ಹೈನೋದ್ಯಮದಲ್ಲಿ ಯಶಸ್ಸು ಕಂಡ ವೈದ್ಯ..!

7
ಹರಿಯಾಣದ ಮುರ್ರಾ ತಳಿಯ ಎಮ್ಮೆಗಳ ಸಾಕಣೆ; ಮಿಶ್ರ ತಳಿಯ ಹಸುಗಳು ಇಲ್ಲಿವೆ

ಹೈನೋದ್ಯಮದಲ್ಲಿ ಯಶಸ್ಸು ಕಂಡ ವೈದ್ಯ..!

Published:
Updated:
Deccan Herald

ಆಲಮೇಲ: ಓದಿದ್ದು ಎಂ.ಬಿ.ಬಿ.ಎಸ್. ಆಲಮೇಲ ಪಟ್ಟಣದಲ್ಲಿ ಸ್ವಂತ ಆಸ್ಪತ್ರೆಯಿದೆ. ರೋಗಿಗಳ ಸೇವೆ ಜತೆಯಲ್ಲೇ 150 ಎಕರೆ ಜಮೀನಿನಲ್ಲಿ ವೈಜ್ಞಾನಿಕವಾಗಿ ಕೃಷಿ ನಡೆಸಿದ್ದಾರೆ. ಓಂಕಾರ ಹಾಲಿನ ಡೇರಿ ಮೂಲಕ ಮನೆ ಮಾತಾಗಿದ್ದಾರೆ ಈ ವೈದ್ಯರು.

ಆಲಮೇಲದಲ್ಲಿ ಓಂಕಾರ ಡೇರಿಯ ಹಾಲಿಗೆ ಭಾರಿ ಬೇಡಿಕೆ. ಮುಂಜಾನೆ–ಮುಸ್ಸಂಜೆಯಲ್ಲಿ ಈ ಹಾಲಿಗಾಗಿ ಜನ ಅಂಗಡಿ ಮುಂದೆ ಸರತಿ ನಿಲ್ಲುವುದು ವಿಶೇಷ. ಸಿಂದಗಿ ಪಟ್ಟಣಕ್ಕೂ ಈ ಹಾಲು ಸರಬರಾಜಾಗುತ್ತದೆ. ನಿತ್ಯ 2000 ಲೀಟರ್ ಹಾಲು ಮಾರಾಟವಾಗುತ್ತಿದೆ. ಇಂತಹ ಜನಪ್ರಿಯತೆಯನ್ನು ಗಳಿಸಿರುವವರು ಹೈನೋದ್ಯಮಿಯೂ ಆಗಿರುವ ಡಾ.ಸಂದೀಪ ಪಾಟೀಲ.

ದೇಸಿ ತಳಿಯೊಂದಿಗೆ ಆರಂಭದಲ್ಲಿ ಹರಿಯಾಣದಿಂದ ಮುರ್ರಾ ತಳಿಯ 68 ಎಮ್ಮೆಗಳನ್ನು ತಲಾ ಒಂದಕ್ಕೆ ₹ 70000ದಿಂದ 80000ಕ್ಕೆ ಖರೀದಿಸಿ ತಮ್ಮ ತೋಟದಲ್ಲಿ ಹೈನುಗಾರಿಕೆಗೆ ಚಾಲನೆ ನೀಡಿದರು. ನಂತರ ಹಸುಗಳನ್ನು ಸಾಕಲಾರಂಭಿಸಿದರು. ವರ್ಷದಿಂದ ವರ್ಷಕ್ಕೆ ಜಾನುವಾರು ಸಂಖ್ಯೆ ಹೆಚ್ಚಿದ್ದು, ಇದೀಗ ಹೈನುಗಾರಿಕೆ ಉದ್ಯಮವಾಗಿದೆ.

₹ 5 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭವಾದ ಈ ಉದ್ಯಮ, ಇದೀಗ ₹ 50 ಲಕ್ಷ ಬಂಡವಾಳ ಹೊಂದಿದೆ. ಒಂದೊಂದು ಎಮ್ಮೆಯೂ ನಿತ್ಯ 8ರಿಂದ 10 ಲೀಟರ್ ಹಾಲು ಕೊಡುತ್ತವೆ. ಹಾಲು ಕರೆಯಲು ಆಧುನಿಕ ಯಂತ್ರಗಳ ಸಹಾಯದಿಂದ ನಿತ್ಯ 2-3 ಸಾವಿರ ಲೀಟರ್ ಹಾಲು ಸಂಗ್ರಹಿಸಲಾಗುತ್ತದೆ. ಅದನ್ನು ಯಂತ್ರಗಳ ಸಹಾಯದಿಂದ ಪ್ಯಾಕ್ ಮಾಡಿ ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟು ಮಾರುಕಟ್ಟೆಗೆ ಕಳುಹಿಸಿಕೊಡುತ್ತಾರೆ.

ಪ್ಯಾಕಿಂಗ್ ಮತ್ತು ಸ್ಟೋರೇಜ್

ಮೂವತ್ತಕ್ಕೂ ಹೆಚ್ಚು ಕೆಲಸಗಾರರು ನಿತ್ಯ ಡೇರಿಯಲ್ಲಿ ದುಡಿಯುತ್ತಿದ್ದಾರೆ. ಯಂತ್ರಗಳಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ. ತಕ್ಷಣವೇ ಪಕ್ಕದ ಸ್ಟಾಕ್ ರೂಂಗೆ ತಂದಿಟ್ಟು ಪ್ಯಾಕ್ ಮಾಡಲಾಗುತ್ತದೆ. ಅರ್ಧ ಲೀಟರ್, 200 ಗ್ರಾಂ ತೂಕದ ಪ್ಯಾಕಿಂಗ್ ಮಾಡಿ, ಹವಾ ನಿಯಂತ್ರಿತ ಕೊಠಡಿಯಲ್ಲಿ ಇಡಲಾಗುತ್ತದೆ. ನಂತರ ಬೇಡಿಕೆಯನುಸಾರ ಸಿಂದಗಿ, ಆಲಮೇಲ ಪಟ್ಟಣಕ್ಕೆ ವಾಹನದ ಮೂಲಕ ಕಳಿಸಿಕೊಡುತ್ತಾರೆ.

ಇದು ನಿತ್ಯ ಎರಡು ಸಲ ನಡೆಯುವ ಪ್ರಕ್ರಿಯೆಯಾಗಿದ್ದು, ತಾಜಾ ಹಾಲು ನೇರವಾಗಿ ಗ್ರಾಹಕರ ಮನೆ ಸೇರುತ್ತದೆ. ಒಂದು ಲೀಟರ್ ಗಟ್ಟಿ ಹಾಲಿಗೆ ₹ 50 ದರ ನಿಗದಿಪಡಿಸಿದ್ದು, ಮಾರುಕಟ್ಟೆಗೆ ಬಂದ ತಕ್ಷಣ ಖಾಲಿಯಾಗುತ್ತದೆ. ಇಲ್ಲಿ ಅತ್ಯಾಧುನಿಕ ಯಂತ್ರಗಳ ಬಳಕೆ ಮಾಡಲಾಗಿದೆ.

ಆಹಾರ

‘ಫಾರ್ಮ್‌ನಲ್ಲಿನ ಎಮ್ಮೆ, ಹಸುಗಳಿಗೆ ನಿತ್ಯ ಎರಡು ಹೊತ್ತು 50 ಕೆ.ಜಿ.ಯಷ್ಟು ಮೇವು, ಜಿಂಕ್ ಮತ್ತು ಕ್ಯಾಲ್ಸಿಯಂ ಸತ್ವವುಳ್ಳ ಆಹಾರವನ್ನು ತಯಾರಿಸಿ ಕೊಡುತ್ತೇವೆ. ಜಿ 39, ಜಿ 48 ತಳಿಯ ಹುಲ್ಲನ್ನು 10 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ.

ಬಿಹಾರಿ, ಜಾರ್ಖಂಡ್‌ ಕಾರ್ಮಿಕರು ಇವುಗಳನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ. ಆಹಾರ ತಯಾರಿಕೆಗೂ ಯಂತ್ರ ಬಳಸಲಿದ್ದಾರೆ. ಕಾಲಕಾಲಕ್ಕೆ ವೈದ್ಯಕೀಯ ಉಪಚಾರ ನಡೆಯುವುದರಿಂದ ಎಲ್ಲಾ ಜಾನುವಾರು ಆರೋಗ್ಯದಿಂದಿವೆ’ ಎನ್ನುತ್ತಾರೆ ಡಾ.ಸಂದೀಪ ಪಾಟೀಲ.

ಈ ಎಮ್ಮೆಗಳು ವರ್ಷಕ್ಕೊಮ್ಮೆ ಕರು ಹಾಕುವುದರಿಂದ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ವಿಹಾರಕ್ಕಾಗಿಯೇ ದೊಡ್ಡ ಕೊಳ ನಿರ್ಮಿಸಲಾಗಿದೆ. ಹೈನುಗಾರಿಕೆಯನ್ನು ಉದ್ಯಮವನ್ನಾಗಿಯೇ ಮುಂದುವರೆಸಬೇಕು ಎಂಬ ಅಭಿಲಾಷೆ ವೈದ್ಯರದ್ದಾಗಿದೆ.

ಕೊಟ್ಟಿಗೆ ಗೊಬ್ಬರವನ್ನು ತಮ್ಮ ಕೃಷಿ ಜಮೀನಿಗೆ ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಬಿಡುವಿಲ್ಲದ ವೈದ್ಯಕೀಯ ಸೇವೆಯ ನಡುವೆಯೇ ಮುಂಜಾನೆ–ಮುಸ್ಸಂಜೆ ಎರಡೂ ಬಾರಿ ಡೇರಿ ಫಾರಂಹೌಸ್‌ಗೆ ಸಂದೀಪ ಪಾಟೀಲ ಭೇಟಿ ನೀಡಿ, ಗಮನ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !