ಬುಧವಾರ, ಮೇ 25, 2022
29 °C
ತೆರಿಗೆ ನಿಯಮಗಳ ಪರಿಣಾಮಕಾರಿ ಅನುಷ್ಠಾನದ ಫಲ

ತೆರಿಗೆ ನಿಯಮಗಳ ಪರಿಣಾಮಕಾರಿ ಅನುಷ್ಠಾನದ ಫಲ: ಗುರಿ ಮೀರಲಿದೆ ತೆರಿಗೆ ಸಂಗ್ರಹ

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿತ ಗುರಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದಾಗಿ, ಕೇಂದ್ರದ ವಿತ್ತೀಯ ಕೊರತೆ ಪ್ರಮಾಣವು ಕಡಿಮೆ ಆಗುವ ನಿರೀಕ್ಷೆ ಇದೆ.

ಕೋವಿಡ್‌ ಅಪ್ಪಳಿಸುವುದಕ್ಕೂ ಮೊದಲಿನ 2019–20ನೇ ಹಣಕಾಸು ವರ್ಷದಲ್ಲಿ ಆಗಿದ್ದಕ್ಕಿಂತ ಹೆಚ್ಚಿನ ಮೊತ್ತದ ತೆರಿಗೆ ಸಂಗ್ರಹವು ಪ್ರಸಕ್ತ ವರ್ಷದಲ್ಲಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ.

2022ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಆರ್ಥಿಕ ವರ್ಷದಲ್ಲಿ ತೆರಿಗೆ ಮೂಲಕ ₹ 22.2 ಲಕ್ಷ ಕೋಟಿ ವರಮಾನ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ. ಇದುವರೆಗೆ ನೇರ ಹಾಗೂ ಪರೋಕ್ಷ ತೆರಿಗೆಗಳ ಮೂಲಕ ಸರಿಸುಮಾರು ₹ 19 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗಿದೆ ಎಂದು ಅಂಕಿ–ಅಂಶಗಳು ಹೇಳುತ್ತಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಮೂಲಕ ಇನ್ನಷ್ಟು ವರಮಾನ ಸಂಗ್ರಹಿಸಲು ಇನ್ನೂ ಕಾಲಾವಕಾಶ ಇದೆ. ಹೀಗಾಗಿ, ತೆರಿಗೆ ವರಮಾನವು ನಿಗದಿ ಮಾಡಿಕೊಂಡಿದ್ದ ಗುರಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಜಾಸ್ತಿ ಇರುವ ಸಾಧ್ಯತೆ ಇದೆ. ಏಪ್ರಿಲ್‌ನಿಂದ ಡಿಸೆಂಬರ್‌ ಮಧ್ಯ ಭಾಗದವರೆಗೆ ಆಗಿರುವ ನಿವ್ವಳ ನೇರ ತೆರಿಗೆ ಸಂಗ್ರಹವು ₹ 9.45 ಲಕ್ಷ ಕೋಟಿಗಿಂತ ಹೆಚ್ಚು. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 5.88 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹ ಆಗಿತ್ತು. ಅಂದರೆ, ಈ ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಇದುವರೆಗೆ ಆಗಿರುವ ಹೆಚ್ಚಳವು ಶೇಕಡ 60.8ರಷ್ಟಾಗಿದೆ.

ಅಷ್ಟೇ ಅಲ್ಲ, ಕೋವಿಡ್‌ಗೂ ಮೊದಲಿನ 2019–20ನೆಯ ಆರ್ಥಿಕ ವರ್ಷದಲ್ಲಿ ಆಗಿದ್ದ ನೇರ ತೆರಿಗೆ ಸಂಗ್ರಹದ ಪ್ರಮಾಣಕ್ಕಿಂತ ಈ ವರ್ಷದಲ್ಲಿ ಶೇಕಡ 40ರಷ್ಟು ಹೆಚ್ಚು ನೇರ ತೆರಿಗೆ ಸಂಗ್ರಹ ಆಗಿದೆ. 

ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳುಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಮೂಲಕ ಆಗಿರುವ ವರಮಾನ ಸಂಗ್ರಹವು₹ 9.35 ಲಕ್ಷ ಕೋಟಿಗಿಂತ ಹೆಚ್ಚು. ಇದು ನವೆಂಬರ್‌ 30ರವರೆಗಿನ ಮೊತ್ತ. 2021–22ರಲ್ಲಿ ತೆರಿಗೆ ವರಮಾನ ಸಂಗ್ರಹವು ಶೇ 9.5ರಷ್ಟು ಹೆಚ್ಚಳ ಆಗಿ, ₹ 22.2 ಲಕ್ಷ ಕೋಟಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜಿಸಿತ್ತು.

‘ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಉತ್ತಮವಾಗಿ ಅನುಷ್ಠಾನಕ್ಕೆ ತಂದಿದ್ದು ಮತ್ತು ತೆರಿಗೆ ಪಾವತಿದಾರರು ನಿಯಮಗಳನ್ನು ಪಾಲಿಸಿದ್ದರಿಂದಾಗಿ ಈ ಮಟ್ಟದ ತೆರಿಗೆ ಸಂಗ್ರಹ ಸಾಧ್ಯವಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೆರಿಗೆಯೇತರ ವರಮಾನ ಮೂಲವಾದ ಹೂಡಿಕೆ ಹಿಂತೆಗೆತವು ಗುರಿಯನ್ನು ತಲುಪದೆ ಇದ್ದರೂ, ಕೇಂದ್ರದ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇಕಡ 6.5ಕ್ಕೆ ಮಿತಿಯಾಗಬಹುದು ಎಂದು ಅವರು ಅಂದಾಜಿಸಿದರು. ಈ ಮೊದಲು ವಿತ್ತೀಯ ಕೊರತೆಯು ಶೇ 6.8ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿತ್ತು.

ಹೆಚ್ಚಳದ ಸೂಚನೆ ನೀಡಿದ್ದ ಬಜಾಜ್

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ ಜಿಎಸ್‌ಟಿ ಸಂಗ್ರಹವು ₹ 1.15 ಲಕ್ಷ ಕೋಟಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ, 2021–22ರಲ್ಲಿ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಪ್ರಮಾಣವು ಬಜೆಟ್ ಅಂದಾಜನ್ನು ಮೀರಲಿದೆ’ ಎಂದು ಕೇಂದ್ರ ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಅವರು ಕೂಡ ನವೆಂಬರ್‌ ತಿಂಗಳಿನಲ್ಲಿ ಹೇಳಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು