ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲನಿಧಿ ಮಾರುಕಟ್ಟೆಯ ಅಗತ್ಯ

Last Updated 5 ಮೇ 2020, 20:15 IST
ಅಕ್ಷರ ಗಾತ್ರ

‘ದ್ರವೀಕರಿಸಬಹುದಾದ ಒಂದೇಒಂದು ನಿಧಿಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಾಲನಿಧಿಯನ್ನು ನಾವು ಯಾಕೆ ಹೊಂದಿಲ್ಲ’ ಎಂದು ನಮ್ಮನ್ನು ಹಲವು ಬಾರಿ ಪ್ರಶ್ನಿಸಲಾಗುತ್ತದೆ. ನಾವು ನಿರ್ವಹಿಸುತ್ತಿರುವ ಒಂದು ದ್ರವೀಕರಿಸಬಹುದಾದ ನಿಧಿಯನ್ನೂ ಸಹ ಗ್ರಾಹಕರು ಮತ್ತು ಸಲಹಾ ಪಾಲುದಾರರಿಂದ ಸಾಕಷ್ಟು ಒತ್ತಡ ಬಂದ ಬಳಿಕ ಆರಂಭಿಸಿದ್ದೆವು.

ಇದಕ್ಕೆ ಕಾರಣವೇನು ಎಂಬುದನ್ನು ನಾವು ಹಿಂದೆಯೇ ಸಂಕ್ಷಿಪ್ತವಾಗಿ ಹೇಳಿದ್ದೆವು. ಆದರೆ ಹೂಡಿಕೆದಾರರು ಮತ್ತು ಸಲಹೆಗಾರರಲ್ಲಿ ಸ್ಪಷ್ಟತೆ ಮೂಡಿಸುವ ಸಲುವಾಗಿ ಆ ವಿಚಾರವನ್ನು ಇನ್ನಷ್ಟು ವಿಸ್ತಾರವಾಗಿ ತಿಳಿಸುವುದು ಸೂಕ್ತ ಎಂದೆನಿಸುತ್ತದೆ. ನಾವು ಸಾಲನಿಧಿಯನ್ನು ಹೊಂದಿದ್ದೇವೆಯೇ, ಇಲ್ಲವೇ ಎಂಬುದು, ಸಾಲನಿಧಿಯಲ್ಲಿ ಹೂಡಿಕೆ ಮಾಡಲು ಬಯಸುವವರ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಮುಖ್ಯವೆನಿಸುವುದಿಲ್ಲ ಎಂಬುದೂ ನಿಜ.

ಗಳಿಕೆಯ ಕುಸಿತ:ಜಾಗತಿಕ ಮಟ್ಟದಲ್ಲಿ ಕಡಿಮೆ ಬಡ್ಡಿದರದ ವಾತಾವರಣ ಇರುವುದು ಸಾಲ ನಿರ್ವಾಹಕರು ಹಾಗೂ ಹೂಡಿಕೆದಾರರ ಮುಂದಿನ ಪ್ರಮುಖ ಸವಾಲಾಗಿದೆ. ಈ ಲೇಖನ ಬರೆಯುತ್ತಿರುವ ವೇಳೆಗೆ ಜಗತ್ತಿನಾದ್ಯಂತ ಸುಮಾರು ₹ 9,900 ಲಕ್ಷ ಕೋಟಿ ಮೌಲ್ಯದ ನಿಧಿಗಳು ಋಣಾತ್ಮಕ ಗಳಿಕೆ ದಾಖಲಿಸುತ್ತಿವೆ. ಭಾರತದಲ್ಲಿ ಪ್ರಸಕ್ತ ಈ ಸಮಸ್ಯೆ ಇಲ್ಲ. ಹಿಂದಿನ ಸ್ಥಿತಿಗೆ ಹೋಲಿಸಿದರೆ, ಇಲ್ಲಿ ಬಡ್ಡಿ ದರಗಳು ಸ್ವಲ್ಪ ಕಡಿಮೆಯಿದ್ದರೂ ನಿಧಿಗಳು ಧನಾತ್ಮಕ ಗಳಿಕೆಯಲ್ಲಿವೆ.

ಭಾರತದ ಸವಾಲು ಋಣಾತ್ಮಕ ದರಗಳಲ್ಲ. ಬದಲಿಗೆ ಸಣ್ಣ ಉಳಿತಾಯಗಳಿಗೆ ಹೆಚ್ಚಿನ ಬಡ್ಡಿ ನೀಡುವುದು ಮತ್ತು ಆರ್‌ಬಿಐ ನೇರವಾಗಿ ಬಾಂಡ್‌ಗಳನ್ನು ವಿತರಿಸುವುದಾಗಿದೆ. ಕೇಂದ್ರ ಸರ್ಕಾರದ 10 ವರ್ಷ ಅವಧಿಯ ಬಾಂಡ್‌ಗಳು ಹೂಡಿಕೆದರರಿಗೆ ವಾರ್ಷಿಕ ಶೇ 6.44ರಷ್ಟು ಗಳಿಕೆಯನ್ನು ನೀಡಿವೆ. ಎಎಎ ಶ್ರೆಣಿಯ ಮತ್ತು 10 ವರ್ಷ ಪಕ್ವತೆಯ ಅವಧಿ ಹೊಂದಿರುವ ಪಿಎಫ್‌ಸಿ ಬಾಂಡ್‌ಗಳು ಶೇ 7.26 ಹಾಗೂ ಐಆರ್‌ಎಫ್‌ಸಿ ಬಾಂಡ್‌ಗಳು ಶೇ 7.32ರ ದರದಲ್ಲಿ ವಹಿವಾಟು ನಡೆಸುತ್ತಿವೆ. ಜತೆಗೆ ಆರ್‌ಬಿಐಯು ವಾರ್ಷಿಕ ಶೇ 7.75ರ ದರದಲ್ಲಿ ಏಳು ವರ್ಷಗಳ ಅವಧಿಗೆ ಬಾಂಡ್‌ಗಳನ್ನು ನೇರವಾಗಿ ಸಾರ್ವಜನಿಕರಿಗೆ ವಿತರಿಸುತ್ತಿದೆ. ಇತರ ಹೂಡಿಕೆಗಿಂತ ವಾರ್ಷಿಕ ಶೇ 1.8ರಷ್ಟು ಹೆಚ್ಚಿನ ಗಳಿಕೆ ನೀಡುವ ಮತ್ತು ಅಪಾಯರಹಿತವಾದ ಬಾಂಡ್‌ಗಳು ಲಭ್ಯ ಇರುವಾಗ, ಹೂಡಿಕೆದಾರರು ಮಾರುಕಟ್ಟೆಯ ಅಪಾಯವನ್ನಾಗಲಿ, ಬಡ್ಡಿದರ ಏರಿಳಿತದ ಅಪಾಯವನ್ನಾಗಲಿ ಯಾಕೆ ಎದುರಿಸಬೇಕು?

ಸಾಲ ನಿಧಿಗಳ ಆಕರ್ಷಣೆಯ ಪ್ರಮುಖ ಅಂಶಗಳೆಂದರೆ ದ್ರವ್ಯತೆ ಮತ್ತು ತೆರಿಗೆಯ ಲಾಭ. ಒಂದರ ನಂತರ ಒಂದರಂತೆ ಇವುಗಳತ್ತ ಗಮನ ಹರಿಸೋಣ.

ದ್ರವ್ಯತೆ:ಹೂಡಿಕೆದಾರರು ಕೆಲವೊಮ್ಮೆ ದ್ರವ್ಯತೆಯನ್ನು ಬಯಸುತ್ತಾರೆ. ಮೂಲಧನವನ್ನು ಪಡೆಯದೆ, ನಿಯಮಿತ ಆದಾಯವನ್ನು ಮಾತ್ರ ಹೂಡಿಕೆದಾರರು ಬಯಸುವವರಾಗಿದ್ದರೆ ಆರ್‌ಬಿಐ ಬಾಂಡ್‌ಗಳು ಸೂಕ್ತವೆನಿಸಬಹುದು. ಬ್ಯಾಂಕ್‌ ಠೇವಣಿಗಳೂ ಸಹ ಕೆಲವೊಬ್ಬರ ಆಯ್ಕೆಯಾಗಬಹುದು.

ತೆರಿಗೆ:ತೆರಿಗೆ ಉಳಿಸುವ ವಿಚಾರದಲ್ಲಿ ಸಾಲನಿಧಿಗಳು ಮ್ಯೂಚುವಲ್‌ ಫಂಡ್‌ಗಿಂತ ಒಳ್ಳೆಯ ಆಯ್ಕೆಗಳಾಗಿವೆ. ದೀರ್ಘಾವಧಿಗೆ ಅಥವಾ ನಿವೃತ್ತಿ ನಂತರದ ಉಳಿತಾಯಕ್ಕಾಗಿ ಇಪಿಎಫ್‌, ಪಿಪಿಎಫ್‌, ಎನ್‌ಪಿಎಸ್‌ ಮುಂತಾದವು ಸೂಕ್ತವೆನಿಸಬಹುದು. ಮೊದಲನೆಯದಾಗಿ, ಇಪಿಎಫ್‌ಒದಲ್ಲಿ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಕಾರ್ಮಿಕರು ಸ್ವಯಂ ಪ್ರೇರಣೆಯಿಂದ ಇದರಲ್ಲಿ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಿ, ವಾರ್ಷಿಕ ಶೇ 8.6ರಷ್ಟು ತೆರಿಗೆಮುಕ್ತ ಗಳಿಕೆ ದಾಖಲಿಸಬಹುದು. ವ್ಯಾಪಾರಿಗಳು ಹಾಗೂ ಇತರ ವೃತ್ತಿಯವರು ಸಹ ತಮ್ಮದೇ ಆದ ಸಂಸ್ಥೆಯನ್ನು ರಚಿಸಿ, ತಾನೂ ಅದರ ಸಿಬ್ಬಂದಿ ಎಂದು ನೋಂದಾಯಿಸಿಕೊಂಡು ಭವಿಷ್ಯನಿಧಿ/ಎನ್‌ಪಿಎಸ್‌ನ ಲಾಭ ಪಡೆಯಬಹುದಾಗಿದೆ. ಇದಲ್ಲದೆ ಸಣ್ಣ ಅವಧಿಗೆ ಮತ್ತು ಆದಾಯವನ್ನು ಹೆಚ್ಚಿಸಲು ಅನುಕೂಲವಾಗುವಂಥ ತೆರಿಗೆ ಮುಕ್ತ ಬಾಂಡ್‌ಗಳೂ ಲಭ್ಯ ಇವೆ.

ಶೀಘ್ರ ನಗದೀಕರಣ:ದ್ರವೀಕರಣಕ್ಕೆ ಮುಕ್ತವಾಗಿರುವ ಫಂಡ್‌ಗಳು ಗ್ರಾಹಕರಿಗೆ ಹಣದ ತುರ್ತು ಎದುರಾದರೆ ಕೆಲವೇ ದಿನಗಳಲ್ಲಿ ಎನ್‌ಎವಿ ಮೌಲ್ಯದ ಆಧಾರದಲ್ಲಿ ದ್ರವೀಕರಿಸುವ ಭರವಸೆಯನ್ನು ನೀಡುತ್ತವೆ.

ಗ್ರಾಹಕರಿಗೆ ನೀಡಿದ್ದ ಭರವಸೆ ಈಡೇರಿಸಲು ವಿಫಲವಾದ ಸಂಸ್ಥೆಯ ಬಾಂಡ್‌ಗಳನ್ನು ನ್ಯಾಯಯುತ ಬೆಲೆಗೆ ಖರೀದಿಸಲು ನಿಧಿ ಸಂಸ್ಥೆಯೊಂದು ಪ್ರಾಮಾಣಿಕವಾಗಿ ಇಚ್ಛಿಸಿದರೂ ಹಾಗೆ ಮಾಡಲು ಒಂದು ಆಧಾರ ಇರುವುದಿಲ್ಲ. ಭರವಸೆ ಈಡೇರಿಸಲು ಸಂಸ್ಥೆಯೊಂದು ವಿಫಲವಾದಲ್ಲಿ ಅದರ ಬಾಂಡ್‌ಗಳ ಮೌಲ್ಯವನ್ನು ಶೇ 75 ಎಂದು ಪರಿಗಣಿಸಬೇಕೇ ಅಥವಾ ಶೇ 50ಎಂದು ಪರಿಗಣಿಸಬೇಕೇ ಅಥವಾ ಸಂಪೂರ್ಣವಾಗಿ ಅವುಗಳನ್ನು ರದ್ದುಪಡಿಸಬೇಕೇ? ಇಂಥ ಪ್ರಶ್ನೆಗಳಿಗೆ ಸರಿಯಾದ ಉತ್ತರ ಲಭಿಸುವುದಿಲ್ಲ. ಜಂಕ್‌ ಮಾರುಕಟ್ಟೆಯ ಅನುಪಸ್ಥಿತಿಯಲ್ಲಿ ನಾವು ಹೂಡಿಕೆ ಗುಣಮಟ್ಟದ ಬಾಂಡ್‌ಗಳ ಮಾರುಕಟ್ಟೆಯನ್ನು ನಿರ್ಮಿಸಲು ಸಾಧ್ಯವಿಲ್ಲ.

ಎಷ್ಟೇ ಸಮರ್ಥ ಲೆಕ್ಕಪರಿಶೋಧಕರು ಮತ್ತು ಜಾಗೃತ ರೇಟಿಂಗ್‌ ಏಜೆನ್ಸಿಗಳಿದ್ದರೂ ಹೂಡಿಕೆ ಗುಣಮಟ್ಟದ ಬಾಂಡ್‌ಗಳು ಅಪಮೌಲ್ಯಗೊಂಡ ಮತ್ತು ಹೂಡಿಕೆದಾರರ ಭರವಸೆಯನ್ನು ಹುಸಿಗೊಳಿಸಿದ ನಿದರ್ಶನಗಳಿವೆ. ಅಂದಮಾತ್ರಕ್ಕೆ ಲೆಕ್ಕಪರಿಶೋದಕರು ಅಥವಾ ರೇಟಿಂಗ್‌ ಏಜೆನ್ಸಿಗಳ ತಪ್ಪು ಇರುವುದಿಲ್ಲ ಎಂದಲ್ಲ. ಅವರು ಇನ್ನಷ್ಟು ಸುಧಾರಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ. ಆದರೆ, ಅತ್ಯುತ್ತಮ ಸನ್ನಿವೇಶಗಳಲ್ಲೂ ವ್ಯಾಪಾರದಲ್ಲಿ ನಷ್ಟ ಉಂಟಾಗುವ ಅಥವಾ ಸಂಸ್ಥೆಯೊಳಗಿನ ಹಗರಣವನ್ನು ಮುಚ್ಚಿಟ್ಟಿರುವ ಸಾಧ್ಯತೆ ಇರುತ್ತದೆ.

ಅಪಮೌಲ್ಯಗೊಂಡ ಅಥವಾ ಡಿಫಾಲ್ಟ್‌ ಬಾಂಡ್‌ಗಳನ್ನು ನಿಗದಿತ ದರದಲ್ಲಿ ಖರೀದಿಸುವವರಿಗಾಗಿ ಒಂದು ‘ಜಂಕ್‌ ಮಾರುಕಟ್ಟೆ’ ಇರುವುದು ಅಗತ್ಯ. ಇಂಥ ಜಂಕ್‌ ಮಾರುಕಟ್ಟೆಯ ಅನುಪಸ್ಥಿತಿಯಲ್ಲಿ ದ್ರವೀಕರಿಸಬಹುದಾದ ಬಾಂಡ್‌ ಮಾರುಕಟ್ಟೆಯು ಸರ್ಕಾರಿ ಸಂಸ್ಥೆಗಳ ಬಾಂಡ್‌ಗಳಿಗೆ ಮತ್ತು ಕೆಲವೇ ಕೆಲವು ಸರ್ಕಾರೇತರ ಸಂಸ್ಥೆಗಳ ಬಾಂಡ್‌ಗಳಿಗೆ ಸೀಮಿತವಾಗಿ ಉಳಿಯುತ್ತದೆ. ಆದರೆ, ಬಿಗಿಯಾದ ದಿವಾಳಿತನದ ಕಾನೂನು ಇರದ ಹೊರತು ಜಂಕ್‌ ಬಾಂಡ್‌ ಮಾರುಕಟ್ಟೆಯು ಕಾರ್ಯನಿರ್ವಹಿಸಲಾರದು.

ಅಪಮೌಲ್ಯಗೊಂಡ ಅಥವಾ ಡಿಫಾಲ್ಟ್‌ ಬಾಂಡ್‌ಗಳನ್ನು ಖರೀದಿಸುವವರು ಯಾರು?

ಹೂಡಿದ ಹಣವನ್ನು ಹಿಂಪಡೆಯಲು ಅನುಕೂಲವಾಗುವ, ಬಿಗಿಯಾದ ಕಾನೂನುಗಳು ಇರುವುದಾದರೆ ಅಪಾಯವನ್ನು ಆಹ್ವಾನಿಸುವವರಿಗೆ ಮತ್ತು ಚೌಕಾಶಿ ಮಾಡುವವರಿಗೆ ಕೊರತೆಯೇನೂ ಇಲ್ಲ. ಡಿಬೆಂಚರ್‌ಗಳಿಗೆ ಸೊತ್ತಿನ ಭದ್ರತೆ ಇದ್ದರೆ ಮತ್ತು ತ್ವರಿತಗತಿಯಲ್ಲಿ ಸರಳವಾಗಿ ಅಂಥ ಸೊತ್ತುಗಳನ್ನು ವಶಪಡಿಸಿಕೊಂಡು ಮಾರಾಟ ಮಾಡುವಂಥ ವ್ಯವಸ್ಥೆಯನ್ನು ರೂಪಿಸಿದರೆ ಜಂಕ್‌ ಬಾಂಡ್‌ಗಳಿಗೂ ಒಂದು ಮಾರುಕಟ್ಟೆ ರೂಪುಗೊಳ್ಳಲು ಸಾಧ್ಯ.

ನಮ್ಮಲ್ಲಿ ದಿವಾಳಿತನ ಕಾನೂನು ಇದ್ದರೂ, ದಾವೆಗಳು ನಡೆಯುತ್ತಲೇ ಇರುತ್ತವೆ. ದಾವೆಗಳ ಇತ್ಯರ್ಥಕ್ಕೆ ತಗಲುವ ಸಮಯವೂ ತುಂಬಾ ದೀರ್ಘವಾದುದು. ಇಂಥ ಸಮಸ್ಯೆಗಳನ್ನು ಪರಿಹರಿಸದ ಹೊರತು ಅಭಿವೃದ್ಧಿಗೆ ಪೂರಕವಾದ ಜಂಕ್ ಬಾಂಡ್‌ ಮಾರುಕಟ್ಟೆ ರೂಪುತಳೆಯಲಾರದು.

ಬಾಂಡ್‌ ಹೂಡಿಕೆದಾರರಿಗೆ ಪ್ರವೇಶ ಸಮಸ್ಯೆ

ಷೇರುಪೇಟೆಯಲ್ಲಾದರೆ ಹೂಡಿಕೆದಾರನ ಸಾಮರ್ಥ್ಯವನ್ನು ಪರಿಗಣಿಸದೆ ಎಲ್ಲರಿಗೂ ಸಮಾನ ಅವಕಾಶ ಇರುತ್ತದೆ. ಯಾರು ಬೇಕಿದ್ದರೂ ಡಿಮ್ಯಾಟ್‌ ಖಾತೆ ತೆರೆದು ವಹಿವಾಟು ಆರಂಭಿಸಬಹುದು. ಲಕ್ಷಾಂತರ ಷೇರುಗಳನ್ನು ಖರೀದಿಸಲು ಮುಂದಾಗುವ ಸಂಸ್ಥೆಗೆ ಹೂಡಿಕೆದಾರನೊಬ್ಬ ಒಂದೇ ಒಂದು ಷೇರನ್ನು ಬೇಕಾದರೂ ಮಾರಾಟ ಮಾಡಬಹುದು. ಆದರೆ ನಿಗದಿತ ಆದಾಯ ಮಾರುಕಟ್ಟೆಯು ಇದಕ್ಕೆ ತದ್ವಿರುದ್ಧ.

ಇಲ್ಲಿ ಕೆಲವು ಬಾಂಡ್‌ಗಳನ್ನು ದ್ರವೀಕರಿಸಬಹುದಾಗಿದ್ದರೂ ಮಾರಾಟಕ್ಕೆ ಕನಿಷ್ಠ ಮಿತಿ ಇರುತ್ತದೆ. ಕೆಲವೊಮ್ಮೆ ‘ಪೂರ್ತಿ ಮಾರಾಟ ಮಾಡಬೇಕು ಇಲ್ಲವೇ ಒಂದನ್ನೂ ಮಾರಾಟ ಮಾಡಬಾರದು’ ಎಂಬ (ಆಲ್‌ ಆರ್‌ ನನ್‌) ನಿಬಂಧನೆ ಇರುತ್ತದೆ. ಒಬ್ಬ ಹೂಡಿಕೆದಾರ ₹5ಕೋಟಿ ಹೂಡಿಕೆಮಾಡಲು ಮುಂದಾಗಿದ್ದರೂ, ಮಾರಾಟ ಮಾಡುವವರು ₹25 ಕೋಟಿ ಮೌಲ್ಯದ ಲಾಟ್‌ಗಳಲ್ಲೇ ಮಾರಾಟ ಮಾಡಿದರೆ ಖರೀದಿ ಸಾಧ್ಯವಾಗುವುದಿಲ್ಲ. ಇಂಥ ಪ್ರಸಂಗಗಳು ಅನೇಕ ಇವೆ.

ಹಿರಿಯ ನಾಗರಿಕರಿಗೆ ಸೌಲಭ್ಯವನ್ನು ನೀಡಬೇಕೆಂದರೆ ಅದನ್ನು ಉದ್ದೇಶಿತ ಪಿಂಚಣಿಗಳ ಮೂಲಕ ನೀಡಬೇಕೇ ವಿನಾ ಸಣ್ಣ ಉಳಿತಾಯದ ಮೇಲೆ ವಿವೇಚನಾರಹಿತವಾಗಿ ಹೆಚ್ಚಿನ ಬಡ್ಡಿ ನೀಡುವ ಮೂಲಕವಲ್ಲ. ಬಡ್ಡಿ ದರ ಕಡಿತಗೊಳಿಸುವ ಆರ್‌ಬಿಐನ ಉದ್ದೇಶವು ಪರಿಣಾಮಕಾರಿಯಾಗಿ ಈಡೇರದಿರಲು, ಸಣ್ಣ ಉಳಿತಾಯಗಳಿಗೆ ನೀಡುವ ಈ ಹೆಚ್ಚಿನ ಬಡ್ಡಿಯೂ ಒಂದು ಕಾರಣ.

ನಾನು ಭರವಸೆಯನ್ನು ಕಳೆದುಕೊಂಡಿಲ್ಲ. ಯಾವತ್ತಾದರೂ ಪಿಪಿಎಫ್‌ಎಎಸ್‌ನವರೂ ಸಾಲನಿಧಿಯನ್ನು ಆರಂಭಿಸುವುದನ್ನು ನೀವು ನೋಡಬಹುದು.

(ಲೇಖಕ: ಪಿಪಿಎಫ್‌ಎಎಸ್‌ ಮ್ಯೂಚುವಲ್‌ ಫಂಡ್‌ನ ಸಿಐಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT