ಶನಿವಾರ, ಜುಲೈ 24, 2021
22 °C

ಸಾಲ ನಿಧಿ:ವಿಮುಖರಾಗಬೇಡಿ

ಡಿ.ಪಿ. ಸಿಂಗ್‌ Updated:

ಅಕ್ಷರ ಗಾತ್ರ : | |

Prajavani

‘ಸವಾಲಿನ ಸಂದರ್ಭಗಳು ಮಹತ್ವದ ಪಾಠ ಕಲಿಸುತ್ತವೆ’ ಎನ್ನುವ ಮಾತು ಬಹುತೇಕ ಸಂದರ್ಭಗಳಲ್ಲಿ ಉಲ್ಲೇಖಗೊಳ್ಳುತ್ತದೆ. ಮನು ಕುಲವು ಈ ಹಿಂದೆ ಅನಿರೀಕ್ಷಿತವಾಗಿ ಎದುರಿಸಿದ ಜಾಗತಿಕ ಪಿಡುಗು, ನೈಸರ್ಗಿಕ ಪ್ರಕೋಪಗಳು ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ತೀವ್ರ ಸ್ವರೂಪದ ಏರಿಳಿತಗಳು ನಮಗೆಲ್ಲ ಹಲವಾರು ಪಾಠ ಕಲಿಸಿವೆ. ಪ್ರತಿಕೂಲ ಸನ್ನಿವೇಶಗಳು ಮನುಕುಲವನ್ನು ಹೆಚ್ಚು ಬಲಿಷ್ಠ ಮತ್ತು ಜಾಣರನ್ನಾಗಿಸಿವೆ. ಇಂತಹ ಸವಾಲಿನ ಮತ್ತು ಸಂಕಷ್ಟದ ಸಮಯದಲ್ಲಿ ಸಂಯಮ ಕಾಯ್ದುಕೊಂಡು ಹೊಸ ಅನುಭವದಿಂದ ಹಲವು ಪಾಠಗಳನ್ನು ಕಲಿಯುವುದರಲ್ಲಿಯೇ ಜಾಣತನವಿದೆ.

ನಾವೀಗ ‘ಕೋವಿಡ್‌–19’ ಪಿಡುಗು ಸೃಷ್ಟಿಸಿರುವ ಅಸಾಮಾನ್ಯ ಪರಿಸ್ಥಿತಿ ಎದುರಿಸುತ್ತಿದ್ದೇವೆ. ವಿಶ್ವದಾದ್ಯಂತ ಪ್ರತಿಯೊಬ್ಬ ಪ್ರಜೆ ಈ ಪಿಡುಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಬಾಧಿತನಾಗಿದ್ದಾನೆ.  ಇದಕ್ಕೆ ಉದ್ದಿಮೆ – ವಹಿವಾಟೂ ಹೊರತಾಗಿಲ್ಲ. ಜಾಗತಿಕ ಮತ್ತು ದೇಶಿ ಆರ್ಥಿಕತೆ ಮೇಲಿನ ಪ್ರತಿಕೂಲ ಪರಿಣಾಮಗಳ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಬಂಡವಾಳ ಮಾರುಕಟ್ಟೆಯೂ ಇಂತಹ ಅನಿಶ್ಚಿತತೆಯಿಂದ ಹೊರತಾಗಿಲ್ಲ.  ದೇಶಿ ಮ್ಯೂಚುವಲ್‌ ಫಂಡ್‌ ಉದ್ದಿಮೆಯು ಕೋವಿಡ್‌ ಪಿಡುಗಿನ ಬಿಕ್ಕಟ್ಟಿನ ಜತೆ ಆರು ಸಾಲ ನಿಧಿ ಯೋಜನೆಗಳು (debt funds / schemes) ರದ್ದಾದ ಸಮಸ್ಯೆಗೂ ಸಾಕ್ಷಿಯಾಗಿದೆ. ಇದು ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಲ್ಲಿ ತೀವ್ರ ಕಳವಳ ಮೂಡಿಸಿದೆ.

ಹೂಡಿಕೆದಾರರು ಸಾಮಾನ್ಯವಾಗಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಸಾಲ ನಿಧಿಗಳನ್ನು (debt funds) ಇತರ ಸಾಂಪ್ರದಾಯಿಕ ಹೂಡಿಕೆ ಆದಾಯದ ಜತೆ ಹೋಲಿಕೆ ಮಾಡುತ್ತಾರೆ. ಈ ಸಾಲ ನಿಧಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳು ಸಾಂಪ್ರದಾಯಿಕ ಹೂಡಿಕೆ ವರಮಾನಗಳಿಗಿಂತ ಹೇಗೆ ಭಿನ್ನವಾಗಿವೆ ಎನ್ನುವುದನ್ನು ತಿಳಿದುಕೊಳ್ಳುವುದು ಸದ್ಯದ ಸಂದರ್ಭದಲ್ಲಿ ಅಗತ್ಯವಾಗಿದೆ. ಸದ್ಯದ ಮಾರುಕಟ್ಟೆ ಪರಿಸ್ಥಿತಿಯ ಹಿನ್ನಲೆಯಲ್ಲಿಯೂ ಈ ವಿದ್ಯಮಾನವನ್ನು ಪರಿಶೀಲಿಸಬೇಕು.

ಆರು ಸಾಲ ನಿಧಿಗಳನ್ನು ಸ್ಥಗಿತಗೊಳಿಸಲು ಉದ್ದಿಮೆಯಲ್ಲಿ ನಗದು ಕೊರತೆ ಇರುವುದೇ ಕಾರಣವಾಗಿದೆ. ಪ್ರತಿಯೊಂದು ಸಾಲ ನಿಧಿಗಳಲ್ಲಿ ಜನರು ತೊಡಗಿಸಿದ ಹಣವನ್ನು ಅವರಿಗೆ ಮರಳಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯನ್ನು ನಗದೀಕರಣಗೊಳಿಸುವುದು (ಹಣ ಮರಳಿ ಪಡೆಯುವುದು)  ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗಿಂತ ಭಿನ್ನವಾಗಿ ಇರಲಿದೆ ಎನ್ನುವುದನ್ನು ಹೂಡಿಕೆದಾರರು ತಿಳಿದುಕೊಂಡಿರಬೇಕು.

ವ್ಯಕ್ತಿಗಳು ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇರಿಸುವುದನ್ನು ಅವಧಿ ಮತ್ತು ಬೇಡಿಕೆ ಬಾಧ್ಯತೆ ಎಂದು ವರ್ಗೀಕರಿಸಲಾಗುತ್ತದೆ.  ಅವಧಿ ಬಾಧ್ಯತೆ ಎಂದರೆ ನಿಶ್ಚಿತ ಅವಧಿಗೆ ಠೇವಣಿ ಮರಳಿಸುವುದು ಆಗಿರುತ್ತದೆ.  ಬೇಡಿಕೆ ಬಾಧ್ಯತೆ ಎಂದರೆ–  ವೈಯಕ್ತಿಕ ಠೇವಣಿದಾರರು ಕೇಳಿದಾಗ ಹಣ ಮರಳಿಸುವುದು. ಠೇವಣಿದಾರರ ಈ ಬಗೆಯ ಮನವಿ ಈಡೇರಿಸಲು ಬ್ಯಾಂಕ್‌ಗಳು  ತಮ್ಮ ಬಳಿ ಇರುವ ಠೇವಣಿ ಮೊತ್ತವನ್ನೆಲ್ಲ ಸಾಲವಾಗಿ  ವಿತರಿಸಿರುವುದಿಲ್ಲ.

ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳ ಅನುಸಾರ ಬ್ಯಾಂಕ್‌ಗಳು ನಿವ್ವಳ ಬೇಡಿಕೆ ಮತ್ತು ಅವಧಿ ಬಾಧ್ಯತೆ ಉದ್ದೇಶಕ್ಕೆ ನಗದು ಮೀಸಲು ಅನುಪಾತ (ಶೇ 3ರಷ್ಟು ಸಿಆರ್‌ಆರ್‌) ಮತ್ತು ಶಾಸನಬದ್ಧ ನಗದು ಅನುಪಾತ (ಶೇ 18ರಷ್ಟು ಎಸ್‌ಎಲ್‌ಆರ್‌) ರೂಪದಲ್ಲಿ ಪ್ರತ್ಯೇಕವಾಗಿ ನಗದು ಕಾಯ್ದಿಟ್ಟುಕೊಂಡಿರುತ್ತವೆ. ಹೀಗಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಲಭ್ಯತೆಯು ಸಮಸ್ಯೆಯಾಗಿರಲಾರದು.

 ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸುವುದು ಬ್ಯಾಂಕಿಂಗ್‌ ವ್ಯವಸ್ಥೆಗಿಂತ ಭಿನ್ನವಾಗಿರುತ್ತದೆ. ಹೂಡಿಕೆಯಾದ ಹಣದಲ್ಲಿ ಅನಿರೀಕ್ಷಿತವಾಗಿ ಸೃಷ್ಟಿಯಾಗುವ ನಗದು ಬೇಡಿಕೆ ಈಡೇರಿಸಲು ಪ್ರತ್ಯೇಕವಾಗಿ ಹಣ ತೆಗೆದು ಇರಿಸುವ ವ್ಯವಸ್ಥೆಯು ಮ್ಯೂಚುವಲ್‌ ಫಂಡ್ಸ್‌ ಉದ್ದಿಮೆಯಲ್ಲಿ ಇಲ್ಲ.

ಮ್ಯೂಚುವಲ್‌ ಫಂಡ್ಸ್‌ ಯೋಜನೆಗಳ ನಿವ್ವಳ ಸಂಪತ್ತು ಮೌಲ್ಯವು (ಎನ್‌ಎವಿ), ಅವುಗಳು ಹಣ ತೊಡಗಿಸಿದ ಷೇರುಗಳ ಮಾರುಕಟ್ಟೆ ಮೌ್ಲ್ಯದ ದಿನನಿತ್ಯದ ಏರಿಳಿತವನ್ನು ಆಧರಿಸಿರುತ್ತದೆ. ಮ್ಯೂಚುವಲ್‌ ಫಂಡ್‌ ಯೋಜನೆಗಳು ಕೆಲ ಪ್ರಮಾಣದ ನಗದನ್ನು ಖಾತೆಯಲ್ಲಿ ಉಳಿಸಿಕೊಂಡು ನಗದು ಬೇಡಿಕೆಯ ಅಗತ್ಯವನ್ನು ಪೂರೈಸುತ್ತವೆ.

ಷೇರು ಮಾರುಕಟ್ಟೆಯು ತೀವ್ರ ಏರಿಳಿತ ದಾಖಲಿಸುವಾಗ, ಹೂಡಿಕೆದಾರರು ಆತಂಕಕ್ಕೆ ಒಳಗಾಗಿ ತಮ್ಮ ಹಣ ಮರಳಿ ಪಡೆಯಲು ಧಾವಂತ ಪಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳು ಕಾಯ್ದುಕೊಂಡಿರುವ ನಗದು ಮೊತ್ತ ಪರೀಕ್ಷೆಗೆ ಒಳಪಡುತ್ತದೆ.

ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಹಣಕಾಸು ಸ್ಥಿರತೆ ಆಧರಿಸಿ ಸಾಲಪತ್ರಗಳ ಕ್ರೆಡಿಟ್‌ ರೇಟಿಂಗ್‌ (ಸಾಲ ಮರುಪಾವತಿ ಸಾಮರ್ಥ್ಯ) ನಿರ್ಧರಿಸಲಾಗುವುದು. ಕೆಳಹಂತದ ಕ್ರೆಡಿಟ್‌ ರೇಟಿಂಗ್‌ನ ಕಂಪನಿಗಳಿಗೆ ಹೋಲಿಸಿದರೆ,  ಸರ್ಕಾರಿ ಸಾಲಪತ್ರಗಳು (G-Secs) ಮತ್ತು ’ಎಎಎ‘ ರೇಟಿಂಗ್‌ನ ಸಾಲಪತ್ರಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.

ಮ್ಯೂಚುವಲ್‌ ಫಂಡ್‌ಗಳ ವಿಷಯದಲ್ಲಿ, ನಗದಿಗೆ ಸರಿಸಮಾನವಾದ ಸರ್ಕಾರಿ ಮತ್ತು ಗರಿಷ್ಠ ಕ್ರೆಡಿಟ್‌ ರೇಟಿಂಗ್ಸ್‌ ಹೊಂದಿರುವ ಸಾಲ ಪತ್ರಗಳಲ್ಲಿ ತೊಡಗಿಸಿರುವ ಹಣದ ಪ್ರಮಾಣ ಆಧರಿಸಿ ಅವುಗಳ ನಗದು ಸಾಮರ್ಥ್ಯ ನಿರ್ಣಯಿಸಲಾಗುವುದು. ಗರಿಷ್ಠ ಗುಣಮಟ್ಟದ ಕಾರಣಕ್ಕೆ ಅಗತ್ಯ ಬಿದ್ದಾಗ ಈ ಸಾಲಪತ್ರಗಳನ್ನು ಸುಲಭವಾಗಿ ನಗದೀಕರಣಗೊಳಿಸಬಹುದು.

ಹೀಗಾಗಿ ಹಣ ತೊಡಗಿಸುವ ಮುನ್ನ ಮ್ಯೂಚುವಲ್‌ ಫಂಡ್ಸ್‌ಗಳ ಸಾಲ ಮರುಪಾವತಿ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ.

ಸಾಲ ನಿಧಿಗಳನ್ನು ಅವುಗಳ ಕಾಲಾವಧಿ ಪರಿಗಣಿಸಿ ವರ್ಗೀಕರಿಸಲಾಗುವುದು. ನಿಧಿಗಳ ಗುರಿ ಆಧರಿಸಿ ಹೂಡಿಕೆದಾರರು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡಬೇಕು.

ತುರ್ತು ಸಂದರ್ಭಗಳಿಗಾಗಿ ಹಣದ ಅಗತ್ಯ ಇರುವವರು ಕಡಿಮೆ ಅವಧಿಯ ಫಂಡ್ಸ್‌ಗಳನ್ನು ಆಯ್ಮೆ ಮಾಡಿಕೊಳ್ಳಬೇಕು. ದೀರ್ಘಾವಧಿ ಹೂಡಿಕೆಯ ಪ್ರಯೋಜನ ಪಡೆಯಲು ಇಚ್ಛಿಸುವವರು ಮಧ್ಯಮ ಅವಧಿಯ ಇಲ್ಲವೇ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಬೇಕು. ಹಣ ಹೂಡಿಕೆ ಮಾಡಲು ಆಯ್ಕೆ ಮಾಡಿಕೊಂಡ ನಿಧಿಗಳ ಸಾಲ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಲು ಮರೆಯಬಾರದು. ಗರಿಷ್ಠ ಮಟ್ಟದ ಸಾಲ ಮರುಪಾವತಿ ಸಾಮರ್ಥ್ಯ ಹೊಂದಿದ ನಿಧಿಗಳು ಕಡಿಮೆ ರೇಟಿಂಗ್‌ನ ನಿಧಿಗಳಿಗೆ ಹೋಲಿಸಿದರೆ ಕಡಿಮೆ ಮಟ್ಟದ ನಷ್ಟದ ಸಾಧ್ಯತೆ ಹೊಂದಿರುತ್ತವೆ.

ಹೂಡಿಕೆದಾರರು ಹಣ ತೊಡಗಿಸುವ ಮುನ್ನ ಎಲ್ಲ ಬಗೆಯ ನಷ್ಟದ ಸಾಧ್ಯತೆಗಳನ್ನು ಪರಿಗಣಿಸಲು ಮರೆಯಬಾರದು.  ಸಾಂಪ್ರದಾಯಿಕ ಆದಾಯವು ಪೂರ್ವ ನಿರ್ಧರಿತ ಬಡ್ಡಿ ದರದ ರೂಪದಲ್ಲಿ ಇರುತ್ತದೆ.  ಬಡ್ಡಿ ದರಗಳೂ ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.

ಮ್ಯೂಚುವಲ್‌ ಫಂಡ್ಸ್‌ಗಳ ಸಾಲ ನಿಧಿಗಳಲ್ಲಿನ ಹೂಡಿಕೆಯ ಆದಾಯವು ಆಯ್ಕೆ ಮಾಡಿಕೊಂಡ ಸಾಲಪತ್ರಗಳ ಬೆಲೆ ಏರಿಳಿತ ಆಧರಿಸಿರುತ್ತದೆ. ಷೇರು ಮಾರುಕಟ್ಟೆಯ ಏರಿಳಿತ ಆಧರಿಸಿ ಬೇರೆ, ಬೇರೆ ಫಂಡ್ಸ್‌ಗಳಿಂದ ಬರುವ ಆದಾಯವು ಭಿನ್ನವಾಗಿರುತ್ತದೆ. ಪ್ರತಿಯೊಂದು ಹೂಡಿಕೆಯ ಮೇಲಿನ ಆದಾಯವು ಗಂಡಾಂತರದ ಮಟ್ಟ ಆಧರಿಸಿರುತ್ತದೆ.

ಸರಳವಾಗಿ ಹೇಳುವುದಾದರೆ, ಯಾವುದೇ ವಹಿವಾಟಿನಲ್ಲಿ ನಷ್ಟ ಅಥವಾ ಗಂಡಾಂತರದ ಸಾಧ್ಯತೆ ಇದ್ದೇ ಇರುತ್ತದೆ. ಆದರೂ ಉದ್ಯಮಶೀಲರು  ತಮ್ಮ ಕನಸು ನನಸಾಗಿಸಲು ಮುನ್ನಡೆಯುತ್ತಾರೆ. ನಷ್ಟ ಸಾಧ್ಯತೆ ತಡೆದುಕೊಳ್ಳುವ ಅವರ ಸಾಮರ್ಥ್ಯ ಆಧರಿಸಿ  ಮುಂದುವರೆಯಲು ಇತರರು ಅವರನ್ನು ಹುರಿದುಂಬಿಸುತ್ತಾರೆ.

ಅದೇ ಬಗೆಯಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಹಲವಾರು ಯೋಜನೆಗಳು ವಿವಿಧ ಬಗೆಯ ಆದಾಯ ತಂದು ಕೊಡುತ್ತವೆ. ಇಲ್ಲಿ ನಷ್ಟದ ಸಾಧ್ಯತೆಯೂ ಇರುತ್ತದೆ. ಪ್ರತಿಯೊಬ್ಬರೂ ಹೂಡಿಕೆ ಮಾಡುವ ಮುನ್ನ ತಮ್ಮ ನಷ್ಟ ತಾಳಿಕೊಳ್ಳುವ ಸಾಮರ್ಥ್ಯ, ನಿರೀಕ್ಷಿತ ಆದಾಯ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು. ಷೇರು ಮಾರುಕಟ್ಟೆಯ ಅನಿಶ್ಚಿತತೆಯನ್ನು ಪರಿಗಣಿಸಿಯೇ ಸಾಲ ನಿಧಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಹೂಡಿಕೆ ಮಾಡಿದರೆ ನಷ್ಟದ ಸಾಧ್ಯತೆ ಕಡಿಮೆ ಇರುತ್ತದೆ.

ಸಾಲ ನಿಧಿಗಳು ಸಾಂಪ್ರದಾಯಿಕ ಹೂಡಿಕೆ ಆದಾಯ ಮೂಲಗಳಿಗಿಂತ ಭಿನ್ನ

l ಬ್ಯಾಂಕ್‌ ಠೇವಣಿಗಳಿಗೆ ಎಂಎಫ್‌ ಹೂಡಿಕೆ ನಗದೀಕರಣ ಹೋಲಿಸಲಿಕ್ಕಾಗದು

l ಅವಧಿ ಮತ್ತು ಬೇಡಿಕೆ ಬಾಧ್ಯತೆ ಪೂರೈಸಲು ಬ್ಯಾಂಕ್‌ಗಳಲ್ಲಿ ನಗದು ಪ್ರತ್ಯೇಕ ಮೀಸಲು

l ನಗದು ಬೇಡಿಕೆ ಈಡೇರಿಸಲು ‘ಎಂಎಫ್‌‘ಗಳಲ್ಲಿ ಪ್ರತ್ಯೇಕವಾಗಿ ಹಣ ತೆಗೆದು  ಇರಿಸಿರುವುದಿಲ್ಲ

l ಹೂಡಿಕೆ ಮುನ್ನ ನಿಧಿಗಳ ಸಾಲ ಮರುಪಾವತಿ ಸಾಮರ್ಥ್ಯ ಪರಿಗಣನೆ ಮುಖ್ಯ

l ನಷ್ಟ ಸಾಧ್ಯತೆಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು

(ಲೇಖಕ, ಎಸ್‌ಬಿಐ ಮ್ಯೂಚುವಲ್‌ ಫಂಡ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು