ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ದರವೂ ಶತಕದತ್ತ: ರಾಜಸ್ಥಾನದಲ್ಲಿ ಲೀಟರಿಗೆ 98 ರೂ.

Last Updated 31 ಮೇ 2021, 10:39 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ ದರ ಲೀಟರಿಗೆ ಈಗಾಗಲೇ ₹ 100ರ ಗಡಿ ದಾಟಿದ್ದು, ಡೀಸೆಲ್‌ ದರವೂ ಅದೇ ದಿಕ್ಕಿನಲ್ಲಿ ಸಾಗಿದೆ. ರಾಜಸ್ಥಾನದ ಕೆಲವೆಡೆ ಡೀಸೆಲ್‌ ದರ ಲೀಟರಿಗೆ ₹ 98ರ ಗಡಿ ದಾಟಿದೆ.

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರವನ್ನುಸತತವಾಗಿ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಪೆಟ್ರೋಲ್‌ ದರ 29 ಪೈಸೆ ಮತ್ತು ಡೀಸೆಲ್‌ ದರ 26 ಪೈಸೆ ಹೆಚ್ಚಿಸಿವೆ. ಇದರಿಂದಾಗಿ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಡೀಸೆಲ್‌ ದರ ₹ 98.08ಕ್ಕೆ ಏರಿಕೆ ಆಗಿದೆ. ಇಲ್ಲಿ ಪೆಟ್ರೋಲ್‌ ದರವು ದೇಶದಲ್ಲಿಯೇ ಗರಿಷ್ಠ, ಅಂದರೆ ಲೀಟರಿಗೆ ₹ 105.24ರಷ್ಟಿದೆ.

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ರಾಜಸ್ಥಾನದಲ್ಲಿ ಪೆಟ್ರೋಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯು (ವ್ಯಾಟ್‌) ದೇಶದಲ್ಲಿಯೇ ಗರಿಷ್ಠ ಮಟ್ಟದಲ್ಲಿದೆ.

ಪೆಟ್ರೋಲ್‌ ದರವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ₹ 100ರ ಗಡಿ ದಾಟಿದೆ. ಮೇ 4ರಿಂದ ಇಲ್ಲಿಯವರೆಗೆ 16 ಬಾರಿ ಇಂಧನ ದರ ಹೆಚ್ಚಿಸಲಾಗಿದೆ. ಇದರಿಂದ ಲೀಟರ್ ಪೆಟ್ರೋಲ್‌ ದರ ₹ 3.83ರಷ್ಟು ಮತ್ತು ಡೀಸೆಲ್‌ ದರ ₹ 4.42ರಷ್ಟು ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ ಇಂಧನ ದರ (ಲೀಟರಿಗೆ)

ನಗರ ಪೆಟ್ರೋಲ್‌ ಡೀಸೆಲ್‌
ದೆಹಲಿ ₹ 94.23 ₹ 85.15
ಬೆಂಗಳೂರು ₹ 97.37 ₹ 90.27
ಮುಂಬೈ ₹ 100.47 ₹ 92.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT