ಹೊನ್ನು, ಹೆಣ್ಣು ಮತ್ತು ಮಣ್ಣುಗಳು ಈಗಲೂ ಅನೇಕರ ಗುರಿ ಮತ್ತು ಕನಸು. ನಿಜದಲ್ಲಿ ಆರ್ಥಿಕತೆಯ ಮೂಲಧಾತುಗಳೆಂದು ಈ ಮೂರನ್ನೂ ಗುರ್ತಿಸಲಾಗುತ್ತಿದೆ. ಹೊಳೆಯುವ ಹಳದಿ ಲೋಹ, ಹೊಳೆಯುತ್ತಲೇ ಕೊನೆಗೊಮ್ಮೆ ಕೊಳೆಯುವ ಹೆಣ್ಣುದೇಹ, ಕೊಳೆಯಲು ನಿರಾಕರಿಸಿಯೂ ಮನುಷ್ಯನ ದುರಾಸೆಗೆ ಕೊಳೆಯಲು ಆರಂಭಿಸಿರುವ ಮಣ್ಣುದೇಹ – ಈ ಮೂರನ್ನೂ ಅದೆಷ್ಟು ದುರ್ಬಳಕೆ ಮಾಡಿಯೂ ಅವುಗಳನ್ನು ಇನ್ನೂ ಹೂಡುವ ದಾರಿಗಳನ್ನು ಹುಡುಕಿ ತೆಗೆಯಲಾಗುತ್ತಿದೆ. ಇದು ಅವುಗಳ ಶಕ್ತಿಯೋ, ಹುಡುಕುತ್ತಿರುವವರ ಅಸೀಮ ಅಸುರೀ ಶಕ್ತಿಯೋ ಹೇಳುವುದು ಕಷ್ಟ.

ಚಿನ್ನ ಎನ್ನುವುದು ಅದೆಷ್ಟೊಂದು ಸಂಗತಿಗಳಿಗೆ ರೂಪಕ! ಚಿನ್ನದಂತಹ ಮಾತು, ಚಿನ್ನದಂತಹ ವ್ಯಕ್ತಿತ್ವ, ಅಪ್ಪಟ ಚಿನ್ನ ಎನ್ನುವುದಂತೂ ಇನ್ನು ಮುಂದೆ ಶಬ್ದವಿಲ್ಲ ಎನ್ನುವಂತಹ ಆತ್ಯಂತಿಕ ಗುಣವಾಚಕ. ಅದು ಮನುಷ್ಯರಾದವರು ಏರಬಹುದಾದ ಎತ್ತರ, ಸಾಧಿಸಬಹುದಾದ ಪರಿಪಾಕ!

ಚಿನ್ನವನ್ನು ಲೌಕಿಕ ಶ್ರೀಮಂತಿಕೆಯೊಂದಿಗೆ ಮಾತ್ರ ನಾವು ಸಮೀಕರಿಸಿಕೊಂಡಿಲ್ಲ ಎನ್ನುವುದೇ ಇದರ ಲೋಕೋತ್ತರ ಸಂಗತಿಯಾಗಿದೆ. ಕೆಜಿಎಫ್ನ ಚಿನ್ನದ ಗಣಿಯೊಂದಿಗೆ ಹೆಣೆದುಕೊಂಡಿರುವ ನೂರಾರು ಸಂಗತಿಗಳನ್ನು ಕುರಿತು ಓದುವುದೇ ಒಂದು ರೋಮಾಂಚಕಾರಿ ಅನುಭವ. ಗಣಿಯಲ್ಲಿ ಹೂತುಹೋದವರ ಸಂಖ್ಯೆ ಅಸಂಖ್ಯಾತ. ಗಣಿಗಳ ಆಳ, ಆ ಕಗ್ಗತ್ತಲಿನಲ್ಲಿ ಮಿಣುಕು ದೀಪಗಳನ್ನು ಹಣೆಗೆ ಕಟ್ಟಿಕೊಂಡು ಅದಿರನ್ನು ಬುಟ್ಟಿಯಲ್ಲಿ ತುಂಬುವ, ಹೊರ ಸಾಗಿಸುವ ಮೊದಲ ಘಟ್ಟ, ನಂತರದಲ್ಲಿ ಯಂತ್ರಗಳನ್ನು ಬಳಸಿ ಭೂಮಿಯನ್ನು ಅಗೆದಗೆದು ತುಂಬುವ ಎರಡನೆಯ ಘಟ್ಟ, ಚಿನ್ನ ಕದಿಯಲು ಮಾಡಿದ ಅದೆಂತೆಂತಹ ಸಾಹಸಗಳು, ಆ ಕಳ್ಳತನಕ್ಕೆ ಸಿಗುತ್ತಿದ್ದ ಶಿಕ್ಷೆಗಳಾದರೂ ಅದೆಷ್ಟು ಭಯಾನಕ! ಆ ಚಿನ್ನದ ಮೇಲೆ ಆಧಿಪತ್ಯ ಸ್ಥಾಪಿಸಲು ಬ್ರಿಟಿಷರು ಆದಿಶೇಷನಂತೆ ಕಟ್ಟಿಕೊಂಡ ಸರ್ಪಗಾವಲಿನ ವ್ಯವಸ್ಥೆ, ಅದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮೆದುರು ಸುಳಿಯುವ ಪ್ರಶ್ನೆ: ಈ ಲೋಹಕ್ಕೆ ಇಷ್ಟೊಂದು ಮಾನವಶಕ್ತಿಯ, ಸಮಯದ ಬಳಕೆ ಮತ್ತು ಬಲಿಯ ಅಗತ್ಯವಿದೆಯೆ? ಬ್ರಿಟಿಷರಂತೂ ಕೆಲಸಗಾರರನ್ನು ಮನುಷ್ಯರಂತೆ ನಡೆಸಿಕೊಂಡದ್ದಕ್ಕಿಂತ ಜೀತದಾಳುಗಳಂತೆ ನಡೆಸಿಕೊಂಡದ್ದೇ ಹೆಚ್ಚು. ಈಗಲೂ ಕೆಜಿಎಫ್ನಲ್ಲಿ ಸಂಕರ ಎನ್ನಬಹುದಾದ ಸಾಂಸ್ಕೃತಿಕ ವಾತಾವರಣವಿದೆ. ಕೆಲವು ವೈರುಧ್ಯಗಳಂತೂ ಒಟ್ಟಿಗೇ ಅಸ್ತಿತ್ವದಲ್ಲಿವೆ, ಮತ್ತೆ ಕೆಲವು ಅಖಂಡವಾಗಿ ಮಣ್ಣಿನೊಂದಿಗೆ ಬೆರೆತುಹೋಗಿವೆ.

ಕವಿ ಸಿದ್ಧಲಿಂಗಯ್ಯನವರ ಆತ್ಮಚರಿತ್ರೆ ‘ಊರು ಕೇರಿ’ಯಲ್ಲಿ ಒಂದು ಪ್ರಸಂಗವಿದೆ. ಅವರು ಶ್ರೀರಾಮಪುರದ ಸ್ಲಂನಲ್ಲಿ ವಾಸವಿದ್ದಾಗ, ಅಲ್ಲಿನ ದೊಡ್ಡ ದೊಡ್ಡ ಗಟಾರಗಳಲ್ಲಿ ಹುಡುಗರು ಒಂದು ತುದಿಯಿಂದ ಆರಂಭಿಸಿ ಮತ್ತೊಂದು ತುದಿಯ ತನಕ, ಆ ಕತ್ತಲು, ವಾಸನೆ, ಕೊಚ್ಚೆಯಲ್ಲಿ ಚಿನ್ನದ ಕಣಗಳಿಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಜರಡಿಯಲ್ಲಿ ಕಸವನ್ನೆಲ್ಲ ಸೋಸುತ್ತಾ, ಗಟಾರದ ಮತ್ತೊಂದು ತುದಿಯಲ್ಲಿ ತಲೆಯೆತ್ತುತ್ತಿದ್ದುದನ್ನು ಓದುತ್ತಿದ್ದಾಗ ಕೆಜಿಎಫ್ ಮಾತ್ರವಲ್ಲ, ಭಾರತದಿಂದ ಅದೆಷ್ಟೋ ಹಡಗುಗಳಲ್ಲಿ ಬ್ರಿಟಿಷರು ತುಂತುಂಬಿ ಒಯ್ದ ಚಿನ್ನ, ಮುತ್ತು, ರತ್ನಗಳ ನೆನಪಾಯಿತು. ಅಣುವಿನಂತಹ ಚಿನ್ನಕ್ಕಾಗಿ ಕಸವನ್ನು ಸೋಸುವ ಹುಡುಗರೆಲ್ಲಿ? ಹಕ್ಕಿನದೆಂಬಂತೆ ಹಡಗುಗಳಲ್ಲಿ ಸಾಗಿಸಿದ ಚಿನ್ನವೆಲ್ಲಿ?

ಚಿನ್ನವನ್ನು ಸಾವಿಲ್ಲದ ಸಂಪತ್ತೆಂದು, ಸಮಾಜ ಮತ್ತು ಪ್ರಭುತ್ವ ಸಮಾನವಾಗಿ ನಂಬಿಕೊಂಡಿವೆ. ಹೆಣ್ಣುಮಕ್ಕಳಿಗೆ ಚಿನ್ನವನ್ನು ಆಪದ್ಧನವೆಂದು ಪೋಷಕರು ಕೊಡುವುದು ವಾಡಿಕೆ. ಆದರೆ, ಹೆಣ್ಣುಮಕ್ಕಳ ಆ ಚಿನ್ನದ ಮೇಲಿನ ಆಧಿಪತ್ಯ ಯಾರದು ಎನ್ನುವುದು ಬೇರೆಯ ಪ್ರಶ್ನೆ. ಹೆಣ್ಣುಮಕ್ಕಳಿಗೆ ಚಿನ್ನವನ್ನು ಕೊಡುವುದು ಅವಳ ಮಟ್ಟಿಗೆ ಅದೊಂದು ‘ಸುರಕ್ಷತೆಯ ಬಾಂಡ್’ ಎನ್ನುವ ಕಾರಣಕ್ಕೆ. ಸಾಮಾನ್ಯ ಹೆಣ್ಣುಮಕ್ಕಳಿಂದ ಹಿಡಿದು ಮಹಾರಾಣಿಯರ ತನಕವೂ ಇದು ನಿಜ. ‘ಮಹಾರಾಣಿ ವಿದ್ಯಾಸಂಸ್ಥೆ’ಗಳನ್ನು ಆರಂಭಿಸುವಾಗ, ಶಿಂಷಾ ವಿದ್ಯುಚ್ಚಕ್ತಿ ಘಟಕವನ್ನು ಆರಂಭಿಸುವಾಗ ಮೈಸೂರಿನ ಒಡೆಯರಿಗೆ ಹಣದ ಮುಗ್ಗಟ್ಟು ಎದುರಾಯಿತು. ಆಗ ಮಹಾರಾಣಿಯಾಗಿದ್ದ ಕೆಂಪನಂಜಮ್ಮಣ್ಣಿಯವರು ತಮ್ಮ ಅಮೂಲ್ಯ ಚಿನ್ನಾಭರಣಗಳನ್ನು ಅಡವಿಟ್ಟು ಆ ಯೋಜನೆಗಳು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಂಡರು. ನಾಲ್ವಡಿಯವರನ್ನು ನಮ್ಮ ಕಾಲದ ‘ರಾಜರ್ಷಿ’ಯೆಂದು ಗಾಂಧೀಜಿ ಕರೆದರಲ್ಲ, ಅವರ ಜನಪರ ನಿಲುವುಗಳು ಯಾವ ಕಾಲಕ್ಕೂ ಮಾದರಿ ಎಂದು ನಾವು ಪ್ರೀತಿ ಮತ್ತು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದರ ಹಿಂದೆ ಚಿನ್ನದ ಪಾತ್ರವೂ ಇದೆ.

ಮಹಾರಾಣಿಯವರ ಬಳಿಯಿದ್ದ ಅಪಾರ ಚಿನ್ನಲೋಕಕಲ್ಯಾಣಕ್ಕಾಗಿ ಬಳಕೆಯಾಯಿತು. ಅದೆಷ್ಟುಸಾವಿರ, ಲಕ್ಷ ಮನೆಗಳಲ್ಲಿ ಮಹಿಳೆಯರ ಬಳಿಇರುವ ಚಿನ್ನ, ಅದಿರುವುದೇ ಮನೆಯ ಕಷ್ಟಗಳನ್ನುಬಗೆಹರಿಸಲು, ಚಿನ್ನದ ವ್ಯಾಪಾರಿಗಳು ಇರುವುದೇಅವುಗಳನ್ನು ಅಡ ಇರಿಸಿಕೊಳ್ಳಲು ಎನ್ನುವಮಟ್ಟಿಗೆಚಿನ್ನ ನಮ್ಮ ಆಪ್ತಮಿತ್ರೆ, ಆಪದ್ಭಾಂಧವೆ. ಚಿನ್ನವನ್ನುಸೃಷ್ಟಿಸಿರುವುದೇ ಹೆಣ್ಣಿಗಾಗಿ ಎನ್ನುವ ಮಾತುಗಳು ಲಾಗಾಯ್ತಿನಿಂದಲೂ ಸ್ಥಾಪಿತವಾಗಿವೆ ಮಾತ್ರವಲ್ಲ,ಬಹುತೇಕ ಸಂದರ್ಭಗಳಲ್ಲಿ ಆ ಚಿನ್ನ ನಮ್ಮ ಕಷ್ಟಕ್ಕೆ ಒದಗುವುದು ಹೆಣ್ಣುಮಕ್ಕಳ ಒಡವೆಯ ರೂಪದಲ್ಲಿ ಎಂದಾದ ಮೇಲೆ ಆ ಸಹಾಯವನ್ನು ಸ್ತ್ರೀವಾಚಕಗಳಲ್ಲಿ ಬಳಸುವುದೇ ಹೆಚ್ಚು ಸರಿ.

ಲೇಖಕರೊಬ್ಬರು ತಮ್ಮ ಆತ್ಮಚರಿತ್ರೆಯಲ್ಲಿ, ಅವರಮನೆಯ ಚಿನ್ನ ಮನೆಯಲ್ಲಿದ್ದದ್ದೇ ಕಮ್ಮಿ, ಅದುಯಾವಾಗಲೂ ನಮ್ಮ ಊರಿನ ಮಾರವಾಡಿಗಳ ಅಂಗಡಿಯಲ್ಲಿರುತ್ತಿತ್ತು, ಕೊನೆಗೊಮ್ಮೆ ಮಗಳೊಬ್ಬಳು ಅವುಗಳನ್ನು ನೋಡಲೇಬೇಕೆಂದು ಹಟ ಮಾಡಿದಾಗ ಅಂಗಡಿಗೇ ಅವಳನ್ನು ಕರೆದೊಯ್ದು, ಅಂಗಡಿಯವನನ್ನು ಒಪ್ಪಿಸಿ ಅವುಗಳನ್ನು ತೋರಿಸುವಾಗ ಕಣ್ಣಲ್ಲಿ ನೀರು ಬಂದಿತು ಎನ್ನುತ್ತಾರೆ. ತಮಿಳಿನ ಕತೆಯೊಂದರಲ್ಲಿ ತಾಯಿ ಬಯಸಿದ ಎರಡೇ ಎರಡು ಚಿನ್ನದ ಬಳೆಗಳನ್ನು ಮಾಡಿಸಿಕೊಡಲು ಮಗ ಅದೆಷ್ಟು ಕಷ್ಟಪಟ್ಟರೂ ಆಗದ, ಆ ಕೊರತೆಯೊಂದಿಗೇ ಆಕೆ ಸಾಯುವ ದಾರುಣ ಪ್ರಸಂಗವಿದೆ. ಇಲ್ಲಿ ಪ್ರಶ್ನೆಚಿನ್ನದ್ದಲ್ಲ ನಿಜ, ಅದು ಅಮ್ಮ–ಮಗನ ಸಂಬಂಧದ ಎಳೆಯನ್ನು ನೇಯುವುದರಲ್ಲಿ ಚಿನ್ನ ವಹಿಸಿದ ಪಾತ್ರದ್ದು. ಅಮ್ಮನನ್ನು ಕುರಿತ ತನ್ನ ಪ್ರೀತಿಯನ್ನು ತೋರಿಸಲು ಚಿನ್ನದ ಬಳೆಗಳನ್ನು ಮಾಡಿಸಿಕೊಡಲಾಗದ್ದು ಆ ಮಗನಿಗೆ ತನ್ನ ಪ್ರೀತಿ, ಕರ್ತವ್ಯ, ಜವಾಬ್ದಾರಿ ಎಲ್ಲದರಲ್ಲೂ ಸೋತ ಅನುಭವವನ್ನು ಕೊಟ್ಟು, ಜೀವಮಾನವಿಡೀ ಕಾಡುತ್ತದೆ.

ಇದನ್ನೆಲ್ಲ ಹೇಳಬೇಕಾಗಿ ಬಂದದ್ದು ‘ಒಂದು ವರ್ಷ ಚಿನ್ನ ಕೊಳ್ಳಬೇಡಿ’ ಎನ್ನುವ ಪ್ರಧಾನಿಯ ಸಲಹೆಯನ್ನು ನೋಡಿದಾಗ. ವಾಟ್ಸ್ಆ್ಯಪ್ ವಿವಿಯಲ್ಲಿ ಕಳೆದ 70–80 ವರ್ಷಗಳಲ್ಲಿ ಚಿನ್ನದ ಬೆಲೆ ಹೇಗೆ ಏರಿಕೆಯಾಗುತ್ತಾ ಹೋಯಿತು ಎನ್ನುವುದನ್ನು ವಿವರವಾಗಿ ಕೊಡುತ್ತಲೇ ಇದ್ದಾರೆ. ಇನ್ನೊಂದು ಕಡೆ ಚಿನ್ನದ ಅಂಗಡಿಗಳಲ್ಲಿ ಮುಕುರಿರುವ ಹೆಂಗಳೆಯರ ಚಿತ್ರಗಳನ್ನು ತೋರಿಸುತ್ತಾ– ಹೆಣ್ಣುಮಕ್ಕಳಿಗೆ ತುಸುವಾದರೂ ವಿವೇಕವಿದೆಯೆ, ಇಷ್ಟು ಬೆಲೆ ಕೊಟ್ಟಾದರೂ ಚಿನ್ನ ಯಾಕೆ ಕೊಳ್ಳುತ್ತಾರೆ ಎಂದು ವ್ಯಂಗ್ಯ, ಗೇಲಿಯ ಉದ್ಗಾರಗಳನ್ನು ಎಳೆದೆಳೆದು ಹಾಕುತ್ತಿದ್ದಾರೆ. ಜಮಾನದಿಂದಲೂ ಹೆಣ್ಣಿನ ಚಿನ್ನದ ಕುಟುಂಬವತ್ಸಲ ಗುಣಗಳನ್ನು ಬಳಸಿಯೂ ಅನುಭವಿಸಿಯೂ ಇಂಥ ಮಾತುಗಳನ್ನು ಆಡುವ ಅಗತ್ಯವಿಲ್ಲ.

ಚಿನ್ನದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟವರು ಅನುಭವಿಸುತ್ತಿರುವ ಮೋಸದ ಕತೆಗಳು ಸನ್ನಿವೇಶವನ್ನು ಇನ್ನೂ ಸಂಕೀರ್ಣಗೊಳಿಸುತ್ತಿವೆ. ಇದು ಭ್ರಷ್ಟಾಚಾರದ ಊಹಿಸಲಸಾಧ್ಯವಾದ ಸಾಧ್ಯತೆಗಳ ಹೊಸ ಅವತಾರವಾಗಿದೆ. ನಕಲಿ ಚಿನ್ನವನ್ನು ಅಸಲಿ ಚಿನ್ನದ ಜಾಗದಲ್ಲಿ ಲಾಕರ್ನಲ್ಲಿ ಇಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಅಮೂಲ್ಯವಾದ ವಸ್ತುವಿಗೆ ಸುರಕ್ಷಿತ ತಾಣ ಯಾವುದು? ಮನೆಯೂ ಅಲ್ಲ, ಬ್ಯಾಂಕೂ ಅಲ್ಲ, ಮತ್ತಾವುದು? ನಮ್ಮ ಅಜ್ಜಿ, ಮನೆಯ ಯಾವುದೋ ಮೂಲೆಯಲ್ಲಿ ನೆಲ ಬಗೆದು ಆಭರಣಗಳನ್ನು ಬುಟ್ಟಿಯಲ್ಲಿ ತುಂಬಿ ಹೂತಿಡುತ್ತಿದ್ದರಂತೆ. ಸರಸ್ವತಿ ಬಾಯಿ ರಾಜವಾಡೆ, ಕನ್ನಡದ ಆರಂಭದ ಮುಖ್ಯ ಲೇಖಕಿಯರಲ್ಲಿ ಒಬ್ಬರು, ಅವರಿಗೂ ಅವರ ಗಂಡ ತಾನು ಸಾಯುವ ಮುಂಚೆಯೇ ಎರಡು ಬುಟ್ಟಿಗಳಲ್ಲಿ ಚಿನ್ನ ತುಂಬಿ ಮನೆಯಲ್ಲಿ ಹೂತಿಡಿಸಿದ್ದರು.

ಹೊನ್ನಿಗಾಗಿ, ಮಣ್ಣಿಗಾಗಿ ಸತ್ತವರಿದ್ದಾರೆ, ನಿಮಗಾಗಿ ಸತ್ತವರನಾರನೂ ಕಾಣೆ ಎನ್ನುವ ವಚನಕಾರರ ಮಾತು ಭವಿ ಮತ್ತು ಶರಣರ ನಡುವಿನ ಕಂದರವನ್ನು ಹೇಳುವುದರ ಜೊತೆಗೇ ಈ ಲೌಕಿಕದ ಸಂಕೇತಗಳೊಂದಿಗೆ ನಾವು ಇಟ್ಟುಕೊಳ್ಳಬೇಕಾದ ಅಂತರವನ್ನೂ ಧ್ವನಿಸುತ್ತಿವೆ ಎನ್ನಿಸುತ್ತದೆ. ಇಷ್ಟಾಗಿ ಕನ್ನಡಿಗರು ಇನ್ನೂ ಒಂದು ಚಿನ್ನದ ಬಗ್ಗೆ, ಸಂಪತ್ತಿನ ಬಗ್ಗೆ ನಂಬಿಕೆ ಇಟ್ಟವರಾಗಿದ್ದರು. ‘ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಂ ಪರ ಧರ್ಮಮುಂ’ (ಅನ್ಯರ ವಿಚಾರಗಳನ್ನು, ಅನ್ಯರ ಧರ್ಮವನ್ನು ಸಹಿಸಿಕೊಳ್ಳುವ ವಿವೇಕವೇ ನಿಜವಾದ ಚಿನ್ನ) ಎನ್ನುತ್ತಾನೆ ಕವಿರಾಜಮಾರ್ಗಕಾರ. ಚಿನ್ನ ಮತ್ತು ಚಿನ್ನದಂತಹ ವಿಚಾರಗಳು, ಎರಡೂ ನಮಗೆ ಬೇಕು.

ಇನ್ನು ಚಿನ್ನ ಕೊಳ್ಳಬೇಕೇ ಬೇಡವೇ ಎನ್ನುವುದಕ್ಕೆ ವಿದೇಶದಿಂದ ಆಮದಾಗುತ್ತಿರುವ, ಅದರ ಸುಂಕವೇಬಹು ಹೆಚ್ಚಾಗುತ್ತಿರುವ ವಾಸ್ತವವನ್ನು ಒಪ್ಪುವುದು, ಪ್ರಧಾನಿಯವರ ಸಲಹೆಯನ್ನು ಪಾಲಿಸುವುದು ಜನಪ್ರಭುಗಳ ವಿವೇಚನೆಗೆ ಬಿಟ್ಟದ್ದು. ನೀತಾ ಅಂಬಾನಿಯವರು ಕುಡಿಯುವ ನೀರಿನಲ್ಲೇ ಚಿನ್ನದ ಅಣುಗಳನ್ನು ಸೇರಿಸಲಾಗಿರುತ್ತದೆ ಎನ್ನುವ ಅಂಶವನ್ನು ಎಲ್ಲಿಯೋ ಓದಿದ ನೆನಪು. ಉಳ್ಳವರಿಗೆ ಯಾವ ಬೆಲೆಯೇರಿಕೆ? ಇಲ್ಲದವರಿಗೆ ನೀವು ಸಲಹೆ ಕೊಡುವ ಅಗತ್ಯವೇ ಇಲ್ಲ, ಹೇಗೂ ಅವರಿಗೆ ಕೊಳ್ಳುವ ಶಕ್ತಿ ಇರುವುದಿಲ್ಲ. ಮಧ್ಯಮವರ್ಗದವರಿಗೇ ನಿಜವಾದ ಕಷ್ಟ. ಬೇಕು–ಬೇಡಗಳ ನಡುವಿನ ಆಯ್ಕೆ ಅವರಿಗೆ ಸುಲಭದ್ದಲ್ಲ.

ಚಿನ್ನವನ್ನು ಕೊಳ್ಳಬೇಡಿ ಎನ್ನುವ ಸಲಹೆಗಿಂತ ಚಿನ್ನ ಕೊಳ್ಳುವ, ಅದರ ಆಪದ್ಧನದ ಶಕ್ತಿಯನ್ನು ಎಲ್ಲರೂ ಪಡೆಯುವಂತೆ ಅವಕಾಶ ಸೃಷ್ಟಿಸುವುದೇ ನಿಜವಾದ ಪ್ರಜಾಪ್ರಭುತ್ವದ ಶಕ್ತಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1302895335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.