್ಲ. ಅಮೆರಿಕದಿಂದ ತರಿಸಲಾದ ಈ ಸಸ್ಯವನ್ನು, ಬರಡು ನೆಲದ ಹಸಿರೀಕರಣ, ಕಟ್ಟಿಗೆ ಸಮಸ್ಯೆ ಪರಿಹಾರ ಮತ್ತು ಮರಳು ಕೊಚ್ಚುವಿಕೆ ತಡೆಯುವ ಉದ್ದೇಶದಿಂದ ದಶಕಗಳ ಹಿಂದೆ ಬಿತ್ತಲಾಗಿತ್ತು. ಈಗ ಅದೇ ಜಾಲಿ ಬಯಲು ಸೀಮೆಯ ಆರ್ಥಿಕತೆಯ ಭಾಗವಾಗಿ ಬೆಳೆದಿದೆ.

ಇದರ ಹೂವು ಜೇನುನೊಣಗಳಿಗೆ ಆಹಾರ. ಕಾಯಿ ಕುರಿ–ಮೇಕೆಗಳಿಗೆ ಇಷ್ಟ. ಕೆಲವು ಸಂಶೋಧಕರು ಇದರ ಔಷಧೀಯ ಗುಣಗಳ ಮೇಲೂ ಅಧ್ಯಯನ ನಡೆಸಿದ್ದಾರೆ. ಒಮ್ಮೆ ರೈತರ ಪಾಲಿಗೆ ಶಾಪವೆನಿಸಿದ್ದ ಮುಳ್ಳಿನ ಜಾಲಿಯೇ, ಇಂದು ಸಾವಿರಾರು ಬಡ ಕುಟುಂಬಗಳ ಒಲೆ ಹೊತ್ತಿಸುವ ಇಂಧನವಾಗಿದೆ. ಭಟ್ಟಿಯ ಬೆಂಕಿಯಲ್ಲಿ ಸುಡುವುದು ಕೇವಲ ಕಟ್ಟಿಗೆಯಲ್ಲ–ಬಡತನವೂ ಹೌದು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-1720178505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.