ನಿಮ್ಮ ಡೆಬಿಟ್‌ ಕಾರ್ಡ್‌ನಲ್ಲಿ ಚಿಪ್‌ ಇದೆಯೇ?

7

ನಿಮ್ಮ ಡೆಬಿಟ್‌ ಕಾರ್ಡ್‌ನಲ್ಲಿ ಚಿಪ್‌ ಇದೆಯೇ?

Published:
Updated:

ಮೊಬೈಲ್‌ನಂತೆ ಡೆಬಿಟ್ ಕಾರ್ಡ್‌ ಕೂಡ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಎಟಿಎಂನಿಂದ ಹಣ ಪಡೆಯುವುದಕ್ಕೆ, ವಸ್ತುಗಳನ್ನು ಖರೀದಿಸುವುದಕ್ಕೆ... ಹೀಗೆ ಹಲವು ಸಂದರ್ಭಗಳಲ್ಲಿ ನಮಗೆ ನೆರವಾಗುವ ಈ ಕಾರ್ಡ್‌, ಒಂದು ದಿನ ಸ್ಥಗಿತವಾದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಲೂ ಹಳೆಯ ಡೆಬಿಟ್ ಕಾರ್ಡ್‌ಗಳನ್ನೇ ಬಳಸುತ್ತಿದ್ದರೆ, ಡಿಸೆಂಬರ್ ನಂತರ ಇಂತಹ ಪರಿಸ್ಥಿತಿಯೇ ಎದುರಿಸಬೇಕಾಗುತ್ತದೆ. 

ಡೆಬಿಟ್ ಕಾರ್ಡ್ ಅನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ, ಹಿಂಬದಿಯಲ್ಲಿ ಕಪ್ಪು ಬಣ್ಣದ ಉದ್ದ ಪಟ್ಟಿ ಇದ್ದು, ಮುಂಬದಿಯಲ್ಲಿ ಯಾವುದೇ ಚಿಪ್‌ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್‌ ಎಂದು ಅರ್ಥ. ಸೂಕ್ಷ್ಮ ಆಯಸ್ಕಾಂತ ಒಳಗೊಂಡಿರುವ ಈ ಪಟ್ಟಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ಅಡಗಿರುತ್ತವೆ. ಈ ಕಾರ್ಡ್‌ ಅನ್ನು ಎಲೆಕ್ಟ್ರಾನಿಕ್ ಡೇಟಾ ಕ್ಯಾಪ್ಚರ್ (ಇಡಿಸಿ) ಯಂತ್ರದಲ್ಲಿ ಸ್ವೈಪ್ ಮಾಡಿದರೆ, ಈ ಪಟ್ಟಿಯಲ್ಲಿರುವ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಪಿನ್‌ ಅಗತ್ಯವಿಲ್ಲದೇ ವಹಿವಾಟು ನಡೆಸಬಹುದು.

ಹಲವು ಬ್ಯಾಂಕ್‌ಗಳು ಇಂತಹ ಕಾರ್ಡ್‌ಗಳನ್ನು ಹತ್ತು ವರ್ಷದ ಅವಧಿವರೆಗೆ ಬಳಕೆಗೆ ತಂದವು. ಈ ಅವಧಿ ಮುಗಿದ ನಂತರ ಅವುಗಳ ಆಯಸ್ಸನ್ನು ಮತ್ತೆ ಹತ್ತು ವರ್ಷ ಹೆಚ್ಚಿಸಿದವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಇತ್ತೀಚಿನ ಆದೇಶಗಳ ‍ಪ್ರಕಾರ ಈ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.

ಬದಲಾಯಿಸಿಕೊಳ್ಳುವುದು ಹೇಗೆ?
ಎಲ್ಲ ಬ್ಯಾಂಕ್‌ಗಳೂ ಮ್ಯಾಗ್ನೆಟಿಕ್‌ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗಳಾಗಿ ಬದಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಾರ್ಡ್ ಬದಲಿಸಿಕೊಳ್ಳುವಂತೆ ಗ್ರಾಹಕರ ಮೊಬೈಲ್‌ಫೋನ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ಇದಕ್ಕಾಗಿ ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ಆದ್ದರಿಂದ ನೀವು ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳಿ.

ಇಎಂವಿ ಕಾರ್ಡ್‌ನ ವಿಶೇಷಗಳೇನು?
ಯುರೊಪೇ ಮತ್ತು ಮಾಸ್ಟರ್‌ ವೀಸಾ ಸಂಸ್ಥೆಗಳು ಜೊತೆಗೂಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸುವುದಕ್ಕೂ ನೆರವಾಗುವಂತೆ ಈ ಚಿಪ್ ಕಾರ್ಡ್ ಬಳಕೆಗೆ ತಂದಿದ್ದಾರೆ. ಈ ಕಾರ್ಡ್‌ನ ಮುಂಬದಿಯಲ್ಲಿರುವ ಚಿಪ್‌ನಲ್ಲಿ ಖಾತೆದಾರನ ಬ್ಯಾಂಕ್ ವಿವರ ಎನ್‌ಕ್ರಿಪ್ಟ್‌ (ಸಂಕೇತ) ರೂಪದಲ್ಲಿ ಅಡಗಿರುತ್ತದೆ. 

ಇದನ್ನು ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಯಂತ್ರದಲ್ಲಿ ಸ್ವೈಪ್ ಮಾಡಿದ ಪ್ರತಿ ಬಾರಿ, ಆ ವಹಿವಾಟಿಗೆ ಮಾತ್ರ ಸೀಮಿತವಾಗುವಂತೆ ಒಂದು ಪ್ರತ್ಯೇಕ ಕೋಡ್‌ ರಚನೆಯಾಗುತ್ತದೆ. ಈ ಕೋಡ್ ಮತ್ತೊಂದು ವಹಿವಾಟಿಗೆ ಉಪಯೋಗವಾಗುವುದಿಲ್ಲ. ಹೀಗಾಗಿ ಖಾತೆಯಲ್ಲಿನ ಹಣ ಸೋರಿಕೆಯಾಗುವುದಿಲ್ಲ. ಇದರ ಜತೆಗೆ ಖಾತೆದಾರ ನಮೂದಿಸುವ ಪಿನ್, ವಹಿವಾಟಿಗೆ ಎರಡು ಹಂತದ ರಕ್ಷಣೆ ಒದಗಿಸುತ್ತದೆ. ಕೆಲವು ಕಾರ್ಡ್‌ಗಳಲ್ಲಿ ಮುಂಬದಿಯ ಚಿಪ್ ಜೊತೆಗೆ ಹಿಂಬದಿಯಲ್ಲಿ ಆಯಸ್ಕಾಂತ ಪಟ್ಟಿಯೂ ಇರುತ್ತದೆ. 

ರೂಪೇ ಕಾರ್ಡ್
ವೀಸಾ, ಮಾಸ್ಟರ್‌ ಕಾರ್ಡ್‌ಗಳ ಜತೆಗೆ ದೇಶೀಯವಾಗಿ ತಯಾರಾಗುತ್ತಿರುವ ರೂಪೇ ಕಾರ್ಡ್‌ಗಳಲ್ಲೂ ಈ ಹೊಸ ಇಎಂವಿ ಚಿಪ್‌ ಇರುತ್ತದೆ. ಇದು ಕೂಡ ಸುರಕ್ಷಿತ ವಹಿವಾಟಿಗೆ ನೆರವಾಗುತ್ತದೆ.

ಎಚ್ಚರ ಅಗತ್ಯ
ತಂತ್ರಜ್ಞಾನ ದೋಷಗಳಿಂದ ಉಂಟಾಗುವ ಸಮಸ್ಯೆಗಳಿಗೆ ಬ್ಯಾಂಕ್‌ಗಳು ಜವಾಬ್ದಾರಿಯಾದರೂ ಖಾತೆದಾರನ ಉದಾಸೀನಕ್ಕೆ ಯಾರೂ ಹೊಣೆ ಹೊರುವುದಿಲ್ಲ. ಯಾವುದೇ ಆರ್ಥಿಕ ಸಂಸ್ಥೆಯಾಗಲೀ, ಬ್ಯಾಂಕ್‌ನವರಾಗಲೀ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಫೋನ್ ಮೂಲಕವಾಗಲೀ, ಇ–ಮೇಲ್ ಮೂಲಕವಾಗಲೀ ಖಾತೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ವ್ಯಾಪಾರ ಕೇಂದ್ರಗಳು, ಪೆಟ್ರೋಲ್ ಬಂಕ್‌, ಹೋಟೆಲ್... ಹೀಗೆ ಎಲ್ಲಾದರೂ ಡೆಬಿಟ್ ಕಾರ್ಡ್ ಬಳಸಿದರೆ, ಪಿನ್ ಸಂಖ್ಯೆಯನ್ನು ಇತರರಿಗೆ ತಿಳಿಯದಂತೆ ನೀವೇ ನಮೂದಿಸುವುದು ಒಳ್ಳೆಯದು. ಕಾರ್ಡ್‌ನ ಯಾವುದೇ ಭಾಗದಲ್ಲಿ ಪಿನ್‌ ಬರೆದಿಟ್ಟುಕೊಳ್ಳುವುದು ಅಪಾಯಕರ. ಪಿನ್ ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸಲೂ ಮರೆಯಬಾರದು.

ನಕಲಿ ಕಾರ್ಡ್‌ ಸೃಷ್ಟಿ ಅಸಾಧ್ಯ
ಮ್ಯಾಗ್ನೆಟಿಕ್‌ ಕಾರ್ಡ್‌ನಲ್ಲಿನ ಮಾಹಿತಿಯನ್ನು ಕದ್ದು, ಅದನ್ನು ಕ್ಲೋನ್ ಮಾಡಿ, ನಕಲಿ ವಹಿವಾಟು ನಡೆಸುವ ಹಾಗೆ ಚಿಪ್‌ ಕಾರ್ಡ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಹಿತಿಯನ್ನು ಕದ್ದರೂ ಆ ಮಾಹಿತಿ ಮೂಲಕ ಮತ್ತೊಂದು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.

ಚಿಪ್‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದಿಂದಾಗಿ ಖಾತೆದಾರನ ಮಾಹಿತಿ ಸದಾ ಸುರಕ್ಷಿತವಾಗಿರುವಂತೆ ಬ್ಯಾಂಕ್‌ಗಳು ನೋಡಿಕೊಳ್ಳುತ್ತವೆ. ನಿಮ್ಮ ಕಾರ್ಡ್ ಕಳೆದುಹೋದರೆ ಅಥವಾ ಯಾರಾದರೂ ಕದ್ದರೆ, ಕೂಡಲೇ ಬ್ಯಾಂಕ್‌ ಸಿಬ್ಬಂದಿಗೆ ಮಾಹಿತಿ ತಲುಪಿಸಿ ದುರಪಯೋಗವಾಗದಂತೆ ಎಚ್ಚರ ವಹಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !