ಗುರುವಾರ , ಆಗಸ್ಟ್ 22, 2019
23 °C
ವಜ್ರಾಭರಣದತ್ತ ಹೆಚ್ಚುತ್ತಿರುವ ಒಲವು

ವಜ್ರ:ಹೆಚ್ಚುತ್ತಿರುವ ಒಲವು

Published:
Updated:

‘ವಜ್ರವು ಚಿರಂತನವಾದದ್ದು..’ – ಇದು ಜಾಗತಿಕ ವಜ್ರಾಭರಣ ವಹಿವಾಟಿನ ಪ್ರಮುಖ ಸಂಸ್ಥೆಯಾಗಿರುವ ಇಂಗ್ಲೆಂಡ್‌ನ ‘ಡಿ ಬೀರ‍್ಸ ಗ್ರೂಪ್‌ನ’ (De Beers Group) ಧ್ಯೇಯವಾಕ್ಯವಾಗಿದೆ. ಜಾಗತಿಕ ವಜ್ರದ ಉದ್ದಿಮೆಯ ಸ್ವರೂಪಕ್ಕೆ ಹೊಸ ಸ್ವರೂಪ ನೀಡಲು ಹೊರಟಿರುವ ಈ ಸಮೂಹವು, ತನ್ನ ಫಾರೆವರ್‌ರ್ಮಾರ್ಕ್‌ (Forevermark) ಬ್ರ್ಯಾಂಡ್‌ ಮೂಲಕ ಭಾರತದಲ್ಲಿ ವಹಿವಾಟು ವಿಸ್ತರಿಸಲು ಮುಂದಾಗಿದೆ. ದೇಶಿ ಚಿನ್ನಾಭರಣ ಸಂಸ್ಥೆಗಳ ಸಹಯೋಗದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದರಿಂದ ಈ ಬ್ರ್ಯಾಂಡ್‌ಗೆ ಮಾನ್ಯತೆ ಹೆಚ್ಚುತ್ತಿದೆ. ಜತೆಗೆ ವಹಿವಾಟೂ ತ್ವರಿತವಾಗಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಪಾಲುದಾರಿಕೆ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ಸಂಸ್ಥೆಯು ಈಗ ಸಣ್ಣ, ಸಣ್ಣ ಮಾರುಕಟ್ಟೆಗಳತ್ತ ತನ್ನ ಗಮನ ಕೇಂದ್ರೀಕರಿಸಿದೆ. ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ ಮಾರುಕಟ್ಟೆಗಳಿಗೆ ಆಧುನಿಕತೆಯ ಸ್ಪರ್ಶವನ್ನೂ ನೀಡುತ್ತಿದೆ. ಭಾರತದಲ್ಲಿನ ಸಂಸ್ಥೆ ವಹಿವಾಟು ವರ್ಷದಿಂದ ವರ್ಷಕ್ಕೆ ಶೇ 30ರಷ್ಟು ಏರಿಕೆ ಕಾಣುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಜ್ರಗಳ ಮಾರುಕಟ್ಟೆ ಅತ್ಯಂತ ತ್ವರಿತ ಬೆಳವಣಿಗೆ ಕಾಣುತ್ತಿದೆ. ದೇಶದಲ್ಲಿನ ಫಾರೆವರ್‌ಮಾರ್ಕ್‌ ಬ್ರ್ಯಾಂಡ್‌ನ ವಹಿವಾಟು ಶೇ 30ರಷ್ಟು ಪ್ರಗತಿ ದಾಖಲಿಸುತ್ತಿದೆ. ಮಧ್ಯಮ ವರ್ಗದವರೂ ಈಗ ವಜ್ರಾಭರಣಗಳತ್ತ ಗಮನ ಹರಿಸುತ್ತಿದ್ದಾರೆ. ಹಬ್ಬ–ಹರಿದಿನಗಳಲ್ಲಿನ ಸಂಭ್ರಮ ಹೆಚ್ಚಿಸಲು ಮತ್ತು ಕಾಣಿಕೆ ನೀಡುವ ಉದ್ದೇಶಕ್ಕೆ ವಜ್ರ ಖರೀದಿಸುವ ಪ್ರವೃತ್ತಿ ಅವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಹಿಳೆಯರ ಜೀವನಶೈಲಿಯಲ್ಲಿನ ಬದಲಾವಣೆಯ ಕಾರಣಕ್ಕೆ ಚಿನ್ನಾಭರಣ ಪ್ರೇಮಿಗಳು ಈಗ ಕ್ರಮೇಣ ವಜ್ರಾಭರಣದತ್ತ ಗಮನ ಹರಿಸುತ್ತಿದ್ದಾರೆ. ಇಂತಹ ಪ್ರವೃತ್ತಿ ದೇಶದಾದ್ಯಂತ ಕಂಡು ಬರುತ್ತಿದೆ.

‘ಚಿನ್ನಾಭರಣ ವ್ಯಾಮೋಹಿ ಭಾರತೀಯರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನಾಂಗ ಮತ್ತು ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ವಜ್ರಾಭರಣಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ವಜ್ರಾಭರಣಗಳ ವಹಿವಾಟಿಗೆ ಸದ್ಯಕ್ಕೆ ಆಧುನಿಕತೆಯ ಸ್ಪರ್ಶವೂ ದೊರೆಯುತ್ತಿದೆ. 10 ವರ್ಷಗಳ ಹಿಂದೆ ಬರೀ ಮದುವೆ ಸಮಾರಂಭಕ್ಕೆ ಮಾತ್ರ ಇಂತಹ ಆಭರಣಗಳ ಖರೀದಿ ಸೀಮಿತವಾಗಿತ್ತು. ಈ ಸಾಂಪ್ರದಾಯಿಕ ಪ್ರವೃತ್ತಿ ಈಗ ಬದಲಾಗುತ್ತಿದೆ. ಹಲವು ಬಗೆಯ ಸಮಾರಂಭಗಳಲ್ಲಿ ವಜ್ರದ ವೈವಿಧ್ಯಮಯ ಆಭರಣ ಧರಿಸುವುದು  ಹೊಸ ಫ್ಯಾಷನ್‌ ಆಗಿ ಬಳಕೆಗೆ ಬರುತ್ತಿದೆ. ಇದಕ್ಕೆ ಬದಲಾಗುತ್ತಿರುವ ಜೀವನಶೈಲಿಯೇ ಮುಖ್ಯ ಕಾರಣ. ಭಾರತದಲ್ಲಿ ಚಿನ್ನಾಭರಣಗಳಿಗೆ ವ್ಯಾಪಕ ಬೇಡಿಕೆ ಇರುವುದು ನಿಜ. ಇಲ್ಲಿ ವಜ್ರದ ವಹಿವಾಟು ಬೆಳೆಯಲೂ ವಿಪುಲ ಅವಕಾಶಗಳೂ ಇವೆ’ ಎಂದು ಡಿ ಬೀರ‍್ಸ ಗ್ರೂಪ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಮಾರುಕಟ್ಟೆ) ಸ್ಟೀಫನ್‌ ಲುಸಿಯರ್‌ ಹೇಳುತ್ತಾರೆ. 

‘ಜಾಗತಿಕ ಮತ್ತು ಭಾರತದ ಗ್ರಾಹಕರು ವಜ್ರಾಭರಣಗಳಲ್ಲಿ ಬಯಸುವ ವಿನ್ಯಾಸಗಳಲ್ಲಿ ಅಪಾರ ಭಿನ್ನತೆಗಳಿವೆ. ಈ ವಿಭಿನ್ನ ಬಗೆಯ ಗ್ರಾಹಕರ ಅಗತ್ಯಗಳನ್ನು ಈಡೇರಿಸುವುದು ಸವಾಲಿನ ಕೆಲಸ. ಚಿನ್ನದ ವಹಿವಾಟಿಗೆ ಜಾಗತಿಕ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ಇರುವಂತೆ, ಈ ವಹಿವಾಟಿನಲ್ಲಿ ವಜ್ರ ಉತ್ಪಾದಕರ ಸಂಘ (ಡಿಪಿಎ) ಕಾರ್ಯನಿರ್ವಹಿಸುತ್ತಿದೆ.

‘ದಕ್ಷಿಣ ಆಫ್ರಿಕಾ, ನೈಬಿಬಿಯಾ, ರಷ್ಯಾ, ಕೆನಡಾಗಳಲ್ಲಿ ವಜ್ರದ ಗಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಬೋಸ್ಟವಾನಾದ ಗಣಿಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳನ್ನು ಹೊರ ತೆಗೆಯಲಾಗುತ್ತದೆ. ದುಬಾರಿ ಬೆಲೆಯ ವಜ್ರಾಭರಣ ಧರಿಸುವುದು ಅನೇಕರಿಗೆ ಪ್ರತಿಷ್ಠೆಯ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಇತ್ತೀಚೆಗೆ ಭಾರತದಲ್ಲಿ ವಜ್ರಾಭರಣ ಕುರಿತ ಒಲವುಗಳು ಬದಲಾಗುತ್ತಿವೆ. ಹೀಗಾಗಿ ಈ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಹರಿಸಿದ್ದೇವೆ.

‘ಸಾಂಪ್ರದಾಯಿಕ ಖರೀದಿ ಪ್ರವೃತ್ತಿ ಈಗ ಸಂಪೂರ್ಣವಾಗಿ ಬದಲಾಗಿದೆ. ಯುವತಿಯರಿಂದ ಹೊಸ, ಹೊಸ ವಿನ್ಯಾಸದ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಂಸ್ಥೆಯ ಪಾರದರ್ಶಕ ವಹಿವಾಟು ಗ್ರಾಹಕರಿಗೆ ಮೆಚ್ಚುಗೆ ಆಗುತ್ತಿದೆ. ಯಾವುದೇ ಬ್ರ್ಯಾಂಡ್‌ನಲ್ಲಿ ಗ್ರಾಹಕರು ವಿಶ್ವಾಸ ಇರಿಸುವುದು ಮುಖ್ಯವಾಗುತ್ತದೆ. ವಜ್ರಾಭರಣಗಳ ಬೆಲೆ ಕನಿಷ್ಠ ₹ 28 ಸಾವಿರ, ₹ 35 ಸಾವಿರದಿಂದ ಆರಂಭಗೊಳ್ಳುತ್ತದೆ. ಗರಿಷ್ಠ ಬೆಲೆ ಊಹೆಗೂ ನಿಲುಕದು ಬಿಡಿ’ ಎನ್ನುತ್ತಾರೆ ಅವರು.

‘ಭಾರತದಲ್ಲಿನ ವಜ್ರಾಭರಣ ವಿನ್ಯಾಸಕಾರರು ಹೆಚ್ಚು ಸೃಜನಶೀಲರು. ಆಸಕ್ತಿದಾಯಕ ವಿನ್ಯಾಸಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರು’ ಎಂದೂ ಅವರು ಮೆಚ್ಚುಗೆಯ ಮಾತು ಆಡುತ್ತಾರೆ. 

Post Comments (+)