ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವರ್ಷಗಳಲ್ಲಿ ಎಲ್‌ಪಿಜಿ ದರ ದುಪ್ಟಟ್ಟು: ಪ್ರಧಾನ್

Last Updated 8 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಎಲ್‌ಪಿಜಿ ಸಿಲಿಂಡರ್ ದರವು ಕಳೆದ ಏಳು ವರ್ಷಗಳಲ್ಲಿ ದುಪ್ಪಟ್ಟಾಗಿದ್ದು ₹ 819ಕ್ಕೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳವು, ಆದಾಯ ಸಂಗ್ರಹವನ್ನು ಶೇ 459ರಷ್ಟು ಏರಿಕೆ ಮಾಡಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ 14.2 ಕೆ.ಜಿಯ ಸಿಲಿಂಡರ್ ದರವು ₹ 822 ಇದೆ.

ಇಂಧನ ದರ ಏರಿಕೆಯ ಕುರಿತ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ‘2014ರ ಮಾರ್ಚ್ 1ರಂದು 14.2 ಕೆ.ಜಿಯ ಎಲ್‌ಪಿಜಿ ಸಿಲಿಂಡರಿನ ರಿಟೇಲ್‌ ಮಾರಾಟ ದರವು ₹ 410.5 ಇತ್ತು. 2020ರ ಡಿಸೆಂಬರ್‌ನಲ್ಲಿ ₹ 594ರಷ್ಟಿತ್ತು. ಅದು ಸದ್ಯ ₹ 819ಕ್ಕೆ ಏರಿಕೆಯಾಗಿದೆ’ ಎಂದು ವಿವರಿಸಿದರು.

ಸೀಮೆ ಎಣ್ಣೆ ದರವು 2014ರ ಮಾರ್ಚ್‌ನಲ್ಲಿ ಒಂದು ಲೀಟರಿಗೆ ₹ 14.96 ಇತ್ತು. ಸದ್ಯ ₹ 35.35ರಷ್ಟಿದೆ.

2013ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆಯಿಂದ ಒಟ್ಟಾರೆ ₹ 52,537 ಕೋಟಿ ಸಂಗ್ರವಾಗಿತ್ತು. 2019–20ರಲ್ಲಿ ಅದು ₹ 2.13 ಲಕ್ಷ ಕೋಟಿಗೆ ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದ 11 ತಿಂಗಳಿನಲ್ಲಿ ₹ 2.94 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌, ಎಟಿಎಫ್‌, ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲವನ್ನೂ ಒಳಗೊಂಡು ಕೇಂದ್ರದ ಒಟ್ಟಾರೆ ಎಕ್ಸೈಸ್‌ ಸುಂಕ ಸಂಗ್ರಹವು 2016–17ರಲ್ಲಿ ₹ 2.37 ಲಕ್ಷ ಕೋಟಿಗಳಷ್ಟಿತ್ತು. 2020–21ರ ಏಪ್ರಿಲ್‌–ಜನವರಿ ಅವಧಿಯಲ್ಲಿ ₹ 3.01 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಪ್ರಧಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT