ಲಂಡನ್: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯಮಟ್ಟದಲ್ಲಿ ಬುಧವಾರ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.
ಜಾಗತಿಕ ಮಟ್ಟದ ವಿಮಾನಯಾನ ಕಂಪನಿಗಳು ವಿಮಾನಗಳ ಹಾರಾಟದ ಮಾರ್ಗ ಬದಲಾಯಿಸಿವೆ ಅಥವಾ ರದ್ದುಪಡಿಸಿವೆ. ಲೆಬನಾನ್, ಇಸ್ರೇಲ್, ಕುವೈತ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ ಎಂದು ವಿಮಾನಯಾನ ಕುರಿತು ಮಾಹಿತಿ ಒದಗಿಸುವ ಸಂಸ್ಥೆಯಾದ ಫ್ಲೈಟ್‌ರಾಡಾರ್24 ತಿಳಿಸಿದೆ.
ಈ ಬೆಳವಣಿಗೆಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಪ್ರಯಾಣ ಮತ್ತು ವಿಮಾನಯಾನ ವಲಯದ ಕಂಪನಿಗಳ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. ಯುರೋಪ್‌ನ ಅತಿದೊಡ್ಡ ಟ್ರಾವೆಲ್ ಆಪರೇಟರ್ ಟಿಯುಐ ಕಂಪನಿಯ ಷೇರಿನ ಮೌಲ್ಯ ಶೇ 5ರಷ್ಟು ಹಾಗೂ ಲುಫ್ಥಾನ್ಸಾ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 4ರಷ್ಟು ಇಳಿಕೆಯಾಗಿದೆ.
‘ಮುಂದಿನ ಸೂಚನೆವರೆಗೆ ಇರಾನ್‌ನಿಂದ ಭಾರತಕ್ಕೆ ತೆರಳುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ’ ಎಂದು ಪೋಲೆಂಡ್‌ನ ವಿಮಾನಯಾನ ಕಂಪನಿ ಎಲ್‌ಒಟಿ ತಿಳಿಸಿದೆ.