ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕಿರಲಿ ಹಣಕಾಸು ನಿರ್ಧಾರಗಳು

Last Updated 31 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸ ವರ್ಷಾಚರಣೆ ಹೊತ್ತಿನಲ್ಲಿ ಅನೇಕರು ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ, ಅಂತಹ ನಿರ್ಧಾರಗಳಿಗೆ ಹೆಚ್ಚು ಆಯಸ್ಸು ಇರುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ಅಮೆರಿಕದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಐದು ಜನರಲ್ಲಿ ಒಬ್ಬರು ಅಥವಾ ಶೇ 20ರಷ್ಟು ಜನರು ಸ್ವತಃ ತಾವೇ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರಲು ಮನಸ್ಸು ಮಾಡುವುದಿಲ್ಲವಂತೆ. ನಾಲ್ವರಲ್ಲಿ ಮೂವರು (ಶೇ 75) ಆರಂಭದಲ್ಲಿ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಂಡರೂ ಐದಾರು ತಿಂಗಳಲ್ಲಿ ನಿಲುವಿನಿಂದ ಕಳಚಿಕೊಂಡು ಬಿಟ್ಟಿರುತ್ತಾರಂತೆ. ಇದೊಂದು ಸಾರ್ವತ್ರಿಕ ಸತ್ಯ ಎನ್ನುವುದು ಎಲ್ಲರಿಗೂ ಮನದಟ್ಟಾಗಿರುವ ಸಂಗತಿ. ಹೊಸ ನಿರ್ಧಾರಗಳು ಬರೀ ನಿರ್ಧಾರಗಳಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು.

ಈ ಮೇಲಿನ ನಿದರ್ಶನಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡವರು ತಮ್ಮ ಬದುಕಿನಲ್ಲಿ ಖಂಡಿತವಾಗಿಯೂ ಗಮನಾರ್ಹ ಬದಲಾವಣೆ ಕಾಣುತ್ತಾರೆ. ಹೊಸ ನಿರ್ಧಾರಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಸ ವರ್ಷ 2020ರ ಹೊಸ್ತಿಲಲ್ಲಿ ಎಂಟು ಪ್ರಮುಖ ಹಣಕಾಸು ನಿರ್ಧಾರಗಳನ್ನು ಕೈಗೊಂಡರೆ ಅದರಿಂದ ವ್ಯಕ್ತಿಗಳ ಹಣಕಾಸು ಪರಿಸ್ಥಿತಿ ಗಮನಾರ್ಹವಾಗಿ ಸುಧಾರಣೆ ಕಾಣಲಿದೆ. ಅಷ್ಟೇ ಅಲ್ಲ, ಅದರಿಂದ ದೀರ್ಘಾವಧಿವರೆಗೆ ಹಣಕಾಸು ಸುರಕ್ಷತೆಯೂ ಒದಗಲಿದೆ. ಬದುಕಿನಲ್ಲಿ ಹಣಕಾಸು ಶಿಸ್ತನ್ನು ರೂಢಿಸಿಕೊಳ್ಳಲೇಬೇಕು ಎನ್ನುವುದು ನಿಮ್ಮ ಹೊಸ ವರ್ಷದ ದೃಢ ನಿರ್ಧಾರವಾಗಿದ್ದರೆ, ಇಲ್ಲಿ ವಿವರಿಸಿರುವ ಎಂಟು ನಿರ್ಧಾರಗಳನ್ನು ಇಂದೇ ಕೈಗೊಳ್ಳಲು ಮನಸ್ಸು ಮಾಡಿ.

ಹೊಸ ಹಣಕಾಸು ನಿರ್ಧಾರಗಳ ಬಗ್ಗೆ ನೀವು ಗಂಭೀರ ನಿಲುವು ತಳೆದಿದ್ದರೆ, ಮೊದಲ ಹೆಜ್ಜೆಯಾಗಿ ನಿಮ್ಮ ಹಣಕಾಸು ಗುರಿಗಳನ್ನು ನಿಗದಿಪಡಿಸಿ ಪಟ್ಟಿ ಮಾಡಿ. ಹಣಕಾಸು ಗುರಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದರೆ ಅವುಗಳ ಈಡೇರಿಕೆ ತುಂಬ ಸುಲಭವಾಗಿರುತ್ತದೆ. ಬೇರೆ, ಬೇರೆ ಹಣಕಾಸು ಗುರಿಗಳನ್ನು ತಲುಪಲು ಬೇಕಾದ ಹಣ ಹೊಂದಿಸುವುದು ಮತ್ತು ಅದಕ್ಕೆ ಬೇಕಾಗುವ ಸಮಯ ನಿಗದಿಪಡಿಸಿ. ಇಂತಹ ಗುರಿ ಈಡೇರಿಸಿಕೊಳ್ಳುವ ಮೂಲಕ ನೀವು ನಿಮ್ಮ ಬದುಕಿನಲ್ಲಿ ಏನನ್ನು ನಿರೀಕ್ಷಿಸುವಿರಿ ಎನ್ನುವುದು ಅದರಿಂದ ಹೆಚ್ಚು ಸ್ಪಷ್ಟಗೊಳ್ಳುತ್ತದೆ. ಗುರಿ ತಲುಪಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಉತ್ತೇಜನವೂ ದೊರೆಯುತ್ತದೆ.

ಕೈಗೊಂಡ ಮತ್ತು ನಿಗದಿಪಡಿಸಿದ ಗುರಿಗಳ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಕಾರ್ಯಪ್ರವೃತ್ತರಾಗದಿದ್ದರೆ ಗುರಿಗಳನ್ನು ಲಿಖಿತ ರೂಪದಲ್ಲಿ ಬರೆದು ಇಡುವುದಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ. ಗುರಿ ತಲುಪಲು ನೀವು ಎಷ್ಟು ಹಣ ಉಳಿಸಬೇಕು ಎನ್ನುವುದು ನಿಮಗೆ ಸ್ಪಷ್ಟವಾಗುತ್ತಿದ್ದಂತೆ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತವನ್ನು ಉಳಿಸುವುದರತ್ತ ಗಮನ ಹರಿಸಿ. ಈ ಉದ್ದೇಶಕ್ಕೆ ಆರಂಭದಲ್ಲಿ ನಿಮ್ಮ ಬಳಿ ಹೆಚ್ಚು ಹಣ ಇರದಿದ್ದರೂ ಚಿಂತೆ ಇಲ್ಲ. ಪ್ರಜ್ಞಾಪೂರ್ವಕವಾಗಿ ದೃಢಚಿತ್ತದಿಂದ ನಿಯಮಿತವಾಗಿ ಉಳಿತಾಯ ಮಾಡುವವರಿಗೆ ಸಾಧಾರಣ ಮೊತ್ತದ ಉಳಿತಾಯವೂ ಉತ್ತಮ ಆರಂಭವಾಗಿರುತ್ತದೆ.

ದಿನೇ ದಿನೇ ವೈದ್ಯಕೀಯ ವೆಚ್ಚಗಳು ದುಬಾರಿಯಾಗುತ್ತಲೇ ಇರುವುದು ಗುಟ್ಟಿನ ಸಂಗತಿ ಏನಲ್ಲ. ಆಸ್ಪತ್ರೆಗಳಲ್ಲಿ ಒಂದೆರಡು ದಿನಗಳವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುವುದಕ್ಕೆ ಸಾವಿರ ರೂಪಾಯಿಗಳ ಲೆಕ್ಕದಲ್ಲಿ ದೊಡ್ಡ ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ಆಕಸ್ಮಿಕವಾಗಿ ಎದುರಾಗುವ ದುಬಾರಿ ವೈದ್ಯಕೀಯ ವೆಚ್ಚಗಳಿಂದ ನಿಮ್ಮ ತಿಂಗಳ ಬಜೆಟ್‌ ಏರುಪೇರಾಗದಂತೆಯೂ ಎಚ್ಚರವಹಿಸಿ. ಹಣಕಾಸು ಸಂಕಷ್ಟಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಕುಟುಂಬದ ಸದಸ್ಯರಿಗಾಗಿ ಆರೋಗ್ಯ ವಿಮೆ ಖರೀದಿಸಲು ಮರೆಯಬೇಡಿ. ಕೆಲಸ ಮಾಡುವ ಕಂಪನಿಗಳಲ್ಲಿ ಗುಂಪು ಅಥವಾ ವೈಯಕ್ತಿಕ ವಿಮೆ ಯೋಜನೆ ಸೌಲಭ್ಯಗಳು ಜಾರಿಯಲ್ಲಿ ಇದ್ದರೆ ಅದರ ಪ್ರಯೋಜನ ಪಡೆದುಕೊಳ್ಳಿ.

ನೀವು ನಿಮ್ಮ ಕುಟುಂಬದಲ್ಲಿನ ದುಡಿಯುವ ಏಕೈಕ ವ್ಯಕ್ತಿಯಾಗಿದ್ದರೆ ಜೀವ ವಿಮೆ ಪಾಲಿಸಿ ಖರೀದಿಸಲು ಯಾವತ್ತೂ ಮರೆಯಬೇಡಿ. ಇದುವರೆಗೂ ನೀವು ಜೀವ ವಿಮೆ ಪಾಲಿಸಿ ಖರೀದಿಸಿರದಿದ್ದರೆ ತಕ್ಷಣ ವಿಮೆ ಸೌಲಭ್ಯ ಪಡೆಯಲು ಕಾರ್ಯೋನ್ಮುಖರಾಗಿ. ಅಗ್ಗದ ಮತ್ತು ಹೆಚ್ಚು ಪರಿಣಾಮಕಾರಿಯಾದ ಜೀವವಿಮೆ (pure protection term plan) ಪಾಲಿಸಿ ಖರೀದಿಸಲು ಮರೆಯಬೇಡಿ. ನಿರ್ದಿಷ್ಟ ಮೊತ್ತದ ಕಂತು ಒಳಗೊಂಡ ನಿಯಮಿತ ಅವಧಿಗೆ ಪರಿಹಾರ ಒದಗಿಸುವ ಜೀವವಿಮೆ ಪಾಲಿಸಿಯು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಪಾಲಿಸಿ ಜಾರಿಯಲ್ಲಿ ಇರುವ ಅವಧಿಯಲ್ಲಿ ಪಾಲಿಸಿದಾರ ಆಕಸ್ಮಿಕವಾಗಿ ಮೃತಪಟ್ಟಲ್ಲಿ ಪೂರ್ವ ನಿರ್ಧರಿತ ವಿಮೆ ಪರಿಹಾರ ಒದಗಿಸುತ್ತದೆ.

ತೆರಿಗೆ ಸ್ವರೂಪವು ಕೆಲವರ ಪಾಲಿಗೆ ಹೆಚ್ಚು ಸಂಕೀರ್ಣವಾಗಿ ಪರಿಣಮಿಸಿರುತ್ತದೆ. ಷೇರುಗಳಿಗೆ ಸಂಬಂಧಿಸಿದಂತೆ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (capital gains tax) ಜಾರಿಗೆ ತಂದಿರುವುದರಿಂದ ತೆರಿಗೆ ಪಾವತಿಯು ಗೊಂದಲ ಮೂಡಿಸುತ್ತದೆ. ನೀವು ಪಾವತಿಸಬೇಕಾದ ತೆರಿಗೆಯನ್ನು ಕ್ರಮಬದ್ಧವಾಗಿ ಲೆಕ್ಕ ಹಾಕಿರುವುದನ್ನು ಖಾತರಿಪಡಿಸಿಕೊಳ್ಳಿ. ತೆರಿಗೆ ಪಾವತಿಗೆ ಸಂಬಂಧಿಸಿದ ನಿಮ್ಮೆಲ್ಲ ದಾಖಲೆಗಳು ವ್ಯವಸ್ಥಿತವಾಗಿ ಇರುವುದನ್ನು ನೋಡಿಕೊಳ್ಳಿ. ತೆರಿಗೆಗಳಿಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಅನುಮಾನಗಳು ಉಳಿದಿದ್ದರೆ ಅರ್ಹ ತೆರಿಗೆ ಸಲಹೆಗಾರರ ಸಲಹೆ ಪಡೆಯಿರಿ. ಸಣ್ಣ ಮೊತ್ತದ ಶುಲ್ಕ ಪಾವತಿಸಿ ಸಲಹೆ ಪಡೆಯುವುದರಿಂದ ನಿಮಗೇ ಹೆಚ್ಚು ಲಾಭ ಆಗಲಿದೆ ಎನ್ನುವುದನ್ನು ಮರೆಯಬೇಡಿ.

ವಿವಿಧ ಮೂಲಗಳಿಂದ ಸಾಲ ಪಡೆಯುವುದು ತುಂಬ ಸುಲಭ. ಆದರೆ, ಸಾಲ ಮರುಪಾವತಿಯು ಹಲವಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

‘ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂದು ಸರ್ವಜ್ಞ ಬಹಳ ಹಿಂದೆಯೇ ಎಚ್ಚರಿಸಿರುವುದು ನೆನಪಿನಲ್ಲಿ ಇರಲಿ. ಬ್ಯಾಂಕ್‌, ಹಣಕಾಸು ಸಂಸ್ಥೆಗಳು ಮತ್ತು ಕ್ರೆಡಿಟ್‌ ಕಾರ್ಡ್‌ ನೀಡುವ ಸಂಸ್ಥೆಗಳು ವೈಯಕ್ತಿಕ ಸಾಲ ನೀಡುವುದಕ್ಕೆ ಹಲವಾರು ಆಮಿಷಗಳನ್ನು ಒಡ್ಡುತ್ತವೆ. ಸಾಲ ಮಾಡದೆ ಬೇರೆ ಮಾರ್ಗವೇ ಇಲ್ಲ ಎನ್ನುವಂತಹ ಅನಿವಾರ್ಯತೆ ಸೃಷ್ಟಿಯಾಗಿದ್ದರೆ ಮಾತ್ರ ಸಾಲ ಮಾಡಲು ಮುಂದಾಗಿ. ಸಾಲ ಮಾಡಿದರೂ ಅಲ್ಪಾವಧಿಯಲ್ಲಿ ಸಾಲ ತೀರಿಸುವುದನ್ನು ಆಯ್ಕೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಬೇಗ ಸಾಲ ತೀರಿಸಿ ಬಡ್ಡಿ ಹೊರೆಯಿಂದ ಮುಕ್ತರಾಗಿ.

ಹಣಕಾಸು ಮಾರುಕಟ್ಟೆಯಲ್ಲಿ ಅಸಂಖ್ಯ ಕ್ರೆಡಿಟ್‌ ಕಾರ್ಡ್‌ಗಳಿವೆ. ಪ್ರತಿಯೊಂದು ಕಾರ್ಡ್‌ ನೀಡುವ ಸಂಸ್ಥೆಯು ನಿರ್ದಿಷ್ಟ ವಲಯ ಅಥವಾ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಡ್‌ ಬಳಕೆಗೆ ಉತ್ತೇಜನ ನೀಡುತ್ತದೆ. ಕೆಲವು ಕಾರ್ಡ್‌ಗಳು ಆನ್‌ಲೈನ್‌ ಬಳಕೆಗೆ ಗರಿಷ್ಠ ಪುರಸ್ಕಾರ ಅಂಕಗಳನ್ನು ನೀಡುತ್ತವೆ. ಇನ್ನೂ ಕೆಲವು ಕಾರ್ಡ್‌ಗಳು ಪೆಟ್ರೋಲ್‌, ಡೀಸೆಲ್‌ ಖರೀಧಿ ಸಂದರ್ಭದಲ್ಲಿ ರಿಯಾಯ್ತಿ ನೀಡುವ ಆಮಿಷ ಒಡ್ಡುತ್ತವೆ. ನಿಯಮಿತವಾಗಿ ವಿಮಾನಗಳಲ್ಲಿ ಸಂಚರಿಸುವವರಿಗೆ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಸೌಲಭ್ಯ ಒದಗಿಸುವ ಪ್ರಲೋಭನೆ ಒಡ್ಡುತ್ತವೆ. ಬಳಕೆಗೆ ತಕ್ಕಂತೆ ಪುರಸ್ಕಾರಗಳನ್ನು ನೀಡುವ ಕ್ರೆಡಿಟ್‌ ಕಾರ್ಡ್‌ಗಳನ್ನು ಅಗತ್ಯ ಇದ್ದರೆ ಮಾತ್ರ ಬಳಸಲು ಮನಸ್ಸು ಮಾಡಿ.

ಬ್ಯಾಂಕ್‌ಗಳು ನೀಡುವ ಗೃಹ ನಿರ್ಮಾಣ ಮತ್ತು ಖರೀದಿ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಈಗ ಟ್ರೆಷರಿ ಬಿಲ್‌, ರೆಪೊ ದರ ಆಧರಿಸಿ ನಿಗದಿಪಡಿಸಲಾಗುತ್ತಿದೆ. ಇದರಿಂದ ಗೃಹ ಸಾಲಗಳ ಬಡ್ಡಿಗೆ ಸಂಬಂಧಿಸಿದಂತೆ ಹೆಚ್ಚು ಪಾರದರ್ಶಕತೆ ಕಂಡು ಬರುತ್ತಿದೆ. ಇದುವರೆಗೆ ಪಾಲಿಸಿಕೊಂಡು ಬಂದಿದ್ದ ಪಾರದರ್ಶಕವಲ್ಲದ ಧೋರಣೆಗೆ ತಡೆ ಬಿದ್ದಿದೆ. ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೇಗೆ ಲೆಕ್ಕ ಹಾಕುತ್ತವೆ ಎನ್ನುವುದನ್ನು ಮತ್ತು ಇತರ ಬ್ಯಾಂಕ್‌ಗಳ ಬಡ್ಡಿ ದರಕ್ಕೆ ಹೋಲಿಸುವುದನ್ನು ಗೃಹ ಸಾಲಗಾರರು ಈಗ ಸುಲಭವಾಗಿ ತಿಳಿದುಕೊಳ್ಳಬಹುದು. ಒಂದು ವೇಳೆ ಸಾಲ ಪಡೆದ ಬ್ಯಾಂಕ್‌ ಹೆಚ್ಚು ಬಡ್ಡಿ ದರ ವಿಧಿಸುತ್ತಿದ್ದರೆ ಅಗ್ಗದ ಬಡ್ಡಿ ದರದ ಬ್ಯಾಂಕ್‌ಗೆ ಸಾಲವನ್ನು ಸುಲಭವಾಗಿ ವರ್ಗಾಯಿಸಬಹುದು. ಗೃಹ ಸಾಲಗಳ ಬಡ್ಡಿ ದರವು ಶೇ 0.25 ರಿಂದ ಶೇ 0.30ರಷ್ಟು ಕಡಿಮೆಯಾದರೂ 15 ರಿಂದ 20 ವರ್ಷಗಳ ಅವಧಿಯಲ್ಲಿ ದೊಡ್ಡ ಮೊತ್ತ ಉಳಿಸಲು ಸಾಧ್ಯವಾಗಲಿದೆ.

(ಲೇಖಕ: ‘ಮೈಮನಿ ಮಂತ್ರಾಡಾಟ್‌ಕಾಂ’ನ
ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT