ಗುರುವಾರ , ನವೆಂಬರ್ 21, 2019
21 °C

‘ಆರ್ಥಿಕ ಸ್ಥಗಿತ’ ಸ್ಥಿತಿಯತ್ತ ಭಾರತ?

Published:
Updated:

ಮುಂಬೈ: ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ ತಿಂಗಳಲ್ಲಿ ಶೇ 3.99ಕ್ಕೆ ಏರಿಕೆಯಾಗಿದ್ದರೂ, ಆರ್‌ಬಿಐ ರೆಪೊ ದರಗಳನ್ನು ತಗ್ಗಿಸುವ ನೀತಿ ಮುಂದುವರೆಸಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಏರಿಕೆ ಕಂಡಿದೆ. ಡಿಸೆಂಬರ್‌ ತಿಂಗಳಲ್ಲಿ ನಡೆಯಲಿರುವ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಕೇಂದ್ರೀಯ ಬ್ಯಾಂಕ್‌ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ದೇಶಿ ಆರ್ಥಿಕತೆಯು ಗರಿಷ್ಠ ಹಣದುಬ್ಬರ, ಮಂದಗತಿಯ ಬೆಳವಣಿಗೆ ಹಾಗೂ ಕಡಿಮೆ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಸೃಷ್ಟಿಯಾಗುವ ‘ಸ್ಥಗಿತ’ ಆರ್ಥಿಕತೆಯತ್ತ ಸಾಗಬಹುದು ಎಂಬುದು ಕೆಲ ವಿಶ್ಲೇಷಕರ ಆತಂಕವಾಗಿದೆ.

ವೃದ್ಧಿ ದರ ಪರಿಷ್ಕರಿಸಿದ ಐಎಂಎಫ್‌

2019–20ರಲ್ಲಿನ ಭಾರತದ ಆರ್ಥಿಕ ವೃದ್ಧಿ ದರವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪರಿಷ್ಕರಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಅಂದಾಜಿಸಿದ್ದ ಶೇ 7.3ರ ಬದಲಿಗೆ ಶೇ 1.2ರಷ್ಟು ತಗ್ಗಿಸಿ ಶೇ 6.1ಕ್ಕೆ ಇಳಿಸಿದೆ.

ಜಾಗತಿಕ ಆರ್ಥಿಕತೆಯ ಪ್ರಗತಿ ಶೇ 3ರಷ್ಟು ಇರಲಿದೆ. ಇದು 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರದ ಅತಿ ಕಡಿಮೆ ದರವಾಗಿದೆ. 2017ರಲ್ಲಿನ ಶೇ 3.8ಕ್ಕಿಂತ ಇದು ಕಡಿಮೆ ಇದೆ. ವಿಶ್ವದಾದ್ಯಂತ ಏಕಕಾಲಕ್ಕೆ ಕುಂಠಿತ ಪ್ರಗತಿ ಕಾಣುತ್ತಿರುವ, ಪುನಶ್ಚೇತನ ಕುರಿತ ಅಸ್ಪಷ್ಟತೆ ಕಾರಣಕ್ಕೆ ಜಾಗತಿಕ ಆರ್ಥಿಕತೆಯು ಅನಿಶ್ಚಿತ ಗಂಡಾಂತರ ಎದುರಿಸುತ್ತಿದೆ ಎಂದು ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ ತಿಳಿಸಿದೆ.

ಆಮದು, ರಫ್ತು ವಹಿವಾಟು ಇಳಿಕೆ

ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದ ಆಮದು ಮತ್ತು ರಫ್ತು ವಹಿವಾಟು ಕ್ರಮವಾಗಿ ಶೇ 13.85 ಮತ್ತು ಶೇ 6.57ರಷ್ಟು ಕಡಿಮೆಯಾಗಿದೆ.

30 ಪ್ರಮುಖ ರಫ್ತು ವಲಯಗಳ ಪೈಕಿ 22 ವಲಯಗಳ ರಫ್ತು ವಹಿವಾಟು ಋಣಾತ್ಮಕ ಬೆಳವಣಿಗೆ ಕಂಡಿದೆ.

ಚಿನ್ನಾಭರಣ ಉದ್ದಿಮೆಯ ಆತಂಕ

ಈ ಬಾರಿಯ ದೀಪಾವಳಿಯು ಚಿನ್ನಾಭರಣ ಉದ್ದಿಮೆಯ ಪಾಲಿಗೆ ಅಂಧಕಾರಮಯವಾಗಲಿರುವ ಆತಂಕ ಎದುರಾಗಿದೆ. ಚಿನ್ನದ ದುಬಾರಿ ದರದ ಕಾರಣಕ್ಕೆ ಚಿನ್ನಾಭರಣ ಮಾರಾಟವು ಶೇ 30ರಷ್ಟು ಕುಸಿತ ಕಾಣಲಿದೆ ಎನ್ನುವ ಕಳವಳ ವರ್ತಕರಲ್ಲಿ ಮನೆ ಮಾಡಿದೆ.

ರೂಪಾಯಿ ಕುಸಿತ: ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಕುರಿತ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರಿನ ರೂಪಾಯಿ ದರವು 31 ಪೈಸೆ (₹ 71.54) ಕಡಿಮೆಯಾಗಿದೆ.

ಪ್ರತಿಕ್ರಿಯಿಸಿ (+)