ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತಾಯಿಯ ಹೆಸರಿನಲ್ಲಿ ಠೇವಣಿ ಮಾಡಬಹುದೇ ತಿಳಿಸಿರಿ

Last Updated 6 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಪ್ರಭಾಕರ, ಕಾರವಾರ

ನನ್ನ ಮಗನ ಹಾಗೂ ನನ್ನ ಪತ್ನಿಯ ಹೆಸರಿನಲ್ಲಿರುವ ಠೇವಣಿ ಅವಧಿ ಮುಗಿದಿದ್ದರಿಂದ ಎರಡೂ ಠೇವಣಿಗಳ ಹಣವನ್ನು ಮಗನ ಹೆಸರಿನಲ್ಲಿ ಇರಿಸಿದ್ದೇನೆ.₹ 200ಬಾಂಡ್‌ ಪೇಪರಿನಲ್ಲಿ Gift Deed ಮಾಡಿದ್ದೇನೆ. ಅವಧಿ ಮುಗಿದ ಒಂದು ವರ್ಷದ ನಂತರ ಅವನು ತನ್ನ ತಾಯಿಯ ಹೆಸರಿನಲ್ಲಿ ಠೇವಣಿ ಮಾಡಬಹುದೇ ತಿಳಿಸಿರಿ. ತೆರಿಗೆ ಬಂದರೆ ತಿಳಿಸಿರಿ.

ಉತ್ತರ: ನೀವು ಗಿಪ್ಟ್‌ ಡೀಡ್ ಮಾಡಿರುವುದು ತಪ್ಪಲ್ಲ. ನಿಮ್ಮ ಮಗ ಅಥವಾ ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸಿರುವುದರಿಂದ ಯಾವ ತಾಪತ್ರಯವೂ ಇಲ್ಲ. ನಿಮ್ಮ ಹೆಸರಿನಲ್ಲಿ ಇರಿಸಿ, ನಾಮ ನಿರ್ದೇಶನ ಮಾಡಿದರೂ ಸಾಕಾಗುತ್ತಿತ್ತು. ರಕ್ತ ಸಂಬಂಧದೊಳಗೆ ಹಣ, ಆಸ್ತಿ ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುವಾಗ ತೆರಿಗೆ ಬರುವುದಿಲ್ಲ. ಠೇವಣಿ ಅವಧಿ ಮುಗಿದ ನಂತರ ಮಗನು ತಾಯಿಯ ಹೆಸರಿನಲ್ಲಿ ಠೇವಣಿ ಮಾಡಬಹುದು. ಇದರಿಂದ ತೆರಿಗೆ ಬರುವುದಿಲ್ಲ.

*ಕೆ.ವಿ. ರಾಮಗುಂಡಿ, ಬೈಲಹೊಂಗಲ

ಸ್ಟ್ಯಾಂಡರ್ಡ್ ಡಿಡಕ್ಷನ್ ಪಿಂಚಣಿ ಪಡೆಯದವರಿಗೆ ಲಭ್ಯವಿದೆಯೇ. ಎಷ್ಟು ವಿನಾಯಿತಿ ಸಿಗಲಿದೆ ಹಾಗೂ ಯಾವ ಸೆಕ್ಷನ್, ದಯಮಾಡಿ ತಿಳಿಸಿರಿ.

ಉತ್ತರ: ಸ್ಟ್ಯಾಂಡರ್ಡ್ ಡಿಡಕ್ಷನ್ 2018–19 ರಲ್ಲಿ₹ 40,000 ಇತ್ತು. 2019–20 ರಲ್ಲಿ₹ 50,000ಕ್ಕೆ ಹೆಚ್ಚಿಸಲಾಗಿದೆ. ಇದು ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಮಾತ್ರ ಲಭ್ಯ. ಸೆಕ್ಷನ್ 16 ಅಡಿಯಲ್ಲಿ ವಿನಾಯ್ತಿ ಪಡೆಯಬಹುದು.

* 8 ರಾಘವೇಂದ್ರ ರಾವ್, ರಾಯಚೂರು

2019ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ₹ 5 ಲಕ್ಷ ಆದಾಯದ ತನಕ ತೆರಿಗೆ ವಿನಾಯ್ತಿ ಇದೆ. ನನಗೆ 81 ವರ್ಷಗಳಾಗಿವೆ. ನನಗೆ ಹೆಚ್ಚಿನ ವಿನಾಯಿತಿ ಇದೆಯೇ ತಿಳಿಸಿರಿ.

ಉತ್ತರ: 2019 ಫೆಬ್ರವರಿ–ಜುಲೈದಲ್ಲಿ ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಹಿಳೆಯರು, ಅತಿ ಹಿರಿಯ ನಾಗರಿಕರು ಎನ್ನುವ ಭೇದವಿಲ್ಲದೆ, ಆದಾಯ ತೆರಿಗೆಗೆ ಒಳಗಾಗುವ ಯಾವುದೇ ವ್ಯಕ್ತಿಯಾದರೂ, ಗರಿಷ್ಠ₹ 5 ಲಕ್ಷ ಆದಾಯದ ತನಕ ತೆರಿಗೆ ವಿನಾಯಿತಿ ಪಡೆಯಬಹುದು. ಒಟ್ಟಿನಲ್ಲಿ ನಿಮ್ಮ ಮಿತಿ₹ 5 ಲಕ್ಷ ಮಾತ್ರ. 80 ವರ್ಷದ ಸೂಪರ್ ಸೀನಿಯರ್ ನಾಗರಿಕರಿಗೆ ಹೆಚ್ಚಿನ ವಿನಾಯಿತಿ ಇರುವುದಿಲ್ಲ.

* ಹೆಸರು ಬೇಡ, ಬೆಂಗಳೂರು

ನಾನು ಪಿಂಚಣಿದಾರ. ಮಾಸಿಕ ಪಿಂಚಣಿ₹ 25,800. ನನ್ನ ಸ್ವಯಾರ್ಜಿತ ಆಸ್ತಿ₹ 45 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಇದರಿಂದ ಒಂದು ಕಾರು ಕೊಂಡಿದ್ದೇನೆ. ಉಳಿದ ಹಣ ನನ್ನ ಹೆಂಡತಿ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಬಹುದೇ. ಈ ವ್ಯವಹಾರದಲ್ಲಿ ತೆರಿಗೆ ಬಂದರೆ ತಿಳಿಸಿ.

ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡಿ ಬರುವ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆ. ತೆರಿಗೆ ಉಳಿಸಲು ಮತ್ತೊಂದು ಮನೆ ಕೊಳ್ಳಬಹುದು ಅಥವಾ ಸರ್ಕಾರಿ ಸ್ವಾಮ್ಯದ NHIA - REC ಬಾಂಡ್‌ಗಳಲ್ಲಿ 5 ವರ್ಷಗಳ ಅವಧಿಗೆ ತೊಡಗಿಸಬಹುದು. ಕಾರು ಕೊಂಡರೆ ಅಥವಾ ಹೆಂಡತಿ ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಿದರೆ, ತೆರಿಗೆ ಉಳಿಸಲು ಬರುವುದಿಲ್ಲ. ನೀವು ಆಸ್ತಿ ಮಾರಾಟ ಮಾಡಿ ಬಂದಿರುವ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ತುಂಬ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT