ಶನಿವಾರ, ಆಗಸ್ಟ್ 8, 2020
24 °C
ಹಳೆ ಕಾರ್ಡ್‌ನ ಗಡುವು 31ಕ್ಕೆ ಅಂತ್ಯ

ಚಿಪ್‌ ಕಾರ್ಡ್‌ ಪಡೆಯಲು ಪರದಾಟ: ಹೊಸ ಕಾರ್ಡ್‌ ಸಿಗದವರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಇದೇ 31ರ ಒಳಗೆ ಚಿಪ್‌ ಆಧಾರಿತ ಡೆಬಿಟ್‌ ಕಾರ್ಡ್‌ ಪಡೆಯುವಂತೆ ಬ್ಯಾಂಕ್‌ಗಳು ಗ್ರಾಹಕರಿಗೆ ಸೂಚನೆ ನೀಡಿವೆ. ಆದರೆ, ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕಾರ್ಡ್‌ ನೀಡಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಕೆಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಡಿಸೆಂಬರ್ 31ಕ್ಕೆ ಗಡುವು ಮುಗಿಯಲಿದೆ. ಆದರೆ ಹೊಸ ಕಾರ್ಡ್‌ ಬರುವ ಸೂಚನೆಯೇ ಇಲ್ಲ. ಹಳೆಯ ಕಾರ್ಡ್‌ ಬ್ಲಾಕ್‌ ಆದರೆ, ಹಣ ಪಡೆಯಲು ಏನು ಮಾಡುವುದು ಎನ್ನುವ ಆತಂಕ ಗ್ರಾಹಕರದ್ದು.

‘ಕಚೇರಿ ವಿಳಾಸಕ್ಕೆ ಕಾರ್ಡ್‌ ಕಳುಹಿಸಿರುವುದಾಗಿ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು. ಆದರೆ, ಕಚೇರಿಗೆ ಬಂದಿರಲಿಲ್ಲ. ಕೊನೆಗೆ ನೆಟ್ ಬ್ಯಾಂಕಿಂಗ್‌ ಮೂಲಕ ವಿಳಾಸವನ್ನು ದೃಢೀಕರಿಸಿದಾಗ, ಎರಡು ದಿನ ಬಿಟ್ಟು ಮನೆ ವಿಳಾಸಕ್ಕೆ ಕಾರ್ಡ್‌ ಬಂದಿದೆ’ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕ, ಬೆಂಗಳೂರಿನ ವಿನಾಯಕನಗರದ ಗಿರೀಶ್‌ ಸಮಸ್ಯೆ ತೋಡಿಕೊಂಡಿದ್ದಾರೆ.

‘ಕಾರ್ಡ್‌ ವಿತರಣೆ ಆಗಿದೆ ಎಂದು ಮೊಬೈಲ್‌ ನಂಬರ್‌ಗೆ ಸಂದೇಶ ಬಂದಿದೆ. ಆದರೆ, ನನಗಂತೂ ಸಿಕ್ಕಿಲ್ಲ. ಶಾಖೆಯಲ್ಲಿ ವಿಚಾರಿಸಿದರೆ, ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಎಂದು ಹೇಳುತ್ತಾರೆ. ಅಲ್ಲಿಗೆ ಕರೆ ಮಾಡಿದರೆ, ಸಿಬ್ಬಂದಿ ಬೇರೊಂದು ನಂಬರ್‌ಗೆ ಸಂಪರ್ಕಿಸುವಂತೆ ಹೇಳುತ್ತಿದ್ದಾರೆ. ಆ ನಂಬರ್‌ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕ, ಬೆಂಗಳೂರಿನ ಬಾಪೂಜಿ ನಗರದ ಶಿವಕುಮಾರ್.

‘ಹೊಸ ಕಾರ್ಡ್ ಪಡೆದಿದ್ದೇನೆ. ಆದರೂ ಕಾರ್ಡ್‌ ಬದಲಾಯಿಸಿಕೊಳ್ಳುವಂತೆ ಮೊಬೈಲ್‌ಗೆ ಸಂದೇಶ ಬರುತ್ತಿದೆ. ಆತಂಕದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೆ, ಸಂದೇಶ ಕಳುಹಿಸುವ ವ್ಯವಸ್ಥೆ ಸ್ವಯಂಚಾಲಿತವಾಗಿದೆ. ಹೀಗಾಗಿ ಸಂದೇಶ ಬರುತ್ತಿದೆ ಎಂದು ಹೇಳಿದ್ದಾರೆ’ ಎಂದು ಕೆನರಾ ಬ್ಯಾಂಕ್‌ ಗ್ರಾಹಕರೊಬ್ಬರು ಸಮಸ್ಯೆ ಹೇಳಿಕೊಂಡರು.

ವ್ಯವಸ್ಥೆಯೇ ಸರಿ ಇಲ್ಲ: ವಿಜಯ ಬ್ಯಾಂಕ್‌ನಲ್ಲಿ ಕಾರ್ಡ್‌ ಬದಲಾಯಿಸಲು ಅರ್ಜಿ ನೀಡುವ ಅಗತ್ಯವೇ ಇಲ್ಲ. ಶಾಖೆಗೆ ಹೋದರೆ ಅಲ್ಲಿ ಗ್ರಾಹಕರ ಪಾಸ್‌ಬುಕ್‌ ಪಡೆದು, ಹಳೆ ಕಾರ್ಡ್‌ ಪಡೆದು, ಹೊಸ ಕಾರ್ಡ್‌ ಮತ್ತು ಅದರ ಪಾಸ್‌ವರ್ಡ್‌ ನೀಡುತ್ತಾರೆ. ಆದರೆ ಕೆನರಾ, ಎಸ್‌ಬಿಐನಲ್ಲಿ ಇಂತಹ ವ್ಯವಸ್ಥೆ ಇಲ್ಲ. ಅರ್ಜಿ ಕೊಟ್ಟು, ಒಂದು ವಾರ, 15 ದಿನವಾದ ಮೇಲೆ ವಿಳಾಸಕ್ಕೆ ಕಾರ್ಡ್‌ ಬರುತ್ತದೆ. ಬ್ಯಾಂಕ್‌ಗಳೇ ಕಾರ್ಡ್‌ ಬದಲಾಯಿಸುತ್ತಿವೆ. ಹೀಗಿರುವಾಗ ಮುಂಚಿತವಾಗಿಯೇ ಕಾರ್ಡ್‌ಗಳನ್ನು ತಂದಿಟ್ಟುಕೊಂಡು ಗ್ರಾಹಕರಿಗೆ ವಿತರಿಸಬಾರದೇಕೆ ಎನ್ನುವುದು ಬಹಳಷ್ಟು ಗ್ರಾಹಕರ ಪ್ರಶ್ನೆಯಾಗಿದೆ.

‘ಅವಧಿ ವಿಸ್ತರಿಸಲು ಆರ್‌ಬಿಐಗೆ ಮನವಿ’
‘ಬದಲಾಯಿಸಬೇಕಿರುವ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಅವಧಿ ವಿಸ್ತರಿಸುವಂತೆ ಆರ್‌ಬಿಐಗೆ ಮನವಿ ಮಾಡಲಾಗಿದೆ’ ಎಂದು ಎಸ್‌ಬಿಐನ ಚಿಲ್ಲರೆ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಕುಮಾರ್‌ ಗುಪ್ತಾ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು