ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ 2021ರಲ್ಲೂ ಹಳಿಗೆ ಮರಳದು: ಐಎಂಎಫ್‌

Last Updated 18 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಮೊದಲೇ ಹಿಂಜರಿಕೆಯ ಹಾದಿಯಲ್ಲಿದ್ದ ಜಾಗತಿಕ ಅರ್ಥವ್ಯವಸ್ಥೆಯು ಕೊರೊನಾ ಕಾರಣದಿಂದಾಗಿ 2020ನೇ ಸಾಲಿನಲ್ಲಿ ‘ತೀವ್ರ ಹಿಂಜರಿತ’ ಅನುಭವಿಸಲಿದೆ. ಅಭಿವೃದ್ದಿಶೀಲ ರಾಷ್ಟ್ರಗಳ ನೀತಿ ನಿರೂಪಕರಿಗೆ ಈಗಿನ ಬಿಕ್ಕಟ್ಟು ಬಹುದೊಡ್ಡ ಸವಾಲಾಗಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಆಡಳಿತ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಭಾಗದಲ್ಲಿ ದೊಡ್ಡ ಹಿಂಜರಿತವೊಂದನ್ನು ತಪ್ಪಿಸಲಾಗದು ಎಂದು ಅವರು ಐಎಂಎಫ್‌ ಹಾಗೂ ವಿಶ್ವ ಬ್ಯಾಂಕ್‌ನ ಅಭಿವೃದ್ಧಿ ಸಮಿತಿಯ ವಾರ್ಷಿಕ ಸಭೆಯಲ್ಲಿ ತಿಳಿಸಿದರು.

‘ವ್ಯಾಪಾರ ವಿವಾದಗಳು, ನೀತಿಗಳ ಗೊಂದಲ ಹಾಗೂ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಯ ಕಾರಣ ಗಳಿಂದ ಜಾಗತಿಕ ಅರ್ಥವ್ಯವಸ್ಥೆಯು ದುರ್ಬಲಗೊಂಡಿದ್ದ ಸಂದರ್ಭದಲ್ಲೇ ಕೊರೊನಾ ಪಿಡುಗು ಕಾಡಿತು. ಹಿಂದೆಂದೂ ಕಾಣದಂಥ ಬಿಕ್ಕಟ್ಟನ್ನು ಇದು ಸೃಷ್ಟಿಸಿದೆ. ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯು ದುರ್ಬಲವಾಗಿರುವ, ಚಿಕಿತ್ಸಾ ಸಾಮರ್ಥ್ಯ ಕಡಿಮೆ ಇರುವ ಮತ್ತು ಕೊರೊನಾದಿಂದ ಉಂಟಾದ ಹಾನಿಯನ್ನು ಕಡಿಮೆ ಮಾಡಲು ಅಗತ್ಯ ನೀತಿಗಳನ್ನು ಹೊಂದಿರದ ರಾಷ್ಟ್ರಗಳು ಮುಂದೆ ಭಾರಿ ಸವಾಲು ಎದುರಿಸಬೇಕಾ ಗುತ್ತದೆ' ಎಂದರು.

‘ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದರೆ ಮತ್ತು ನೀತಿಗಳಲ್ಲಿ ಮಾಡಿರುವ ಬದಲಾವಣೆಗಳು ಸಕಾರಾತ್ಮಕ ಪರಿಣಾಮ ಉಂಟುಮಾಡಿದರೆ, ಮೂರನೇ ತ್ರೈಮಾಸಿಕದಿಂದ ಜಾಗತಿಕ ಅರ್ಥವ್ಯವಸ್ಥೆಯು ಚೇತರಿಕೆಯ ಹಾದಿ ಹಿಡಿಯಬಹುದು ಎಂದು ಊಹಿಸಲಾಗಿದೆ. ಆದರೆ, ನಿಜವಾದ ಚೇತರಿಕೆ 2021ರ ಬಳಿಕವೇ ಕಾಣಿಸಲಿದೆ. 2021ರ ಅಂತ್ಯದಲ್ಲೂ ಜಾಗತಿಕ ಉತ್ಪಾದನೆಯು ಕೊರೊನಾ ಬಿಕ್ಕಟ್ಟಿನ ಪೂರ್ವದಲ್ಲಿದ್ದ ಉತ್ಪಾದನೆ ಪ್ರಮಾಣಕ್ಕಿಂತಲೂ ಕಡಿಮೆಯೇ ಆಗಿರುತ್ತದೆ' ಎಂದರು.

‘ಕೊರೊನಾ ನಿಯಂತ್ರಣ, ಅದಕ್ಕೆ ಲಸಿಕೆ ಅಭಿವೃದ್ಧಿಪಡಿಸುವುದು, ಆನಂತರ ಹಾನಿ ತಡೆಗಟ್ಟಲು ಎಷ್ಟು ಪರಿಣಾಮಕಾರಿಯಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂಬ ಹಲವು ಅಂಶಗಳ ಮೇಲೆ ಆರ್ಥಿಕ ವರ್ಷದ ಎರಡನೇ ಅವಧಿಯ ಅಭಿವೃದ್ಧಿಯು ಅವಲಂಬಿಸಿರುತ್ತದೆ. ಸರಬರಾಜು ವ್ಯವಸ್ಥೆಗೆ ಆಗಿರುವ ಹಾನಿ, ವೆಚ್ಚದ ಬಾಬ್ತಿನಲ್ಲಿ ಆಗುವ ಬದಲಾವಣೆಗಳು ಸಹ ಪರಿಣಾಮ ಉಂಟುಮಾಡಲಿವೆ' ಎಂದು ಅವರು ಹೇಳಿದರು.

‘ಪಿಡುಗಿನಿಂದ ಪ್ರಾಣ ಹಾನಿ ಮತ್ತು ಆರ್ಥಿಕ ಹಾನಿಯನ್ನು ಕನಿಷ್ಠಗೊಳಿಸು ವುದು, ಅದರಲ್ಲೂ ಪ್ರಾಣಹಾನಿ ತಪ್ಪಿಸುವುದು ಆದ್ಯತೆಯಾಗಬೇಕು. ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಯೋಜನೆಗಳನ್ನು ರೂಪಿಸುವವರು ಕೈಗೊಳ್ಳಬೇಕು’ ಎಂದು ಸೂಚಿಸಿದರು.

143 ರಾಷ್ಟ್ರಗಳ 36.85 ಕೋಟಿ ಮಕ್ಕಳು ಪೌಷ್ಟಿಕ ಆಹಾರಕ್ಕಾಗಿ ಶಾಲೆ ಯಲ್ಲಿ ನೀಡುವ ಆಹಾರವನ್ನೇ ಅವಲಂಬಿಸಿದ್ದಾರೆ. ಕೊರೊನಾದಿಂದಾಗಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಂಎಫ್‌ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪುನಶ್ಚೇತನಕ್ಕೆ ₹1,071 ಲಕ್ಷ ಕೋಟಿ

‘ಕೊರೊನಾ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ವಿವಿಧ ರಾಷ್ಟ್ರಗಳು ಈಗಾಗಲೇ ಕ್ರಮಗಳನ್ನು ಕೈಗೊಂಡಿವೆ. ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ಒಟ್ಟಾರೆ ₹ 1,071 ಲಕ್ಷ ಕೋಟಿ ಬಿಡುಗಡೆ ಮಾಡಿವೆ’ ಎಂದು ಐಎಂಎಫ್‌ನ ಹಣಕಾಸು ಸಮಿತಿಯ ಅಧ್ಯಕ್ಷ ಲೆಸೆಟ್ಜ ಗನ್ಯಾಗೊ ತಿಳಿಸಿದರು.

‘₹ 459 ಲಕ್ಷ ಕೋಟಿಯನ್ನು ಐಎಂಎಫ್‌ ಬಿಡುಗಡೆ ಮಾಡಿದೆ. ಆದರೆ, ವಿನಿಮಯ ದರ ಮತ್ತು ನಗದು ಕೊರತೆ ಒತ್ತಡಗಳು ವಿವಿಧ ರಾಷ್ಟ್ರಗಳಿಗೆ ಸವಾಲಾಗಿರುತ್ತವೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಐಎಂಎಫ್‌ ಮೂಲಕ ಕೈಗೊಳ್ಳಲಾಗುವ ತೀವ್ರತರಹದ ಕ್ರಮಗಳೇ ಆರ್ಥಿಕತೆ ಮತ್ತು ಮಾನವೀಯತೆಯ ದೃಷ್ಟಿಯಿಂದ ಸಕಾರಾತ್ಮಕ ಪರಿಣಾಮ ಉಂಟುಮಾಡಲಿವೆ ಎಂಬುದು ನಮಗೆ ಮನವರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT