ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದ ಒಣದ್ರಾಕ್ಷಿ ಮಾರುಕಟ್ಟೆ: ಆನ್‌ಲೈನ್‌ ವಹಿವಾಟಿಗೆ ಗ್ರಹಣ

Last Updated 17 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದಲ್ಲಿ ತೋಟಗಾರಿಕೆ ಬೆಳೆಗಳ ಆನ್‌ಲೈನ್‌ ಟ್ರೇಡಿಂಗ್‌ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿ ನಾಲ್ಕು ವರ್ಷ ಕಳೆದರೂ, ಇದುವರೆಗೆ ಒಮ್ಮೆಯೂ ಅಲ್ಲಿ ಒಣದ್ರಾಕ್ಷಿ (ಮಣೂಕ) ವಹಿವಾಟು ನಡೆದಿಲ್ಲ. ಬೆರಳೆಣಿಕೆಯ ವರ್ತಕರ ಕಪಿಮುಷ್ಟಿಗೆ ಸಿಲುಕಿ ಮಾರುಕಟ್ಟೆ ನಲುಗುತ್ತಿದೆ.

ತೋಟಗಾರಿಕೆ ಬೆಳೆಗಾರರ ಅನುಕೂಲಕ್ಕಾಗಿ ₹ 2.75 ಕೋಟಿ ಖರ್ಚು ಮಾಡಿ, ಸರ್ಕಾರ ಈ ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ. ಆದರೆ, ವಹಿವಾಟು ಮಾತ್ರ ಇಂದಿಗೂ ಶುರುವಾಗಿಲ್ಲ. ಇದೀಗ ಒಣದ್ರಾಕ್ಷಿ ಮಾರುಕಟ್ಟೆಗೆ ಬರುವ ಹೊತ್ತು. ಟ್ರೇಡಿಂಗ್‌ ಸೆಂಟರ್‌ ಇದ್ದರೂ ಕಟ್ಟಡದ ಒಳಗೆ ಒಂದು ದಿನವೂ ಮುಕ್ತ ವಹಿವಾಟು ಸಹ ನಡೆದಿಲ್ಲ. ಹೊರಗಿನ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಿಲ್ಲ.

ಸ್ಥಳೀಯ ಪ್ರಭಾವಿ ವ್ಯಾಪಾರಿಗಳೇ ಕಟ್ಟಡದ ಹೊರ ಭಾಗದಲ್ಲಿ ಬೆಳೆಗಾರರಿಂದ ಮಣೂಕ ಖರೀದಿಸುವುದು ನಡೆದಿದೆ. ಭೀಕರ ಬರದಲ್ಲೂ ದ್ರಾಕ್ಷಿ ಬೆಳೆದು, ಮಣೂಕ ತಯಾರಿಸಿದವರಿಗೆ ಸೂಕ್ತ ಧಾರಣೆ ಸಿಗದಾಗಿದೆ ಎಂಬುದು ಬೆಳೆಗಾರರ ದೂರು.

ಮಾರುಕಟ್ಟೆ ಇದ್ದರೂ ಮಹಾರಾಷ್ಟ್ರಕ್ಕೆ: ‘ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಧಾರಣೆ ಒಂದು ಕೆ.ಜಿ.ಗೆ ₹ 80ರಿಂದ
₹ 180ರವರೆಗೂ ಇದೆ. ಮಹಾರಾಷ್ಟ್ರದ ಸಾಂಗ್ಲಿ, ತಾಸ್ಕಗಾಂವ್‌, ಮೀರಜ್ ಮಣೂಕ ಮಾರುಕಟ್ಟೆಗಳಿಗೆ ಹೋಲಿಸಿದರೆ, ಇಲ್ಲಿ ಧಾರಣೆ ಕಡಿಮೆ. ಬಹುತೇಕ ರೈತರು ಲಾಭಕ್ಕಾಗಿ ನೆರೆ ರಾಜ್ಯದ ಮಾರುಕಟ್ಟೆಗೆ ಹೋಗುತ್ತಾರೆ’ ಎಂದು ಟಕ್ಕಳಕಿಯ ಎಂ.ಎಸ್‌.ಬಿರಾದಾರ ಹೇಳುತ್ತಾರೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಆನ್‌ಲೈನ್‌ ಟ್ರೇಡಿಂಗ್‌ ಸೆಂಟರ್ ವಹಿವಾಟು ಆರಂಭಿಸಿದರೆ, ಇಡೀ ದೇಶದ ಮಾರುಕಟ್ಚಿಟೆ ತ್ರಣ ಒಂದೆಡೆ ಸಿಗಲಿದೆ. ಬೆಳೆಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಾಪಾರಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎನ್ನುವುದು ಅವರ ಆಶಯವಾಗಿದೆ. ಆದರೆ, ಬೆಳೆಗಾರರ ಕೂಗನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಅದು ಅರಣ್ಯ ರೋದನವಾಗಿದೆ ಎಂದೂ ಬೇಸರಿಸುತ್ತಾರೆ ಅವರು.

‘ಮಾರ್ಕೆಟ್‌ ಇದ್ರೂ ನಾಕೈದ್‌ ವರ್ಷದಿಂದ ಬಂದ್‌ ಬಿದ್ದೇತಿ. ಹೀಂಗಾಗಿ, ಬ್ಯಾರೆ ರಾಜ್ಯದಾಗಿನ ಧಾರಣಿ, ಮಾಹಿತಿ ಏನೂ ನಮಗ ಸಿಗಂಗಿಲ್ಲ. ಇಲ್ಲಿ ವ್ಯಾಪಾರಿಗಳು ಹೇಳಿದ್ದ... ಧಾರಣಿ! ಕಮಿಷನ್‌ಗೂ ಬ್ರೇಕ್‌ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬೆಳೆಗಾರರಾದ ಕಾತ್ರಾಳದ ಹನುಮಂತ ಕೊಕಟನೂರ ಹಾಗೂ ರಮೇಶ.

ನೆರೆ ರಾಜ್ಯದ ವಹಿವಾಟುದಾರರಿಗೆ ಮೊರೆ!

‘ವಿಜಯಪುರದ ಮಣೂಕ ಮಾರುಕಟ್ಟೆಯ ಬೆಳವಣಿಗೆಗಾಗಿ, ನೆರೆಯ ಮಹಾರಾಷ್ಟ್ರದ ವಿವಿಧೆಡೆಯ ಮಣೂಕ ಮಾರುಕಟ್ಟೆಗಳಲ್ಲಿನ ಬೃಹತ್ ವಹಿವಾಟುದಾರರ ಜತೆ ಚರ್ಚಿಸಿ, ನಮ್ಮಲ್ಲೂ ವಹಿವಾಟು ಆರಂಭಿಸುವಂತೆ ಕೋರಿಕೊಂಡಿದ್ದೇವೆ’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ 16 ವ್ಯಾಪಾರಿಗಳಿದ್ದಾರೆ. ಹರಾಜಿನಲ್ಲಿ ಪೈಪೋಟಿ ಇರುವುದಿಲ್ಲ. ಪ್ರತಿ ವರ್ಷ, ಇಲ್ಲಿನ ಶೇ 90ರಷ್ಟು ಉತ್ಪನ್ನವು ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಇದನ್ನು ತಪ್ಪಿಸಲು ಯತ್ನ ನಡೆಸಿದ್ದೇವೆ. ಹೊರ ರಾಜ್ಯದ ಎಂಟ್ಹತ್ತು ಬೃಹತ್‌ ವ್ಯಾಪಾರಿಗಳು ಇಲ್ಲಿಗೆ ಬಂದರೆ ಸಾಕು. ಮಾರುಕಟ್ಟೆ ಬೆಳವಣಿಗೆಯ ಗತಿಯೇ ಬದಲಾಗಲಿದೆ. ಈಗಾಗಲೇ ಒಬ್ಬ ವ್ಯಾಪಾರಿ ಬಂದಿದ್ದಾರೆ. ಇನ್ನೂ ಕೆಲವರು ಬರುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT