ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ಒಟ್ಟು 6,084 ಪ್ರಕರಣಗಳನ್ನು ಭೇದಿಸಿ, ₹2.01 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆಯನ್ನು ಪತ್ತೆ ಹಚ್ಚಿದೆ. ಈ ಪೈಕಿ ₹26,605 ಕೋಟಿಯನ್ನು ವಂಚನೆ ಎಸಗಿದವರು ಮರುಪಾವತಿಸಿದ್ದಾರೆ.
ಆನ್‌ಲೈನ್ ಗೇಮಿಂಗ್, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‌ಎಸ್‌ಐ), ಕಬ್ಬಿಣ, ತಾಮ್ರ ಹಾಗೂ ಮಿಶ್ರಲೋಹದ ಸರಕು ವಲಯದಲ್ಲಿ ಅತಿಹೆಚ್ಚು ವಂಚನೆ ನಡೆದಿದೆ ಎಂದು ಡಿಜಿಜಿಐ ವಾರ್ಷಿಕ ವರದಿ ತಿಳಿಸಿದೆ.
2022–23ರಲ್ಲಿ ಒಟ್ಟು 4,872 ಪ್ರಕರಣಗಳಲ್ಲಿ ₹1.01 ಲಕ್ಷ ಕೋಟಿ ವಂಚನೆಯನ್ನು ಬಯಲಿಗೆ ಎಳೆದಿತ್ತು. ಈ ಪೈಕಿ ₹20,713 ಕೋಟಿಯನ್ನು ವಂಚನೆ ಎಸಗಿದವರು ಮರುಪಾವತಿದ್ದಾರೆ ಎಂದು ಹೇಳಿದೆ.
2023–24ರಲ್ಲಿ ಆನ್‌ಲೈನ್ ಗೇಮಿಂಗ್ ವಲಯದಲ್ಲಿ ₹81,875 ಕೋಟಿ ಮೊತ್ತದ 78 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಬಿಎಫ್‌ಎಸ್‌ಐ ವಲಯದಲ್ಲಿ 171 ಪ್ರಕರಣ ದಾಖಲಿಸಿ, ₹18,961 ಕೋಟಿ ವಂಚನೆಯನ್ನು ಪತ್ತೆ ಹಚ್ಚಲಾಗಿದೆ. ಕೆಲಸ ಗುತ್ತಿಗೆ ಮತ್ತು ಸೇವಾ ವಲಯದಲ್ಲಿ ₹40 ಕೋಟಿ ಹಾಗೂ ಔಷಧ ತಯಾರಿಕೆ ವಲಯದಲ್ಲಿ ₹2,846 ಕೋಟಿ ವಂಚನೆಯನ್ನು ಬಯಲಿಗೆ ಎಳೆಯಲಾಗಿದೆ ಎಂದು ವಿವರಿಸಿದೆ.
ಕಬ್ಬಿಣ, ತಾಮ್ರ ಹಾಗೂ ಮಿಶ್ರಲೋಹ ವಲಯದಲ್ಲಿ ₹16,806 ಕೋಟಿ ವಂಚನೆ ನಡೆದಿದೆ. ಪಾನ್ ಮಸಾಲಾ, ತಂಬಾಕು, ಸಿಗರೇಟ್, ಬೀಡಿ ತಯಾರಿಕೆ ವಲಯದಲ್ಲಿ ₹5,794 ಕೋಟಿ ಮೊತ್ತದ ವಂಚನೆಯನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದೆ.
2017–18ರಲ್ಲಿ ₹7,879 ಕೋಟಿ, 2018–19ರಲ್ಲಿ ₹19,319 ಕೋಟಿ, 2019–20ರಲ್ಲಿ ₹21,739 ಕೋಟಿ, 2020–21ರಲ್ಲಿ ₹31,908 ಕೋಟಿ ಹಾಗೂ 2021–22ರಲ್ಲಿ ₹50,325 ಕೋಟಿ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.